ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ಲಕ್ಷ ನಕಲಿ ಮತದಾರರ ಸೇರ್ಪಡೆ: ಕಾಂಗ್ರೆಸ್‌ ದೂರು

ಮಧ್ಯಪ್ರದೇಶ ಸರ್ಕಾರದಿಂದ ಅಧಿಕಾರ ದುರ್ಬಳಕೆ: ಆರೋಪ
Last Updated 3 ಜೂನ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಮತದಾರರ ಪಟ್ಟಿಯಲ್ಲಿ 60 ಲಕ್ಷ ನಕಲಿ ಮತದಾರರ ಹೆಸರನ್ನು ಸೇರಿಸುವ ಮೂಲಕ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ. ಈ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಬೇಕು ಎಂದು ಕಾಂಗ್ರೆಸ್‌ ನಾಯಕರ ನಿಯೋಗ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಮಧ್ಯಪ್ರದೇಶದ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ನಾಥ್‌ ನೇತೃತ್ವದ ನಿಯೋಗವು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭಾನುವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.

‘ಮತದಾರರ ಪಟ್ಟಿಯಲ್ಲಿರುವ ನಕಲಿ ಮತದಾರರ ಬಗ್ಗೆ ಸಾಕ್ಷ್ಯ ನೀಡಿದ್ದೇವೆ. 100 ವಿಧಾನಸಭಾ ಕ್ಷೇತ್ರಗಳಲ್ಲಿ ನಾವೇ ಸ್ವಂತ ವಿಚಾರಣೆ ನಡೆಸಿದ್ದೇವೆ. ಒಬ್ಬರ ಹೆಸರನ್ನು ಅವರ ತಂದೆಯ ಹೆಸರಿನೊಂದಿಗೆ ಹಲವು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಬಿಜೆಪಿ ಸರ್ಕಾರ ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಿದೆ’ ಎಂದು ಕಮಲ್‌ನಾಥ್‌ ಮಾಧ್ಯಮದವರಿಗೆ ತಿಳಿಸಿದರು.

ಒಬ್ಬರ ಹೆಸರು ಬಹಳ ಕ್ಷೇತ್ರದ ಮತದಾರರ ಪಟ್ಟಿಯಲ್ಲಿರುವುದನ್ನು ತೆಗೆದು ಹಾಕಲು ವಿಶೇಷ ಮೇಲ್ವಿಚಾರಣಾ ವ್ಯವಸ್ಥೆ ಮಾಡಬೇಕು. ಇಂಥ ಮತದಾರರ ಹೆಸರು ಪತ್ತೆ ಹಚ್ಚಿರುವುದರ ಬಗ್ಗೆ ವಾರಕ್ಕೊಮ್ಮೆ ಎಲ್ಲ ರಾಷ್ಟ್ರೀಯ ಪಕ್ಷಗಳನ್ನು ಕರೆದು ಮಾಹಿತಿ ನೀಡಬೇಕು. ಕನಿಷ್ಠ ಜಿಲ್ಲಾ ಮಟ್ಟದಲ್ಲಾದರೂ ಈ ಪ್ರಕ್ರಿಯೆ ನಡೆಯಬೇಕು ಎಂದು ಕಾಂಗ್ರೆಸ್‌ ನಿಯೋಗವು ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ಅಧಿಕಾರಿಗಳು ತಯಾರಿಸಿರುವ ಪಟ್ಟಿ ಪ್ರಕಾರ ರಾಜ್ಯದ ಮತದಾರರ ಸಂಖ್ಯೆಯಲ್ಲಿ ಶೇ 40 ರಷ್ಟು ಏರಿಕೆಯಾಗಿದೆ. ಆದರೆ, ಜನಸಂಖ್ಯೆಯಲ್ಲಿ ಶೇ 24 ರಷ್ಟು ಮಾತ್ರ ಏರಿಕೆಯಾಗಿದೆ.  ಚುನಾವಣಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ತನಿಖೆಗೆ ಆಯೋಗದಿಂದ ತಂಡ ರಚನೆ
ನವದೆಹಲಿ: ಮಧ್ಯಪ್ರದೇಶದ ಮತದಾರರ ಪಟ್ಟಿಯಲ್ಲಿದ್ದಿರಬಹುದಾದ ದೋಷಗಳ ಕುರಿತು ತನಿಖೆ ನಡೆಸುವಂತೆ ಚುನಾವಣಾ ಆಯೋಗ ಆದೇಶಿಸಿದೆ.

ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಮತದಾರರ ಪಟ್ಟಿಯಲ್ಲಿ 60 ಲಕ್ಷ ನಕಲಿ ಮತದಾರರ ಹೆಸರು ಸೇರಿಸಿದೆ ಎಂದು ಕಾಂಗ್ರೆಸ್‌ನ ಆರೋಪದ ಬೆನ್ನಲ್ಲೇ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ. ತಲಾ ಇಬ್ಬರು ಅಧಿಕಾರಿಗಳು ಇರುವ ನಾಲ್ಕು ತಂಡಗಳು ತನಿಖೆ ನಡೆಸಲಿವೆ.  ಜೂನ್‌ 7ರಂದು ವರದಿ ಸಲ್ಲಿಸಲಿವೆ. ‘ಮತದಾರರ ಪಟ್ಟಿ ಕುರಿತಂತೆ ಕಾಂಗ್ರೆಸ್‌ ನಿಯೋಗ ದೂರಿನಲ್ಲಿ ಪ್ರಸ್ತಾಪಿಸಿರುವ ವಿಷಯಗಳು ಹಾಗೂ ಜನಸಂಖ್ಯೆ ಆಧಾರದ ಮೇಲೆ ಮತದಾರರ ಪಟ್ಟಿಯಲ್ಲಿ ಮಾಡಲಾಗಿರುವ ದಾಖಲಾತಿ ಕುರಿತಂತೆ ಕೂಲಂಕಷ ತನಿಖೆ ನಡೆಸುವಂತೆ ತಂಡಗಳಿಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT