ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀ–ಟೂ: ಕಾನೂನು ತೊಡಕು ನಿವಾರಣೆಗೆ ಯತ್ನ

Last Updated 17 ಅಕ್ಟೋಬರ್ 2018, 19:29 IST
ಅಕ್ಷರ ಗಾತ್ರ

ನವದೆಹಲಿ: ಮೀ–ಟೂ ಚಳವಳಿ ಮೂಲಕ ಹೊರಬಂದಿರುವ ಪ್ರಕರಣಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಪರಿಶೀಲನೆ ನಡೆಸಲು ಸಚಿವರ ತಂಡವೊಂದನ್ನು ರಚಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿರುವ ಕಾನೂನಿನಲ್ಲಿ ಇರುವ ತೊಡಕುಗಳ ಬಗ್ಗೆ ಈ ತಂಡವು ಪರಿಶೀಲನೆ ನಡೆಸಲಿದೆ. ಅಲ್ಲದೆ ಮೀ–ಟೂ ಪ್ರಕರಣಗಳನ್ನು ಈ ಕಾನೂನಿನ ವ್ಯಾಪ್ತಿಗೆ ತರಲು ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸರ್ಕಾರಕ್ಕೆ ಈ ತಂಡವು ಸಲಹೆ ನೀಡಲಿದೆ.

ಇಂತಹ ಪ್ರಕರಣಗಳ ನಿರ್ವಹಣೆಗೆ ಕಾನೂನು ಸಮಿತಿಯನ್ನು ರಚಿಸಬೇಕು ಎಂದುಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಪ್ರಸ್ತಾಪಿಸಿದ್ದರು. ಅದರ ಬೆನ್ನಲ್ಲೇ ಸರ್ಕಾರ ಈ ಬಗ್ಗೆ ಸಿದ್ಧತೆ ನಡೆಸಿದೆ.

‘ರಾಜೀನಾಮೆಯಷ್ಟೇ ಸಾಲದು...’

ಲೈಂಗಿಕ ದೌರ್ಜನ್ಯ ಆರೋಪಗಳ ಸಲುವಾಗಿ ಸಚಿವ ಸ್ಥಾನಕ್ಕೆ ಎಂ.ಜೆ.ಅಕ್ಬರ್ ರಾಜೀನಾಮೆ ನೀಡಿರುವುದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಕ್ಬರ್ ವಿರುದ್ಧ ಆರೋಪ ಮಾಡಿದ್ದವರಲ್ಲಿ ಹಲವರು ‘ಇದು ನಮಗೆ ದೊರೆತ ಗೆಲುವು’ ಎಂದು ಹೇಳಿದ್ದಾರೆ. ಮತ್ತಷ್ಟು ಮಂದಿ ರಾಜೀನಾಮೆಯಷ್ಟೇ ಸಾಲದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

***

ಅಕ್ಬರ್ ರಾಜೀನಾಮೆಯಿಂದಾಗಿ ನಮ್ಮ ಆರೋಪಗಳಿಗೆ ಸಮರ್ಥನೆ ಸಿಕ್ಕಂತಾಗಿದೆ. ಈ ವಿಚಾರದಲ್ಲಿ ನ್ಯಾಯಾಲಯದಲ್ಲೂ ನನಗೆ ನ್ಯಾಯ ದೊರೆಯುವ ದಿನವನ್ನು ನಾನು ಎದುರು ನೋಡುತ್ತಿದ್ದೇನೆ
-ಪ್ರಿಯಾ ರಮಣಿ, ಅಕ್ಬರ್ ವಿರುದ್ಧ ಆರೋಪ ಮಾಡಿದವರಲ್ಲಿ ಮೊದಲಿಗರು

ಆರೋಪಿ ಪರವಾಗಿ ನಿಂತ ಸರ್ಕಾರದ ಲಜ್ಜೆಗೆಟ್ಟ ನಡೆಯ ಮಧ್ಯೆಯೂ ತಮ್ಮ ಆರೋಪಗಳಿಗೆ ಬದ್ಧವಾಗಿ ನಿಂತ ಸಂತ್ರಸ್ತ, ಆದರೆ ದಿಟ್ಟ ಮಹಿಳೆಯರಿಗೆ ನನ್ನ ನಮನಗಳು
-ಪ್ರಿಯಾಂಕ ಚತುರ್ವೇದಿ, ಕಾಂಗ್ರೆಸ್ ವಕ್ತಾರೆ

ಅಕ್ಬರ್ ವಿರುದ್ಧ ಮಾಡಲಾಗಿರುವ ಆರೋಪಗಳು ಅತ್ಯಂತ ಗಂಭೀರವಾದದ್ದು. ಇದಕ್ಕೆ ರಾಜೀನಾಮೆ ಅಷ್ಟೇ ಸಾಲದು. ಬದಲಿಗೆ ಆರೋಪಿ ಅಕ್ಬರ್ ವಿರುದ್ಧ ತನಿಖೆ–ವಿಚಾರಣೆ ಆರಂಭಿಸಬೇಕು
-ದಿಲೀಪ್ ಪಾಂಡೆ, ಎಎಪಿ ವಕ್ತಾರ

ವಿದೇಶದಿಂದ ಬಂದಿಳಿದ ತಕ್ಷಣವೇ ರಾಜಿನಾಮೆ ನೀಡದ ಮತ್ತು ಈಗಲೂ ಸಂತ್ರಸ್ತ ಮಹಿಳೆಯರ ವಿರುದ್ಧ ಕಾನೂನು ಹೋರಾಟಕ್ಕೆ ನಿಂತಿರುವ ಅಕ್ಬರ್‌ಗೆ ನಾಚಿಕೆಯಾಗಬೇಕು
-ರಂಜನ್ ಕುಮಾರಿ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT