ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏರಿದ ತೈಲ ದರ– ಅರ್ಥ ವ್ಯವಸ್ಥೆ ಅಸ್ಥಿರ’

ಒತ್ತಡದಲ್ಲಿ ಭಾರತ lಪಾವತಿ ನಿಬಂಧನೆ ಸರಳಗೊಳಿಸಲು ಮೋದಿ ಸಲಹೆ
Last Updated 15 ಅಕ್ಟೋಬರ್ 2018, 19:02 IST
ಅಕ್ಷರ ಗಾತ್ರ

ನವದೆಹಲಿ : ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿರಂತರವಾಗಿ ಏರುತ್ತಿರುವ ಕಚ್ಚಾತೈಲ ಬೆಲೆಯಿಂದಾಗಿ ಜಾಗತಿಕ ಅರ್ಥ ವ್ಯವಸ್ಥೆ ಜರ್ಜರಿತವಾಗಿದ್ದು, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಒತ್ತಡಕ್ಕೆ ಸಿಲುಕಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ.

ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳು ಸಂಪನ್ಮೂಲ ಕೊರತೆ ಸೇರಿದಂತೆ ಹಲವು ಬಗೆಯ ಹೊಸ ಆರ್ಥಿಕ ಸವಾಲುಗಳನ್ನು ಎದುರಿಸುವಂತಾಗಿದೆ. ಕೊಲ್ಲಿ ರಾಷ್ಟ್ರಗಳು ಇದರತ್ತ ಗಮನ ಹರಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಸೌದಿ ಅರೇಬಿಯಾ ಮತ್ತು ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ) ಸೇರಿದಂತೆ ಕೊಲ್ಲಿ ರಾಷ್ಟ್ರಗಳ ಸಚಿವರು ಮತ್ತು ತೈಲ ಕಂಪನಿಗಳ ಮುಖ್ಯಸ್ಥರ ಜತೆ ಸೋಮವಾರ ನಡೆದ ಸಂವಾದದಲ್ಲಿ ಅವರು ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

ಕೊಲ್ಲಿ ರಾಷ್ಟ್ರಗಳೊಂದಿಗೆ ಕಚ್ಚಾತೈಲ ವಹಿವಾಟು ನಡೆಸುತ್ತಿರುವ ರಾಷ್ಟ್ರಗಳಿಗೆ ಅಡ್ಡಿಯಾಗಿರುವ ಹಣ ಪಾವತಿ ನಿಬಂಧನೆಗಳನ್ನು ಸರಳಗೊಳಿಸುವಂತೆ ಮೋದಿ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ರೂಪಾಯಿ ಸೇರಿದಂತೆ ಡಾಲರ್‌ ಎದುರು ಕುಸಿಯುತ್ತಿರುವ ಸ್ಥಳೀಯ ಕರೆನ್ಸಿಗಳಿಗೆ ಇದರಿಂದ ತಾತ್ಕಾಲಿಕ ಪುನಶ್ಚೇತನ ದೊರೆಯಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

ಉಳಿತಾಯದ ಹೆಚ್ಚುವರಿ ಹಣವನ್ನು ಅಭಿವೃದ್ಧಿಶೀಲ ದೇಶಗಳಲ್ಲಿ ವಾಣಿಜ್ಯ ಉದ್ದೇಶಗಳಿಗೆ ಹೂಡಿಕೆ ಮಾಡುವಂತೆಯೂ ಅವರು ತೈಲ ಉತ್ಪಾದನಾ ರಾಷ್ಟ್ರಗಳಿಗೆ ಸಲಹೆ ಮಾಡಿದರು.

ಕೊಲ್ಲಿ ರಾಷ್ಟ್ರಗಳಲ್ಲಿ ಸಾಕಷ್ಟು ತೈಲ ಉತ್ಪಾದನೆಯಾಗುತ್ತಿದ್ದರೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುತ್ತಲೇ ಇದೆ ಎಂದು ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆ.

ಸೌದಿ ಅರೇಬಿಯಾ ತೈಲ ಸಚಿವ ಖಾಲಿದ್‌ ಎ ಅಲ್‌ ಫಲಿಹ್‌, ಕೇಂದ್ರ ಸಚಿವರಾದ ಅರುಣ್‌ ಜೇಟ್ಲಿ, ಧರ್ಮೇಂದ್ರ ಪ್ರಧಾನ್‌, ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್‌ ಕುಮಾರ್‌, ಜಾಗತಿಕ ಮತ್ತು ಭಾರತೀಯ ತೈಲ ಕಂಪನಿ ಮತ್ತು ನೈಸರ್ಗಿಕ ಅನಿಲ ಕಂಪನಿಗಳ ಮುಖ್ಯಸ್ಥರು, ಹಿರಿಯ
ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸರ್ಕಾರದ ಪ್ರೋತ್ಸಾಹದ ಹೊರತಾಗಿಯೂ ಭಾರತದ ತೈಲ ಮತ್ತು ನೈಸರ್ಗಿಕ ಅನಿಲ ಕ್ಷೇತ್ರಕ್ಕೆ ನಿರೀಕ್ಷಿತ ಬಂಡವಾಳ ಹರಿದು ಬರುತ್ತಿಲ್ಲ

ಭಾರತದ ತೈಲ ಕೊರತೆ ನೀಗಿಸಲು ಸೌದಿ ಅರೇಬಿಯಾ ಭರವಸೆ

ಇರಾನ್‌ ವಿರುದ್ಧ ಅಮೆರಿಕ ಹೇರಿದ ದಿಗ್ಬಂಧನದ ಕಾರಣ ಭಾರತ ಎದುರಿಸುತ್ತಿರುವ ತೈಲ ಕೊರತೆಯನ್ನು ನೀಗಿಸಲು ಬದ್ಧ ಎಂದು ಸೌದಿ ಅರೇಬಿಯಾ ಭರವಸೆ ನೀಡಿದೆ.

ಭಾರತದ ಚಿಲ್ಲರೆ ತೈಲ ಮಾರುಕಟ್ಟೆ ಮತ್ತು ಪೆಟ್ರೊ ಕೆಮಿಕಲ್ಸ್‌ ಉದ್ಯಮ ವಲಯದಲ್ಲಿ ಬಂಡವಾಳ ಹೂಡಿಕೆಗೂ ಸಿದ್ಧ ಎಂದು ಸೌದಿ ತೈಲ ಸಚಿವ ಖಾಲಿದ್‌ ಎ ಅಲ್‌ ಫಲಿಹ್‌ ಹೇಳಿದ್ದಾರೆ.

****

ಸೋಮವಾರ ‘ಇಂಡಿಯಾ ಎನರ್ಜಿ ಫೋರಂ’ ಮಾತನಾಡಿದ ಅವರು, ತೈಲ ಬೆಲೆ ಕಡಿತಕ್ಕೆ ಮೋದಿ ಸರ್ಕಾರ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದರು.

-ನರೇಂದ್ರ ಮೋದಿ, ಪ್ರಧಾನಿ

ಕಚ್ಚಾತೈಲ ಬೆಲೆ ಏರಿಕೆ ಸಂಬಂಧ ಅತಿ ದೊಡ್ಡ ಗ್ರಾಹಕ ರಾಷ್ಟ್ರವಾಗಿರುವ ಭಾರತ ಮಂಡಿಸಿರುವ ನೋವನ್ನು ಅರ್ಥ ಮಾಡಿಕೊಂಡಿದ್ದೇವೆ ಖಾಲಿದ್‌ ಎ ಅಲ್‌ ಫಲಿಹ್‌,

-ಸೌದಿ ಅರೇಬಿಯಾ ತೈಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT