ಮಂಗಳವಾರ, ಜನವರಿ 28, 2020
23 °C
ಕಾಂಗ್ರೆಸ್, ಬಿಜೆಪಿ ಪ್ರತಿಭಟನೆ: ಕ್ರಮಕ್ಕೆ ಒತ್ತಾಯ l ಇಮ್ರಾನ್‌ ಖಾನ್‌ ಪ್ರತಿಕೃತಿ ದಹಿಸಿ ಆಕ್ರೋಶ

ಗುರುದ್ವಾರ ದಾಳಿಗೆ ವ್ಯಾಪಕ ಖಂಡನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಮ್ಮು: ಲಾಹೋರ್‌ನ ಗುರುದ್ವಾರ ನನಕಾನಾ ಸಾಹಿಬ್‌ ಮೇಲೆ ಶುಕ್ರವಾರ ನಡೆದ ದಾಳಿಯನ್ನು ಹಲವು ರಾಜಕೀಯ ಪಕ್ಷಗಳು ಮತ್ತು ಸಿಖ್‌ ಸಂಘಟನೆಗಳು ಖಂಡಿಸಿವೆ.

ಸಿಖ್‌ ಸಂಘಟನೆಗಳು ಮತ್ತು ಸ್ಥಳೀಯ ಶಿವಸೇನಾ ಡೊಗ್ರಾ ಫ್ರಂಟ್‌ (ಎಸ್‌ಎಸ್‌ಡಿಎಫ್‌) ಪ್ರತ್ಯೇಕವಾಗಿ ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿತು. 

ಪ್ರತಿಭಟನಕಾರರು ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದರು. ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. 

‘ಪಾಕಿಸ್ತಾನದ ಕೆಲವರು ಅಲ್ಲಿ ನೆಲೆಸಿರುವ ಸಿಖ್ಖರು ಮತ್ತು ಅಲ್ಪಸಂಖ್ಯಾತರಿಗೆ ತೊಂದರೆ ನೀಡುತ್ತಿದ್ದಾರೆ. ಒಡಕು ಮೂಡಿಸಲು ಯತ್ನಿಸುವವರ ಕುರಿತು ಸಿಖ್ಖರು ಜಾಗೃತರಾಗಿರಬೇಕು’ ಎಂದು ಸರ್ವಪಕ್ಷಗಳ ಸಿಖ್ ಸಹಕಾರ ಸಮಿತಿ(ಎಪಿಎಸ್‌ಸಿಸಿ) ಅಧ್ಯಕ್ಷ ಜಗಮೋಹನ್ ಸಿಂಗ್ ರೈನಾ ತಿಳಿಸಿದರು. 

‘ಘಟನೆಯ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಬೇಕು. ಪಾಕ್‌ ಸರ್ಕಾರ ಆರೋಪಿಗಳನ್ನು ಗುರುತಿಸಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಿಖ್‌ ಯುನೈಟೆಡ್‌ ಫ್ರಂಟ್‌ ಮುಖ್ಯಸ್ಥ ಎಸ್‌.ಸುದರ್ಶನ್‌ ಸಿಂಗ್‌ ಮನವಿ ಮಾಡಿದರು.

ಪಾಕಿಸ್ತಾನಕ್ಕೆ ನಾಲ್ವರ ನಿಯೋಗ

ಚಂಡೀಗಡ: ಗುರುದ್ವಾರದಲ್ಲಿನ ಪರಿಸ್ಥಿತಿ ಅವಲೋಕಿಸಲು ನಾಲ್ವರು ಸದಸ್ಯರ ನಿಯೋಗವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಾಗಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್‌ಜಿಪಿಸಿ) ತಿಳಿಸಿದೆ. 

‘ನಾವು ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಜೊತೆಗೆ ಪಾಕ್‌ನಲ್ಲಿ ನೆಲೆಸಿರುವ ಸಿಖ್ಖರಿಗೆ ಸುರಕ್ಷತೆ ಒದಗಿಸುವಂತೆ ಮನವಿ ಮಾಡಿದ್ದೇವೆ’ ಎಂದು ಎಸ್‌ಜಿಪಿಸಿ ಮುಖ್ಯಸ್ಥ ಗೋವಿಂದ್‌ ಸಿಂಗ್‌ ಲಾಂಗೋವಾಲ್ ತಿಳಿಸಿದ್ದಾರೆ. 

ಈ ಸದಸ್ಯರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯನ್ನೂ ಭೇಟಿ ಮಾಡಲಿದ್ದಾರೆ ಎಂದು ಅವರು ಹೇಳಿದರು.

ಸೋನಿಯಾ ಗಾಂಧಿ ಖಂಡನೆ

ನವದೆಹಲಿ: ಗುರುದ್ವಾರ ನನಕಾನಾ ಸಾಹಿಬ್‌ ದಾಳಿಯನ್ನು ಖಂಡಿಸಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ‘ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಸಿಧು ಎಲ್ಲಿದ್ದಾರೆ: ನನಕಾನಾ ಸಾಹಿಬ್‌ ಮೇಲೆ ದಾಳಿ ನಡೆದ ನಂತರ ಕಾಂಗ್ರೆಸ್‌ ಮುಖಂಡ ನವಜೋತ್‌ ಸಿಂಗ್ ಸಿಧು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ ಎಂದು ವ್ಯಂಗ್ಯವಾಡಿರುವ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ, ‘ದಾಳಿ ನಂತರ ಸಿಧು ಅವರು ಐಎಸ್ಐ ಮುಖ್ಯಸ್ಥರನ್ನು ಅಪ್ಪಿಕೊಳ್ಳುತ್ತಾರೆಯೆ? ಎಂದು ಪ್ರಶ್ನಿಸಿದ್ದಾರೆ.

ವರದಿ ಅಲ್ಲಗಳೆದ ಪಾಕಿಸ್ತಾನ

ಇಸ್ಲಾಮಾಬಾದ್: ಲಾಹೋರ್‌ನಲ್ಲಿ ಇರುವ ಗುರುದ್ವಾರ ನನಕಾನಾ ಸಾಹಿಬ್‌ ಧಾರ್ಮಿಕ ಸ್ಥಳದ ಕಟ್ಟಡ ವಿರೂಪಗೊಂಡಿದೆ ಎಂಬ ಮಾಧ್ಯಮ ವರದಿಗಳನ್ನು ಪಾಕಿಸ್ತಾನ ನಿರಾಕರಿಸಿದೆ.

‘ಸಿಖ್‌ ಧರ್ಮಸ್ಥಾಪಕ ಗುರುನಾನಕ್‌ ಅವರ ಜನ್ಮಸ್ಥಳದ ಸ್ಮಾರಕ ಸುರಕ್ಷಿತವಾಗಿದೆ. ಯಾವುದೇ ಧಕ್ಕೆಯಾಗಿಲ್ಲ. ಈ ಕುರಿತ ವರದಿಗಳಿಗೆ ಆಧಾರವಿಲ್ಲ’ ಎಂದು ವಿದೇಶಾಂಗ ಸಚಿವಾಲಯದ ಕಚೇರಿ ತಿಳಿಸಿದೆ.

‘ಧಾರ್ಮಿಕ ಸ್ಥಳ ಸಮೀಪದ ಚಹಾ ಅಂಗಡಿ ಬಳಿ ಮುಸಲ್ಮಾನರ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿದೆ. ಜಿಲ್ಲಾ ಆಡಳಿತ ಕ್ರಮ ವಹಿಸಿದ್ದು, ತಪ್ಪಿತಸ್ಥರನ್ನು ಬಂಧಿಸಿದೆ ಎಂದು ಪಂಜಾಬ್ ಪ್ರಾಂತೀಯ ಆಡಳಿತ ತಿಳಿಸಿದೆ’ ಎಂದು ವಿವರಿಸಿದೆ. ಈ ಘಟನೆಗೆ ಕೋಮು ಬಣ್ಣ ಬಳಿಯುವ ಹುನ್ನಾರ ನಡೆದಿದೆ’ ಎಂದೂ ಆರೋಪಿಸಿದೆ.

***

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದಬ್ಬಾಳಿಕೆ ನಡೆಯುತ್ತಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಅಗತ್ಯವಿದೆಯೇ? 
–ಹರ್‌ದೀಪ್‌ ಸಿಂಗ್‌ ಪುರಿ, ಕೇಂದ್ರ ಸಚಿವ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು