ಸೋಮವಾರ, ನವೆಂಬರ್ 18, 2019
25 °C

ಮಹಾರಾಷ್ಟ್ರ ಶೇ 60, ಹರಿಯಾಣ ಶೇ 65 ಮತದಾನ: ಎಕ್ಸಿಟ್ ಪೋಲ್‌ನತ್ತ ಚಿತ್ತ

Published:
Updated:
Voting

ಮುಂಬೈ/ಚಂಡೀಗಡ: ಸಣ್ಣ ಪುಟ್ಟ ಅಹಿತಕರ ಘಟನೆಗಳನ್ನು ಬಿಟ್ಟರೆ ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆಗೆ ಸೋಮವಾರ ನಡೆದ ಮತದಾನ ಶಾಂತಿಯುತವಾಗಿತ್ತು. ಮಹಾರಾಷ್ಟ್ರದಲ್ಲಿ ಶೇ 60.46ರಷ್ಟು ಮತ್ತು ಹರಿಯಾಣದಲ್ಲಿ ಶೇ 65ರಷ್ಟು ಮತದಾನ ಆಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಶೇ 63.38ರಷ್ಟು ಮತ್ತು ಹರಿಯಾಣದಲ್ಲಿ ಶೇ 76.54ರಷ್ಟು ಮತದಾನ ದಾಖಲಾಗಿತ್ತು.

ಮಹಾರಾಷ್ಟ್ರದ ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ಮತದಾರರು ಮತದಾನಕ್ಕೆ ಹೆಚ್ಚಿನ ಉತ್ಸಾಹ ತೋರಿದ್ದಾರೆ. 

ರಾಜಕೀಯ ಕ್ಷೇತ್ರದ ಮುಖಂಡರು, ಬಾಲಿವುಡ್‌ ತಾರೆಯರು ಮತ್ತು ಉದ್ಯಮ ರಂಗದ ನಾಯಕರು ಉತ್ಸಾಹದಲ್ಲಿ ಮತದಾನ ಮಾಡಿದ್ದಾರೆ. ‘ಜನತಂತ್ರದ ಹಬ್ಬ’ದಲ್ಲಿ ಯುವಜನರೂ ಸಂಭ್ರಮದಿಂದ ಭಾಗಿಯಾಗಿದ್ದಾರೆ. 

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌, ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ತಮ್ಮ ಹಕ್ಕು ಚಲಾಯಿಸಿದ್ದಾರೆ. 

ಮುಂಬೈನ ಮತಗಟ್ಟೆಗಳಿಗೆ ಬಾಲಿವುಡ್‌ ತಾರೆಯರು ರಂಗು ತುಂಬಿದ್ದಾರೆ. ಶಾರುಕ್‌ ಖಾನ್‌, ಸಲ್ಮಾನ್‌ ಖಾನ್‌, ಕರೀನಾ ಕಪೂರ್‌, ದೀಪಿಕಾ ಪಡುಕೋಣೆ, ಅಮೀರ್‌ ಖಾನ್‌ ಸೇರಿ ಹಲವು ತಾರೆಯರು ಮತ ಹಾಕಿದ್ದಾರೆ. 

ಖಟ್ಟರ್‌ ಸೈಕಲ್ ಸವಾರಿ: ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌ ಅವರು ಸೈಕಲ್‌ನಲ್ಲಿ ಮತಗಟ್ಟೆಗೆ ಬಂದು ಗಮನ ಸೆಳೆದರು. ಜನತಾ ಜನನಾಯಕ ಪಕ್ಷದ ಮುಖ್ಯಸ್ಥ ದುಷ್ಯಂತ್‌ ಚೌತಾಲಾ ಅವರು ಟ್ರ್ಯಾಕ್ಟರ್‌ನಲ್ಲಿ ಬಂದರು. 

ಐದಾರು ಸ್ಥಳಗಳಲ್ಲಿ ಸಂಘರ್ಷ ಉಂಟಾಗಿದೆ. ಏಳು ಮಂದಿ ಗಾಯಗೊಂಡಿದ್ದಾರೆ.

ಗುಂಡು ಹಾರಾಟದ ಎರಡು ಪ್ರಕರಣಗಳೂ ನಡೆದಿವೆ ಎಂದು ಹರಿಯಾಣದ ಡಿಜಿಪಿ ಮನೋಜ್‌ ಯಾದವ ತಿಳಿಸಿದ್ದಾರೆ.

ಮತಯಂತ್ರಕ್ಕೆ ಮಸಿ ಎರಚಿ ಪ್ರತಿಭಟನೆ

ಠಾಣೆ: ಬಿಎಸ್‌ಪಿ ಸ್ಥಳೀಯ ಮುಖಂಡ ಸುನಿಲ್ ಕಾಂಬ್ಳೆ ಎಂಬುವರು ಇಲ್ಲಿನ ಅಂಚೆಕಚೇರಿಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಮತಯಂತ್ರದ  ಮೇಲೆ ಮಸಿ ಎರಚಿ ‍ಪ್ರತಿಭಟನೆ ನಡೆಸಿದರು. ಕಾಂಬ್ಳೆ ಅವರನ್ನು ಪೊಲೀಸರು ವಶಕ್ಕೆ ಪಡೆದು ಮತಗಟ್ಟೆಯಿಂದ ಕರೆದೊಯ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಇವಿಎಂ ವಿರೋಧಿ ಘೋಷಣೆಗಳನ್ನು ಕೂಗಿದ ಅವರು ಇವಿಎಂಗಳಿಂದಾಗಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಎಚ್ಚರಿಸಿದರು.

‘ಎಲ್ಲ ಮತ ಬಿಜೆಪಿಗೆ...’

ನವದೆಹಲಿ: ಹರಿಯಾಣದ ಅಸಂಧ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಬಕ್ಷೀಶ್ ಸಿಂಗ್ ವಿರ್ಕ್ ಅವರು ಆಡಳಿತಾರೂಢ ಪಕ್ಷದ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೊಗಳಿದ್ದಾರೆ. 

‘ಯಾವುದೇ ಬಟನ್ ಒತ್ತಿದರೂ, ಮತ ಬಿಜೆಪಿಗೇ ಹೋಗುತ್ತದೆ’ ಎಂದು ವಿರ್ಕ್ ಅವರು ಹೇಳಿದ್ದಾರೆ ಎನ್ನಲಾದ ವಿಡಿಯೊ ವೈರಲ್ ಆಗಿದ್ದು, ಇದಕ್ಕೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದಾರೆ. ವಿಡಿಯೊ ನಕಲಿ ಎಂದಿರುವ ವಿರ್ಕ್, ರಾಜಕೀಯ ವಿರೋಧಿಗಳು ತಮಗೆ ಕೆಟ್ಟ ಹೆಸರು ತರಲು ಇದನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ. ‘ಯಾರಿಗೆ ಮತ ಹಾಕಿದ್ದಾರೆ ಎಂಬುದು ನಮಗೆ ಗೊತ್ತಾಗಲಿದೆ. ಈ ಬಗ್ಗೆ ಇನ್ನು ಗೊಂದಲ ಇರುವುದಿಲ್ಲ’ ಎಂದು ವಿರ್ಕ್ ಅವರು ತಮ್ಮ ಬೆಂಬಲಿಗರ ಜತೆ ಮಾತನಾಡುತ್ತಾ ಹೇಳಿರುವುದು ವಿಡಿಯೊ ದೃಶ್ಯಾವಳಿಯಲ್ಲಿ ಇದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಕಾರ್ಯಪ್ರವೃತ್ತವಾದ ಚುನಾವಣಾ ಆಯೋಗವು ಶಾಸಕನಿಗೆ ನೋಟಿಸ್ ನೀಡಿದ್ದು, ಕ್ಷೇತ್ರಕ್ಕೆ ವಿಶೇಷ ವೀಕ್ಷಕರನ್ನು ನೇಮಿಸಿತ್ತು. ‌

ಪ್ರತಿಕ್ರಿಯಿಸಿ (+)