ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಮೇಲೆ ದೂಳಿನ ಮೋಡ!

ರಾಷ್ಟ್ರ ರಾಜಧಾನಿಯಲ್ಲಿ ಅಪಾಯದ ಮಟ್ಟ ತಲುಪಿದ ವಾಯು ಮಾಲಿನ್ಯ
Last Updated 16 ಜೂನ್ 2018, 19:24 IST
ಅಕ್ಷರ ಗಾತ್ರ

ನವದೆಹಲಿ: ಸತತ ಐದು ದಿನಗಳಿಂದ ಆತಂಕಕ್ಕೆ ಕಾರಣವಾಗಿರುವ ದೆಹಲಿಯ ವಾಯು ಮಾಲಿನ್ಯ ಸ್ಥಿತಿ ಶನಿವಾರವೂ ಅಪಾಯಕಾರಿಮಟ್ಟ ದಲ್ಲಿಯೇ ಮುಂದುವರಿದಿದೆ.

ಆದರೆ, ನಗರದಲ್ಲಿ ಬೀಸುತ್ತಿರುವ ಗಾಳಿಯಿಂದ ದೂಳಿನ ಕಣಗಳು ಚದುರಿ ಹೋಗಿ ದುರ್ಬಲಗೊಂಡಿವೆ. ಇದರಿಂದಾಗಿ ರಾಜಧಾನಿಯಲ್ಲಿ ಶನಿವಾರ ವಾಯು ಗುಣಮಟ್ಟ ಕೊಂಚ ಮಟ್ಟಿಗೆ ಸುಧಾರಿಸಿದ್ದು, ಜನರಲ್ಲಿ ನೆಮ್ಮದಿ ಮೂಡಿಸಿದೆ.

ಆದರೆ, ರಾಜಧಾನಿಯಲ್ಲಿ ನಿರ್ಮಾಣವಾಗಿರುವ ಮಾಲಿನ್ಯ ‘ತುರ್ತು ಪರಿಸ್ಥಿತಿ’ ಇನ್ನೂ ಸಂಪೂರ್ಣ ಹತೋಟಿಗೆ ಬಂದಿಲ್ಲ.

ದೆಹಲಿಯ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದ್ದ ದೂಳಿನ ಕಣಗಳು ಕೊಂಚ ಮಟ್ಟಿಗೆ ತಗ್ಗಿದ್ದು, ಗಾಳಿಯ ಗುಣಮಟ್ಟ ನಿಧಾನವಾಗಿ ಸುಧಾರಿಸಬಹುದು ಎಂದು ವಾಯು ಗುಣಮಟ್ಟ, ಹವಾಮಾನ ಮುನ್ಸೂಚನಾ ಮತ್ತು ಸಂಶೋಧನಾ ಸಂಸ್ಥೆ ‘ಸಫರ್‌’ ಆಶಯ ವ್ಯಕ್ತಪಡಿಸಿದೆ.

ಶನಿವಾರ ದೆಹಲಿಯಲ್ಲಿ 10 ಮೈಕ್ರಾನ್ ಗಾತ್ರಕ್ಕಿಂತ ಕಡಿಮೆಯ ಮಾಲಿನ್ಯಕಾರಕ ಕಣಗಳ ಸಂಖ್ಯೆ (ಪಿಎಂ10) 522 ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ (ಎನ್‌ಸಿಆರ್‌) 529ರಷ್ಟಿತ್ತು.

ಬುಧವಾರ ಪಿಎಂ10 ದೂಳಿನ ಕಣಗಳ ಸಂಖ್ಯೆ ದೆಹಲಿಯಲ್ಲಿ 778ಕ್ಕೆ ಮತ್ತು ದೆಹಲಿ–ಎನ್‌ಸಿಆರ್‌ನಲ್ಲಿ 824ಕ್ಕೆ ಏರಿಕೆಯಾದ ಮಾಲಿನ್ಯ ಪ್ರಮಾಣ ಏಕಾಏಕಿ ಅಪಾಯದ ಮಟ್ಟದತ್ತ ತಲುಪಿತ್ತು.

2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳು (ಪಿಎಂ2.5) 124ಕ್ಕೆ ತಲುಪಿದ್ದು  ದುರ್ಬಲವಾಗಿವೆ. ನಗರದಲ್ಲಿ ಶುಕ್ರವಾರದಿಂದ ಬೀಸುತ್ತಿರುವ ಗಾಳಿಯಿಂದಾಗಿ ವಾತಾವರಣದಲ್ಲಿಯ ದೂಳಿನ ಕಣಗಳ ಚದುರಿ ಹೋಗುತ್ತಿವೆ. ಹೀಗಾಗಿ ಗಾಳಿಯ ಗುಣಮಟ್ಟ ಸುಧಾರಿಸುತ್ತಿದೆ ಎಂದು ’ಸಫರ್‌’ ವಿಜ್ಞಾನಿ ಗುರ್ಫಾನ್‌ ಬೇಗ್‌ ತಿಳಿಸಿದ್ದಾರೆ.

* ವಾಯು ಮಾಲಿನ್ಯ ನಿಯಂತ್ರಿಸಲು ಭಾನುವಾರದವರೆಗೆ ನಿರ್ಮಾಣ ಕಾಮಗಾರಿ ಸ್ಥಗಿತ

* ರಾಜಸ್ಥಾನದಲ್ಲಿ ಮಂಗಳವಾರ ಕಾಣಿಸಿಕೊಂಡ ದೂಳಿನ ಬಿರುಗಾಳಿ ಕಾರಣ ದೆಹಲಿ ವಾಯು ಗುಣಮಟ್ಟ ಹಠಾತ್‌ ಕುಸಿತ

* ದೆಹಲಿಯನ್ನು ಆವರಿಸಿರುವ ದಟ್ಟ ದೂಳಿನ ಕಾರ್ಮೋಡ

* ಮನೆಯಿಂದ ಹೊರ ಹೋಗುವಾಗ ಮುಖಗವಸು ಧರಿಸಲು ಸೂಚನೆ

* ಪ್ಲಾಸ್ಟಿಕ್‌, ಕಸ, ಒಣಗಿದ ಎಲೆ ಸುಡುವುದನ್ನು ನಿರ್ಬಂಧಿಸಿದ ಸರ್ಕಾರ

* ರಸ್ತೆ, ಮರಗಳಿಗೆ ನೀರು ಸಿಂಪಡಣೆ

* ಭಾನುವಾರ ಮಳೆಯಿಂದ ಮಾಲಿನ್ಯ ಹತೋಟಿಗೆ ನಿರೀಕ್ಷೆ

* ವಿಮಾನಗಳ ಹಾರಾಟಕ್ಕೆ ತೊಂದರೆ

* ಪರಿಸ್ಥಿತಿ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ದೆಹಲಿ ಸರ್ಕಾರದಿಂದ ವಿವರಣೆ ಕೋರಿದ ಹೈಕೋರ್ಟ್

**

ದೆಹಲಿಯಲ್ಲಿ ಭಾನುವಾರ ಮಳೆ ಬೀಳುವ ಸಾಧ್ಯತೆ ಇದ್ದು, ದೂಳಿನ ಕಣಗಳು ನಿಯಂತ್ರಣಕ್ಕೆ ಬರಬಹುದು.

–ಗುರ್ಫಾನ್‌ ಬೇಗ್‌, ಹವಾಮಾನ ವಿಜ್ಞಾನಿ

**

ನೇಪಾಳಕ್ಕೂ ವ್ಯಾಪಿಸಿದ ಭಾರತದ ದೂಳು

ಕಠ್ಮಂಡು: ನೇಪಾಳದಲ್ಲಿ ಸುರಿಯುತ್ತಿರುವ ಮಳೆಯಲ್ಲಿ ರಾಜಸ್ಥಾನದ ದೂಳು ಸೇರಿಕೊಂಡಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಭಾರಿ ವೇಗದಲ್ಲಿ ಗಾಳಿ ಬೀಸುತ್ತಿರುವು ಮಳೆ ಜತೆ ದೂಳು ಸೇರಿಕೊಳ್ಳುತ್ತಿದೆ. ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ. ದೂಳು ಮಿಶ್ರಿತ ಮಳೆ ನೀರನ್ನು ಜನ ಸಂಗ್ರಹಿಸಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT