ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧಿ ಪ್ರತಿಮೆ ನಿರ್ಮೂಲನಕ್ಕೆ ಸಕಾಲ’- ಮಹಾರಾಷ್ಟ್ರ ಐಎಎಸ್‌ ಅಧಿಕಾರಿ

ಗೋಡ್ಸೆಗೆ ಕೃತಜ್ಞತೆ
Last Updated 2 ಜೂನ್ 2019, 15:51 IST
ಅಕ್ಷರ ಗಾತ್ರ

ಮುಂಬೈ: ಜಗತ್ತಿನಾದ್ಯಂತ ಇರುವ ಮಹಾತ್ಮ ಗಾಂಧಿಯವರ ಪ್ರತಿಮೆಗಳನ್ನು ನಾಶ ಮಾಡಬೇಕು ಮತ್ತು ಭಾರತದ ನೋಟುಗಳಲ್ಲಿ ಅವರ ಭಾವಚಿತ್ರವನ್ನು ಮುದ್ರಿಸಬಾರದು ಎಂದು ನಿಧಿ ಚೌಧರಿ ಎಂಬ ಮಹಿಳಾ ಐಎಎಸ್‌ ಅಧಿಕಾರಿ ಟ್ವೀಟ್‌ ಮಾಡಿದ್ದಾರೆ. ನಿಧಿ ಅವರು ಬೃಹನ್‌ ಮುಂಬೈ ಮಹಾನಗರಪಾಲಿಕೆಯಲ್ಲಿ ಉಪ ಆಯುಕ್ತರಾಗಿದ್ದಾರೆ.

ಮಹಾತ್ಮ ಗಾಂಧಿಯ ಹೆಸರು ಇರುವ ರಸ್ತೆಗಳು ಮತ್ತು ಸಂಸ್ಥೆಗಳಿಗೆ ಮರುನಾಮಕರಣ ಮಾಡಬೇಕು ಎಂದು ಅವರು ಹೇಳಿದ್ದಾರೆ. ಗಾಂಧಿಯ ಹಂತಕ ನಾಥೂರಾಂ ಗೋಡ್ಸೆಗೆ ನಿಧಿ ಅವರು ‘ಕೃತಜ್ಞತೆ’ ಅರ್ಪಿಸಿದ್ದಾರೆ.

ಮೇ 17ರಂದು ಮಾಡಿದ ಟ್ವೀಟ್‌ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಇದು ‘ವ್ಯಂಗ್ಯ’ದಿಂದ ಮಾಡಿದ ಟ್ವೀಟ್‌, ಅದನ್ನು ‘ತಪ್ಪಾಗಿ ವ್ಯಾಖ್ಯಾನಿಸಲಾಗಿದೆ’ ಎಂದು ಅವರು ಹೇಳಿದ್ದಾರೆ. ಟ್ವೀಟನ್ನು ಅಳಿಸಿ ಹಾಕಲಾಗಿದೆ.

ಗಾಂಧೀಜಿಯ ಬಗ್ಗೆ ಅವಹೇಳನಕಾರಿಯಾಗಿ ಮತ್ತು ಗೋಡ್ಸೆಯನ್ನು ವೈಭವೀಕರಿಸಿ ಟ್ವೀಟ್‌ ಮಾಡಿದ ನಿಧಿ ಅವರನ್ನು ಅಮಾನತು ಮಾಡಬೇಕು ಎಂದು ಎನ್‌ಸಿಪಿ ಒತ್ತಾಯಿಸಿದೆ.

‘ಎಂತಹ ಅಸಾಧಾರಣ 150ನೇ ಹುಟ್ಟುಹಬ್ಬದ ವರ್ಷಾಚರಣೆ ನಡೆಯುತ್ತಿದೆ. ಆತನ ಮುಖವನ್ನು ನಮ್ಮ ನೋಟುಗಳಿಂದ ತೆಗೆಯಲು ಇದು ಸಕಾಲ. ಜಗತ್ತಿನಾದ್ಯಂತ ಇರುವ ಆತನ ಪ್ರತಿಮೆಗಳನ್ನೂ ತೆಗೆಯಬೇಕು, ಆತನ ಹೆಸರಿನ ರಸ್ತೆ ಮತ್ತು ಸಂಸ್ಥೆಗಳಿಗೆ ಮರುನಾಮಕರಣ ಮಾಡಬೇಕು. ಇದುವೇ ನಮ್ಮ ನಿಜವಾದ ನಮನ! 1948ರ ಜನವರಿ 30ಕ್ಕಾಗಿ ಗೋಡ್ಸೆಗೆ ಕೃತಜ್ಞತೆ’ ಎಂಬ ಟ್ವೀಟ್‌ಗೆ ಗಾಂಧೀಜಿಯವರ ಮೃತದೇಹದ ಚಿತ್ರವನ್ನು ನಿಧಿಯವರು ಲಗತ್ತಿಸಿದ್ದರು.

ಗಾಂಧೀಜಿಯವರು ಬರೆದ ‘ನನ್ನ ಸತ್ಯಶೋಧನೆಯ ಕತೆ’ಯೇ ತಮ್ಮ ನೆಚ್ಚಿನ ಪುಸ್ತಕ ಎಂದು ನಿಧಿಈಗ ಹೇಳಿಕೊಂಡಿದ್ದಾರೆ.

‘ಮೇ 17ರಂದು ಮಾಡಿದ ಟ್ವೀಟ್‌ ಅನ್ನು ಅಪಾರ್ಥ ಮಾಡಿಕೊಂಡಿರುವವರು ನನ್ನ ಹಿಂದಿನ ಟ್ವೀಟ್‌ಗಳನ್ನು ಗಮನಿಸಬೇಕು. ಕಳೆದ ಕೆಲವು ತಿಂಗಳಲ್ಲಿ ಮಾಡಿದ ಟ್ವೀಟ್‌ಗಳು ಎಲ್ಲವನ್ನೂ ಹೇಳುತ್ತವೆ. ವ್ಯಂಗ್ಯ ಧೋರಣೆಯ ನನ್ನ ಟ್ವೀಟ್‌ ಅನ್ನು ಜನರು ತಪ್ಪಾಗಿ ವ್ಯಾಖ್ಯಾನಿಸಿದ್ದು ಬಹಳ ದುಃಖ ತಂದಿದೆ’ ಎಂದು ಅವರು ಹೇಳಿದ್ದಾರೆ.

* ನಾನು ಗಾಂಧೀಜಿಯನ್ನು ಅಪಮಾನಿಸುವುದು ಎಂದೂ ಸಾಧ್ಯವಿಲ್ಲ. ಗಾಂಧೀಜಿ ನಮ್ಮ ರಾಷ್ಟ್ರಪಿತ. ನನ್ನ ಟ್ವೀಟ್‌ ಅನ್ನು ಅಪಾರ್ಥ ಮಾಡಿಕೊಂಡಿರುವವರು ಅದರಲ್ಲಿನ ಅಣಕವನ್ನು ಅರ್ಥ ಮಾಡಿಕೊಳ್ಳುವರು ಎಂದು ಭಾವಿಸಿದ್ದೇನೆ.

- ನಿಧಿ ಚತುರ್ವೇದಿ, ಐಎಎಸ್‌ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT