ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನ್‌ಭದ್ರ ಹತ್ಯಾಕಾಂಡ ಸಂತ್ರಸ್ತರ ಸಂತೈಸಿದ ಪ್ರಿಯಾಂಕಾ ಗಾಂಧಿ

ಪಟ್ಟು ಸಡಿಲಿಸದ ಕಾಂಗ್ರೆಸ್ ನಾಯಕಿಗೆ ಮಣಿದ ಉತ್ತರ ಪ್ರದೇಶ ಸರ್ಕಾರ
Last Updated 20 ಜುಲೈ 2019, 19:26 IST
ಅಕ್ಷರ ಗಾತ್ರ

ಲಖನೌ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಹಟಕ್ಕೆ ಉತ್ತರ ಪ್ರದೇಶ ಸರ್ಕಾರಕೊನೆಗೂ ಮಣಿದಿದೆ. ಸೋನ್‌ಭದ್ರ ಹತ್ಯಾಕಾಂಡದ ಕೆಲವು ಸಂತ್ರಸ್ತರು ಪ್ರಿಯಾಂಕಾ ಅವರನ್ನು ಭೇಟಿ ಮಾಡಲು ಶನಿವಾರ ಅವಕಾಶ ಮಾಡಿಕೊಟ್ಟಿತು. ಮಿರ್ಜಾಪುರ ಜಿಲ್ಲೆಯ ಚುನಾರ್‌ನಲ್ಲಿರುವ ಅತಿಥಿಗೃಹದಲ್ಲಿ ಸಂತ್ರಸ್ತರ ಕುಟುಂಬ ಸದಸ್ಯರ ಜೊತೆ ಅವರು ಮಾತುಕತೆ ನಡೆಸಿದರು.

10 ಮಂದಿ ಬುಡಕಟ್ಟು ಜನರ ಹತ್ಯೆ ನಡೆದಿದ್ದ ಉಂಬಾ ಗ್ರಾಮಕ್ಕೆ ತೆರಳಲು ಪ್ರಿಯಾಂಕಾ ಅವರಿಗೆ ಪೊಲೀಸರು ಅವಕಾಶ ನೀಡದ ಕಾರಣ ಅವರು ರಸ್ತೆಯಲ್ಲೇ ಧರಣಿ ಕುಳಿತಿದ್ದರು. ಹೀಗಾಗಿ ಅವರನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿತ್ತು. ಅತಿಥಿಗೃಹದಲ್ಲೇ ಅವರು ರಾತ್ರಿ ಉಳಿದಿದ್ದರು.

ಸಂತ್ರಸ್ತ ಕುಟುಂಬದ ಕೆಲವರನ್ನು ಪ್ರಿಯಾಂಕಾ ಭೇಟಿ ಮಾಡಿದರು. ಅದರೆ ತಮ್ಮ ಭೇಟಿಗೆ ಬಂದಿದ್ದ ಇನ್ನೂ 15 ಮಂದಿಗೆ ಅವಕಾಶ ನೀಡಲಿಲ್ಲ ಎಂದು ಪ್ರಿಯಾಂಕಾ ಅವರು ಟ್ವಿಟರ್‌ನಲ್ಲಿ ದೂರಿದ್ದಾರೆ.

ಸಂತ್ರಸ್ತ ಮಹಿಳೆಯ ಕಣ್ಣೀರನ್ನು ಒರೆಸಿದ ಪ್ರಿಯಾಂಕಾ, ಕುಡಿಯಲು ನೀರು ಕೊಟ್ಟು ಸಮಾಧಾನಪಡಿಸಿದರು. ಸಂತ್ರಸ್ತರ ಪರವಾಗಿ ಪಕ್ಷ ಹೋರಾಟ ನಡೆಸಲಿದೆ ಎಂದು ಭರವಸೆ ನೀಡಿದರು.

ಹತ್ಯಾಕಾಂಡ ಪ್ರಮುಖ ಆರೋಪಿಯಿಂದ ತಾವು ಹಿಂಸೆ ಅನುಭವಿಸುತ್ತಿದ್ದು, ತಮ್ಮ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಂತ್ರಸ್ತ ಕುಟುಂಬದವರು ಆರೋಪಿಸಿದರು.

ಪ್ರಿಯಾಂಕಾ ಅವರನ್ನು ವಶಕ್ಕೆ ಪಡೆದಿದ್ದನ್ನು ಖಂಡಿಸಿ ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ಕೆಲವು ವಿಧಾನಸಭೆಗಳಲ್ಲಿ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ನಡೆ ಅಸಾಂವಿಧಾನಿಕ ಎಂದು ಆರೋಪಿಸಿದರು.ಪ್ರಿಯಾಂಕಾ ಅವರನ್ನು ವಶಕ್ಕೆ ಪಡೆದಿದ್ದನ್ನು ಖಂಡಿಸಿ ರಾಜಸ್ಥಾನದ ಜೈಪುರದಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು.

ಅತಿಥಿಗೃಹಕ್ಕೆ ವಿದ್ಯುತ್ ಪೂರೈಕೆ ಬಂದ್!

ಸಂತ್ರಸ್ತರ ಭೇಟಿಗೆ ಪಟ್ಟು ಹಿಡಿದಿದ್ದ ಪ್ರಿಯಾಂಕಾ ಅವರ ಮನವೊಲಿಸಲು ಅಧಿಕಾರಿಗಳು ಯತ್ನಿಸಿದ್ದರು. ಅದರೆ ಅವರು ಸೊಪ್ಪು ಹಾಕಲಿಲ್ಲ. ಒತ್ತಾಯಪೂರ್ವಕವಾಗಿ ಅತಿಥಿಗೃಹವನ್ನು ತೊರೆಯುವಂತೆ ಮಾಡಲು, ಅಲ್ಲಿಗೆ ನೀರು ಹಾಗೂ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಕಾಂಗ್ರೆಸ್ ಮುಖಂಡ ಅಜಯ್ ಕುಮಾರ್ ಲಲ್ಲು ಎಂಬುವರು ಆರೋಪಿಸಿದ್ದಾರೆ.

ಟಿಎಂಸಿ ನಿಯೋಗ ವಶಕ್ಕೆ

ಪ್ರಿಯಾಂಕಾ ಗಾಂಧಿ ಬಳಿಕ ತೃಣಮೂಲ ಕಾಂಗ್ರೆಸ್ ನಿಯೋಗದ ಭೇಟಿಗೆ ಉತ್ತರ ಪ್ರದೇಶ ಸರ್ಕಾರ ತಡೆ ಒಡ್ಡಿದೆ. ಟಿಎಂಸಿ ನಾಯಕರಾದ ಡೆರಿಕ್ ಒಬ್ರಿಯಾನ್, ಸುನಿಲ್ ಮಂಡಲ್ ಹಾಗೂ ಅಭಿರ್ ರಂಜನ್ ಬಿಸ್ವಾಸ್ ಅವರನ್ನು ವಾರಾಣಸಿಯ ವಿಮಾನ ನಿಲ್ದಾಣದಲ್ಲಿ ಶನಿವಾರ ವಶಕ್ಕೆ ಪಡೆಯಲಾಗಿದೆ.

‘ಯಾವ ಕಲಂನಡಿ ನಮ್ಮನ್ನು ವಶಕ್ಕೆ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿಲ್ಲ. ಗಾಯಾಳುಗಳನ್ನು ಭೇಟಿ ಮಾಡಿ, ಸಂತ್ರಸ್ತರಿಗೆ ಸಾಂತ್ವನ ಹೇಳುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ನಿಯೋಗದಲ್ಲಿ 144 ಸೆಕ್ಷನ್ ಉಲ್ಲಂಘನೆ ಮಾಡುವಷ್ಟು ಸಂಖ್ಯೆಯ ಜನರು ಇರಲಿಲ್ಲ’ ಎಂದು ಒಬ್ರಿಯಾನ್ ಟ್ವೀಟ್ ಮಾಡಿದ್ದಾರೆ.

**

ಸಿಎಂ ಯೋಗಿ ಆದಿತ್ಯನಾಥ ಅವರು ಉತ್ತರ ಪ್ರದೇಶವನ್ನು ‘ಅಪರಾಧ ಪ್ರದೇಶ’ವನ್ನಾಗಿ ಪರಿವರ್ತಿಸಿದ್ದಾರೆ. ಆರೋಪಿಗಳನ್ನು ರಕ್ಷಿಸಲು ಬಿಜೆಪಿ ಸರ್ಕಾರ ಮುಂದಾಗಿದೆ
-ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ

**

ಉತ್ತರ ಪ್ರದೇಶ ಸರ್ಕಾರವು ತನ್ನ ನ್ಯೂನತೆಗಳನ್ನು ಮುಚ್ಚಿಹಾಕಲು 144 ಸೆಕ್ಷನ್ ಮೊರೆ ಹೋಗಿದೆ. ಹತ್ಯಾಕಾಂಡಕ್ಕೆ ಸರ್ಕಾರದ ಅಸಡ್ಡೆಯೇ ಮುಖ್ಯ ಕಾರಣ
-ಮಾಯಾವತಿ, ಬಿಎಸ್‌ಪಿ ನಾಯಕಿ

**

ಉತ್ತರ ಪ್ರದೇಶ ಸರ್ಕಾರ ಸರ್ವಾಧಿಕಾರದ ಬಗ್ಗೆ ಒಲವು ಹೊಂದಿದೆ. ಪ್ರಿಯಾಂಕಾ ಅವರನ್ನು ಅತಿಥಿಗೃಹದಲ್ಲಿ ಬಂಧಿಸಿಡುವ ಮೂಲಕ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಿದೆ.
- ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT