ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಪಗ್ರಹ ನಿರೋಧಕ ಕ್ಷಿಪಣಿ’ ರಾಜಕೀಯಕ್ಕೆ ಬಳಕೆ

Last Updated 27 ಮಾರ್ಚ್ 2019, 18:45 IST
ಅಕ್ಷರ ಗಾತ್ರ

ನವದೆಹಲಿ: ‘ಉಪಗ್ರಹ ನಿರೋಧಕ ಕ್ಷಿಪಣಿ (ಎ–ಸ್ಯಾಟ್)’ ಯೋಜನೆ 2009ರಲ್ಲೇ ಆರಂಭವಾಗಿತ್ತು. 2012ರಲ್ಲೇ ಈ ವ್ಯವಸ್ಥೆ ಸಂಪೂರ್ಣವಾಗಿ ಸಿದ್ಧವಾಗಿತ್ತು. ಆದರೆ ಅದರ ನೈಜ ಪ್ರಾತ್ಯಕ್ಷಿಕೆಗೆ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲಎಂದು ಮೂಲಗಳು ಹೇಳಿವೆ.

ಭಾರತಕ್ಕೂ ಈ ಶಕ್ತಿ ಇದೆ ಎಂಬುದನ್ನು ಜಗತ್ತಿಗೆ ತೋರಿಸಲು ಅಂದಿನ ಸರ್ಕಾರ ಅನುಮತಿ ನೀಡಿರಲಿಲ್ಲ ಎಂದು ಈ ಯೋಜನೆಯಲ್ಲಿ ಕೆಲಸ ಮಾಡಿದ್ದ ಅಧಿಕಾರಿಗಳು ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ವಿಚಾರವು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಇಂತಹ ವ್ಯವಸ್ಥೆಯನ್ನು ಅಮೆರಿಕ ಮತ್ತು ರಷ್ಯಾ ಬಹಳ ಹಿಂದೆಯೇ ಅಭಿವೃದ್ಧಿಪಡಿಸಿದ್ದವು. 2007ರಲ್ಲಿ ಚೀನಾ ಸಹ ತನ್ನ ‘ಎ–ಸ್ಯಾಟ್‌’ ವ್ಯವಸ್ಥೆಯ ಪ್ರಾತ್ಯಕ್ಷಿಕೆಯನ್ನು ಯಶಸ್ವಿಯಾಗಿ ನಡೆಸಿತ್ತು. ಭೂಮಿಯಿಂದ 800 ಕಿ.ಮೀ. ಎತ್ತರದಲ್ಲಿದ್ದ ಉಪಗ್ರಹವನ್ನು ಚೀನಾ ಹೊಡೆದು ಉರುಳಿಸಿತ್ತು.

ಭಾರತದಲ್ಲೂ ಇಂತಹ ವ್ಯವಸ್ಥೆ ಇರಬೇಕು ಎಂಬ ಅಭಿಪ್ರಾಯ 80ರ ದಶಕದಲ್ಲೇ ವ್ಯಕ್ತವಾಗಿತ್ತು. ಆದರೆ ಚೀನಾ ಪ್ರಾತ್ಯಕ್ಷಿಕೆ ನಡೆಸಿದ ನಂತರ ಈ ಬೇಡಿಕೆ ತೀವ್ರವಾಯಿತು. ಹೀಗಾಗಿ ಅಂದಿನ ಯುಪಿಎ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿತ್ತು. 2009ರಲ್ಲಿ ಈ ಯೋಜನೆ ಆರಂಭವಾಯಿತು ಎಂದು ಮೂಲಗಳು ಹೇಳಿವೆ.

2012ರಲ್ಲೇ ಈ ವ್ಯವಸ್ಥೆ ಪೂರ್ಣಪ್ರಮಾಣದಲ್ಲಿ ಸಿದ್ಧವಾಗಿತ್ತು. ವ್ಯವಸ್ಥೆಯನ್ನು ಹಲವು ಹಂತಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸಿಮ್ಯುಲೇಟರ್ ಬಳಸಿ ಈ ವ್ಯವಸ್ಥೆಯ ನಿಖರತೆಯನ್ನು ಖಾತರಿಪಡಿಸಿಕೊಳ್ಳಲಾಗಿತ್ತು. ಆದರೆ ನೈಜ ಪ್ರಾತಕ್ಷಿಕೆಗೆ ಸರ್ಕಾರದ ಅನುಮತಿ ದೊರೆತಿರಲಿಲ್ಲ ಎಂದು ಈ ಯೋಜನೆಯಲ್ಲಿ ಕೆಲಸ ಮಾಡಿದ್ದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ ಎಂದು ಮೂಲಗಳು ವಿವರಿಸಿವೆ.

‘ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮತ್ತು ಉಪಗ್ರಹಗಳನ್ನು ಅವುಗಳ ಕಕ್ಷೆಯಲ್ಲೇ ಹೊಡೆದು ಉರುಳಿಸುವ ಸಾಮರ್ಥ್ಯ ಭಾರತಕ್ಕೆ ಲಭ್ಯವಾಗಿದೆ’ ಎಂದು 2012ರಲ್ಲಿ ಡಿಆರ್‌ಡಿಒ ಮುಖ್ಯಸ್ಥರಾಗಿದ್ದ ವಿಜಯ್ ಸಾರಸ್ವತ್ ಹೇಳಿಕೆ ನೀಡಿದ್ದರು. ಈಗ ವಿಜಯ್ ನೀತಿ ಆಯೋಗದ ಸದಸ್ಯರಾಗಿದ್ದಾರೆ.

‘ಬಹಳ ಹಿಂದೆಯೇ ಭಾರತ ಈ ಸಾಮರ್ಥ್ಯ ಹೊಂದಿತ್ತು. ಆದರೆ ಈ ವ್ಯವಸ್ಥೆಯ ಪ್ರಾತ್ಯಕ್ಷಿಕೆಗೆ ರಾಜಕೀಯ ವಲಯದಿಂದ ಒಪ್ಪಿಗೆ ದೊರೆತಿರಲಿಲ್ಲ’ ಎಂದು ಇಸ್ರೊ ಮಾಜಿ ಅಧ್ಯಕ್ಷ ಜಿ.ಮಾಧವನ್ ನಾಯರ್ ಹೇಳಿದ್ದಾರೆ. ಮಾಧವನ್ ಈಗ ಬಿಜೆಪಿ ಸೇರಿದ್ದಾರೆ.

ಟೀಕೆ–ಪ್ರತಿಟೀಕೆ

* ನರೇಂದ್ರ ಮೋದಿ ಅವರು ಟಿವಿಯಲ್ಲಿ ಕುಳಿತು ಆಕಾಶವನ್ನು ತೋರಿಸಿದ್ದಾರೆ. ನಿರುದ್ಯೋಗ, ಗ್ರಾಮೀಣ ಪ್ರದೇಶಗಳ ಬಿಕ್ಕಟ್ಟು ಮತ್ತು ಮಹಿಳಾ ಸುರಕ್ಷತೆಯಂತಹ ನೆಲದ ಮೇಲಿನ ಸಮಸ್ಯೆಗಳ ಮೇಲಿನ ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದಾರೆ.

ಡಿಆರ್‌ಡಿಒ ಮತ್ತು ಇಸ್ರೊಗೆ ಅಭಿನಂದನೆಗಳು. ಈ ಯಶಸ್ಸಿನ ಶ್ರೇಯ ನಿಮಗೆ ಸಲ್ಲತಕ್ಕದ್ದು. ಭಾರತವನ್ನು ಸುರಕ್ಷಿತಗೊಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು

ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ

* ಇಂದಿನ ಘೋಷಣೆ ಮೋದಿಯ ಮತ್ತೊಂದು ಎಲ್ಲೆಯೇ ಇಲ್ಲದ ನಾಟಕ. ಇದು ಪ್ರಚಾರದ ಉನ್ಮಾದ. ಮೋದಿ ಹಿಂದಿನಂತೆಯೇ ಈ ಸಾಧನೆಯ ಶ್ರೇಯಸ್ಸು ತಮ್ಮದೇ ಎಂದು ಹೇಳಹೊರಟಿದ್ದಾರೆ. ಈ ಮೂಲಕ ಚುನಾವಣೆಯಲ್ಲಿ ಲಾಭಗಳಿಸಲು ಯತ್ನಿಸುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

* ಡಿಆರ್‌ಡಿಒಗೆ ಅಭಿನಂದನೆಗಳು. ನಿಮ್ಮ ಈ ಸಾಧನೆಯಿಂದ ನಮಗೆ ಅತ್ಯಂತ ಹೆಮ್ಮೆಯಾಗಿದೆ. ಇದರ ಜತೆಯಲ್ಲೇ ಪ್ರಧಾನಿಗೆ ‘ವಿಶ್ವ ರಂಗಭೂಮಿ ದಿನ’ದ ಶುಭಾಶಯಗಳನ್ನು ಹೇಳಲು ಬಯಸುತ್ತೇನೆ

ರಾಹುಲ್ ಗಾಂಧಿ,ಕಾಂಗ್ರೆಸ್ ಅಧ್ಯಕ್ಷ

* ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ,ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಘೋಷಣೆ ಮಾಡಲು ಅಥವಾ ಬಹಿರಂಗಪಡಿಸಲು ಚುನಾವಣಾಆಯೋಗದ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ

ಚುನಾವಣಾ ಆಯೋಗದ ಮೂಲಗಳು

* ನಾವಿಲ್ಲಿ ರಾಷ್ಟ್ರೀಯ ಭದ್ರತೆಯ ಮತ್ತು ಭೌಗೋಳಿಕ–ರಾಜಕೀಯ ವಿಚಾರವನ್ನು ಚರ್ಚಿಸುತ್ತಿದ್ದರೆ, ವಿರೋಧ ಪಕ್ಷಗಳು ಅನವಶ್ಯಕ ಆಕ್ಷೇಪಗಳನ್ನು ಎತ್ತುತ್ತಿವೆ.

‘ನಾವು ಚಂದ್ರನತ್ತ ಬೊಟ್ಟು ಮಾಡಿದ್ದರೆ, ಮುಟ್ಠಾಳ ನಮ್ಮ ಬೊಟ್ಟಿನತ್ತಲೇ ಬೊಟ್ಟು ಮಾಡುತ್ತಿದ್ದ’ ಎಂಬ ಮಾತು ಈಗ ನೆನಪಾಗುತ್ತಿದೆ. ಯುಪಿಎ ಸರ್ಕಾರದ ನಮ್ಮ ವಿಜ್ಞಾನಿಗಳ ಸಾಮರ್ಥ್ಯದ ಬಗ್ಗೆ ಅರಿವೇ ಇರಲಿಲ್ಲ. ಹೀಗಾಗಿ ಅವರು ಪ್ರಾತ್ಯಕ್ಷಿಕೆಗೆ ಅನುಮತಿ ನೀಡಿರಲಿಲ್ಲ

ಅರುಣ್ ಜೇಟ್ಲಿ, ಕೇಂದ್ರ ಹಣಕಾಸು ಸಚಿವ

* ಭಾರತೀಯ ವಿಜ್ಞಾನಿಗಳ ಸಾಧನೆಗೆ ಲೋಕಸಭೆ ಚುನಾವಣೆ ಮಧ್ಯೆ ರಾಜಕೀಯದ ಬಣ್ಣ ಬಳಿಯಲು ಪ್ರಧಾನಿಗೆ ಅವಕಾಶ ನೀಡಿದ್ದು ಏಕೆ ಎಂಬ ಪ್ರಶ್ನೆಗೆ ಚುನಾವಣಾ ಆಯೋಗ ಉತ್ತರಿಸಬೇಕು ಎಂದು ಇಡೀ ದೇಶ ಕೇಳುತ್ತಿದೆ

ಸೀತಾರಾಂ ಯೆಚೂರಿ, ಸಿ‍ಪಿಎಂ ಪ್ರಧಾನ ಕಾರ್ಯದರ್ಶಿ

ಎ–ಸ್ಯಾಟ್ ಕಾರ್ಯಾಚರಣೆಯ ಸುತ್ತ

* ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಸಹಯೋಗದಲ್ಲಿ ‘ಎ–ಸ್ಯಾಟ್’ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿವೆ. ಬುಧವಾರದ ಕಾರ್ಯಾಚರಣೆಯನ್ನೂ ಜಂಟಿಯಾಗೇ ನಡೆಸಲಾಗಿದೆ

* ಭಾರತದ ಬಳಿ ಮೊದಲೇ ಲಭ್ಯವಿದ್ದ ಗುರುತ್ವಬಲ ಖಂಡಾಂತರ ಕ್ಷಿಪಣಿ ವ್ಯವಸ್ಥೆಯನ್ನು ಆಧಾರವಾಗಿ ಬಳಸಿಕೊಂಡು ‘ಎ–ಸ್ಯಾಟ್’ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಕಾರ್ಯಾಚರಣೆ ವೇಳೆ ಕ್ಷಿಪಣಿಯನ್ನು ‘ಹಿಟ್‌ ಟು ಕಿಲ್‌’ ಮೋಡ್‌ನಲ್ಲಿ ಇರಿಸಲಾಗಿತ್ತು

* ಈ ಕಾರ್ಯಾಚಣೆಗೆಂದೇ ಎರಡು ತಿಂಗಳ ಹಿಂದೆ ಒಂದು ಸೂಕ್ಷ್ಮ ಉಪಗ್ರಹವನ್ನು ಕಡಿಮೆ ಎತ್ತರದ ಕ್ಷಕೆಗೆ (ಎಲ್ಇಒ) ಸೇರಿಲಾಗಿತ್ತು. ಈ ಉಪಗ್ರಹವು ಸುಮಾರು ಒಂದು ಮೀಟರ್‌ನಷ್ಟು ವಿಶಾಲವಾಗಿತ್ತು

* ಒಡಿಶಾ ಕರಾವಳಿಯಲ್ಲಿರುವ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ದ್ವೀಪದಲ್ಲಿರುವ ಡಿಆರ್‌ಡಿಒ ಕೇಂದ್ರದಿಂದ ‘ಎ–ಸ್ಯಾಟ್’ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿತ್ತು

* ಕೇವಲ 300 ಕಿ.ಮೀ. ಎತ್ತರದಲ್ಲಿ ಈ ಕಾರ್ಯಾಚರಣೆ ನಡೆದಿರುವುದರಿಂದ ಯಾವುದೇ ರೀತಿಯ ತ್ಯಾಜ್ಯ ಬಾಹ್ಯಾಕಾಶದಲ್ಲಿ ಉಳಿಯುವುದಿಲ್ಲ. ಕ್ಷಿಪಣಿ ಮತ್ತು ಉಪಗ್ರಹದ ತುಣುಕುಗಳು ಕೆಲವೇ ದಿನಗಳಲ್ಲಿ ಭೂಮಿಯತ್ತ ಬೀಳಲಿವೆ. ಭೂಮಿಯ ವಾತಾವರಣ ಪ್ರವೇಶಿಸುತ್ತಿದ್ದಂತೆಯೇ ಉರಿದುಹೋಗಲಿವೆ

* ಇದು ಅತ್ಯಂತ ಸೂಕ್ಷ್ಮವಾದ ಕಾರ್ಯಾಚರಣೆ. ಕ್ಷಿಪಣಿ ಗುರಿ ತಪ್ಪಿದರೆ, ಭಾರತದ್ದೇ ಬೇರೆ ಉಪಗ್ರಹಗಳು ಅಥವಾ ಬೇರೆ ದೇಶಗಳ ಉಪಗ್ರಹಗಳಿಗೂ ಅಪ್ಪಳಿಸುವ ಅಪಾಯವಿತ್ತು. ಆದರೆ ನಿಗದಿಯಂತೆ ಕಾರ್ಯಾಚರಣೆ ಯಶಸ್ವಿಯಾಗಿದೆ

* ಶತ್ರು ದೇಶಗಳ ಬೇಹುಗಾರಿಕಾ ಉಪಗ್ರಹಗಳನ್ನು ಹೊಡೆದು ಉರುಳಿಸುವ ಸಾಮರ್ಥ್ಯವನ್ನು ಈ ವ್ಯವಸ್ಥೆ ಭಾರತಕ್ಕೆ ಒದಗಿಸಿದೆ

* ಎದುರಾಳಿ ರಾಷ್ಟ್ರಗಳ ಗುರುತ್ವಬಲ (ಬ್ಯಾಲೆಸ್ಟಿಕ್) ಮತ್ತು ಗುರುತ್ವಬಲ ಖಂಡಾಂತರ (ಬ್ಯಾಲೆಸ್ಟಿಕ್ ಇಂಟರ್‌ಕಾಂಟಿನೆಂಟಲ್) ಕ್ಷಿಪಣಿಗಳನ್ನು ಬಾಹ್ಯಾಕಾಶದಲ್ಲೇ ಹೊಡೆದು ಉರುಳಿಸಲು ‘ಎ–ಸ್ಯಾಟ್’ ಶಕ್ತವಾಗಿದೆ

300 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಉಪಗ್ರಹವಿತ್ತು

3 ನಿಮಿಷ ಕಾರ್ಯಾಚರಣೆಯ ಅವಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT