ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಣಸಿಯಷ್ಟೇ ಕೇರಳವೂ ಆಪ್ತ ತಾಣ : ನರೇಂದ್ರ ಮೋದಿ

ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನದಲ್ಲಿ ತುಲಾಭಾರ ಸೇವೆಯ ಬಳಿಕ ಪ್ರಧಾನಿ ಮೋದಿ ಹೇಳಿಕೆ
Last Updated 8 ಜೂನ್ 2019, 20:00 IST
ಅಕ್ಷರ ಗಾತ್ರ

ಗುರುವಾಯೂರು: ‘ನನ್ನನ್ನು ಆಯ್ಕೆ ಮಾಡಿರುವ ವಾರಾಣಸಿಯಷ್ಟೇ ಕೇರಳವೂ ನನಗೆ ಆತ್ಮೀಯವಾದ ಸ್ಥಳ. ಹಾಗಾಗಿಯೇ ರಾಜ್ಯದಿಂದ ಒಬ್ಬನೇ ಬಿಜೆಪಿ ಸಂಸದ ಇಲ್ಲದಿದ್ದರೂ ಇಲ್ಲಿಗೇ ಮೊದಲು ಭೇಟಿ ನೀಡಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಭಾರಿ ಯಶಸ್ಸಿನ ನಂತರ ಕೇರಳದಲ್ಲಿ ಮೊದಲ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಭಾರಿ ಗೆಲುವಿಗಾಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ‘ಜನರ ಭಾವನೆಗಳನ್ನು ಅಂದಾಜು ಮಾಡುವಲ್ಲಿ ರಾಜಕೀಯ ಪಕ್ಷಗಳು, ಪಂಡಿತರು ವಿಫಲರಾದರು’ ಎಂದು ಟೀಕಿಸಿದರು.

ಲೋಕಸಭೆ ಚುನಾವಣೆಯು ಪ್ರಜಾಪ್ರಭುತ್ವದ ಹಬ್ಬ. ಕೇರಳದ ಮತದಾರರು ಇದಕ್ಕಾಗಿ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು. ಜನರ ಭಾವನೆಗಳನ್ನು ಅಂದಾಜಿಸಲು ವಿಫಲರಾದ ರಾಜಕೀಯ ಪಂಡಿತರ ಲೆಕ್ಕಾಚಾರ ಮೀರಿ ಜನರು ಬಿಜೆಪಿಗೆ ಸದೃಢ ಜನಾದೇಶ ನೀಡಿದ್ದಾರೆ ಎಂದು ಹೇಳಿದರು.

‘ಈ ಚುನಾವಣೆ ಮೂಲಕ ಮತದಾರರು ನಕಾರಾತ್ಮಕತೆಯನ್ನು ತಿರಸ್ಕರಿಸಿ ಸಕಾರಾತ್ಮಕತೆಯನ್ನು ಒಪ್ಪಿಕೊಂಡಿದ್ದಾರೆ. ಇಂಥದೇ ಉತ್ಸಾಹದೊಂದಿಗೆ ನಾವು ಸಧೃಡವಾದ ಭಾರತವನ್ನು ನಿರ್ಮಿಸಲು ಒಟ್ಟಾಗಿ ಶ್ರಮಿಸೋಣ’ ಎಂದರು.

‘ಚುನಾವಣೆಯು ಪ್ರಜಾಪ್ರಭುತ್ವದ ಭಾಗ. 130 ಕೋಟಿ ಜನರ ಕಾಳಜಿ ವಹಿಸಬೇಕಾಗಿರುವುದು ಅಧಿಕಾರಕ್ಕೆ ಬಂದವರ ಹೊಣೆ. ಗೆಲ್ಲಿಸಿದವರು, ಸೋಲಿಸಿದವರು ಇಬ್ಬರೂ ನಮ್ಮವರೇ. ಹೀಗಾಗಿ, ಕೇರಳವು ನನಗೆ ವಾರಾಣಸಿಯಷ್ಟೇ ಆಪ್ತವಾದುದು’ ಎಂದು ಬಣ್ಣಿಸಿದರು.

‘ನಾವು ಕೇವಲ ಸರ್ಕಾರ ರಚಿಸುವುದಕ್ಕಷ್ಟೇ ರಾಜಕೀಯದಲ್ಲಿ ಇಲ್ಲ. ನಾವು ದೇಶದ ಜನರ ಸೇವೆ ಮಾಡಲು ಇದ್ದೇವೆ. ಜನರು ತಮ್ಮ ಪ್ರತಿನಿಧಿಯನ್ನು ಐದು ವರ್ಷಗಳ ಅವಧಿಗೆ ಆಯ್ಕೆ ಮಾಡುತ್ತಾರೆ. ಆದರೆ, ನಾವು ಜನಸೇವಕರು’ ಎಂದು ಹೇಳಿದರು.

‘ಕೇರಳದಲ್ಲಿ ಈಗ ನಿಫಾ ಸೋಂಕು ನಿಭಾಯಿಸಲು ಕೇಂದ್ರವು ರಾಜ್ಯ ಸರ್ಕಾರಕ್ಕೆ ಎಲ್ಲ ನೆರವನ್ನು ನೀಡಲಿದೆ ಎಂದು ಭರವಸೆ ನೀಡುತ್ತೇನೆ.’ ಎಂದರು.

ದ್ವಾರಕಾ, ಗುರುವಾಯೂರು ಮತ್ತು ಉಡುಪಿಯಲ್ಲಿ ಶ್ರೀಕೃಷ್ಣನ ಉಪಸ್ಥಿತಿಯಿದೆ ಎನ್ನುವ ಮೂಲಕ ತವರು ರಾಜ್ಯದ ಜೊತೆಗೆ ಸಂಪರ್ಕ ಕಲ್ಪಿಸಿದ ಮೋದಿ, ‘ನಾನು ಮತ್ತೆ ಗುರುವಾಯೂರಿಗೆ ಬಂದಿದ್ದೇನೆ.ಇದೊಂದು ಉತ್ಸಾಹ ಮೂಡಿಸುವ ತಾಣ’ ಎಂದರು.

ಮೋದಿ ಅಸಹಿಷ್ಣುತೆ ವಿರುದ್ಧ ನಿರಂತರ ಹೋರಾಟ : ರಾಹುಲ್

ವಯನಾಡ್: ‘ಮೋದಿ ಅವರ ಚುನಾವಣಾ ಪ್ರಚಾರ ಭಾಷಣಗಳು ಸುಳ್ಳು, ವಿಷ ಮತ್ತು ದ್ವೇಷದಿಂದ ತುಂಬಿತ್ತು’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಶನಿವಾರ ಟೀಕಿಸಿದರು.

‘ಮೋದಿ ಬಳಿ ಹಣ ಇರಬಹುದು, ಮಾಧ್ಯಮವು ಅವರ ಪರ ಇರಬಹುದು. ಶ್ರೀಮಂತ ಗೆಳೆಯರೂ ಇರಬಹುದು. ಆದರೂ, ಕಾಂಗ್ರೆಸ್‌ ನಿರಂತರವಾಗಿ ಬಿಜೆಪಿ ಸೃಷ್ಟಿಸಿರುವ ಅಹಿಷ್ಣುತೆಯ ವಿರುದ್ಧ ಹೋರಾಟ ನಡೆಸಲಿದೆ. ಮೋದಿ ಮತ್ತು ಅಸಹಿಷ್ಣುತೆಯನ್ನು ಪ್ರೀತಿ, ವಿಶ್ವಾಸದಿಂದಲೇ ಎದುರಿಸಲಿದೆ’ ಎಂದು ಹೇಳಿದರು.

ತಾವು ಪ್ರತಿನಿಧಿಸುವ ವಯನಾಡ್‌ ಕ್ಷೇತ್ರಕ್ಕೆ ಮೊದಲನೇ ಬಾರಿಗೆ ಭೇಟಿ ನೀದ ಅವರು, ‘ಕಾಂಗ್ರೆಸ್‌ ಪಕ್ಷ ಎಂದಿಗೂ ಸತ್ಯ, ಪ್ರೀತಿ ಮತ್ತು ವಿಶ್ವಾಸದ ಪರವಾಗಿ ನಿಲ್ಲಲಿದೆ’ ಎಂದು ಹೇಳಿದರು. ಅಮೇಠಿ, ವಯನಾಡ್‌ ಎರಡೂ ಕಡೆ ಸ್ಪರ್ಧಿಸಿದ್ದ ರಾಹುಲ್‌, ವಯನಾಡ್‌ನಲ್ಲಿ ಜಯ ಗಳಿಸಿದ್ದರು.

ಕ್ಷೇತ್ರ ವ್ಯಾಪ್ತಿಯ ಕಲ್ಪೆಟ್ಟ, ಕಂಬಳಕಾಡು, ಪನಮರಂನಲ್ಲಿ ರೋಡ್‌ ಶೋ ನಡೆಸಿದ ಅವರು, ‘ಮೋದಿ ಎಂದಿಗೂ ದ್ವೇಷ, ಕೋಪ ಮತ್ತು ಸುಳ್ಳುಗಳನ್ನೇ ತಮ್ಮ ಅಸ್ತ್ರವಾಗಿ ಬಳಸುತ್ತಾರೆ. ಪ್ರಧಾನಿಯ ಈ ಭಾವನೆಗಳ ವಿರುದ್ಧ ಕಾಂಗ್ರೆಸ್‌ ಹೋರಾಟ ಮುಂದುವರಿಸಲಿದೆ’ ಎಂದು ಹೇಳಿದರು.

ಮಲಪ್ಪುರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಪ್ರಬಲ ವಿರೋಧಪಕ್ಷವಾಗಿ ಕೆಲಸ ಮಾಡಲಿದ್ದು, ಬಡವರ ಪರ ನಿಲ್ಲಲಿದೆ. ವಯನಾಡ್‌ ಕ್ಷೇತ್ರದಲ್ಲಿ ದೊಡ್ಡ ಸವಾಲುಗಳಿವೆ. ಇವುಗಳನ್ನು ಒಟ್ಟಾಗಿ ಎದುರಿಸೋಣ’ ಎಂದರು.

ತಾವರೆ ತುಲಾಭಾರ

ಗುರುವಾಯೂರಿನ ಹೆಸರಾಂತ ಶ್ರೀಕೃಷ್ಣ ದೇವಸ್ಥಾನದಲ್ಲಿ, ತಾವರೆ ಹೂವುಗಳಿಂದ ವಿಶೇಷ ತುಲಾಭಾರ ಸೇವೆಯನ್ನು ಪ್ರಧಾನಿ ಮೋದಿ ಸಲ್ಲಿಸಿದರು. ದೇಗುಲದ ಆಡಳಿತ ಮಂಡಳಿಯು ಇದಕ್ಕಾಗಿ ಒಟ್ಟು 100 ಕೆ.ಜಿ. ತಾವರೆ ಹೂವುಗಳನ್ನು ವ್ಯವಸ್ಥೆ ಮಾಡಿತ್ತು.

ತುಲಾಭಾರ ಸೇವೆ ಕುರಿತಂತೆ ಬಳಿಕ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ‘ದೇಶದ ಪ್ರಗತಿ ಮತ್ತು ಅಭ್ಯುದಯಕ್ಕಾಗಿ ಪ್ರಮುಖ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ಗುರುವಾಯೂರು ದೇವಸ್ಥಾನದಲ್ಲಿ ಅದೊಂದು ಆತ್ಮೀಯ ಕ್ಷಣ’ ಎಂದಿದ್ದಾರೆ. ತುಲಾಭಾರ ಕುರಿತ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

ದೇವಸ್ಥಾನದ ಮೂಲಗಳ ಪ್ರಕಾರ, ಪ್ರಧಾನಿ ಮೋದಿ ತಾವರೆ ಹೂವುಗಳಲ್ಲದೆ ಬಾಳೆ ಹಣ್ಣು ಮತ್ತು ತುಪ್ಪವನ್ನು ದೇವಸ್ಥಾನಕ್ಕೆ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT