ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಬಲ ಬ್ರಿಟಿಷರನ್ನು ಮಣಿಸಿದ ಆಶ್ರಮವಾಸಿ

Last Updated 1 ಅಕ್ಟೋಬರ್ 2019, 19:21 IST
ಅಕ್ಷರ ಗಾತ್ರ

ಅಹಮದಾಬಾದ್‌: ಸಾಬರಮತಿ ನದಿ ದಡದ ಸುಂದರ ಪ್ರದೇಶದಲ್ಲಿ ಇರುವ ಸಾಬರಮತಿ ಆಶ್ರಮವು ಭಾರತದ ಸ್ವಾತಂತ್ರ್ಯ ಹೋರಾಟದ ಕೇಂದ್ರವೇ ಆಗಿತ್ತು. 1930ರಲ್ಲಿ ಮಹಾತ್ಮ ಗಾಂಧೀಜಿ ದಂಡಿ ಯಾತ್ರೆಯನ್ನು ಇಲ್ಲಿಂದಲೇ ಆರಂಭಿಸಿದರು. ಪ್ರತಿರೋಧ ತೋರಲು ಅಹಿಂಸೆಗಿಂತ ಪ್ರಬಲವಾದ ಆಯುಧವೇ ಇಲ್ಲ ಎಂಬುದನ್ನು ಜಗತ್ತಿಗೇ ತೋರಿಸಿಕೊಟ್ಟ ಯಾತ್ರೆ ಇದು. ಅಷ್ಟೇ ಅಲ್ಲ, ಸೂರ್ಯ ಮುಳುಗದ ಸಾಮ್ರಾಜ್ಯ ಎಂದೇ ಹೆಸರಾಗಿದ್ದ ಬ್ರಿಟಿಷ್‌ ಸಾಮ್ರಾಜ್ಯವು ಈ ಆಶ್ರಮದ ಮುಂದೆ ಮಂಡಿಯೂರಿತು.

ಗಾಂಧೀಜಿಯ ಪರಂಪರೆ ಮತ್ತು ಸಿದ್ಧಾಂತವನ್ನು ಕಾಪಿಡುವ ಕೆಲಸವನ್ನು ಸಾಬರಮತಿ ಆಶ್ರಮ ಇಂದು ಮಾಡುತ್ತಿದೆ. ಜಗತ್ತಿನಾದ್ಯಂತ ಹಲವು ಚಳವಳಿಗಳಿಗೆ, ದೊಡ್ಡ ದೊಡ್ಡ ನಾಯಕರಿಗೆ ಸ್ಫೂರ್ತಿಯಾದ ಗಾಂಧೀಜಿಯ ಜೀವನದ ಬಗ್ಗೆ ಇಲ್ಲಿ ನಡೆಯುತ್ತಿರುವ ಸಂಶೋಧನೆಗಳು ಹಲವು. ಹಾಗಾಗಿ, ಇಂದು ಸಾಬರಮತಿ ಆಶ್ರಮ ಒಂದು ಸಂಶೋಧನಾ ಕೇಂದ್ರವೂ ಹೌದು.

ದಕ್ಷಿಣ ಆಫ್ರಿಕಾದಿಂದಗಾಂಧೀಜಿ ಭಾರತಕ್ಕೆ ಮರಳಿದ ಬಳಿಕ ಈ ಆಶ್ರಮವನ್ನು ಸ್ಥಾಪಿಸಿದರು. ಸೆರೆಮನೆಯಲ್ಲಿ ಅಥವಾ ಪ್ರವಾಸದಲ್ಲಿ ಇಲ್ಲದ ದಿನಗಳಲ್ಲಿ ಈ ಆಶ್ರಮವೇ ಗಾಂಧೀಜಿಯ ಮುಖ್ಯ ನಿವಾಸವಾಗಿತ್ತು. ಸ್ವರಾಜ್ಯ, ಸ್ವ ಆಡಳಿತ ಮತ್ತು ಸ್ವಾತಂತ್ರ್ಯದ ಘೋಷಣೆಗಳು ಈ ಆಶ್ರಮದಿಂದಲೇ ಮೊಳಗಿದವು.

ಸ್ವಾತಂತ್ರ್ಯ ಹೋರಾಟದ ಮೇಲೆ ದಂಡಿ ಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹ ಬೀರಿದ ಪ್ರಭಾವ ಅಪಾರ. ಹಾಗಾಗಿಯೇ ಸ್ವಾತಂತ್ರ್ಯದ ಬಳಿಕ ಈ ಆಶ್ರಮವನ್ನು ರಾಷ್ಟ್ರೀಯ ಸ್ಮಾರಕ ಎಂದು ಸರ್ಕಾರ ಘೋಷಿಸಿತು.

1930ರ ಮಾರ್ಚ್‌ 12ರಂದು ಆಶ್ರಮದಿಂದ ಆರಂಭಗೊಂಡ ದಂಡಿಯಾತ್ರೆ ಬ್ರಿಟಿಷ್‌ ಸರ್ಕಾರದ ವಿರುದ್ಧ ಲಕ್ಷಾಂತರ ಭಾರತೀಯರನ್ನು ಬಡಿದೆಬ್ಬಿಸಿತು. 384 ಕಿ.ಮೀ. ಪಾದಯಾತ್ರೆಯು 24 ದಿನಗಳ ಬಳಿಕ ನವಸಾರಿ ಜಿಲ್ಲೆಯ ಉಪ್ಪಿನ ಗದ್ದೆಗಳಲ್ಲಿ ಸಮಾರೋಪಗೊಂಡಿತು.

ಬ್ರಿಟಿಷ್ ಭಾರತದ ತಳಪಾಯವನ್ನೇ ಅಲುಗಾಡಿಸಿದ ಯಾತ್ರೆ ಇದು ಎಂದು ಇತಿಹಾಸಕಾರರು ಬಣ್ಣಿಸುತ್ತಾರೆ.

ಅಪಾರ ಸಂಖ್ಯೆಯ ಅಭಿಯಾನಗಳು, ಅಹಿಂಸಾತ್ಮಕ ಚಳವಳಿಗಳ ಯೋಜನೆ ರೂಪುಗೊಂಡ ಆಶ್ರಮ ಈಗ, 89 ವರ್ಷಗಳ ಬಳಿಕವೂ ಗಾಂಧೀಜಿಯ ಬರಹಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ.

ಗಾಂಧೀಜಿಯ ಜೀವನ ಮತ್ತು ಸಿದ್ಧಾಂತಗಳು, ಆಶ್ರಮದ ಪ್ರಶಾಂತ ವಾತಾವರಣ ಜಗತ್ತಿನ ವಿವಿಧೆಡೆಯ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ. ವಿದ್ವಾಂಸರು, ಸಂಶೋಧಕರು ಇಲ್ಲಿಗೆ ಬರುತ್ತಾರೆ. ಗಾಂಧೀಜಿಯ ಜೀವನ ಮತ್ತು ಧೋರಣೆಗಳ ಬಗ್ಗೆ ಸಂಶೋಧನೆ ನಡೆಸಲು ಬಯಸುವವರಿಗೆ ಇಲ್ಲಿ ಬೇಕಾದಷ್ಟು ದಾಖಲೆಗಳು, ಬರಹಗಳು ಇವೆ.

ಸಿನಿಮಾ ಒಲ್ಲದ ಗಾಂಧೀಜಿ ಬಗ್ಗೆಯೇ ಹತ್ತಾರು ಸಿನಿಮಾ

ಸಿನಿಮಾಗಳ ಬಗ್ಗೆ ಗಾಂಧೀಜಿಗೆ ಉಪೇಕ್ಷೆ ಇತ್ತು. ಇದು ಜನರನ್ನು ಭ್ರಷ್ಟಗೊಳಿಸುತ್ತದೆ ಎಂಬುದು ಅವರ ಭಾವನೆಯಾಗಿತ್ತು. ಆದರೆ, ಚಲನಚಿತ್ರ ಕ್ಷೇತ್ರದಲ್ಲಿ ಗಾಂಧೀಜಿಯ ಸಿದ್ಧಾಂತದ ಹೆಜ್ಜೆಗುರುತುಗಳು ಅಳಿಸಲಾಗದಂತೆ ಮತ್ತು ವೈವಿಧ್ಯಮಯವಾಗಿ ಮೂಡಿವೆ. ಕಪ್ಪು ಬಿಳುಪು ಸಿನಿಮಾ ದಿನಗಳಿಂದ ಬಣ್ಣದ ಸಿನಿಮಾಗಳ ವರೆಗೆ ಗಾಂಧೀಜಿಯನ್ನು ಕೇಂದ್ರವಾಗಿಸಿ ಹತ್ತಾರು ಸಿನಿಮಾಗಳು ನಿರ್ಮಾಣವಾಗಿವೆ.

ಗಾಂಧೀಜಿ ಪ್ರತಿಪಾದಿಸಿದ ಸಿದ್ಧಾಂತಗಳು ಇಡೀ ಜಗತ್ತಿನ ಚಿಂತನಾ ಕ್ರಮವನ್ನೇ ಪ್ರಭಾವಿಸಿವೆ. ಚಲನಚಿತ್ರ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಅವರ ಜೀವನ, ಮೌಲ್ಯಗಳು, ಹೋರಾಟಗಳನ್ನು ಆಧರಿಸಿ ಚಲನಚಿತ್ರಗಳು ತಯಾರಾಗಿವೆ. ಗಾಂಧೀಜಿಯ ಸಿದ್ಧಾಂತಗಳನ್ನು ಹೇಳುವ ನಾಯಕನನ್ನು ಹೊಂದಿರುವ ಸಿನಿಮಾಗಳು ನೂರಾರಿವೆ.

1954ರಲ್ಲಿ ಬಂದ ‘ಜಾಗೃತಿ’ಯಿಂದ ಆರಂಭಿಸಿ 2006ರಲ್ಲಿ ಬಂದ ‘ಲಗೇ ರಹೋ ಮುನ್ನಾಭಾಯ್‌’ವರೆಗೆ ಈ ಸಿನಿಮಾಗಳು ವೈವಿಧ್ಯಮಯ. ‘ಜಾಗೃತಿ’ಯಲ್ಲಿ ಹಿಂದಿಯ ಕವಿ ಪ್ರದೀಪ್‌ ಅವರ ಪದ್ಯದ ಸಾಲು ಹೀಗಿದೆ: ‘ಸಾಬರಮತಿಯ ಓ ಸಂತನೇ, ಯಾವ ಆಯುಧವನ್ನೂ ಹಿಡಿಯದ ನೀನು ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟೆ’. ಗಾಂಧೀಜಿಯ ಬಗೆಗಿನ ಗೌರವ ಈ ಸಿನಿಮಾದಲ್ಲಿ ಅನುರಣಿಸುತ್ತದೆ.

ದಿಲೀಪ್ ಕುಮಾರ್‌ ನಾಯಕನಟನಾಗಿರುವ 1957ರಲ್ಲಿ ಬಂದ ‘ನಯಾ ದೌರ್‌’, ಯಂತ್ರ ಮತ್ತು ಮನುಷ್ಯ ಸಂಘರ್ಷದ ಕತೆ ಹೊಂದಿದೆ. ‘ದೋ ಆಂಖೇ ಬಾರಾ ಹಾಥ್‌’ ಅದೇ ವರ್ಷ ಬಿಡುಗಡೆಯಾದ ಮತ್ತೊಂದು ಸಿನಿಮಾ. ತಾಯಿ ಹೃದಯದ ಜೈಲ್‌ ವಾರ್ಡನ್‌ ಆರು ಅಪರಾಧಿಗಳ ಮನಪರಿವರ್ತನೆ ಮಾಡುವ ಕತೆಯಲ್ಲಿ ಎದ್ದು ಕಾಣುವುದು ಗಾಂಧೀಜಿಯ ಮೌಲ್ಯಗಳು.

ತೀರಾ ಇತ್ತೀಚೆಗೆ ಬಂದ ‘ಲಗೇ ರಹೊ ಮುನ್ನಾಭಾಯ್‌’ ‘ಗಾಂಧಿಗಿರಿ’ಗೆ ಹೊಸ ಅರ್ಥ ಕೊಟ್ಟ ಸಿನಿಮಾ. ಗೂಂಡಾ ಒಬ್ಬ ಗಾಂಧಿಯ ತತ್ವಗಳಿಂದ ಮಾರ್ಗದರ್ಶನ ಪಡೆಯುವ ಕತೆಯನ್ನು ಈ ಸಿನಿಮಾ ಹೇಳುತ್ತದೆ.

1980ರ ದಶಕದ ವರೆಗಿನ ಸಿನಿಮಾಗಳ ನಾಯಕರು ಗಾಂಧಿ ಚಿಂತನೆಯಲ್ಲಿ ಎರಕವಾದವರು. ಸಮಾನತೆ, ಶೋಷಣೆ ವಿರುದ್ಧ ಹೋರಾಟ, ಭೌತಿಕ ಆಕಾಂಕ್ಷೆಗಳೆಡೆಗೆ ವೈರಾಗ್ಯಗಳೆಲ್ಲವೂ ಈ ನಾಯಕರ ಗುಣಗಳಾಗಿದ್ದವು ಎಂದು ‘ಎ ಗಾಂಧಿಯನ್‌ ಅಫೇರ್‌: ಇಂಡಿಯಾಸ್‌ ಕ್ಯೂರಿಯಸ್‌ ಪೋರ್ಟ್ರೇಯಲ್‌ ಆಫ್‌ ಲವ್‌ ಇನ್ ಸಿನಿಮಾ’ ಕೃತಿಯಲ್ಲಿ ಸಂಜಯ್‌ ಸೂರಿ ಗುರುತಿಸುತ್ತಾರೆ.

ಗಾಂಧಿ ಸ್ಮಾರಕ ಸಂಗ್ರಹಾಲಯ

ಈ ಸಂಗ್ರಹಾಲಯದಲ್ಲಿ ಗಾಂಧೀಜಿಗೆ ಸಂಬಂಧಿಸಿದ ಹಲವು ವಸ್ತುಗಳಿವೆ. ಈ ಸಂಗ್ರಹಾಲಯವು ಮೊದಲಿಗೆ ಹೃದಯ ಕುಂಜದಲ್ಲಿ ಇತ್ತು. ಹೃದಯ ಕುಂಜ ಈ ಆಶ್ರಮದಲ್ಲಿ ಗಾಂಧೀಜಿ ನೆಲೆಸಿದ್ದ ಕುಟೀರ.

ನನ್ನ ಜೀವನ ನನ್ನ ಸಂದೇಶ

ಇದು ಮುಖ್ಯವಾಗಿ, ಫೋಟೊಗಳ ಗ್ಯಾಲರಿ. ಇಲ್ಲಿ ಗಾಂಧೀಜಿಯ ಆಳೆತ್ತರದ ಎಂಟು ಚಿತ್ರಗಳಿವೆ. 250ಕ್ಕೂ ಹೆಚ್ಚು ಛಾಯಾಚಿತ್ರಗಳಿವೆ. ಗಾಂಧೀಜಿಯ ಜೀವನದ ಮಹತ್ವದ ಮತ್ತು ಚಾರಿತ್ರಕವಾದ ಘಟನೆಗಳನ್ನು ಈ ಛಾಯಾಚಿತ್ರಗಳು ಹೇಳುತ್ತವೆ. ಈ ಚಿತ್ರಗಳನ್ನು ದೊಡ್ಡದಾಗಿ ಹಿಗ್ಗಿಸಿ ಇರಿಸಲಾಗಿದೆ. ‘ಗಾಂಧಿ ಇನ್‌ ಅಹಮದಾಬಾದ್‌’ ವಿಭಾಗವು ಅಹಮದಾಬಾದ್‌ ನಲ್ಲಿ ಗಾಂಧೀಜಿಯ ಜೀವನದ ದಿನಗಳನ್ನು ನೆನಪಿಸುತ್ತದೆ. 1915ರಿಂದ 1930ರವರೆಗೆ ಗಾಂಧೀಜಿ ಅಹಮದಾಬಾದ್‌ ನಗರದಲ್ಲಿ ಇದ್ದರು.

ಸಿನಿಮಾ ಬಗ್ಗೆ ಗಾಂಧಿ

‘ಸಿನಿಮಾ ಕಂಪನಿಯೊಂದಕ್ಕೆ ನಾನು ಒತ್ತಾಸೆಯಾಗಿದ್ದೇನೆ ಎಂದು ಜರ್ಮನಿಯ ಪತ್ರಿಕೆಯೊಂದು ಬರೆದಿದೆ’ ಎಂದು 1926ರಲ್ಲಿ ‘ಯಂಗ್ ಇಂಡಿಯಾ’ದಲ್ಲಿ ಗಾಂಧೀಜಿ ಬರೆದಿದ್ದರು. ‘ಸಿನಿಮಾ ಬಗ್ಗೆ ಕಾತರಗೊಳ್ಳದಿರಲು ನಿರ್ಧರಿಸಿದ್ದೇನೆ. ನನ್ನ ಕೆಲವು ಒಳ್ಳೆಯ ಗೆಳೆಯರು ಸಿನಿಮಾ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲು ಒತ್ತಾಯ ಮಾಡಿದ್ದರೂ ಅದು ದೇವರು ಕೊಟ್ಟ ಸಮಯವನ್ನು ವ್ಯರ್ಥ ಮಾಡುವುದು ಎಂದೇ ಭಾವಿಸಿದ್ದೇನೆ’ ಎಂದೂ ಅವರು ಬರೆದಿದ್ದರು.

‘ಇದಕ್ಕೆ (ಸಿನಿಮಾ) ಶೈಕ್ಷಣಿಕ ಮೌಲ್ಯ ಇದೆ ಎಂದು ಅವರು ಹೇಳಿದ್ದಾರೆ. ಇದು ಹೌದಾಗಿರಬಹುದು. ಆದರೆ, ಅದರ ಭ್ರಷ್ಟಗೊಳಿಸುವ ಪ್ರಭಾವ ನನ್ನ ನಿತ್ಯ ಜೀವನದಲ್ಲಿ ಅಡ್ಡ ಬರುತ್ತದೆ. ಹಾಗಾಗಿ, ಶಿಕ್ಷಣವನ್ನು ನಾನು ಬೇರೆಡೆಯಿಂದ ಪಡೆಯುತ್ತೇನೆ’ ಎಂಬುದು ಅವರ ಅಭಿಪ್ರಾಯವಾಗಿತ್ತು.

ಹಾಗಿದ್ದರೂ, ಗಾಂಧೀಜಿ ಕೆಲವು ಸಿನಿಮಾಗಳನ್ನು ವೀಕ್ಷಿಸಿದ್ದರು. 1940ರ ದಶಕದಲ್ಲಿ ವಿಜಯ ಭಟ್‌ ಅವರ ‘ರಾಮರಾಜ್ಯ’ ಸಿನಿಮಾ ಅವುಗಳಲ್ಲಿ ಒಂದು.

ಅಟೆನ್‌ಬರೋ ನಿರ್ದೇಶನದ ‘ಗಾಂಧಿ’

ಗಾಂಧೀಜಿಯ ಜೀವನದ ಬಗ್ಗೆ ಬಂದಿರುವ ಸಿನಿಮಾಗಳಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಅತ್ಯಂತ ಯಶಸ್ವಿಯಾದುದು ರಿಚರ್ಡ್‌ ಅಟೆನ್‌ಬರೋ ನಿರ್ದೇಶಿಸಿದ ‘ಗಾಂಧಿ’. 1983ರಲ್ಲಿ ಈ ಸಿನಿಮಾಕ್ಕೆ ಆಸ್ಕರ್‌ ಪುರಸ್ಕಾರವೂ ಲಭಿಸಿತು. ಬೆನ್‌ ಕಿಂಗ್ಸ್‌ಲಿ ಈ ಸಿನಿಮಾದ ಪ್ರಧಾನ ಪಾತ್ರಧಾರಿ.

ಈ ಸಿನಿಮಾ ಗಾಂಧೀಜಿಯ ಇಡೀ ಜೀವನದ ಚಿತ್ರಣವನ್ನು ಕಟ್ಟಿಕೊಟ್ಟರೆ, ಇತರ ಹಲವು ಸಿನಿಮಾಗಳು ಅವರ ಜೀವನದ ನಿರ್ದಿಷ್ಟ ಹಂತಗಳಿಗೆ ಗಮನ ಕೇಂದ್ರೀಕರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT