ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಂಡಿಕೆ ನಡೆ ಇನ್ನೂ ನಿಗೂಢ

ಎಐಎಡಿಎಂಕೆ ಜತೆ ಮೈತ್ರಿ?
Last Updated 8 ಮಾರ್ಚ್ 2019, 19:00 IST
ಅಕ್ಷರ ಗಾತ್ರ

ಚೆನ್ನೈ: ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜತೆ ಮೈತ್ರಿಗೆ ಸಂಬಂಧಿಸಿದಂತೆ ನಟ, ರಾಜಕಾರಣಿ ವಿಜಯಕಾಂತ್‌ ನೇತೃತ್ವದ ದೇಶೀಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ನಡೆ ಇನ್ನೂ ನಿಗೂಢವಾಗಿದೆ.

ಮೈತ್ರಿ ಸಂಬಂಧ ಇನ್ನೂ ತನ್ನ ನಿಲುವನ್ನು ಸ್ಪಷ್ಟಪಡಿಸದ ಡಿಎಂಡಿಕೆ, ಸ್ನೇಹಕ್ಕಾಗಿ ಹಂಬಲಿಸುತ್ತಿರುವ ರಾಜಕೀಯ ಪಕ್ಷಗಳನ್ನು ತುದಿಗಾಲ ಮೇಲೆ ನಿಲ್ಲಿಸಿದೆ.

ಮೈತ್ರಿ ಸಂಬಂಧ ಇನ್ನೂ ಎರಡು ದಿನಗಳಲ್ಲಿ ತನ್ನ ನಿಲುವು ಸ್ಪಷ್ಟಪಡಿಸುವುದಾಗಿ ಡಿಎಂಡಿಕೆ ಸ್ಥಾಪಕ ವಿಜಯಕಾಂತ್‌ ಅವರ ಪತ್ನಿ ಹಾಗೂ ಪಕ್ಷದ ಖಜಾಂಚಿ ಪ್ರೇಮಲತಾ ತಿಳಿಸಿದ್ದಾರೆ.

‘ಈ ಹಿಂದಿನಂತೆ ಈಗಲೂ ಡಿಎಂಡಿಕೆ ಏಕಾಂಗಿಯಾಗಿ ಚುನಾವಣೆ ಎದುರಿಸುವ ಸಾಮರ್ಥ್ಯ ಹೊಂದಿದೆ. ಮೈತ್ರಿಗಿಂತ ರಾಜ್ಯದ ಜನರ ಹಿತ ಮುಖ್ಯ’ ಎಂದು ಅವರು ಸಣ್ಣದೊಂದು ಸುಳಿವು ನೀಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸೇರಿದಂತೆ ಉಪ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪಕ್ಷ ಇನ್ನೂ ಎರಡು ದಿನಗಳಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪ್ರೇಮಲತಾ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಹಿಂದಿರುಗಿದ ಡಿಎಂಡಿಕೆ ಮುಖ್ಯಸ್ಥ ವಿಜಯಕಾಂತ್‌ ಅವರನ್ನು ಭೇಟಿ ಮಾಡಿದ್ದ ಉಪ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಮತ್ತು ಸಚಿವ ಡಿ. ಜಯಕುಮಾರ್‌ ಅವರು ಎನ್‌ಡಿಎ ಸೇರುವಂತೆ ಮನವಿ ಮಾಡಿದ್ದರು. ಎರಡು ದಿನಗಳ ಹಿಂದೆ ಚೆನ್ನೈನ ಹೊಟೇಲ್‌ ಒಂದರಲ್ಲಿ ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ಜತೆ ಮಾತುಕತೆ ನಡೆಸಿದ್ದ ಡಿಎಂಡಿಕೆ ನಾಯಕರು, ಸೀಟು ಹಂಚಿಕೆ ಕುರಿತು ಎರಡು ದಿನದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಆದರೆ, ಡಿಎಂಕೆ ಮೈತ್ರಿಕೂಟ ಸೇರಲು ಡಿಎಂಡಿಕೆ ಆಸಕ್ತಿ ತೋರಿಸಿದೆ ಎಂದು ಡಿಎಎಂಕೆ ಹಿರಿಯ ಮುಖಂಡ ದೊರೆ ಮುರುಗನ್‌ ಇತ್ತೀಚೆಗೆ ಹೇಳಿದ್ದರು.ಡಿಎಂಡಿಕೆ ಮತ್ತು ಎಐಎಡಿಎಂಕೆ ಜತೆ ಮೈತ್ರಿ ಮಾತುಕತೆ ವಿಳಂಬವಾಗಲು ಇದೂ ಒಂದು ಕಾರಣ ಎಂಬ ಸುದ್ದಿ ಹರಡಿತ್ತು. ದೊರೆ ಮುರುಗನ್‌ ಈ ಹೇಳಿಕೆ ಪ್ರೇಮಲತಾ ಅವರನ್ನು ಕೆರಳಿಸಿದೆ.

ಹಲವು ಕ್ಷೇತ್ರಗಳಿಗೆ ಉಪ ಚುನಾವಣೆ

2017ರಲ್ಲಿ ಮದ್ರಾಸ್‌ ಹೈಕೋರ್ಟ್ ಎಐಎಡಿಎಂಕೆಯ 18 ಶಾಸಕರ ಸದಸ್ಯತ್ವ ರದ್ದುಗೊಳಿಸಿದ ತಮಿಳುನಾಡು ವಿಧಾನಸಭೆಯ ಸ್ಪೀಕರ್‌ ಆದೇಶ ಎತ್ತಿ ಹಿಡಿದ ನಂತರ 18 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ.

ಇದರೊಂದಿಗೆ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಮತ್ತು ಎಐಎಡಿಎಂಕೆ ಶಾಸಕ ಎ.ಕೆ. ಬೋಸ್‌ ನಿಧನದಿಂದ ತೆರವಾಗಿರುವ ತಿರುವೂರು ಮತ್ತು ತಿರುಪ್ಪರಂಕುಡ್ರಂ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಯಬೇಕಿದೆ.

ಕೋಮುಗಲಭೆ ಪ್ರಕರಣದಲ್ಲಿ ಮೂರು ವರ್ಷ ಕಠಿಣ ಶಿಕ್ಷೆಗೆ ಒಳಗಾದ ಎಐಎಡಿಎಂಕೆ ಶಾಸಕ ಪಿ. ಬಾಲಕೃಷ್ಣ ರೆಡ್ಡಿ ರಾಜೀನಾಮೆಯಿಂದ ಹೊಸೂರು ವಿಧಾನಸಭಾ ಕ್ಷೇತ್ರ ತೆರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT