ಗುರುವಾರ , ನವೆಂಬರ್ 26, 2020
19 °C

ಹಣ ವಾಪಸ್ ಪಡೆಯಲು ಬ್ಯಾಂಕ್‌ಗಳಿಗೆ ಪ್ರಧಾನಿ ಸೂಚನೆ ನೀಡುತ್ತಿಲ್ಲ ಏಕೆ: ಮಲ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಬ್ಯಾಂಕುಗಳಿಂದ ಪಡೆದ ಸುಮಾರು ₹9 ಸಾವಿರ ಕೋಟಿ ಬಾಕಿ ಉಳಿಸಿಕೊಂಡು ಪರಾರಿಯಾದವರಿಂದ ಹಣ ವಸೂಲಿ ಮಾಡುವುದಾಗಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಬಳಿಕ ಗುರುವಾರ ಸರಣಿ ಟ್ವೀಟ್‌ಗಳನ್ನು ಮಾಡಿರುವ ಉದ್ಯಮಿ ವಿಜಯ ಮಲ್ಯ, ‘ನಾನು ಸಾಲ ತೀರಿಸುತ್ತೇನೆಂದರೂ ಸ್ವೀಕರಿಸದ ಬ್ಯಾಂಕ್‌ಗಳಿಗೆ ಹಣ ಪಡೆಯುವಂತೆ ಪ್ರಧಾನಿ ಏಕೆ ಸೂಚನೆ ನೀಡುತ್ತಿಲ್ಲ’ ಎಂದು ಪ್ರಶ್ನಿಸಿದ್ದಾರೆ.

‘ಸಂಸತ್ತಿನಲ್ಲಿ ಪ್ರಧಾನಿ ಮಾಡಿದ ಭಾಷಣ ನನ್ನ ಗಮನ ಸೆಳೆದಿದೆ. ಖಂಡಿತವಾಗಿ ಅವರೊಬ್ಬ ಉತ್ತಮ ಮಾತುಗಾರ. ₹9,000 ಕೋಟಿ ಜತೆ ಓಡಿ ಹೋದ ವ್ಯಕ್ತಿ ಎಂದು ಅವರು ನನ್ನ ಹೆಸರು ಹೇಳದೆ ಉಲ್ಲೇಖಿಸಿದ್ದಾರೆ. ಮಾಧ್ಯಮಗಳ ವರದಿ ನೋಡಿದಾಗ ಅದು ನನ್ನ ಕುರಿತ ಉಲ್ಲೇಖ ಎಂಬುದನ್ನು ಊಹಿಸಬಲ್ಲೆ’ ಎಂದು ಅವರು ಬುಧವಾರ ತಡರಾತ್ರಿ ಮಾಡಿದ ಮೊದಲ ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ನನ್ನ ಹಿಂದಿನ ಟ್ವೀಟ್‌ಗೆ ಮುಂದುವರಿದು, ಅತ್ಯಂತ ಗೌರವದಿಂದ ಕೇಳುತ್ತೇನೆ. ನಾನು ಸಾಲ ಮರುಪಾವತಿ ಮಾಡುತ್ತೇನೆ ಎಂದರೂ ಬ್ಯಾಂಕ್‌ಗಳು ಪಡೆಯುತ್ತಿಲ್ಲ. ಹಣ ಪಡೆಯುವಂತೆ ಪ್ರಧಾನಿ ಏಕೆ ಬ್ಯಾಂಕ್‌ಗಳಿಗೆ ಸೂಚನೆ ನೀಡುತ್ತಿಲ್ಲ? ಕಿಂಗ್‌ಫಿಶರ್‌ಗೆ ನೀಡಿದ ಸಾರ್ವಜನಿಕ ನಿಧಿಯನ್ನು ಸಂಪೂರ್ಣ ಮರಳಿ ತಂದ ಹೆಗ್ಗಳಿಕೆ ಅವರದಾಗುತ್ತಿತ್ತಲ್ಲಾ ಎಂದಿದ್ದಾರೆ.

ಈ ಹಿಂದೆ ಮೋದಿಗೆ ಪತ್ರ ಬರೆದಿದ್ದ ಮಲ್ಯ, ಸಾಲ ಮರುಪಾವತಿಯನ್ನು ಒಪ್ಪಿಕೊಳ್ಳಲು ಮನವಿ ಮಾಡಿದ್ದೆ. ಕರ್ನಾಟಕ ಹೈಕೋರ್ಟ್‌ ಮುಂದೆಯೂ ಈ ಪ್ರಸ್ತಾವನೆ ಮಂಡಿಸಿರುವುದಾಗಿ ತಿಳಿಸಿದ್ದೆ. ನಗಣ್ಯ ಎಂದು ತಳ್ಳಿ ಹಾಕುವಂತ ಪ್ರಸ್ತಾವನೆ ಇಲ್ಲ. ಖಂಡಿತವಾಗಿಯೂ ಕಾರ್ಯಸಾಧುವಾದ, ಪ್ರಮಾಣಿಕವಾದ ಮತ್ತು ತಕ್ಷಣವೇ ಸಾಧಿಸಬಹುದಾದ ಕಾರ್ಯ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ನಾನು ಸಂಪತ್ತನ್ನು ಬಚ್ಚಿಟ್ಟಿರುವುದಾಗಿ ಜಾರಿ ನಿರ್ದೇಶನಾಲಯ(ಇ.ಡಿ) ಹೇಳಿರುವುದು ಅಚ್ಚರಿ ತಂದಿದೆ. ಸಂಪತ್ತು ಬಚ್ಚಿಟ್ಟಿದ್ದರೆ ₹ 14,000 ಕೋಟಿ ಮೊತ್ತದ ಆಸ್ತಿಯನ್ನು ನ್ಯಾಯಾಲಯದ ಮುಂದೆ ಇಡಲು ಹೇಗೆ ಸಾದ್ಯವಾಗುತ್ತಿತ್ತು. ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಬರುವಂತೆ ಮಾಡುತ್ತಿರುವುದು ನಾಚಿಕೆಗೇಡು, ಆದರೂ ಅದರ ಬಗ್ಗೆ ನನಗೆ ಆಶ್ಚರ್ಯ ಇಲ್ಲ’ ಎಂದಿದ್ದಾರೆ.

2016ರಿಂದ ಲಂಡನ್‌ನಲ್ಲಿ ನೆಲೆಸಿರುವ ಮಲ್ಯ ವಿರುದ್ಧ ವಿಚಾರಣೆ ನಡೆಸುತ್ತಿದ್ದ ಸ್ಕಾಟ್ಲೆಂಡ್‌ ಯಾರ್ಡ್‌, 2017ರ ಏಪ್ರಿಲ್‌ನಲ್ಲಿ ಹಸ್ತಾಂತರ ವಾರಂಟ್‌ ಹೊರಡಿಸಿತ್ತು. ಅದಕ್ಕೆ ಅವರು ಜಾಮೀನು ಪಡೆದುಕೊಂಡಿದ್ದರು. ಭಾರತಕ್ಕೆ ಹಸ್ತಾಂತರಿಸಲು ಇದೇ 4ರಂದು ಬ್ರಿಟನ್ ಗೃಹ ಕಾರ್ಯದರ್ಶಿ ಸಾಜಿದ್‌ ಸಾವಿದ್‌ ಆದೇಶಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು