ಕಣಿವೆಗೆ ಸೇನೆ ರವಾನೆ; ಯಾಸಿನ್‌ ಮಲಿಕ್‌ ಸೇರಿ 150 ಪ್ರತ್ಯೇಕತಾವಾದಿಗಳ ಸೆರೆ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಕಣಿವೆಗೆ ಸೇನೆ ರವಾನೆ; ಯಾಸಿನ್‌ ಮಲಿಕ್‌ ಸೇರಿ 150 ಪ್ರತ್ಯೇಕತಾವಾದಿಗಳ ಸೆರೆ

Published:
Updated:
Prajavani

ಶ್ರೀನಗರ: ಪುಲ್ವಾಮಾ ದಾಳಿ ನಂತರ ಜಮ್ಮು ಮತ್ತು ಕಾಶ್ಮೀರದ ಹುರಿಯತ್‌ ನಾಯಕರ ಭದ್ರತೆ ವಾಪಸ್‌ ಪಡೆದಿದ್ದ ಸರ್ಕಾರ ಪ್ರತ್ಯೇಕತಾವಾದಿ ನಾಯಕರನ್ನು ಸಾಮೂಹಿಕವಾಗಿ ಬಂಧಿಸಿದೆ. 

ಶುಕ್ರವಾರ ತಡರಾತ್ರಿ ಕಾರ್ಯಾಚರಣೆಗಿಳಿದ ಭದ್ರತಾ ಪಡೆಗಳ ಸಿಬ್ಬಂದಿ, ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್‌ ಮಲಿಕ್‌ ಅವರನ್ನು ವಶಕ್ಕೆ ಪಡೆದು ಸ್ಥಳೀಯ ಠಾಣೆಗೆ ಕರೆದೊಯ್ದರು.

ಇದೇ ವೇಳೆ ರಾಜ್ಯದ ಹಲವೆಡೆ ಜಮಾತ್‌–ಎ– ಇಸ್ಲಾಮಿ (ಜೆಇಐ) ಸಂಘಟನೆಯ ಕಾರ್ಯಕರ್ತರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಭದ್ರತಾ ಸಿಬ್ಬಂದಿ ಜೆಇಐ ಮುಖ್ಯಸ್ಥ ಅಬ್ದುಲ್‌ ಹಮೀದ್‌ ಫಯಾಜ್‌ ಸೇರಿ ದಂತೆ 150 ಸದಸ್ಯರನ್ನು ಬಂಧಿಸಿದೆ.

10 ಸಾವಿರ ಯೋಧರ ರವಾನೆ: ಈ ಸುದ್ದಿ ಹರಡುತ್ತಿದ್ದಂತೆಯೇ ರಾಜ್ಯದಲ್ಲಿ ಆತಂಕ ಮನೆ ಮಾಡಿದ್ದು, ಕೇಂದ್ರ ತುರ್ತಾಗಿ ಶ್ರೀನಗರಕ್ಕೆ ವಿಮಾನದಲ್ಲಿ ಅರೆ ಸೇನಾಪಡೆ ರವಾನಿಸಿದೆ.

ಸಿಆರ್‌ಪಿಎಫ್‌, ಐಟಿಬಿಪಿ, ಬಿಎಸ್‌ಎಫ್‌ನ 100 ಕಂಪನಿಗಳನ್ನು (10 ಸಾವಿರ ಸಿಬ್ಬಂದಿ) ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಜಮ್ಮು–ಕಾಶ್ಮೀರಕ್ಕೆ ವಿಶೇಷ ಅಧಿಕಾರ ಮತ್ತು ಸೌಲಭ್ಯ ನೀಡುವ ಸಂವಿಧಾನದ 35ಎ ಕಲಂ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ರಾಜ್ಯದಲ್ಲಿ ಆತಂಕದ ವಾತಾವರಣ ನೆಲೆಸಲು ಇದೂ ಒಂದು ಕಾರಣವಾಗಿದೆ.

ಇದನ್ನೂ ಓದಿ... ಕಣಿವೆಗೆ ಸೇನೆ ರವಾನೆ

ಪುಲ್ವಾಮಾ ದಾಳಿ ನಂತರ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜಮಾತ್‌–ಎ–ಇಸ್ಲಾಮಿ ಕಾರ್ಯಕರ್ತರನ್ನು ಬಂಧಿಸಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಆದರೆ, ಪೊಲೀಸರು ಇದನ್ನು ನಿರಾಕರಿಸಿ. ‘ಇದು ಮಾಮೂಲಿ ಕಾರ್ಯಾಚರಣೆ’ ಎಂದಿದ್ದಾರೆ.

‘ಇದೊಂದು ಪೂರ್ವನಿಯೋಜಿತ ಸಂಚಾಗಿದ್ದು, ರಾಜ್ಯದಲ್ಲಿ ಮತ್ತಷ್ಟು ಅನಿಶ್ಚಿತತೆ ಸೃಷ್ಟಿಸಲು ದಾರಿ ಮಾಡಿ ಕೊಡುತ್ತದೆ’ ಎಂದು ಜಮಾತ್‌ ಖಂಡಿಸಿದೆ. ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡಾ ಪ್ರತ್ಯೇಕತಾವಾದಿ ನಾಯಕರ ಬಂಧನಕ್ಕೆ ಆಕ್ಷೇಪ ಎತ್ತಿದ್ದಾರೆ.

‘ಯುದ್ಧ: ಕಾಶ್ಮೀರಿಗಳ ವಿರುದ್ಧ ಅಲ್ಲ’

ರಾಜಸ್ಥಾನ: ಭಾರತದ ಯುದ್ಧ ಏನಿದ್ದರೂ ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧವೇ ಹೊರತು ಕಾಶ್ಮೀರ ಮತ್ತು ಕಾಶ್ಮೀರಿಗಳ ವಿರುದ್ಧ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.

ರಾಜಸ್ಥಾನದ ಟೊಂಕ್‌ನಲ್ಲಿ ಶನಿವಾರ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, ದೇಶದ ಹಲವೆಡೆ ಕಾಶ್ಮೀರಿ ಯುವಕರ ಮೇಲೆ ನಡೆಯುತ್ತಿರುವ ದಾಳಿಗಳನ್ನು ಕಟುವಾಗಿ ಖಂಡಿಸಿದರು.

ಕಾಶ್ಮೀರದ ಯುವಕರು ಕೂಡ ಭಯೋತ್ಪಾದನೆಯ ಬಲಿಪಶುಗಳು. ಕಾಶ್ಮೀರದ ಪ್ರತಿಯೊಂದು ಮಗು ಕೂಡ ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟದ ಪರವಾಗಿದೆ. ಕಾಶ್ಮೀರಿ ಯುವಕರ ರಕ್ಷಣೆ ಎಲ್ಲರ ಹೊಣೆ ಎಂದರು. ‘ಮಾಡಿದ ತಪ್ಪಿಗೆ ಪಾಕಿಸ್ತಾನ ಖಂಡಿತ ತಕ್ಕ ಶಿಕ್ಷೆ ಅನುಭವಿಸುತ್ತದೆ. ಈ ಬಾರಿ ಖಂಡಿತ ಉಗ್ರರನ್ನು ಸುಮ್ಮನೆ ಬಿಡುವುದಿಲ್ಲ. ಉಗ್ರರನ್ನು ತಯಾರಿಸುವ ಕಾರ್ಖಾನೆಗಳಿಗೆ ಬೀಗ ಜಡಿಯುತ್ತೇವೆ’ ಎಂದು ಎಚ್ಚರಿಸಿದರು.

ಇದನ್ನೂ ಓದಿ... ಕಾಶ್ಮೀರ: ಉಗ್ರರ ಕುಲುಮೆ

‘ಪುಲ್ವಾಮಾ ಘಟನೆಯ ನಂತರ ಭಾರತ ತೆಗೆದುಕೊಂಡ ಕಠಿಣ ಕ್ರಮಗಳಿಂದ ಈಗಾಗಲೇ ಪಾಕಿಸ್ತಾನಕ್ಕೆ ನಡುಕ ಶುರುವಾಗಿದೆ. ಪರಮಾಪ್ತ ರಾಷ್ಟ್ರ ಸ್ಥಾನಮಾನ ರದ್ದು, ಪಾಕಿಸ್ತಾನದ ಸರಕುಗಳ ಮೇಲೆ ಶೇ 200ರಷ್ಟು ಸುಂಕ ಹೆಚ್ಚಳ ಮತ್ತು ಜಾಗತಿಕವಾಗಿ ಆ ದೇಶವನ್ನು ಏಕಾಂಗಿ ಮಾಡುವಲ್ಲಿ ನಾವು ಸಫಲರಾಗಿದ್ದೇವೆ’ ಎಂದು ಪ್ರಧಾನಿ ಹೇಳಿದರು.

‘ಇಮ್ರಾನ್‌ ಖಾನ್‌ ಪಾಕಿಸ್ತಾನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಭಿನಂದಿಸಲು ದೂರವಾಣಿ ಕರೆ ಮಾಡಿದ್ದೆ. ಬಡತನ ಮತ್ತು ಅನಕ್ಷರತೆ ವಿರುದ್ಧ ಎರಡೂ ರಾಷ್ಟ್ರಗಳು ಹೋರಾಡುವ ಅಗತ್ಯವಿದೆ ಎಂದು ಒತ್ತಿ ಹೇಳಿದ್ದೆ. ಆಗ ಇಮ್ರಾನ್‌ ಖಾನ್‌ ‘ನಾನು ಪಠಾಣನ ಮಗ. ಕೊಟ್ಟ ಮಾತಿನಂತೆ ನಡೆಯುತ್ತೇನೆ’ ಎಂದು ವಾಗ್ದಾನ ನೀಡಿದ್ದರು’ ಎಂದು ಮೋದಿ ಸ್ಮರಿಸಿಕೊಂಡರು.

ಇದನ್ನೂ ಓದಿ... ಹಾವನ್ನು ಬಿಟ್ಟು ಹುತ್ತವ ಬಡಿದಂತೆ...

**

ನಮ್ಮ ವೀರ ಯೋಧರು ಮತ್ತು ಮೋದಿ ಸರ್ಕಾರದ ಶಕ್ತಿ, ಸಾಮರ್ಥ್ಯದ ಮೇಲೆ ವಿಶ್ವಾಸವಿಡಿ. ಭಯೋತ್ಪಾದನೆ ಮತ್ತು ಭಯೋತ್ಪಾದಕರನ್ನು ಮಟ್ಟ ಹಾಕುವ ಕೆಲಸದಲ್ಲಿ ನಿಮ್ಮ ಪ್ರಧಾನ ಸೇವಕ ಕಾರ್ಯನಿರತನಾಗಿದ್ದಾನೆ. ಸಂಚುಕೋರರಿಗೆ ತಕ್ಕ ಶಾಸ್ತಿ ಮಾಡದೆ ವಿರಮಿಸುವುದಿಲ್ಲ.
–ನರೇಂದ್ರ ಮೋದಿ, ಪ್ರಧಾನಿ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !