ಕೆಎಂ ಜೋಸೆಫ್ 'ಸೇವಾ ಹಿರಿತನ' ಪರಿಗಣನೆ ವಿಚಾರದಲ್ಲಿ 'ಕೇಂದ್ರ' ಹಸ್ತಕ್ಷೇಪ ? 

7

ಕೆಎಂ ಜೋಸೆಫ್ 'ಸೇವಾ ಹಿರಿತನ' ಪರಿಗಣನೆ ವಿಚಾರದಲ್ಲಿ 'ಕೇಂದ್ರ' ಹಸ್ತಕ್ಷೇಪ ? 

Published:
Updated:
ಕೆ.ಎಂ ಜೋಸೆಫ್

ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾದ ಕೆ.ಎಂ ಜೋಸೆಫ್ ಅವರ ನೇಮಕಾತಿ ಪತ್ರದಲ್ಲಿ ಅವರ ಸೇವಾ ಹಿರಿತನ ಪರಿಗಣನೆಗೆ ತೆಗೆದುಕೊಳ್ಳದ ಕೇಂದ್ರ ಸರ್ಕಾರ ವಿರುದ್ಧ ಹಲವಾರು ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಎರಡು ದಿನದ ಹಿಂದೆಯಷ್ಟೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಕೆ.ಎಂ.ಜೋಸೆಫ್ ಅವರಿಗೆ ಪದೋನ್ನತಿ ನೀಡಲಾಗಿತ್ತು.

ಸೇವಾ ಹಿರಿತನ ಪರಿಗಣನೆ ವಿಚಾರ ಬಗ್ಗೆ ಎನ್‍ಡಿಟಿವಿ ಜತೆ ಮಾತನಾಡಿದ ನ್ಯಾಯಮೂರ್ತಿಯೊಬ್ಬರು ಈ ಬಗ್ಗೆ ಮಾತುಕತೆ ನಡೆಸಲು ನಾವು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಭೇಟಿಯಾಗಲಿದ್ದೇವೆ. ಮಾತ್ರವಲ್ಲದೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.

ಸರ್ಕಾರದ ನೇಮಕಾತಿ ಆದೇಶದಲ್ಲಿ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ವಿನೀತ್ ಶರಣ್ ಅವರ ಹೆಸರಿನ ನಂತರ ಜೋಸೆಫ್ ಅವರ ಹೆಸರಿದೆ. ಜೋಸೆಫ್ ಅವರ ಹೆಸರನ್ನು ಮೂರನೇ ಸ್ಥಾನದಲ್ಲಿ ಬರೆದು ಆ ಎರಡು ನ್ಯಾಯಮೂರ್ತಿಗಳಿಗಿಂತ ಕಿರಿಯ ಎಂಬಂತೆ ಬಿಂಬಿಸಲಾಗಿದೆ . ಇಂದಿರಾ ಬ್ಯಾನರ್ಜಿ ಮತ್ತು ವಿನೀತ್ ಶರಣ್ ಹೆಸರನ್ನು ಜೋಸೆಫ್ ಅವರ ನಂತರ ಶಿಫಾರಸು ಮಾಡಲಾಗಿತ್ತು ಎಂದು ಇನ್ನೊಬ್ಬ ನ್ಯಾಯಮೂರ್ತಿ ಹೇಳಿದ್ದಾರೆ.

ನ್ಯಾಯಾಂಗ ಸ್ವಾತಂತ್ಯವನ್ನು ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಜೋಸೆಫ್ ಅವರ ಪ್ರಮಾಣ ವಚನ ಸ್ವೀಕಾರವನ್ನು ಮೊದಲು ಮಾಡಬೇಕು ಎಂದು ನ್ಯಾಯಮೂರ್ತಿಗಳು ಒತ್ತಾಯಿಸಿದ್ದಾರೆ.

ಸರ್ಕಾರ–ಕೊಲಿಜಿಯಂ ಜಟಾಪಟಿ

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಕೆ.ಎಂ.ಜೋಸೆಫ್ ಅವರನ್ನು ನೇಮಕ ಮಾಡುವಂತೆ ಕೊಲಿಜಿಯಂ ಕಳುಹಿಸಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿತ್ತು. ಆದರೆ ಅದೇ ಶಿಫಾರಸಿನಲ್ಲಿ ಹೆಸರಿಸಲಾಗಿದ್ದ ವಕೀಲೆ ಇಂದೂ ಮಲ್ಹೋತ್ರಾ ಅವರನ್ನು ಸರ್ಕಾರ ನೇಮಕ ಮಾಡಿತ್ತು. ಇದು ನ್ಯಾಯಾಂಗ ಮತ್ತು ಸರ್ಕಾರದ ಮಧ್ಯೆ ಜಟಾಪಟಿಗೆ ಕಾರಣವಾಗಿತ್ತು.

‘ಜೋಸೆಫ್ ಅವರ ಸೇವಾ ಹಿರಿತನ ಕಡಿಮೆ ಇದೆ. ಹೀಗಾಗಿ ಅವರನ್ನು ನೇಮಕ ಮಾಡಲಾಗದು. ಜತೆಗೆ ಅವರು ಕೇರಳದವರಾಗಿದ್ದು, ಈಗಾಗಲೇ ಕೇರಳದವರೇ ಆದ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಸುಪ್ರೀಂ ಕೋರ್ಟ್‌ನಲ್ಲಿ ಸೇವೆಯಲ್ಲಿದ್ದಾರೆ. ಈಗ ಕೆ.ಎಂ.ಜೋಸೆಫ್ ಅವರನ್ನೂ ನೇಮಕ ಮಾಡಿದರೆ ಅದು ಪ್ರಾದೆಶಿಕ ಅಸಮಾನತೆಯಾಗುತ್ತದೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಾತಿನಿಧ್ಯವೇ ಇಲ್ಲದ ರಾಜ್ಯಗಳಿಂದ ನ್ಯಾಯಮೂರ್ತಿಗಳನ್ನು ಶಿಫಾರಸು ಮಾಡಿ. ಈ ಶಿಫಾರಸನ್ನು ಮರುಪರಿಶೀಲಿಸಿ’ ಎಂದು ಸರ್ಕಾರ ಸೂಚಿಸಿತ್ತು.

ಸರ್ಕಾರದ ಈ ನಿಲುವಿಗೆ ನ್ಯಾಯಾಂಗ ವಲಯದಲ್ಲಿ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ಕಾಂಗ್ರೆಸ್‌ನ ಹರೀಶ್‌ ರಾವತ್‌ ನೇತೃತ್ವದ ಉತ್ತರಾಖಂಡ ಸರ್ಕಾರವನ್ನು ವಜಾ ಮಾಡಿ 2016ರಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಈ ನಿರ್ಧಾರವನ್ನು ನ್ಯಾಯಮೂರ್ತಿ ಜೋಸೆಫ್‌ ರದ್ದು ಮಾಡಿದ್ದರು. ಜೋಸೆಫ್‌ ಅವರ ಹೆಸರನ್ನು ಮರುಪರಿಶೀಲಿಸುವಂತೆ ಕೇಂದ್ರ ಕೋರಲು ಇದುವೇ ಕಾರಣ ಎಂದು ನ್ಯಾಯಾಂಗ ಕ್ಷೇತ್ರದ ಹಲವರು ಅಭಿಪ್ರಾಯಪಟ್ಟಿದ್ದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !