7
ದೆಹಲಿಯಲ್ಲಿ ಪ್ರತಿಕಾಗೋಷ್ಠಿ

ಕಾಂಗ್ರೆಸ್‌ ಜತೆಗೇ ಲೋಕಸಭೆ ಚುನಾವಣೆ ಎದುರಿಸುತ್ತೇವೆ: ದೇವೇಗೌಡ

Published:
Updated:

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್‌ ಜತೆಗೇ ಎದುರಿಸಲಿದ್ದೇವೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಿದೆ. ಈ ಬಗ್ಗೆ ಚಿಂತನೆಗಳು ನಡೆದಿವೆ. ಕೇರಳದಲ್ಲಿ ಮೊದಲಿಂದಲೂ ಜೆಡಿಎಸ್‌ಗೆ ಒಂದು ಸ್ಥಾನ ಬಿಟ್ಟುಕೊಡುತ್ತಾರೆ. ಕರ್ನಾಟಕದಲ್ಲಿ ಇನ್ನೂ ಸೀಟು ಹಂಚಿಕೆ ಬಗ್ಗೆ‌ಚರ್ಚೆಯಾಗಿಲ್ಲ ಎಂದರು.

ಅವಧಿಗೆ ಮುನ್ನವೇ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಬಹುದು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾರ್ಯವೈಖರಿ ಹಾಗಿದೆ. ಈಗಾಗಲೇ ಕೆಲ ರಾಜ್ಯಗಳಿಗೆ ಚುನಾವಣೆಗೆ ಸಿದ್ದರಾಗುವಂತೆ ಸೂಚನೆ ನೀಡಿದ್ದಾರೆ ಎಂದು ದೇವೇಗೌಡ ಹೇಳಿದರು.

ರಾಹುಲ್ ಗಾಂಧಿ ನಿರ್ಧಾರ ಅಂತಿಮ: ಕರ್ನಾಟಕದಲ್ಲಿ ಸಮನ್ವಯ ಸಮಿತಿಯನ್ನು ಕಾಂಗ್ರೆಸ್ ರಚಿಸಿದೆ. ಆ ಸಮಿತಿಯ ನಿರ್ಧಾರಗಳ ಬಗ್ಗೆ ನಾನು ಏನೂ ಹೇಳುವುದಿಲ್ಲ. ಬಜೆಟ್ ಮಂಡನೆ ಕುರಿತು ಯಾರು ಏನೇ ಹೇಳಿದರೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ನಿರ್ಧಾರವೇ ಅಂತಿಮ ಎಂದ ದೇವೇಗೌಡರು, ಸಿದ್ದರಾಮಯ್ಯ ಅವರ ಹೇಳಿಕೆಗೆ ಬೆಲೆ ಇಲ್ಲ ಎಂದು ಪರೋಕ್ಷವಾಗಿ ತಿಳಿಸಿದರು.

ಕಾಂಗ್ರೆಸ್‌ ನಾಯಕರ ಭೇಟಿಗೆ ಬಂದಿಲ್ಲ: ಕಾಂಗ್ರೆಸ್ ನಾಯಕರನ್ನು ಭೇಟಿಮಾಡುವೆ ಎಂಬ ಸುದ್ದಿ ಆಗುತ್ತಿದೆ. ಆದರೆ ನಾನು ದೆಹಲಿಗೆ ಬಂದಿದ್ದು ರಕ್ಷಣಾ ಇಲಾಖೆ ಸಭೆಯಲ್ಲಿ ಭಾಗವಹಿಸಲು. ಕಳೆದ ಮೂರು ಸಭೆಗೆ ಬಂದಿರಲಿಲ್ಲವಾದುದರಿಂದ ಈ‌ ಸಭೆಗೆ ಬಂದಿದ್ದೆ. ಆದರೆ ಬೇರೆ ಕಾರಣದಿಂದ‌ ಇವತ್ತಿನ ಸಭೆ ರದ್ದಾಗಿದೆ. ಗೊಂದಲ‌ ಆಗಬಾರದು ಎಂದು ಸ್ಪಷ್ಟೀಕರಣ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪ್ರಮಾಣವಚನ‌ ಸ್ವೀಕಾರ ಸಮಾರಂಭದಲ್ಲಿ ಹೊಸ ನಿರೀಕ್ಷೆ ಹುಟ್ಟಿಕೊಂಡಿತ್ತು. ದೇಶದಲ್ಲಿ ಎನ್‌ಡಿಎಗೆ ಪರ್ಯಾಯ ರಂಗ ರಚನೆಯ ನಿರೀಕ್ಷೆ ಹುಟ್ಟಿಕೊಂಡಿತ್ತು. ಈ ಮಧ್ಯೆ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಸಹ ಮತ್ತೆ ಬಿಜೆಪಿಯಿಂದ ದೂರವಾಗುವ ಸನ್ನಿವೇಶ ಸೃಷ್ಟಿಯಾಗಿದೆ. ಬಿಎಸ್‌ಪಿ ವರಿಷ್ಠೆ ಮಾಯಾವತಿ ಮತ್ತು ಎಸ್‌ಪಿ ಮುಖಂಡ ಅಖಿಲೇಶ್ ಯಾದವ್ ನಡುವೆ ಮಾತುಕತೆ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ- ಎಡಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಜತೆಯಲ್ಲೇ‌ ಇರುತ್ತೇವೆ ಎಂದು ದೇವೇಗೌಡ ಹೇಳಿದರು.

ರಾಜ್ಯದಲ್ಲಿ ಕೆಲವು‌ ಗೊಂದಲಗಳಿದ್ದು, ಅವು ಸರಿ ಆಗಲಿವೆ. ಬಿಎಸ್‌ಪಿ ಕೂಡ ನಮ್ಮ ಜತೆ ಇರಲಿದೆ. ಜೆಡಿಎಸ್ ಪಾಲಿನ ಸೀಟುಗಳಲ್ಲಿ ಒಂದು ಸ್ಥಾನ ಬಿಎಸ್‌ಪಿಗೆ ನೀಡಲಾಗುವುದು ಎಂದು ಅವರು ಹೇಳಿದರು.

‘ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಲಾರೆ’: ಸಿದ್ದರಾಮಯ್ಯ ಮಾತುಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಮಾತುಕತೆ ಆಗಿರುವುದು ಕಾಂಗ್ರೆಸ್-ಜೆಡಿಎಸ್ ನಡುವೆ. ಎರಡು ಪಕ್ಷಗಳ ನಡುವೆ ಆಗಿರುವ ಒಡಂಬಡಿಕೆ ಪ್ರಕಾರ ಸರ್ಕಾರ ನಡೆಯಲಿದೆ. ಈ ಬಗ್ಗೆ ರಾಹುಲ್ ಗಾಂಧಿ ಮತ್ತು ಕುಮಾರಸ್ವಾಮಿ ಚರ್ಚೆ ಮಾಡುತ್ತಾರೆ ಎಂದು ಗೌಡರು ಹೇಳಿದರು.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 2

  Sad
 • 1

  Frustrated
 • 6

  Angry

Comments:

0 comments

Write the first review for this !