ಶನಿವಾರ, ಡಿಸೆಂಬರ್ 7, 2019
25 °C
ಮಕ್ಕಳ ಕಳ್ಳರೆಂದು ಭಾವಿಸಿ ಹಲ್ಲೆ; ವ್ಯಕ್ತಿ ಸಾವು ಪ್ರಕರಣ

‘ಹತ್ಯೆ ಮಾಡಿದವರಿಗೆ ಶಿಕ್ಷೆಯಾಗಲಿ’

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಮಕ್ಕಳ ಕಳ್ಳರೆಂದು ಭಾವಿಸಿ, ಹಲ್ಲೆ ನಡೆಸಿ ಮೊಹಮ್ಮದ್‌ ಅಜಂ ಉಸ್ಮಾನ್‌ಸಾಬ್‌ ಸಾವಿಗೆ ಕಾರಣರಾದವರನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಮೃತನ ಕುಟುಂಬ ಆಗ್ರಹಿಸಿದೆ.

‘ಈ ಪ್ರಕರಣದಲ್ಲಿ ಕೂಡಲೇ ಮಧ್ಯಪ್ರವೇಶಿಸಬೇಕು. ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ಬಂಧನಕ್ಕಾಗಿ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಮೃತನ ಕುಟುಂಬ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದೆ.

‘ಮೊಹಮ್ಮದ್‌ ಅಜಂ ಉಸ್ಮಾನ್‌ಸಾಬ್‌, ಕತಾರ್‌ನಿಂದ ಬಂದಿದ್ದ ಮೊಹ್ಮದ್‌ ಸಲಾಂ ಹಾಗೂ ಇತರ ಇಬ್ಬರೊಂದಿಗೆ ಬೀದರ್‌ಗೆ ತೆರಳಿದ್ದರು. ಹೈದರಾಬಾದ್‌ಗೆ ಮರಳುತ್ತಿದ್ದ ಸಮಯದಲ್ಲಿ ಗ್ರಾಮವೊಂದರ ಶಾಲೆಯ ಬಳಿ ಕಾರು ನಿಲ್ಲಿಸಿದ್ದಾರೆ. ಕತಾರ್‌ನಿಂದ ತಂದಿದ್ದ ಚಾಕೊಲೆಟ್‌ಗಳನ್ನು ಸಲಾಂ ಮಕ್ಕಳಿಗೆ ಹಂಚಿದ್ದಾರೆ. ಇದನ್ನು ನೋಡಿದ ಗ್ರಾಮಸ್ಥರು, ಇವರನ್ನು ಮಕ್ಕಳ ಕಳ್ಳರೆಂದು ಭಾವಿಸಿ, ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಉಸ್ಮಾನ್‌ಸಾಬ್ ಮೃತಪಟ್ಟಿದ್ದರೆ, ಇಬ್ಬರಿಗೆ ಗಾಯಗಳಾಗಿವೆ. ಇಬ್ಬರು ಪಾರಾಗಿದ್ದಾರೆ’ ಎಂದು ಕುಟುಂಬದ ಸದಸ್ಯರು ವಿವರಿಸಿದ್ದಾರೆ.

‘ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಕತಾರ್‌ ಮೂಲದ ಸಲಾಂ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇಬ್ಬರಿಗೂ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಡಿಸಿಪಿ (ದಕ್ಷಿಣ ವಲಯ) ವಿ.ಸತ್ಯನಾರಾಯಣ ತಿಳಿಸಿದ್ದಾರೆ.

ಭೇಟಿ:  ಎಐಎಂಐಎಂ ಶಾಸಕ ಅಹ್ಮದ್‌ ಬಲಾಲಾ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

‘ಮಕ್ಕಳ ಕಳ್ಳರ ಬಗ್ಗೆ ದೇಶದಲ್ಲಿಯೇ ವದಂತಿಗಳ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ಗುಂಪುಗಳಿಂದ ಹಲ್ಲೆ, ಹತ್ಯೆ ನಡೆಯುತ್ತಿದ್ದು, ಇಂತಹ ಘಟನೆಗಳಿಗೆ ಕೊನೆ ಹಾಡಬೇಕಿದೆ. ಸರ್ಕಾರ ಇಂತಹ ಘಟನೆಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
***

28 ಜನ ನ್ಯಾಯಾಂಗ ಬಂಧನಕ್ಕೆ

ಬೀದರ್‌: ಕಮಲನಗರ ತಾಲ್ಲೂಕಿನ ಮುರ್ಕಿಯಲ್ಲಿ ಮಕ್ಕಳ ಕಳ್ಳರೆಂದು ಅಮಾಯಕರ ಮೇಲೆ ಹಲ್ಲೆ ನಡೆಸಿದ ಘಟನೆ ಹಾಗೂ ವ್ಯಕ್ತಿಯ ಸಾವಿಗೆ ಕಾರಣರಾದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದ 28 ಜನರನ್ನು ಭಾನುವಾರ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

‘ಘಟನಾ ಸ್ಥಳದಲ್ಲಿ ತೆಗೆದ ವಿಡಿಯೊ ಹಾಗೂ ಚಿತ್ರಗಳನ್ನು ಪರಿಶೀಲಿಸಲಾಗಿದೆ. ಕಾರಿನಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ 28 ಜನರನ್ನು ಗುರುತಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಔರಾದ್‌ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ತಿಳಿಸಿದ್ದಾರೆ.

‘28 ಜನರಲ್ಲಿ ತಲಾ ಇಬ್ಬರು ಮಹಿಳೆಯರು ಹಾಗೂ ಬಾಲಕರು ಇದ್ದಾರೆ’ ಎಂದು ಹೇಳಿದ್ದಾರೆ.

‘ಇನ್‌ಸ್ಪೆಕ್ಟರ್‌ಗಳಾದ ದಿಲೀಪ ಸಾಗರ ಹಾಗೂ ಅಮರೇಶ ತನಿಖೆ ನಡೆಸುತ್ತಿದ್ದಾರೆ. ಕೆಲವು ಮಾಧ್ಯಮಗಳು ಘಟನೆಯ ಬಗ್ಗೆ ತಪ್ಪು ಮಾಹಿತಿ ಪ್ರಕಟಿಸುತ್ತಿವೆ. ಕಾರಲ್ಲಿ ಇದ್ದ ವ್ಯಕ್ತಿಯನ್ನು ಕಲ್ಲು ಹೊಡೆದು ಸಾಯಿಸಿಲ್ಲ. ಗ್ರಾಮದಲ್ಲಿ ನಿಷೇಧಾಜ್ಞೆಯನ್ನೂ ಜಾರಿಗೊಳಿಸಿಲ್ಲ. ಘಟನೆ ನಡೆದ ದಿನವೇ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ’ ಎಂದು ತಿಳಿಸಿದ್ದಾರೆ.

‘ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ನಿಯೋಜಿಸಲಾಗಿದ್ದ ಜಿಲ್ಲಾ ಸಶಸ್ತ್ರ ಪಡೆಯ ಎರಡು ತುಕಡಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. ಗ್ರಾಮದಲ್ಲಿ ಇಬ್ಬರು ಪೊಲೀಸ್‌ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು