ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ: ಪ್ರಧಾನಿ ಮಧ್ಯಸ್ಥಿಕೆಗೆ ಗೋವಾ ಮನವಿ

Last Updated 27 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಪಣಜಿ: ಮಹದಾಯಿ ಯೋಜನೆ ವಿವಾದ ಬಗೆಹರಿಸುವ ಬಗ್ಗೆ ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ಕುರಿತು ಇತ್ತೀಚೆಗೆ ಸಮಸ್ಯೆಗಳು ಉಲ್ಬಣಗೊಂಡಿವೆ. ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಪ್ರಧಾನಿಯವರಲ್ಲಿ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.

ಸ್ಥಳೀಯ ಕೇಬಲ್ ಸುದ್ದಿ ವಾಹಿನಿಯೊಂದಕ್ಕೆ ರಾಜ್ಯಪಾಲ ಸತ್ಯಪಾಲ್‌ ಮಲಿಕ್ ಅವರು ನೀಡಿದ ವಿವಾದಾತ್ಮಕ ಹೇಳಿಕೆಯ ಬಗ್ಗೆ, ಕೇಂದ್ರದ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಕರ್ನಾಟಕದ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರವನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂದರು.

ಮಲಿಕ್‌ ಅವರು, ‘ಮಹದಾಯಿ ಗೋವಾದ ಜೀವಸೆಲೆಯಾಗಿದೆ. ಕುಡಿಯುವ ನೀರಿನ ಸೋಗಿನಲ್ಲಿ ನಮ್ಮ ನೀರನ್ನು ನೀರಾವರಿಗಾಗಿ ಬೇರೆ ರಾಜ್ಯಕ್ಕೆ ನೀಡಬೇಕು ಎಂಬುದು ಸ್ವೀಕಾರಾರ್ಹವಲ್ಲ. ಜಾವಡೇಕರ್‌ ಪತ್ರವು ಗೋವಾಕ್ಕೆ ಮೋಸ ಮಾಡಿದೆ’ ಎಂದು ಗುರುವಾರ ಹೇಳಿಕೆ ನೀಡಿದ್ದರು.

‘ಜಾವಡೇಕರ್‌ ಅವರು ಬರೆದಿರುವ ಹೊಸ ಪತ್ರವನ್ನು ತಪ್ಪಾಗಿ ಅರ್ಥೈಸಬಹುದು. ಆದರೆ ನಾವು ಗೋವಾದ ಜನರ ಭಾವನೆಗಳಿಗೆ ನೋವಾಗುವ ರೀತಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಮ್ಮ ಜನರ ನಿಲುವಿನಂತೆ ನಾವು ಮುನ್ನಡೆಯುತ್ತೇವೆ’ ಎಂದೂ ಮಲಿಕ್‌ ಹೇಳಿದ್ದರು.

‘ಮಹದಾಯಿ ಸಮಸ್ಯೆಯನ್ನು ಬಗೆಹರಿಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಧಾನಿಯವರಿಗೆ ಮನವಿ ಸಲ್ಲಿಸುವುದರ ಜೊತೆಗೆ, ಅಗತ್ಯಬಿದ್ದರೆ ಕೇಂದ್ರದ ಪರಿಸರ ಇಲಾಖೆಯ ನಿಲುವನನ್ನೂ ಪ್ರಶ್ನಿಸುತ್ತೇವೆ. ಮುಂದಿನ ಕ್ರಮ ಕುರಿತು ಅಡ್ವೊಕೇಟ್‌ ಜನರಲ್‌ ಮತ್ತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದು ಸಾವಂತ್‌ ತಿಳಿಸಿದ್ದಾರೆ.

ಸರ್ಕಾರ ವಜಾಕ್ಕೆ ಆಗ್ರಹ: ಮಹದಾಯಿ ವಿವಾದ ಕುರಿತು ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಅಸಮರ್ಥವಾಗಿರುವ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಮತ್ತು ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಗೋವಾದ ಪ್ರಗತಿಪರ ಒಕ್ಕೂಟ ಒತ್ತಾಯಿಸಿದೆ.

‘ಗೋವಾ ಫಾರ್ವರ್ಡ್‌ ಪಾರ್ಟಿ, ಶಿವಸೇನಾ ಸೇರಿದಂತೆ ರಾಜಕೀಯ ಪಕ್ಷಗಳನ್ನೊಳಗೊಂಡಿರುವ ಒಕ್ಕೂಟವು ಮುಖ್ಯಮಂತ್ರಿ ಸಾವಂತ್‌ ರಾಜೀನಾಮೆಗೆ 48 ಗಮಟೆಗಳ ಗಡುವು ನಿಡಿದೆ. ಡಿಸೆಂಬರ್‌ 28ಕ್ಕೆ ಗಡುವು ಮುಗಿಯಲಿದ್ದು, ನಂತರ ಸಾವಂತ್‌ ಅವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಒಕ್ಕೂಟದ ನಾಯಕ ಹೃದಯನಾಥ್‌ ಶಿರೋಡ್ಕರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT