ಬಹು ಕೋಟಿ ಮೇವು ಹಗರಣ: ಲಾಲು ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

7

ಬಹು ಕೋಟಿ ಮೇವು ಹಗರಣ: ಲಾಲು ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

Published:
Updated:

ರಾಂಚಿ: ಬಹು ಕೋಟಿ ಮೇವು ಹಗರಣದ ಮೂರು ಪ್ರಕರಣಗಳಿಗೆ ಸಂಬಂಧಿಸಿ ಆರ್‌ಜೆಡಿ ಮುಖಂಡ ಲಾಲು ಪ್ರಸಾದ್‌ ಯಾದವ್‌ ಸಲ್ಲಿಸಿದ್ದ ಜಾಮೀಜು ಅರ್ಜಿಯನ್ನು ಜಾರ್ಖಂಡ ಹೈ ಕೋರ್ಟ್‌ ಗುರುವಾರ ತಿರಸ್ಕರಿಸಿದೆ. 

ಮೇವು ಹಗಣರದಲ್ಲಿ ಈಗಾಗಲೇ ಜೈಲು ಶಿಕ್ಷೆಗೆ ಗುರಿಯಾಗಿರುವ ಲಾಲು ಪ್ರಸಾದ್‌ ಅವರ ಇತರ ಪ್ರಕರಣಗಳಿಗೆ ಸಂಬಂಧಿಸಿದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಅಪರೇಶ್‌ ಕುಮಾರ್‌ ಸಿಂಗ್‌ ಅವರು ತಿರಸ್ಕರಿಸಿದ್ದಾರೆ ಎಂದು ಸಿಬಿಐ ವಕೀಲ ರಾಜೀವ್‌ ಸಿನ್ಹ ತಿಳಿಸಿದ್ದಾರೆ.

ಜಾಮೀನು ಅರ್ಜಿ ಸಂಬಂಧ ಜ.4ರಂದು ಕಪಿಲ್‌ ಸಿಬಲ್‌ ಮತ್ತು ಸಿಬಿಐನ ವಾದಗಳನ್ನು ಆಲಿಸಿದ್ದ ಇದೇ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. 

ಲಾಲು ಪ್ರಸಾದ್ ಪ್ರಸ್ತುತ ರಾಜೇಂದ್ರ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌(ಆರ್‌ಐಎಂ)ನ ವಾರ್ಡ್‌ನಲ್ಲಿದ್ದಾರೆ.

ಲಾಲು ಜೈಲು ಸೇರಿದ ಪ್ರಕರಣ
ಬಹುಕೋಟಿ ಮೇವು ಹಗರಣದ ಎರಡನೇ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ಗೆ ಸಿಬಿಐ ವಿಶೇಷ ನ್ಯಾಯಾಲಯ ಮೂರೂವರೆ ವರ್ಷ ಜೈಲು ಶಿಕ್ಷೆ ಮತ್ತು ₹10 ಲಕ್ಷ ದಂಡ ವಿಧಿಸಿ, 2018ರ ಜನವರಿಯಲ್ಲಿ ಆದೇಶಿಸಿದ್ದು, ಲಾಲು ಜೈಲು ಪಾಲಾಗಿದ್ದರು.

ಸಿಬಿಐ ವಿಶೇಷ ನ್ಯಾಯಾಧೀಶ ಶಿವಪಾಲ್‌ ಸಿಂಗ್‌ ವಿಡಿಯೊ ಕಾನ್ಫರೆನ್ಸ್‌ ಮೂಲಕ ಶಿಕ್ಷೆಯ ಪ್ರಮಾಣ ಘೋಷಿಸಿದ್ದರು. ‘ಒಂದು ವೇಳೆ, ಲಾಲು ದಂಡ ಪಾವತಿಸಲು ವಿಫಲರಾದರೆ ಆರು ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದು ಹೇಳಿದ್ದರು.

ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ (ವಂಚನೆ, ಕ್ರಿಮಿನಲ್‌ ಪಿತೂರಿ, ದಾಖಲೆ ತಿದ್ದುಪಡಿ) ಲಾಲು ಮತ್ತು ಇತರ 15 ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿತ್ತು.

ಮೇವು ಹಗರಣದ ಒಟ್ಟು ಆರು ಪ್ರಕರಣಗಳಲ್ಲಿ ಲಾಲು ಪ್ರಸಾದ್‌ ಶಿಕ್ಷೆಗೆ ಗುರಿಯಾದ ಎರಡನೇ ಪ್ರಕರಣ ಇದಾಗಿತ್ತು. ದೇವಗಡ ಖಜಾನೆಯಿಂದ ₹89.27 ಲಕ್ಷ ಹಣವನ್ನು ಅಕ್ರಮವಾಗಿ ಪಡೆದ ಹಗರಣ 21 ವರ್ಷಗಳ ಹಿಂದೆ ಬೆಳಕಿಗೆ ಬಂದಿತ್ತು.

ಬಾಕಿ ಇರುವ ಪ್ರಕರಣ

* ದುಮಕಾ ಖಜಾನೆಯಿಂದ ₹3.97 ಕೋಟಿ ಪಡೆದ ಪ್ರಕರಣ

* ಚಾಯೀಬಾಸಾ ಖಜಾನೆಯಿಂದ ₹36 ಕೋಟಿ ಬಳಸಿದ ಪ್ರಕರಣ

* ಡೋರಂಡಾ ಖಜಾನೆಯಿಂದ ₹184 ಕೋಟಿ ತೆಗೆದ ಪ್ರಕರಣ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !