ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವದ ಮೌಲ್ಯದ ಪ್ರಶ್ನೆ ಎತ್ತಿದ ಪ್ರಕರಣ

Last Updated 26 ನವೆಂಬರ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರದ ಸರ್ಕಾರ ರಚನೆಯ ವಿಚಾರದಲ್ಲಿ ಬಿಜೆಪಿ ಮತ್ತು ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್‌ (ಮಹಾ ವಿಕಾಸ ಅಘಾಡಿ)ನಡುವಣ ಕಾನೂನು ಸಮರವು ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಣೆ ಮತ್ತು ಉತ್ತಮ ಸರ್ಕಾರ ಹೊಂದುವ ಪೌರರ ಹಕ್ಕಿಗೆ ಪೂರಕವಾಗಿ ವರ್ತಿಸುವುದಕ್ಕೆ ಸಂಬಂಧಿಸಿದ್ದಾಗಿದೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ಮಹಾ ವಿಕಾಸ ಅಘಾಡಿಯು ಸಲ್ಲಿಸಿದ ಅರ್ಜಿಯು ‘ನಮ್ಮ ದೇಶದ ಪ್ರಜಾಸತ್ತಾತ್ಮಕ ಚೌಕಟ್ಟಿಗೆ ಸಂಬಂಧಿಸಿದ’ ವಿಚಾರಗಳನ್ನು ಒಳಗೊಂಡಿವೆ. ಇಲ್ಲಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ ಎಂದು ನ್ಯಾಯಮೂರ್ತಿಗಳಾದ ಎನ್‌.ವಿ. ರಮಣ, ಅಶೋಕ್ ಭೂಷಣ್‌ ಮತ್ತು ಸಂಜೀವ್‌ ಕುಮಾರ್‌ ಅವರ ಪೀಠ ಹೇಳಿದೆ.

ಸರ್ಕಾರ ರಚನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಯಾವ ಪಾತ್ರ ವಹಿಸಬಹುದು ಎಂದು 19 ಪುಟಗಳ ಮಧ್ಯಂತರ ತೀರ್ಪಿನಲ್ಲಿ ಹೇಳಲಾಗಿದೆ.

‘ನ್ಯಾಯಾಂಗದ ವ್ಯಾಪ್ತಿ, ಸಂಸದೀಯ ಸ್ವಾತಂತ್ರ್ಯದ ಬಗ್ಗೆ ಬಹಳ ಕಾಲದಿಂದಲೂ ಭಿನ್ನಾಭಿಪ್ರಾಯ ವಿದೆ ಎಂಬುದನ್ನು ನಿರಾಕರಿಲಾಗದು. ಸಾಂಸ್ಥಿಕ ಘನತೆ ಮತ್ತು ಅಧಿಕಾರದ ವಿಭಜನೆಯನ್ನು ಸ್ಪಷ್ಟವಾಗಿ ಗುರುತಿಸಬೇಕಿದೆ. ಎಲ್ಲ ಆಯ್ಕೆಗಳು ಮುಗಿದ ಬಳಿಕವೇ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸಬೇಕು’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಸದನದಲ್ಲಿ ವಿಶ್ವಾಸಮತ ಯಾಚನೆಗೆ ಎರಡೂ ಗುಂಪುಗಳ ಒಪ್ಪಿಗೆ ಇರುವ ಸಂದರ್ಭದಲ್ಲಿ ವಿಶ್ವಾಸಮತ ಯಾಚನೆ ಆಗಲಿ ಎಂಬ ನಿರ್ದೇಶನ ಯಾವುದೇ ಪೂರ್ವಗ್ರಹ ಇಲ್ಲದ ಆದೇಶವಾಗುತ್ತದೆ ಮತ್ತು ಅದು ಪ್ರಜಾಪ‍್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಸಾಂವಿಧಾನಿಕ ನೈತಿಕತೆಯನ್ನು ಕರ್ನಾಟಕದ ಶಾಸಕರ ಅನರ್ಹತೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಪರಿಶೀಲನೆಗೆ ಒಳಪಡಿಸಿದೆ. ಸಾಂವಿಧಾನಿಕ ಕಾರ್ಯನಿರ್ವಾಹಕರು ಸಾಂವಿಧಾನಿಕ ನೈತಿಕತೆಯನ್ನು ರೂಢಿಸಿಕೊಳ್ಳಬೇಕಿದೆ. ಪ್ರಜಾಪ್ರಭುತ್ವಕ್ಕೆ ಸಲ್ಲದಮತ್ತು ಕಾನೂನುಬಾಹಿರವಾದ ನಡೆಯನ್ನು ರಾಜಕೀಯ ವಲಯವು ಕೈಬಿಡಬೇಕು ಎಂಬುದನ್ನು ಕರ್ನಾಟಕದ ಪ್ರಕರಣದಲ್ಲಿ ಹೇಳಲಾಗಿತ್ತು.

‘ಸಚಿವ ಸಂಪುಟವು ಸದನದ ವಿಶ್ವಾಸ ಕಳೆದುಕೊಂಡಿದೆ ಎಂಬ ಶಂಕೆ ಮೂಡಿದರೆ ಸದನದಲ್ಲಿ ಅದನ್ನು ಪರೀಕ್ಷೆಗೆ ಒಳಪಡಿಸುವುದೇ ಇರುವ ಏಕೈಕ ಮಾರ್ಗ. ವ್ಯಾಪಕ ಹಿಂಸಾಚಾರ ನಡೆದು, ಸದನದಲ್ಲಿ ಮುಕ್ತ ಮತದಾನ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇದ್ದರೆ, ಮತ್ತು ಅದನ್ನು ರಾಜ್ಯಪಾಲರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರೆ ಮಾತ್ರ ಇದಕ್ಕೆ ವಿನಾಯಿತಿ ನೀಡಬಹುದು’ ಎಂದು ಪೀಠ ವಿವರಿಸಿದೆ.

ಶಾಸಕರ ಖರೀದಿ ತಡೆ ಅನಿವಾರ್ಯ

ವಿಶ್ವಾಸಮತ ಯಾಚನೆಯು ವಿಳಂಬವಾಗುವುದರಿಂದ ಶಾಸಕರ ಖರೀದಿಯಂತಹ ನಡೆಗಳ ಸಾಧ್ಯತೆ ಇದ್ದರೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ವಿಶ್ವಾಸಮತ ಯಾಚಿಸುವಂತೆ ಆದೇಶ ನೀಡುವುದು ನ್ಯಾಯಾಲಯಕ್ಕೆ ಅನಿವಾರ್ಯ. ತಕ್ಷಣವೇ ವಿಶ್ವಾಸಮತ ಯಾಚನೆ ಆಗುವಂತೆ ನೋಡಿಕೊಳ್ಳುವುದು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸಲು ಇರುವ ಪರಿಣಾಮಕಾರಿ ಮಾರ್ಗ ಎಂದು ಪೀಠ ಹೇಳಿದೆ.

1994ರ ಎಸ್‌.ಆರ್‌. ಬೊಮ್ಮಾಯಿ ಪ್ರಕರಣದಲ್ಲಿ ಒಂಬತ್ತು ನ್ಯಾಯಮೂರ್ತಿಗಳ ಪೀಠದಲ್ಲಿದ್ದ ನ್ಯಾಯಮೂರ್ತಿ ಬಿ.ಪಿ. ಜೀವನ್‌ ರೆಡ್ಡಿ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂಬುದನ್ನು ಪೀಠ ನೆನಪಿಸಿಕೊಂಡಿದೆ.

‘ಸಂವಿಧಾನದ ತತ್ವಗಳನ್ನು ಮಾತ್ರ ಗಮನದಲ್ಲಿ ಇರಿಸಿಕೊಂಡು ನೋಡುವುದಾದರೆ ಜನರ ಇಚ್ಛೆ ಪ್ರತಿನಿಧಿಸುವುದು ಶಾಸನ ಸಭೆಯೇ ಹೊರತು ರಾಜ್ಯಪಾಲರಲ್ಲ.ರಾಜ್ಯಪಾಲರು ತಮ್ಮದೇ ಆದ ವಿಶ್ಲೇಷಣೆ ನಡೆಸುವ ಪ್ರಶ್ನೆ ಉದ್ಭವಿಸುವುದಿಲ್ಲ’’ ಎಂದು ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT