ಮನರಂಜನಾ ಲೋಕದ ಮನಮೀಟಿದ ಮಿ–ಟೂ

7

ಮನರಂಜನಾ ಲೋಕದ ಮನಮೀಟಿದ ಮಿ–ಟೂ

Published:
Updated:
Deccan Herald

ಮುಂಬೈ: ಹಿಂದಿ ಕಿರುತೆರೆಯ ಹಿರಿಯ ನಟ ಅಲೋಕ್‌ ನಾಥ್ ವಿರುದ್ಧ ಲೇಖಕಿ–ನಿರ್ಮಾಪಕಿ ವಿಂತಾ ನಂದಾ ಅವರು ಅತ್ಯಾಚಾರ ಆರೋಪ ಹೊರಿಸುವುದರೊಂದಿಗೆ ಭಾರತೀಯ ಮನರಂಜನಾ ಕ್ಷೇತ್ರ ಆಘಾತಗೊಂಡಿದೆ. 

ಭಾರತೀಯ ನಿರ್ಮಾಪಕರ ಸಂಘ (ಪಿಜಿಐ), ಸಿನಿಮಾ ಮತ್ತು ಕಿರುತೆರೆ ಕಲಾವಿದರ ಸಂಘ ಹಾಗೂ ಭಾರತೀಯ ಸಿನಿಮಾ ಮತ್ತು ಕಿರುತೆರೆ ನಿರ್ದೇಶಕರ ಸಂಘಗಳು ಸಂತ್ರಸ್ತರ ಪರವಾಗಿ ಗಟ್ಟಿಯಾಗಿ ನಿಂತಿವೆ. 

ಹಿರಿಯ ನಟರಾದ ನಾನಾ ಪಾಟೇಕರ್‌, ರಜತ್ ಕಪೂರ್‌ ಮತ್ತು ಅಲೋಕ್‌ ನಾಥ್‌, ಗಾಯಕ ಕೈಲಾಶ್‌ ಖೇರ್‌, ನಿರ್ದೇಶಕ ವಿಕಾಸ್‌ ಬಹ್ಲ್‌ ಮತ್ತಿತರರ ವಿರುದ್ಧದ ಆರೋಪದೊಂದಿಗೆ ‘ಮಿ–ಟೂ’ ಅಭಿಯಾನ ಆರಂಭವಾಗಿತ್ತು. ಈಗ ಅದು ಬೃಹದಾಕಾರ ತಾಳಿ ನಿಂತಿದೆ. ಹಾಸ್ಯನಟರ ಗುಂಪು ಎಐಬಿಯ ಸದಸ್ಯರ ವಿರುದ್ಧವೂ ಆಪಾದನೆಗಳು ಬಂದಿವೆ. 

ಲೈಂಗಿಕ ದೌರ್ಜನ್ಯ, ಅಸಭ್ಯ ವರ್ತನೆಗಳ ವಿರುದ್ಧ ದೂರು ನೀಡಲು ‘ಮಿ–ಟೂ’ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು. ಇಂತಹ ಪ್ರಕರಣಗಳು ಎಲ್ಲಿಯೇ ನಡೆದಿರಲಿ, ಯಾವಾಗಲೇ ನಡೆದಿರಲಿ ತಪ್ಪಿತಸ್ಥರ ವಿರುದ್ಧ ದೂರು ನೀಡಲು ನೆರವು ನೀಡಲಾಗುವುದು ಎಂದು ಪಿಜಿಐ ಹೇಳಿದೆ. 

‘ಕೆಲಸದ ಸ್ಥಳದಲ್ಲಿ ಎಲ್ಲ ಮಹಿಳೆಯರಿಗೆ ಅತ್ಯುನ್ನತ ಸುರಕ್ಷತೆ ಇರಬೇಕಾದುದು ತುರ್ತು ಅಗತ್ಯ ಎಂಬುದು ನಮ್ಮ ಭಾವನೆ. ಇದಕ್ಕಾಗಿ ಸಮಿತಿಯೊಂದನ್ನೂ ರಚಿಸುತ್ತೇವೆ. ಮನರಂಜನಾ ಉದ್ಯಮಕ್ಕೆ ಸಂಬಂಧಿಸಿದ ಎಲ್ಲ ಕೆಲಸದ ಸ್ಥಳಗಳು ಸುರಕ್ಷಿತವಾಗುವವರೆಗೆ ವಿರಮಿಸುವುದಿಲ್ಲ’ ಎಂದು ಪಿಜಿಐ ದೃಢವಾಗಿ ಹೇಳಿದೆ. 

ಇದನ್ನೂ ಓದಿ: ಮಿ–ಟೂ ಎಂದು ಹೇಳಿದ ಇನ್ನಷ್ಟು ಮನಗಳು

ಮಲಯಾಳ ನಟನಿಗೂ ಮಿ–ಟೂ ಉರುಳು


ಮುಕೇಶ್‌

ತಿರುವನಂತಪುರ: ಮಲಯಾಳದ ಜನಪ್ರಿಯ ನಟ ಮತ್ತು ಸಿಪಿಎಂ ಶಾಸಕ ಮುಕೇಶ್‌ ವಿರುದ್ಧ ಮುಂಬೈ ಮೂಲದ ಸಿನಿಮಾ ಪಾತ್ರ ಹಂಚಿಕೆ ನಿರ್ದೇಶಕಿ (ಕಾಸ್ಟಿಂಗ್‌ ಡೈರೆಕ್ಟರ್‌) ಟೆಸ್ ಜೋಸೆಫ್‌ ಅವರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. 19 ವರ್ಷ ಹಿಂದಿನ ಪ್ರಕರಣವನ್ನು ‘ಮಿ–ಟೂ’ ಅಭಿಯಾನದ ಮೂಲಕ ಅವರು ಬಹಿರಂಗಪಡಿಸಿದ್ದಾರೆ. 

ಟಿ.ವಿ. ವಾಹಿನಿಯೊಂದಕ್ಕೆ ‘ಗೇಮ್‌ ಶೋ’ ಚಿತ್ರೀಕರಣ ಮಾಡುತ್ತಿದ್ದಾಗ ಮುಕೇಶ್‌ ಅವರು ಕಿರುಕುಳ ನೀಡಿದ್ದರು. ‘ಹಲವು ಬಾರಿ ನನ್ನ ಕೊಠಡಿಗೆ ಕರೆ ಮಾಡಿದ್ದರು. ಅಲ್ಲದೆ ಹೋಟೆಲ್‌ ಸಿಬ್ಬಂದಿಗೆ ಹೇಳಿ ಅವರ ಕೊಠಡಿಯ ಪಕ್ಕದ ಕೊಠಡಿಯಲ್ಲಿಯೇ ನಾನು ಇರುವಂತೆ ನೋಡಿಕೊಂಡಿದ್ದರು. ಆಗ ನಾನು ಕೆಲಸ ಮಾಡುತ್ತಿದ್ದ ಕಂಪನಿಯ ಮುಖ್ಯಸ್ಥರಾಗಿದ್ದ ಡೆರೆಕ್‌ ಒಬ್ರಯಾನ್‌ ಅವರು (ಈಗ ಟಿಎಂಸಿಯ ರಾಜ್ಯಸಭಾ ಸದಸ್ಯ) ನನ್ನನ್ನು ರಕ್ಷಿಸಿದರು. ತಕ್ಷಣವೇ ಅವರು ನನ್ನನ್ನು ಅಲ್ಲಿಂದ ಕಳುಹಿಸಿದರು’ ಎಂದು ಟೆಸ್‌ ಟ್ವೀಟ್‌ ಮಾಡಿದ್ದಾರೆ. 

ಮುಕೇಶ್‌ ಅವರು ಆರೋಪವನ್ನು ತಳ್ಳಿ ಹಾಕಿದ್ದಾರೆ. ಇಂತಹ ಯಾವುದೇ ಘಟನೆ ತಮಗೆ ನೆನಪಿಲ್ಲ ಎಂದು ಅವರು ಹೇಳಿದ್ದಾರೆ. ಲಯನ್‌, ಲೈಫ್‌ ಆಫ್‌ ಪೈ, ದ ನೇಮ್‌ಸೇಕ್‌ನಂತಹ ಪ್ರಸಿದ್ಧ ಸಿನಿಮಾಗಳಲ್ಲಿ ಟೆಸ್‌ ಕೆಲಸ ಮಾಡಿದ್ದಾರೆ. 

ಹಣ ಪಡೆದು ಆರೋಪ: ಬಿಜೆಪಿ ಸಂಸದನ ತಿರುಗೇಟು

ಸಹನಟಿ ತನುಶ್ರೀ ದತ್ತಾ ಅವರಿಗೆ 10 ವರ್ಷಗಳ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಹೊತ್ತಿರುವ ನಟ ನಾನಾ ಪಾಟೇಕರ್‌ ಬೆಂಬಲಕ್ಕೆ ಬಿಜೆಪಿ ಸಂಸದ ಉದಿತ್‌ ರಾಜ್‌ ನಿಂತಿದ್ದಾರೆ. 

ಮಹಿಳೆಯರು ಎರಡರಿಂದ ನಾಲ್ಕು ಲಕ್ಷ ರೂಪಾಯಿ ಪಡೆದು ಗಂಡಸರ ವಿರುದ್ಧ ಇಂತಹ ಆರೋಪ ಮಾಡುತ್ತಾರೆ. ನಂತರ ಇನ್ನೊಬ್ಬ ಗಂಡಿನ ಹಿಂದೆ ಹೋಗುತ್ತಾರೆ. ಇದು ಗಂಡಸಿನ ಸ್ವಭಾವ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ, ಮಹಿಳೆಯರು ಪರಿಪೂರ್ಣರೇ? ಇಂತಹ ಅವಕಾಶಗಳು ದುರುಪಯೋಗ ಆಗುತ್ತಿಲ್ಲವೇ’ ಎಂದು ಸಂಸದ ಉದಿತ್‌ ರಾಜ್‌ ಹೇಳಿದ್ದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.


ಜ್ವಾಲಾ ಗುಟ್ಟಾ

ತಾರತಮ್ಯವೂ ಮಿ–ಟೂ: ಜ್ವಾಲಾ 

ನವದೆಹಲಿ: ‘ಮಾನಸಿಕ ಕಿರುಕುಳ’ ಮತ್ತು ಆಯ್ಕೆಯಲ್ಲಿ ತಾರತಮ್ಯದ ಬಗ್ಗೆ ಹಿಂದೆ ತಾವು ಎತ್ತಿದ್ದ ಆಕ್ಷೇಪಗಳು ಕೂಡ ‘ಮಿ–ಟೂ’ ಅಭಿಯಾನದ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಬ್ಯಾಡ್ಮಿಂಟನ್‌ ಆಟಗಾರ್ತಿ ಜ್ವಾಲಾ ಗುಟ್ಟಾ ಹೇಳಿದ್ದಾರೆ. 

ಸರಣಿ ಟ್ವೀಟ್‌ ಮೂಲಕ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಅವರು ಯಾರದೇ ಹೆಸರು ಅಥವಾ ಘಟನೆಯನ್ನು ಉಲ್ಲೇಖಿಸಿಲ್ಲ. 

‘ನಾನು ರಾಷ್ಟ್ರೀಯ ಚಾಂಪಿಯನ್‌ ಆಗಿದ್ದರೂ 2006ರಲ್ಲಿ ಈ ವ್ಯಕ್ತಿ ಮುಖ್ಯಸ್ಥನಾದ ಮೇಲೆ ನನ್ನನ್ನು ತಂಡದಿಂದ ಹೊರಗೆಸೆದರು. ರಾಷ್ಟ್ರೀಯ ತಂಡದಿಂದ ಹೊರಗೆ ಹಾಕಿದ್ದೇ ನಾನು ಆಟ ನಿಲ್ಲಿಸಲು ಕಾರಣ’ ಎಂದು ಜ್ವಾಲಾ ಗುಟ್ಟಾ ಆರೋಪಿಸಿದ್ದಾರೆ. 

ಬ್ಯಾಡ್ಮಿಂಟನ್‌ನ ರಾಷ್ಟ್ರೀಯ ಮುಖ್ಯ ಕೋಚ್‌ ಪಿ. ಗೋಪಿಚಂದ್‌ ಮತ್ತು ಜ್ವಾಲಾ ನಡುವೆ ದೀರ್ಘ ಕಾಲದಿಂದ ಸಂಘರ್ಷ ನಡೆಯುತ್ತಿದೆ. ಗೋಪಿಚಂದ್‌ ಅವರು ಸಿಂಗಲ್ಸ್‌ ಆಟಗಾರರಿಗೆ ಮಾತ್ರ ಗಮನ ಕೊಡುತ್ತಾರೆ. ಡಬಲ್ಸ್‌ ಆಟಗಾರರನ್ನು ನಿರ್ಲಕ್ಷಿಸುತ್ತಾರೆ ಎಂಬುದು ಜ್ವಾಲಾ ಅವರ ಮುಖ್ಯ ಆರೋಪ. 

ಗೋಪಿಚಂದ್‌ ಅವರನ್ನು ಟೀಕಿದ್ದರಿಂದ ತಾವು ಮೂಲೆಗುಂಪಾಗಬೇಕಾಯಿತು. ಡಬಲ್ಸ್‌ಗೆ ಪಾಲುದಾರರೇ ಸಿಗದಂತಾಯಿತು ಎಂದೂ ಅವರು ಹೇಳಿದ್ದರು. ಟ್ವೀಟ್‌ನಲ್ಲಿ ಜ್ವಾಲಾ ಅವರು ಎಲ್ಲಿಯೂ ಗೋಪಿಚಂದ್‌ ಹೆಸರು ಉಲ್ಲೇಖಿಸಿಲ್ಲ. 

ಗೋಪಿಚಂದ್‌ ಅವರು ಜ್ವಾಲಾ ಅವರ ಆರೋಪಕ್ಕೆ ಹಿಂದೆಯೂ ಪ್ರತಿಕ್ರಿಯೆ ನೀಡಿಲ್ಲ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !