ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ಮಸೂದೆಗೆ ವಿರೋಧ: ಈಶಾನ್ಯ ಭಾರತ ಸ್ಥಗಿತ, ಘರ್ಷಣೆ

Last Updated 11 ಡಿಸೆಂಬರ್ 2019, 1:58 IST
ಅಕ್ಷರ ಗಾತ್ರ

ಗುವಾಹಟಿ / ಅಗರ್ತಲಾ / ಇಟಾನಗರ್‌: ಪೌರತ್ವ (ತಿದ್ದುಪಡಿ) ಮಸೂದೆಯನ್ನು (ಸಿಎಬಿ) ವಿರೋಧಿಸಿ ನಾರ್ಥ್‌ ಈಸ್ಟ್‌ ಸ್ಟೂಡೆಂಟ್ಸ್‌ ಯೂನಿಯನ್‌ (ಎನ್‌ಇಎಸ್‌ಒ) ಕರೆ ನೀಡಿದ್ದ 11 ಗಂಟೆಗಳ ಬಂದ್‌ಗೆ ಈಶಾನ್ಯ ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ರಾಜ್ಯಗಳ ಹಿತಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದ್ದರೂ ಅದನ್ನು ಪರಿಗಣಿಸದೆ, ಏಳೂ ರಾಜ್ಯಗಳಲ್ಲಿ ಜನರು ಮಂಗಳವಾರ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಎಸ್‌ಎಫ್‌ಐ, ಡಿವೈಎಫ್‌ಐ, ಎಐಎಸ್‌ಎಫ್‌, ಎಐಎಸ್‌ಎ ಮುಂತಾದ ಎಡಪಂಥೀಯ ಸಂಘಟನೆಗಳೂ ಬಂದ್‌ ಕರೆಗೆ ಬೆಂಬಲ ನೀಡಿವೆ.

ಗುವಾಹಟಿಯ ಅನೇಕ ಕಡೆಗಳಲ್ಲಿ ಮೆರವಣಿಗೆಗಳು ನಡೆದಿವೆ. ಪ್ರತಿಭಟನಕಾರರು ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಸಂಚಾರ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದರು. ಬಿಜೆಪಿ ನಾಯಕರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಶಾಲಾ ಕಾಲೇಜುಗಳು, ಅಂಗಡಿ ಮುಂಗಟ್ಟುಗಳೆಲ್ಲವೂ ಮುಚ್ಚಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಕೆಲವೆಡೆ ರೈಲು ತಡೆ ನಡೆಸಿದ ಪರಿಣಾಮ ರೈಲು ಸಂಚಾರ ಸ್ಥಗಿತಗೊಂಡಿತ್ತು.

ಪ್ರತಿಭಟನಕಾರರು ಶಾಸನಸಭೆಯ ಕಟ್ಟಡದ ಬಳಿ ಬಂದಾಗ ಭದ್ರತಾ ಪಡೆಗಳು ಅವರನ್ನು ತಡೆದರು. ಈ ಸಂದರ್ಭದಲ್ಲಿ ಸಣ್ಣ ಘರ್ಷಣೆಯೂ ನಡೆದಿದೆ. ದಿಬ್ರುಗಡದಲ್ಲಿ ಪ್ರತಿಭಟನಕಾರರು ಮತ್ತು ಸಿಐಎಸ್‌ಎಫ್‌ ಸಿಬ್ಬಂದಿ ಮಧ್ಯೆ ಘರ್ಷಣೆಗೆ ನಡೆದಿದೆ. ಮೂವರು ಗಾಯಗೊಂಡಿದ್ದಾರೆ.

ತ್ರಿಪುರಾದ ಧಲಾಯ್‌ ಜಿಲ್ಲೆಯಲ್ಲಿ ಬುಡಕಟ್ಟು ಏತರ ಸಮುದಾಯದ ವ್ಯಾಪಾರಿಗಳು ಹೆಚ್ಚಾಗಿರುವ ಮಾರುಕಟ್ಟೆಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದಾರೆ. ‌‌ಮೇಘಾಲಯದಲ್ಲೂ ಟೈರ್‌ಗಳಿಗೆ ಬೆಂಕಿ ಹಚ್ಚಿದ ಮತ್ತು ವಾಹನಗಳನ್ನು ಹಾನಿಗೊಳಿಸಿದ ಘಟನೆ ವರದಿಯಾಗಿದೆ.

‘ಮಸೂದೆಯನ್ನು ಕೂಡಲೇ ಹಿಂತೆಗೆದುಕೊಳ್ಳದಿದ್ದರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು’ ಎಂದು ಆಲ್‌ ಮಣಿಪುರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಹೇಳಿದೆ.

‘ಈಶಾನ್ಯ ರಾಜ್ಯಗಳ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೇಂದ್ರದ ಮೀಸಲು ಪೊಲೀಸ್‌ ಪಡೆಯ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಭೌತಿಕವಾಗಿ ಈಶಾನ್ಯದ ಏಳು ರಾಜ್ಯಗಳು ಬೇರೆಬೇರೆಯಾಗಿದ್ದರೂ ನಾವು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಬಂದ್‌ ಆಚರಣೆಯ ಮೂಲಕ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದೇವೆ. ಈ ಮಸೂದೆ ಅಂಗೀಕಾರವಾದರೆ ಭಾರಿ ಸಂಖ್ಯೆಯಲ್ಲಿ ಅಕ್ರಮ ನುಸುಳುಕೋರರಿಗೆ ಭಾರತದ ಪೌರತ್ವ ಲಭಿಸಲಿದೆ. ಇದು ಅಪಾಯಕಾರಿ’ ಎಂದು ಎನ್‌ಇಎಸ್‌ಒ ಮುಖಂಡ ಸಮುಜ್ಜಲ್‌ ಕುಮಾರ್‌ ಭಟ್ಟಾಚಾರ್ಯ ಹೇಳಿದ್ದಾರೆ.

‘ಲೋಕಸಭೆಯಲ್ಲಿ ಸಂಖ್ಯಾಬಲ ಇದೆ ಎಂಬ ಕಾರಣಕ್ಕೆ ಸರ್ಕಾರ ಈ ಮಸೂದೆಯನ್ನು ನಮ್ಮ ಮೇಲೆ ಹೇರಿ, ಹಿಂದೂ ಸಮುದಾಯದ ಅಕ್ರಮ ವಲಸಿಗರಿಗೆ ಪೌರತ್ವ ನೀಡುತ್ತಿದೆ. ಇದು 1985ರ ಅಸ್ಸಾಂ ಒಪ್ಪಂದದ ಉಲ್ಲಂಘನೆಯಾಗಿದೆ. 1971ರ ಬಳಿಕ ಅಸ್ಸಾಂಗೆ ಬಂದಿರುವ ಎಲ್ಲಾ ನುಸುಳುಕೋರರನ್ನು, ಜಾತಿ ಧರ್ಮಗಳ ಭೇದವಿಲ್ಲದೆ, ಹೊರಗೆ ಕಳುಹಿಸುವ ವಿಚಾರ ಅಸ್ಸಾಂ ಒಪ್ಪಂದದಲ್ಲಿ ಉಲ್ಲೇಖವಾಗಿದೆ. ಆದ್ದರಿಂದ ಈ ಮಸೂದೆಯನ್ನು ನಾವು ಒಪ್ಪುವುದಿಲ್ಲ. ಅಕ್ರಮ ನುಸುಳುಕೋರರ ರಾಜ್ಯವಾಗಿ ಅಸ್ಸಾಂ ಬಳಕೆಯಾಗುವುದನ್ನು ಒಪ್ಪಲಾಗದು’ ಎಂದು ಅವರು ಹೇಳಿದ್ದಾರೆ.

ಈಶಾನ್ಯ ರಾಜ್ಯಗಳಲ್ಲದೆ ದೆಹಲಿ, ಲಖನೌ, ಕೋಲ್ಕತ್ತ ಮುಂತಾಗಿ ಹಲವು ನಗರಗಳಲ್ಲಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಿವೆ.

ಪೌರತ್ವ

-ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದರೂ, ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನವಾಲ್‌ ಅವರು ಪೌರತ್ವ (ತಿದ್ದುಪಡಿ) ಮಸೂದೆಯನ್ನು ಸ್ವಾಗತಿಸಿದ್ದಾರೆ. ‘ಇದು ಐತಿಹಾಸಿಕ ಕ್ಷಣ’ ಎಂದು ಬಣ್ಣಿಸಿದ್ದಾರೆ

-ಮಸೂದೆಯು ಸಂವಿಧಾನ ವಿರೋಧಿಯಾಗಿದ್ದು, ಇದನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಸಾವಿರಕ್ಕೂ ಹೆಚ್ಚು ಮಂದಿ ವಿಜ್ಞಾನಿಗಳು ಮತ್ತು ವಿದ್ವಾಂಸರು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಪತ್ರಮುಖೇನ ಮನವಿ ಮಾಡಿದ್ದಾರೆ

-‘ಈ ಮಸೂದೆಯು ಸಂವಿಧಾನದ ಮೇಲೆ ಹಲ್ಲೆ ನಡೆಸುವಂಥದ್ದು. ಇದನ್ನು ಬೆಂಬಲಿಸುವವರು ಸಂವಿಧಾನವನ್ನು ನಾಶಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹೇಳಿದ್ದಾರೆ

-ಸಿಎಬಿ ಪರ– ವಿರೋಧಿಗಳ ಮಧ್ಯೆ ಹಿಂಸಾಚಾರ, ತ್ರಿಪುರಾದಲ್ಲಿ ಮೊಬೈಲ್‌ ಇಂಟರ್‌ನೆಟ್‌, ಎಸ್‌ಎಂಎಸ್‌ ವ್ಯವಸ್ಥೆ ಸ್ಥಗಿತ

***

ಇದು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಘಟನೆ. ಹಲವು ದಶಕಗಳ ತಪ್ಪನ್ನು ಈಗ ಸರಿಪಡಿಸಲಾಗಿದೆ. ಗೃಹಸಚಿವ ಅಮಿತ್‌ ಶಾ ಅಭಿನಂದನಾರ್ಹರು

- ಹಿಮಂತ ಬಿಸ್ವ ಶರ್ಮಾ, ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಇಡಿಎ) ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT