ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಗೋಡ್ಸೆ ಪರ ಟ್ವೀಟ್ ಕಾಟ

ನಾಯಕರ ಹೇಳಿಕೆಯ ವಿಚಾರಣೆ ಹೊಣೆ ಶಿಸ್ತು ಸಮಿತಿಗೆ: ಕ್ಷಮೆಯಾಚಿಸಿದ ಸಚಿವ ಹೆಗಡೆ
Last Updated 17 ಮೇ 2019, 20:31 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸೇರಿದಂತೆ ಪಕ್ಷದ ಹಲವು ಮುಖಂಡರು ಮಹಾತ್ಮಗಾಂಧಿ ಅವರನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆ ಪರ ಮಾಡಿರುವ ಟ್ವೀಟ್ ಹಾಗೂ ಹೇಳಿಕೆಗಳು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿವೆ.

ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನಕ್ಕೆ ಎರಡು ದಿನ ಬಾಕಿ ಇರುವಾಗ ಗೋಡ್ಸೆ ಪರ ಮಾಡಿದ ಟ್ವೀಟ್‌ಗಳು ದೇಶದಾದ್ಯಂತ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳ ನಾಯಕರು ಬಿಜೆಪಿ ನಾಯಕರ ವಿರುದ್ಧ ಮುಗಿಬಿದ್ದಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಇವರೆಲ್ಲರ ಪರ ನಿಂತಿದ್ದಾರೆ, ದೇಶದ ಜನರಿಗೆ ಮೋದಿಯವರೇ ಉತ್ತರಿಸಬೇಕು’ ಎಂಬ ಕೂಗು ಎದ್ದಿದೆ. ಏತನ್ಮಧ್ಯೆ, ಸಂಘ ಪರಿವಾರದ ಬೆಂಬಲಿಗರುಸಾಮಾಜಿಕ ಜಾಲತಾಣಗಳಲ್ಲಿ, ಗಾಂಧೀಜಿ ವಿರುದ್ಧ ಹಾಗೂ ಗೋಡ್ಸೆ ಪರ ಸಮರ್ಥನೆಯನ್ನೂ ಮುಂದುವರಿಸಿದ್ದಾರೆ.

ತಮ್ಮ ಟ್ವೀಟ್‌ಗಳು ಪಕ್ಷದ ನಾಯಕರಿಗೆ ಇರುಸುಮುರುಸು ಉಂಟು ಮಾಡಿದ್ದು ಹಾಗೂ ಜನರಿಂದ ತೀವ್ರ ಖಂಡನೆಗೆ ಗುರಿಯಾಗುತ್ತಿದ್ದಂತೆ ಎಚ್ಚೆತ್ತ ನಾಯಕರು ತಮ್ಮ ಟ್ವೀಟ್‌ಗಳನ್ನು ಅಳಿಸಿ ಹಾಕಿ, ಟ್ವಿಟರ್ ಖಾತೆಯಲ್ಲೇ ಕ್ಷಮೆಯಾಚಿಸಿದ್ದಾರೆ.

ಶಾ, ಮೋದಿ ರಂಗ ಪ್ರವೇಶ: ಚುನಾವಣೆಯ ಕೊನೆಯ ಹೊತ್ತಿನಲ್ಲಿ ತಮ್ಮ ಪಕ್ಷದ ನಾಯಕರ ಹೇಳಿಕೆಗಳು ‘ಧರ್ಮದೇಟು’ ನೀಡುವ ಸಾಧ್ಯತೆ ಇದೆ ಎಂದು ಅರಿವಾಗುತ್ತಿದ್ದಂತೆ ಜಾಗೃತರಾದ ಪ್ರಧಾನಿ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಂಗ ಪ್ರವೇಶ ಮಾಡಿದ್ದಾರೆ.

‘ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ, ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್‌ ಕಟೀಲ್‌ ಮತ್ತು ಭೋಪಾಲ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಅವರು ಮಹಾತ್ಮ ಗಾಂಧಿಯನ್ನು ಅಪಮಾನಿಸಿ ನೀಡಿದ ಹೇಳಿಕೆಗಳನ್ನು ಸಹಿಸುವುದಿಲ್ಲ’ ಎಂದು ಶಾ ಅವರು ಟ್ವೀಟ್‌ನಲ್ಲಿ ಸ್ಪಷ್ಟವಾಗಿ ಹೇಳಿದರು.

ಈ ಮೂವರು ನೀಡಿರುವ ಹೇಳಿಕೆಗಳ ಬಗ್ಗೆ ಹತ್ತು ದಿನದೊಳಗಾಗಿ ವರದಿ ಸಲ್ಲಿಸುವಂತೆ ಪಕ್ಷದ ಶಿಸ್ತು ಸಮಿತಿಗೆ ಸೂಚನೆ ನೀಡಿದ್ದು, ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಶಾ ಹೇಳಿದ್ದಾರೆ.

‘ಅವರ ಹೇಳಿಕೆಗಳು ವೈಯಕ್ತಿಕವಾದವುಗಳೇ ವಿನಾ ಪಕ್ಷದ ನಿಲುವಲ್ಲ. ಈಗಾಗಲೇ ಅವರು ಹೇಳಿಕೆಯನ್ನು ಹಿಂಪಡೆದು ಕ್ಷಮೆ ಯಾಚಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವವರಿಗೆ ಇವು ಶೋಭೆ ತರುವ ಹೇಳಿಕೆಗಳಲ್ಲ’ ಎಂದಿದ್ದಾರೆ.

ಗಾಂಧೀಜಿಗೆ ಗೌರವ: ತಮ್ಮ ಟ್ವೀಟ್‌ಗಳು ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಅವುಗಳನ್ನು ಅಳಿಸಿ ಹಾಕಿರುವ ಸಚಿವ ಹೆಗಡೆ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.

‘ಕಳೆದ ಒಂದು ವಾರದಲ್ಲಿ ಎರಡು ಬಾರಿ ಇಂತಹ ಟ್ವೀಟ್‌ಗಳು ನನ್ನ ಟೈಮ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಅದನ್ನೆಲ್ಲ ಡಿಲೀಟ್‌ ಮಾಡಿದ್ದೇನೆ. ನಿನ್ನೆಯಿಂದ ನನ್ನ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು. ಗಾಂಧೀಜಿಯವರ ಕೊಲೆ ಮಾಡಿದವರನ್ನು ಸಮರ್ಥಿಸುವ ಅಥವಾ ಅವರ ಬಗ್ಗೆ ಅನುಕಂಪ ಪಡುವ ಪ್ರಶ್ನೆಯೇ ಇಲ್ಲ. ದೇಶಕ್ಕೆ ಗಾಂಧೀಜಿ ನೀಡಿದ ಕೊಡುಗೆಯನ್ನು ನಾವೆಲ್ಲ ಗೌರವಿಸುತ್ತೇವೆ’ ಎಂದು ಹೆಗಡೆ ಹೇಳಿಕೊಂಡಿದ್ದಾರೆ.

‘ನನ್ನ ಟ್ವೀಟ್‌ಗಳಿಂದ ಬೇಸರವಾಗಿದ್ದಲ್ಲಿ ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ‘ ಎಂದು ಕಟೀಲ್ ಟ್ವೀಟ್ ಮಾಡಿದ್ದಾರೆ.

ಗೋಡ್ಸೆ ದೇಶಭಕ್ತ: ಪ್ರಜ್ಞಾ

ನಾಥೂರಾಂ ಗೋಡ್ಸೆ ದೇಶಭಕ್ತನಾಗಿದ್ದ. ಆತ ದೇಶಭಕ್ತನಾಗಿಯೇ ಉಳಿಯಲಿದ್ದಾನೆ. ಆತನನ್ನು ಉಗ್ರ ಎಂದು ಕರೆಯುವವರು ತಮ್ಮನ್ನು ತಾವೇ ನೋಡಿಕೊಳ್ಳಬೇಕು. ಇಂತಹ ಜನರಿಗೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ

ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್,ಬಿಜೆಪಿ ಅಭ್ಯರ್ಥಿ

**

ಹೆಗಡೆ ಹೇಳಿದ್ದೇನು

‘ಏಳು ದಶಕಗಳ ಬಳಿಕ, ಇಂದಿನ ಜನಾಂಗವು ಬದಲಾದ ಗ್ರಹಿಕೆಯೊಂದಿಗೆ (ಗೋಡ್ಸೆ ಕುರಿತು) ಚರ್ಚೆ ಮಾಡುತ್ತಿರುವುದರಿಂದ ಹರ್ಷಗೊಂಡಿದ್ದೇನೆ. ಖಂಡನೆಗೆ ಒಳಗಾದವರ ಬಗ್ಗೆಯೂ ಚರ್ಚೆಯಾಗಲು ಇದು ಉತ್ತಮ ಅವಕಾಶ ಕೊಡುತ್ತದೆ. ಈ ಚರ್ಚೆಗಳಿಂದ ಕೊನೆಗೂ ನಾಥೂರಾಂ ಗೋಡ್ಸೆಗೆ ಸಂತೋಷವಾಗಿರಬಹುದು’

ಅನಂತಕುಮಾರ ಹೆಗಡೆ,ಕೇಂದ್ರ ಕೌಶಲಾಭಿವೃದ್ಧಿ ಸಚಿವ

**

ಗೋಡ್ಸೆ ಕೊಂದವರ ಸಂಖ್ಯೆ 1 ಎಂದ ಕಟೀಲ್‌

‘ನಾಥುರಾಂ ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್‌ ಕೊಂದವರ ಸಂಖ್ಯೆ 72, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000. ಈಗ ನೀವೇ ಹೇಳಿ, ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು?’

ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಸಂಸದ

**

ಕಟೀಲ್‌ರಂತಹ ಜನರ ಸಂಖ್ಯೆ ಹಾಗೂ ಅಂಥ ವಿಚಾರಧಾರೆ ಹೆಚ್ಚಾಗುತ್ತಿರುವುದರಿಂದ ದೇಶಕ್ಕೆ ತೊಂದರೆ. ಗಾಂಧೀಜಿ ಕೊಲೆ ಮಾಡಿದವರನ್ನು ಬಿಜೆಪಿಯವರು ದೇವರು ಎಂದು ಪೂಜಿಸುವುದು ದುರದೃಷ್ಟಕರ
- ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್‌ ನಾಯಕ

**

ಗಾಂಧೀಜಿ ಅಥವಾ ನಾಥೂರಾಂ ಗೋಡ್ಸೆ ಬಗ್ಗೆ ಬಂದಿರುವ ಹೇಳಿಕೆಗಳು ಕೆಟ್ಟದಾಗಿವೆ. ಸಮಾಜಕ್ಕೆ ಒಳ್ಳೆಯದಲ್ಲ. ಅವರು (ಸಾಧ್ವಿ) ಕ್ಷಮೆ ಕೇಳಿದ್ದಾರೆ. ಹಾಗಿದ್ದರೂ ಅವರನ್ನು ಕ್ಷಮಿಸಲು ನನಗೆ ಸಾಧ್ಯವಿಲ್ಲ

– ನರೇಂದ್ರ ಮೋದಿ, ಪ್ರಧಾನಿ

**
ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ಸಮರ್ಥಿಸುವ ಸಂಸದ ನಳೀನ್‌ ಕುಮಾರ್‌ ಕಟೀಲ್‌ ಹಾಗೂ ಸಚಿವ ಅನಂತಕುಮಾರ ಹೆಗಡೆ ಅವರನ್ನು ದೇಶಭಕ್ತರೆಂದು ಕರೆಯಲು ಸಾಧ್ಯವೇ? ಕೂಡಲೇ ಅಮಿತ್‌ ಶಾ ಅವರಿಬ್ಬರನ್ನೂ ಪಕ್ಷದಿಂದ ಹೊರಹಾಕಬೇಕು
ಸಿದ್ದರಾಮಯ್ಯ, ಅಧ್ಯಕ್ಷ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ

**

ಗಾಂಧೀಜಿಯನ್ನು ಗುಂಡಿಟ್ಟು ಕೊಂದ ಗೋಡ್ಸೆ ದೇಶ ಭಕ್ತ ಎಂಬ ನೀಚತನದ ಹೇಳಿಕೆಯನ್ನು ಬಿಜೆಪಿ ಮುಖಂಡರು ನೀಡಿದ್ದಾರೆ. ಅವರ ನಿಜವಾದ ಮುಖ– ಸಿದ್ಧಾಂತ ಈಗ ಬಯಲಾಗಿದೆ

ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

**


ಕಟೀಲ್‌ರಂತಹ ಜನರ ಸಂಖ್ಯೆ ಹಾಗೂ ಅಂಥ ವಿಚಾರಧಾರೆ ಹೆಚ್ಚಾಗುತ್ತಿರುವುದರಿಂದ ದೇಶಕ್ಕೆ ತೊಂದರೆ. ಗಾಂಧೀಜಿ ಕೊಲೆ ಮಾಡಿದವರನ್ನು ಬಿಜೆಪಿಯವರು ದೇವರು ಎಂದು ಪೂಜಿಸುವುದು ದುರದೃಷ್ಟಕರ

–ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT