ಕರುಣಾನಿಧಿ ಬದುಕಿನ ಹಾದಿ

7

ಕರುಣಾನಿಧಿ ಬದುಕಿನ ಹಾದಿ

Published:
Updated:

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ನೇತಾರ, ಎಂ.ಕರುಣಾನಿಧಿ ಹೆಸರು ಕೇಳಿದಾಗ ಕಪ್ಪು ಕನ್ನಡಕ ಧರಿಸಿದ ವ್ಯಕ್ತಿಯ ಮುಖವೇ ಕಣ್ಮುಂದೆ ಬರುತ್ತದೆ. ಕರುಣಾನಿಧಿ ಎಂದರೆ ಬಿಳಿ ಧೋತಿ, ಶರ್ಟ್, ಹಳದಿ ಶಾಲು, ಕಪ್ಪು ಕನ್ನಡಕ ತೊಟ್ಟ ವ್ಯಕ್ತಿ... 

46 ವರ್ಷಗಳಿಂದ ಕಪ್ಪು ಕನ್ನಡಕ ಧರಿಸುತ್ತಿದ್ದ ಕರುಣಾನಿಧಿ, 'ಎನ್ ಉಯಿರಿನುಂ ಮೇಲಾನ ಉಡನ್‍ಪ್ಪಿರಪ್ಪುಗಳೇ' ಎಂದು ಭಾಷಣ ಆರಂಭಿಸುವ ಅವರ ಗುರುತಿನ ಸಂಕೇತವಾಗಿತ್ತು ಕಪ್ಪು ಕನ್ನಡಕ. ಇಷ್ಟರ ಮಟ್ಟಿಗೆ ತಮ್ಮದೇ ಆದ ಛಾಪು ಮೂಡಿಸಿದ್ದ ಕರುಣಾನಿಧಿ, ಸಾಹಿತ್ಯ, ಸಿನಿಮಾ, ಸಾಮಾಜಿಕ ಹೋರಾಟ, ರಾಜಕೀಯ ಜೀವನದುದ್ದಕ್ಕೂ ತಮ್ಮದೇ ಆದ ಅಪೂರ್ವ ಕೊಡುಗೆಯನ್ನು ನೀಡಿದ್ದಾರೆ. ಅವರ ಬದುಕಿನ ಹಾದಿಯ ಒಂದು ನೋಟ ಇಲ್ಲಿದೆ. 

1924ರ ಜೂನ್‌ 3ರಂದು ತಿರುಕ್ಕವಲೈನಲ್ಲಿ ಜನಿಸಿದ ಎಂ. ಕರುಣಾನಿಧಿ ಅವರು ಮುಂದೆ ರಾಜಕಾರಣಿಯಾಗಿ, ತಮಿಳುನಾಡಿನ ಮುಖ್ಯಮಂತ್ರಿಯಾಗಿ ಹೆಸರು ಗಳಿಸಿದವರು. ಕಪ್ಪು ಕನ್ನಡವೂ ಅವರ ಗುರುತಿನ ಒಂದು ಭಾಗವೂ ಆಗಿತ್ತು.
ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಮ್‌ (ಡಿಎಂಕೆ) ಮುಖಂಡರು. ಅತ್ಯುತ್ತಮ ಸಾಹಿತಿ, ಕವಿಯೂ ಹೌದು. ಹಲವು ಕೃತಿಗಳನ್ನೂ ರಚಿಸಿದ್ದಾರೆ.

ಡಿಎಂಕೆ ಸಂಸ್ಥಾಪಕರಾದ ಸಿ.ಎನ್‌. ಅಣ್ಣಾದೊರೈ ಅವರು 1969ರಲ್ಲಿ ನಿಧನರಾದ ಬಳಿಕ, ಕರುಣಾನಿಧಿ ಅವರು ಪಕ್ಷದ ಮುಖಂಡತ್ವವ ವಹಿಸಿಕೊಂಡರು. ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯೂ ಆಗಿದ್ದರು (1969–1971, 1971–1976, 1989–1991, 1996–2001 ಮತ್ತು 2006).

ತಾವು ಸ್ಪರ್ಧಿಸಿದ್ದ ಪ್ರತಿ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದು ಅವರ ಹೆಗ್ಗಳಿಕೆ ಮತ್ತು 60 ವರ್ಷಗಳ ಸುದೀರ್ಘ ರಾಜಕೀಯ ಜೀವನದ ದಾಖಲೆಯೂ ಆಗಿದೆ. 2004 ಮತ್ತು 2009ರ ಲೋಕಸಭಾ ಚುನಾವಣೆಗಳಲ್ಲಿ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಡಿಎಂಕೆ ನೇತೃತ್ವದ ಡಿಪಿಎ (ಯುಪಿಎ ಮತ್ತು ಎಡ ಪಕ್ಷಗಳ) ನಾಯಕತ್ವವನ್ನು ವಹಿಸಿದ್ದರು. ಡಿಎಂಕೆ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವಲ್ಲೂ ಪಾತ್ರವಹಿಸಿದ್ದರು.

2006ರ ಮೇನಲ್ಲಿ ನಡೆದ ಚುನಾವಣೆಯಲ್ಲಿ ಕರುಣಾನಿಧಿ ಅವರ ಮೈತ್ರಿಕೂಟ ತಮ್ಮ ಪ್ರಬಲ ವಿರೋಧಿಯಾಗಿದ್ದ ಜೆ. ಜಯಲಲಿತಾ ಅವರನ್ನು ಸೋಲಿಸಿ, ಅದೇ ವರ್ಷ ಮೇ 13ರಂದು ಮುಖ್ಯಮಂತ್ರಿಯೂ ಆಗಿದ್ದರು. ಕರುಣಾನಿಧಿ ಅವರ ಕ್ಷೇತ್ರ ಚೆಪಕ್‌.

ಇದನ್ನೂ ಓದಿರಿ
ಕರುಣಾನಿಧಿ ಬದುಕಿನ ಹಾದಿ

'ಪರಾಶಕ್ತಿ' ಸಿನಿಮಾದ ಚಿತ್ರಕಥೆ ಮೂಲಕ ಮೋಡಿ ಮಾಡಿದ್ದ ಕರುಣಾನಿಧಿ

ಕಣ್ಮರೆಯಾದರು ಕರುಣಾನಿಧಿ, ಜಯಲಲಿತಾ: ಬದಲಾಗಲಿದೆಯೇ ದ್ರಾವಿಡ ರಾಜಕಾರಣಮಾಡಿದ್ದ ಕರುಣಾನಿಧಿ

ಕಲೈಂಗರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಕೋಲಾರದ ಚಿನ್ನದ ಗಣಿಗೆ ಇಳಿದಿದ್ದ ಕರುಣಾನಿಧಿ

ಕರುಣಾನಿಧಿ ಬಾಲ್ಯ ಜೀವನ

ತಂದೆ ತಾಯಿ: ತಿರು ಮುತುವೇಳರ್‌ ಮತ್ತು ತಿರುಮತಿ ಅಂಜುಗಮ್‌ ಅಮ್ಮೈಯಾರ್‌ 
ಮೊದಲ ಹೆಸರು: ದಕ್ಷಿಣಾಮುರ್ತಿ
ಜನ್ಮ ಸ್ಥಳ: ತಮಿಳುನಾಡಿನ ಆಂದಿನ ತಂಜಾವೂರು ಜಿಲ್ಲೆ(ಇಂದು ತಿರುವರೂರ್‌) ತಿರುಕ್ಕವಲೈ.
ಸಮುದಾಯ: ತಮಿಳುನಾಡಿನ ಇಸೈ ವೆಳ್ಳಲಾರ್‌
ರಾಜಕೀಯ ಪಕ್ಷ: ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ)
ಪತ್ನಿಯರು: ಪದ್ಮಾವತಿ, ದಯಾಳು ಅಮ್ಮಾಳ್, ರಾಜತಿಯಮ್ಮಾಳ್
ಮಕ್ಕಳು: ನಾಲ್ವರು ಪುತ್ರರು, ಇಬ್ಬರು ಪುತ್ರಿಯರು. ಎಂ.ಕೆ. ಮುತ್ತು, ಎಂ.ಕೆ.ಅಳಗಿರಿ, ಎಂ.ಕೆ.ಸ್ಟಾಲಿನ್, ಎಂ.ಕೆ.ತಮಿಳರಸು, ಎಂ.ಕೆ.ಸೆಲ್ವಿ, ಎಂ.ಕೆ.ಕನಿಮೋಳಿ
ವಾಸದ ನೆಲೆ: ಚೆನ್ನೈ

ಖಾಸಗಿ ಬದುಕು...
* ಕರುಣಾನಿಧಿ ಮೂಲತ ಮಾಂಸಹಾರಿ, ನಂತರ ಸಸ್ಯಾಹಾರಿಗಳಾಗಿದ್ದರು.
* ನಿತ್ಯ ಯೋಗಾಭ್ಯಾಸ ಮಾಡುತ್ತಿದ್ದರು.

ಸಿನಿಮಾದಿಂದ ರಾಜಕೀಯಕ್ಕೆ

ಜಸ್ಟಿಸ್‌ ಪಾರ್ಟಿಯ ಅಳಗಿರಿಸ್ವಾಮಿ ಅವರ ಭಾಷಣಗಳಿಂದ ಪ್ರೇರಣೆ ಪಡೆದ ಕರುಣಾನಿಧಿ ತಮ್ಮ 14ನೇ ವಯಸ್ಸಿಗೆ ರಾಜಕೀಯ ಪ್ರವೇಶ ಮಾಡಿದರು. ತಮಿಳು ಚಿತ್ರಗಳಿಗೆ ಚಿತ್ರಕಥೆ ಬರೆಯುತ್ತಿದ್ದರು. ಜೊತೆಗೆ ಉತ್ತಮ ವಾಗ್ಮಿಯೂ ಆಗಿದ್ದರು. ಈ ಗುಣಗಳು ಅವರು ರಾಜಕೀಯವಾಗಿ ಮೇಲೇರಲು ನೆರವಾದವು. ಅವರ ಸಾಮಾಜಿಕ (ಸುಧಾರಣಾವಾದಿ) ಮತ್ತು ಐತಿಹಾಸಿಕ ಕಥೆಗಳು ಪ್ರಸಿದ್ಧಿಯಾಗಿದ್ದವು.

ಹಿಂದಿ ವಿರೋಧಿ ಚಳವಳಿಯಲ್ಲಿ ಭಾಗವಹಿಸಿದ್ದ ಅವರು, ಆ ಭಾಗದ ಯುವಜನರಿಗಾಗಿ ಸಂಸ್ಥೆಯೊಂದನ್ನು ಸ್ಥಾಪಿಸಿ ಅದರ ಸದಸ್ಯರಿಗೆ ಕೈಬರಹದ ಪತ್ರಿಕೆಯನ್ನೂ ಹಂಚಿದ್ದರು. ದ್ರಾವಿಡ ಚಳವಳಿಯ ಮುಂಚೂಣಿಯಲ್ಲಿಯೂ ಇದ್ದ ಕರುಣಾನಿಧಿ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ರಾಜಕೀಯ ಹಾದಿ

* 1957ರಲ್ಲಿ ತಿರುಚಿತಾಪಲ್ಲಿ ಜಿಲ್ಲೆಯ ಕುಳಿತಲೈ ವಿಧಾನಸಭೆ ಕ್ಷೇತ್ರದಿಂದ ಪ್ರಥಮಬಾರಿಗೆ ಚುನಾಯಿತರಾದರು.
* 1961ರಲ್ಲಿ ಡಿಎಂಕೆಯ ಖಜಾಂಚಿಯೂ ಆದರು.
* 1962ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ವಿಪಕ್ಷ ಉಪನಾಯಕರಾದರು.
* 1967ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದ ವೇಳೆ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದರು.
* 1969ರಲ್ಲಿ ಅಣ್ಣಾದೊರೈ ನಿಧನ ಮುಖ್ಯಮಂತ್ರಿಯಾದರು

ಸಾಹಿತ್ಯಕ್ಕೆ ಕೊಡುಗೆ
ಕರುಣಾನಿಧಿ ಅವರು ತಮಿಳು ಸಾಹಿತ್ಯದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಕವಿತೆ, ಕಾದಂಬರಿ, ಚಿತ್ರಕಥೆ, ಇತಿಹಾಸಿಕ ಕಾದಂಬರಿಗಳು, ಜೀವನ ಚರಿತ್ರೆ, ರಂಗಕೃತಿ, ಗೀತೆಗಳು ಮತ್ತು ಸಂಭಾಷಣೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ.

‘ಪಾರ್ಥಸಾರಥಿ’, ‘ಮಂತ್ರಿಕುಮಾರಿ’ ಮುಂತಾದ ಸಿನಿಮಾಗಳಲ್ಲಿ ಅವರು ಬರೆದ ಸಂಭಾಷಣೆಗಳು ಜನಪ್ರಿಯಗೊಂಡಿದ್ದವು. ಅದರ ವಿರುದ್ಧ ವಿರೋಧ ಪಕ್ಷಗಳ ಆಕ್ಷೇಪ ಹೆಚ್ಚಾದಷ್ಟೂ ಸಿನಿಮಾ ಹೆಚ್ಚು ಯಶಸ್ಸು ಕಂಡಿತು.
ಕಲೆ ಮತ್ತು ವಾಸ್ತುಶಿಲ್ಪ ರಚನೆ ಮಾಡುವ ಮೂಲಕ ತಮಿಳು ಭಾಷೆಗೆ ವಿಭಿನ್ನ ಕೊಡುಗೆಯನ್ನೂ ನೀಡಿದ್ದಾರೆ. ಕನ್ಯಾಕುಮಾರಿಯಲ್ಲಿರುವ 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ವಾಸ್ತುಶಿಲ್ಪ ವಿನ್ಯಾಸವನ್ನೂ ನೀಡಿ, ನಿರ್ಮಾಣವನ್ನೂ ಮಾಡಿದ್ದಾರೆ.

2015ಕ್ಕೆ ಡಿಎಂಕೆ ನಾಯಕ ಎಂ. ಕರುಣಾನಿಧಿ ಅವರು ಬರವಣಿಗೆ ಕ್ಷೇತ್ರಕ್ಕೆ ಕಾಲಿಟ್ಟು 75 ವರ್ಷಗಳು ಕಳೆದಿದ್ದವು. ತಮ್ಮ 92ನೇ ವಯಸ್ಸಿಗೆ ಕಾಲಿಟ್ಟಿ ವೇಳೆ ಅವರು ಕಿರುತೆರೆಯ ಮೆಗಾ ಧಾರಾವಾಹಿಗಾಗಿ ಬರವಣಿಗೆ ಪ್ರಾರಂಭಿಸಿದ್ದರು.
11ನೇ ಶತಮಾನದಲ್ಲಿ ಎಲ್ಲಾ ಜಾತಿಗಳ ನಡುವೆ ಸಮಾನತೆಯನ್ನು ಪ್ರತಿಪಾದಿಸಿದ ತತ್ವಜ್ಞಾನಿ, ರಾಮಾನುಜ ಅವರ ಕುರಿತ ‘ರಾಮಾನುಜರ್‌’ ಸರಣಿ ಕರುಣಾನಿಧಿ ಅವರ ಜನ್ಮದಿನವಾದ ಜೂನ್ 3ರಿಂದ ‘ಕಲೈನಾರ್’ ವಾಹಿನಿಯಲ್ಲಿ ಪ್ರಸಾರವಾಗಿದೆ. ಇದರ ಕಥನವನ್ನು ಕರುಣಾನಿಧಿ ಬರೆದಿದ್ದಾರೆ.

ಬರವಣಿಗೆಯ ಆಸಕ್ತಿಯಿಂದ ಮೊದಲ ಬಾರಿಗೆ ಬರೆದಿದ್ದ ಲೇಖನ ಮರುವಾರವೇ (1942ರ ಏ.26) ದ್ರಾವಿಡ ನಾಡು ನಿಯತಕಾಲಿಕೆಯಲ್ಲಿ ಪ್ರಕಟವಾಗಿತ್ತು’ ಎಂದು ಕರುಣಾನಿಧಿ ಸ್ಮರಿಸಿಕೊಂಡಿದ್ದರು.
‘ಅದನ್ನು ಓದಿದ ಡಿಎಂಕೆ ಸಂಸ್ಥಾಪಕ ಮುಖಂಡ ಅಣ್ಣಾ ದೊರೈ ನನ್ನನ್ನು ಭೇಟಿ ಮಾಡಲು ಬಯಸಿದ್ದರು. ಆ ಲೇಖಕ ಇನ್ನೂ ಎಳೆಯ ಹುಡುಗ ಎಂದು ತಿಳಿದಾಗ ಅಚ್ಚರಿಗೊಂಡಿದ್ದರು’ ಎಂದು ಹಳೆಯ ದಿನಗಳ ನೆನಪನ್ನು ಅವರು ಹಂಚಿಕೊಂಡಿದ್ದರು.

ಸುದ್ದಿಯಾಗಿದ್ದರು ಕರುಣಾನಿಧಿ
2011:- 2ಜಿ ಸ್ಪೆಕ್ಟ್ರಂ ಹಗರಣದ ಆರೋಪ:  2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ 2011ರ ಫೆಬ್ರುವರಿಯಲ್ಲಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ, ಮಾಜಿ ಸಚಿವ ಎ.ರಾಜಾ ಅವರೊಂದಿಗೆ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರನ್ನು ಸಹ ಆರೋಪಿಯನ್ನಾಗಿ ಹೆಸರಿಸಲಾಗಿತ್ತು.

2011 ಅಕ್ಟೋಬರ್‌: ರಾಜೀವ್ ಹಂತಕರ ರಕ್ಷಣೆ– ಪ್ರಧಾನಿಗೆ ಕರುಣಾನಿಧಿ ಮನವಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಮೂವರನ್ನು ರಕ್ಷಣೆ ಮಾಡುವಂತೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಡಿಎಂಕೆ ಅಧ್ಯಕ್ಷ  ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರು 2011ರ ಅಕ್ಟೋಬರ್‌ನಲ್ಲಿ ಮನವಿ ಮಾಡಿದ್ದರು.

2014 ಸೆಪ್ಟೆಂಬರ್: ಕರುಣಾನಿಧಿ, ಸ್ಟಾಲಿನ್‌ ವಿರುದ್ಧ ಎಫ್‌ಐಆರ್‌: ಅಕ್ರಮ ಆಸ್ತಿ ಸಂಪಾ­ದನೆ ಪ್ರಕರಣದಲ್ಲಿ ತಮಿಳು­ನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಅಪರಾಧಿ ಎಂದು ಬೆಂಗಳೂರು ಕೋರ್ಟ್‌ ತೀರ್ಪು ನೀಡಿದ ಬೆನ್ನಲ್ಲೇ ಡಿಎಂಕೆ ಹಾಗೂ ಎಐಎಡಿಎಂಕೆ ಕಾರ್ಯಕರ್ತರ ಮಧ್ಯೆ ನಡೆದ ಸಂಘರ್ಷಕ್ಕೆ ಸಂಬಂಧಿಸಿ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ, ಅವರ ಪುತ್ರ  ಹಾಗೂ ಪಕ್ಷದ ಖಜಾಂಚಿ ಎಂ.ಕೆ.­ಸ್ಟಾಲಿನ್‌ ವಿರುದ್ಧ ಚೆನ್ನೈನ ರಾಯಪೇಟ ಪೊಲೀ­ಸರು 2014 ಸೆಪ್ಟೆಂಬರ್‌ನಲ್ಲಿ ಎಫ್‌ಐಆರ್‌ ದಾಖಲಿಸಿದ್ದರು.

2016 ಅಕ್ಟೋಬರ್‌: ಕರುಣಾನಿಧಿ ಉತ್ತರಾಧಿಕಾರಿ ಸ್ಟಾಲಿನ್‌: ಭವಿಷ್ಯದಲ್ಲಿ ಡಿಎಂಕೆ ಪಕ್ಷವನ್ನು ಎಂ.ಕೆ.ಸ್ಟಾಲಿನ್‌ ಅವರೇ ಮುನ್ನಡೆಸಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ಎಂ. ಕರುಣಾನಿಧಿ ಅವರು 2016ರ ಅಕ್ಟೋಬರ್‌ನಲ್ಲಿ ತಿಳಿಸಿದ್ದರು.
ಈ ಮೂಲಕ ತಮ್ಮ ಉತ್ತರಾಧಿಕಾರಿ ಸ್ಥಾನವನ್ನು ಸ್ಟಾಲಿನ್‌ ಅಲಂಕರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು. ತಮ್ಮಿಂದ ದೂರವಾಗಿರುವ ಇನ್ನೊಬ್ಬ ಪುತ್ರ ಅಳಗಿರಿಗೆ ಈ ಅವಕಾಶ ದೊರೆಯುವ ಸಾಧ್ಯತೆಗಳಿಲ್ಲ ಎಂದೂ ತಿಳಿಸಿದ್ದರು.

‘ಸ್ಟಾಲಿನ್‌ ಪಕ್ಷ ಸಂಘಟನೆಗಾಗಿ ಅಪಾರ ಶ್ರಮಪಟ್ಟಿದ್ದಾನೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೂ ಹೋಗಿದ್ದಾನೆ. ಕಠಿಣ ಪರಿಶ್ರಮದಿಂದಾಗಿಯೇ  ಪಕ್ಷದ ಮುಂದಿನ ಅಧ್ಯಕ್ಷ ಸ್ಥಾನ ಅಲಂಕರಿಸುವ ಅರ್ಹತೆ ಪಡೆದಿದ್ದಾನೆ.  ನನ್ನ ರಾಜಕೀಯ ಉತ್ತರಾಧಿಕಾರಿಯಾಗುವ ಅರ್ಹತೆ ಸ್ಟಾಲಿನ್‌ಗೆ ಇದೆ’ ಎಂದು ತಮ್ಮ 92ನೇ ವಯಸ್ಸಿನಲ್ಲಿ ಕರುಣಾನಿಧಿ ಅವರು ತಮಿಳು ವಾರಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದರು.

ಪಕ್ಷದ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದ ಅಳಗಿರಿ ಅವರು, ಕೇಂದ್ರದ ಯುಪಿಎ–2 ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ, ತಂದೆಯ ಜತೆ ಭಿನ್ನಾಭಿಪ್ರಾಯ ಉಂಟಾದ ಬಳಿಕ ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕೆ 2014ರ ಮಾರ್ಚ್‌ನಲ್ಲಿ ಉಚ್ಚಾಟಿಸಲಾಗಿತ್ತು.

60 ವರ್ಷದ ರಾಜಕೀಯ ಜೀವನ
ಕರುಣಾನಿಧಿ ಅವರು 2017ರ ಜೂನ್‌ 3ಕ್ಕೆ 94ನೇ ವಯಸ್ಸಿಗೆ ಕಾಲಿಟ್ಟು, ಶಾಸಕರಾಗಿ 60 ವರ್ಷಗಳನ್ನು ಪೂರೈಸಿದ್ದರು. ಈ ಜಂಟಿ ಸಂಭ್ರಮವನ್ನು ಆಚರಿಸಲು ಪಕ್ಷವು ಸಂತೋಷ ಕೂಟ ಆಯೋಜಿಸಿತ್ತು. ಆದರೆ ಕರುಣಾನಿಧಿ ಅನಾರೋಗ್ಯದಿಂದ ನಿತ್ರಾಣರಾಗಿರುವುದರಿಂದ ಅವರ ಅನುಪ ಸ್ಥಿತಿಯಲ್ಲೇ ಕಾರ್ಯಕ್ರಮ ನಡೆದಿತ್ತು. ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಸಿಪಿಐ, ಸಿಪಿಎಂ ಹಾಗೂ ತೃಣಮೂಲ ಕಾಂಗ್ರೆಸ್‌ ಮುಖಂಡರು ಭಾಗವಹಿಸಿದ್ದರು.

ಶ್ವಾಸಕೋಶದ ಸೋಂಕಿಗೆ ಒಳಗಾಗಿದ್ದ ಕರುಣಾನಿಧಿ 2017ರ ಅಕ್ಟೋಬರ್‌ನಲ್ಲಿ ಮೊಮ್ಮಗನ ವಿವಾಹ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಒಂದು ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಮೊಮ್ಮಗ ಮನುರಂಜಿತ್‌ ಹಾಗೂ ಖ್ಯಾತ ತಮಿಳು ನಟ ವಿಕ್ರಂ ಅವರ ಮಗಳು ಅಕ್ಷಿತಾ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ದಂಪತಿಗೆ ಶುಭಕೋರಿದ್ದರು.

ಕಪ್ಪು ಕನ್ನಡಕಕ್ಕೆ ಗುಡ್ ಬೈ

ಕರುಣಾನಿಧಿ ಹೆಸರು ಕೇಳಿದಾಗ ಕಪ್ಪು ಕನ್ನಡಕ ಧರಿಸಿದ ವ್ಯಕ್ತಿಯ ಮುಖವೇ ಕಣ್ಮುಂದೆ ಬರುತ್ತದೆ. ಕರುಣಾನಿಧಿ ಎಂದರೆ ಬಿಳಿ ಧೋತಿ, ಶರ್ಟ್, ಹಳದಿ ಶಾಲು, ಕಪ್ಪು ಕನ್ನಡಕ ತೊಟ್ಟ ವ್ಯಕ್ತಿ. ಆದರೆ, 2017ರ ನವೆಂಬರ್‌ನಿಂದ ಕರುಣಾನಿಧಿ ಲುಕ್ ಬದಲಾಗಿತ್ತು. 46 ವರ್ಷಗಳಿಂದ ಕಪ್ಪು ಕನ್ನಡಕ ಧರಿಸುತ್ತಿದ್ದ ಕರುಣಾನಿಧಿ ಆ ಕನ್ನಡಕ್ಕೆ ಗುಡ್ ಬೈ ಹೇಳಿದ್ದರು. 'ಎನ್ ಉಯಿರಿನುಂ ಮೇಲಾನ ಉಡನ್‍ಪ್ಪಿರಪ್ಪುಗಳೇ' ಎಂದು ಭಾಷಣ ಆರಂಭಿಸುವ ಕರುಣಾನಿಧಿಯವರ ಗುರುತಿನ ಸಂಕೇತವಾಗಿತ್ತು ಕಪ್ಪು ಕನ್ನಡಕ. 

92 ವಯಸ್ಸಿನಲ್ಲಿ ಕರುಣಾನಿಧಿಯವರಲ್ಲಿ ಕನ್ನಡಡಕ ಬದಲಿಸುವಂತೆ ಡಾಕ್ಟರ್ ಹೇಳಿದ್ದರು. ಅವರ ನಿರ್ದೇಶನದಂತೆ ಕನ್ನಡಕ ಬದಲಿಸಿದ್ದರು. ಮಗ ಎಂ.ಕೆ ತಮಿಳರಶನ್ ಕರುಣಾನಿಧಿ ಅವರಿಗೆ ಸೂಕ್ತವಾಗುವ ಕನ್ನಡಕದ ಫ್ರೇಮ್ ಹುಡುಕಲು 40 ದಿನ ತೆಗೆದುಕೊಂಡಿದ್ದರು ಎಂದು ವಿಜಯ ಆಪ್ಟಿಕಲ್ಸ್ ಸಿಇಒ ರೋಷನ್ ಜಯರಾಮ್ ಹೇಳಿದ್ದರು. ಹಗುರವಾದ, ಜರ್ಮನ್ ಫ್ರೇಮ್‍ನ್ನು ಕರುಣಾನಿಧಿಯವರಿಗಾಗಿಯೇ ಹೊರ ರಾಷ್ಟ್ರದಿಂದ ತರಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !