ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧಿತ ಜಮಾತ್‌–ಎ– ಇಸ್ಲಾಮಿಗೆ ಪಾಕ್‌ ಐಎಸ್‌ಐ ಜತೆ ಸಂಪರ್ಕ

Last Updated 9 ಮಾರ್ಚ್ 2019, 16:38 IST
ಅಕ್ಷರ ಗಾತ್ರ

ನವದೆಹಲಿ: ‘ಕೇಂದ್ರ ಸರ್ಕಾರದಿಂದ ಇತ್ತೀಚಿಗೆ ನಿಷೇಧಿಸಲ್ಪಟ್ಟ ಜಮಾತ್‌–ಎ–ಇಸ್ಲಾಮಿ ಜಮ್ಮು ಕಾಶ್ಮೀರ ಸಂಘಟನೆಯು (ಜೆಇಎಲ್‌) ಪಾಕಿಸ್ತಾನದ ಐಎಸ್‌ಐ ಜತೆಗೆ ನಿಕಟ ಸಂಪರ್ಕ ಹೊಂದಿತ್ತು. ಅಲ್ಲದೇ, ಭಾರತದಲ್ಲಿ ಪ್ರತ್ಯೇಕತಾವಾದಿ ಭಾವನೆ ಬಿತ್ತಲು ನವದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಜತೆಗೆ ನಿರಂತರ ಸಂಪರ್ಕ ಹೊಂದಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಮಾತ್‌–ಇ–ಇಸ್ಲಾಮಿ ಸಂಘಟನೆಯ ಪ್ರಮುಖ ಸದಸ್ಯ ಸಂಸ್ಥೆ ಹುರಿಯತ್‌ ಕಾನ್ಫರೆನ್ಸ್‌ ಆಗಿದೆ. ಇದರ ಮುಖ್ಯಸ್ಥ ಸೈಯದ್‌ ಅಲಿ ಶಾ ಗೀಲಾನಿ ಅವರನ್ನು ‘ಅಮಿರ್‌–ಎ–ಜೆಹಾದ್‌’ (ಜೆಹಾದ್‌ನ ಮುಖ್ಯಸ್ಥ) ಎಂದುಜೆಇಎಲ್‌ ಹೆಸರಿಸಿತ್ತು ಎಂದು ಅವರು ತಿಳಿಸಿದ್ದಾರೆ.

‘ಜೆಇಎಲ್‌ ಸಂಘಟನೆಯು ಪಾಕಿಸ್ತಾನದ ಐಎಸ್‌ಐ ಜೊತೆಗೆ ಅತ್ಯಂತ ಬಲವಾದ ಸಂಪರ್ಕ ಹೊಂದಿತ್ತು. ಕಾಶ್ಮೀರದ ಯುವಕರಿಗೆ ಶಸ್ತ್ರಾಸ್ತ್ರಗಳ ಪೂರೈಕೆ, ತರಬೇತಿ ನೀಡುವ ಹೊಣೆ ಕೂಡ ಹೊತ್ತಿತ್ತು. ಈ ಕೆಲಸಕ್ಕಾಗಿ ಪಾಕಿಸ್ತಾನದ ರಾಯಭಾರ ಕಚೇರಿಯಿಂದ ನಿರಂತರ ನೆರವು ಪಡೆಯುತ್ತಿತ್ತು’ ಎಂದು ವಿವರಿಸಿದರು.

ಬೇಹುಗಾರಿಕೆ ಮೂಲಗಳ ಪ್ರಕಾರ, ಕಾಶ್ಮೀರ ಕಣಿವೆಯಲ್ಲಿರುವ ಮಕ್ಕಳಲ್ಲಿ ದೇಶ ವಿರೋಧಿ ಭಾವನೆಗಳನ್ನು ಬಿತ್ತಲು ತನ್ನ ಜಾಲದಲ್ಲಿರುವ ಶಾಲೆಗಳನ್ನು ಬಳಸಿಕೊಳ್ಳುತ್ತಿತ್ತು. ತನ್ನ ಸಂಘಟನೆಯ ಯುವ ಘಟಕ ‘ಜಮೈತ್‌–ಉಲ್‌–ತುಲ್ಬಾ’ದ ಮೂಲಕ ಭಯೋತ್ಪಾದಕ ಸಂಘಟನೆಗೆ ಸೇಲು ಪ್ರೇರಣೆ ನೀಡಲಾಗುತ್ತಿತ್ತು ಎಂದು ಗೊತ್ತಾಗಿದೆ.

ಸಂಪನ್ಮೂಲ ಸಂಗ್ರಹ: ‘ತನ್ನ ಸದಸ್ಯರು ಹಾಗೂ ಟ್ರಸ್ಟ್‌ ಮೂಲಕ ಸ್ಥಳೀಯ ಮತ್ತು ವಿದೇಶದಿಂದ ದೇಣಿಗೆ ಸಂಗ್ರಹಿಸುತ್ತಿದ್ದ ಸಂಘಟನೆ ಅದನ್ನು ತಳಮಟ್ಟದ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿತ್ತು.

ಅದರಲ್ಲೂ, ಯುವಕರಿಗೆ ಪ್ರೇರಣೆ, ಹೊಸ ನೇಮಕಾತಿ, ಉಗ್ರರಿಗೆ ಅಡಗುತಾಣ, ಶಸ್ತ್ರಾಸ್ತ್ರ ಸಾಗಾಟ ವ್ಯವಸ್ಥೆಗೆ ನೆರವು ನೀಡುತ್ತಿತ್ತು. ಆಲ್‌ ಪಾರ್ಟಿ ಹುರಿಯತ್‌ ಕಾನ್ಫರೆನ್ಸ್‌ (ಎಪಿಎಚ್‌ಸಿ) ರಚನೆ ಮತ್ತು ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆ ಬೇರುಬಿಡುವಲ್ಲಿ ಈ ಸಂಘಟನೆ ಪ್ರಮುಖ ಪಾತ್ರ ವಹಿಸಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೆಇಎಲ್ ಸಂಘಟನೆಯು ಹಲವು ಶಾಲೆಗಳನ್ನು ನಡೆಸುತ್ತಿದ್ದು, ಇವುಗಳಲ್ಲಿ ಸಾಂಪ್ರದಾಯಿಕ ಇಸ್ಲಾಮಿಕ್‌ ಶಿಕ್ಷಣವನ್ನು ಕಲಿಸಿಕೊಡಲಾಗುತ್ತದೆ. ಅಲ್ಲದೇ, ಮೂಲಭೂತ ತತ್ವವನ್ನು ಪ್ರಸಾರ ಮಾಡುವ ಹಲವು ಪ್ರಕಾಶನ ಸಂಸ್ಥೆಗಳನ್ನು ಹೊಂದಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ಇಸ್ಲಾಮಿಕ್‌ ರಾಜ್ಯ ನಿರ್ಮಾಣಕ್ಕೆ ಒತ್ತು: ‘ಕಣಿವೆ ರಾಜ್ಯದಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಗಳಿಗೆ ತಡೆಯೊಡ್ಡುತ್ತಿದ್ದ ಸಂಘಟನೆ, ಸ್ವಾಯತ್ತ ಇಸ್ಲಾಮಿಕ್‌ ರಾಜ್ಯ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿತ್ತು. ಜನರಿಂದ ಆಯ್ಕೆಯಾದ ಸರ್ಕಾರವನ್ನು ಅಸ್ಥಿರಗೊಳಿಸಲು ಸದಾ ಪ್ರಯತ್ನ ನಡೆಸುತ್ತಿತ್ತು. ಇದೇ ಕಾರಣದಿಂದ 1975 ಹಾಗೂ 1990ರಲ್ಲಿ ಸಂಘಟನೆ ಮೇಲೆ ತಲಾ ಎರಡು ವರ್ಷ ನಿಷೇಧ ಹೇರಲಾಗಿತ್ತು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT