ಶನಿವಾರ, ಡಿಸೆಂಬರ್ 14, 2019
24 °C
250ನೇ ಅಧಿವೇಶನ: ರಾಜ್ಯಸಭೆಯ ಮಹತ್ವವನ್ನು ವಿಶ್ಲೇಷಿಸಿದ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಸಿಂಗ್‌

ಕೇಂದ್ರದ ನಿರ್ಧಾರ ಒರೆಗೆ ಹಚ್ಚಲು ರಾಜ್ಯಸಭೆ: ಮೋದಿ, ಮನಮೋಹನ್ ಸಿಂಗ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಜ್ಯಸಭೆಯ 250ನೇ ಅಧಿವೇಶನವು ಆಡಳಿತ ಪಕ್ಷ ಹಾಗೂ ವಿರೋಧಪಕ್ಷಗಳ ಮಾತಿನ ಚಕಮಕಿಗೆ ಸಾಕ್ಷಿಯಾಯಿತು. ತುರ್ತು ಪರಿಸ್ಥಿತಿ, ಹಣಕಾಸು ಮಸೂದೆ, ರಾಜ್ಯಸಭಾ ಸದಸ್ಯರ ಪಕ್ಷಾಂತರ ಮುಂತಾದ ವಿಚಾರಗಳ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಿತು.

‘ಆಧಾರ್‌’ನಂಥ ಮಸೂದೆಯನ್ನು ಹಣಕಾಸು ಮಸೂದೆಯಾಗಿ ಮಂಡಿಸಿದ ಸರ್ಕಾರದ ಕ್ರಮವನ್ನು ವಿರೋಧಪಕ್ಷಗಳವರು ಪ್ರಶ್ನಿಸಿದರೆ, ಇದೇ ರಾಜ್ಯಸಭೆಯು ಹಿಂದೆ ಇಂದಿರಾ ಗಾಂಧಿ ಅವರು ಜಾರಿ ಮಾಡಿದ್ದ ತುರ್ತು ಪರಿಸ್ಥಿತಿಗೆ ಅಂಗೀಕಾರ ನೀಡಿತ್ತಲ್ಲವೇ ಎಂದು ಆಡಳಿತ ಪಕ್ಷದವರು ಪ್ರಶ್ನಿಸಿದರು.

250ನೇ ಅಧಿವೇಶನದ ಅಂಗವಾಗಿ ಹಮ್ಮಿಕೊಂಡಿದ್ದ ‘ಭಾರತದ ರಾಜಕಾರಣದಲ್ಲಿ ರಾಜ್ಯಸಭೆಯ ಪಾತ್ರ ಮತ್ತು ಸುಧಾರಣೆಯ ಅಗತ್ಯ’ ಕುರಿತ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ ಸಿಂಗ್‌,  ‘ಕಾನೂನು ರೂಪಿಸುವ ವಿಚಾರದಲ್ಲಿ ರಾಜ್ಯಸಭೆಯ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು’ ಎಂದು ಪ್ರತಿಪಾದಿಸಿದರು.

‘ರಾಜ್ಯಸಭೆಗೆ ಬಂದ ಎಲ್ಲಾ ಮಸೂದೆಗಳ ಬಗ್ಗೆ ವಿಸ್ತೃತವಾದ ಚರ್ಚೆ ನಡೆಸುವುದು ನಮ್ಮ ಜವಾಬ್ದಾರಿಯಾಗಬೇಕು. ಮಸೂದೆಗಳನ್ನು ರೂಪಿಸುವ ನಿಟ್ಟಿನಲ್ಲಿ ರಾಜ್ಯಸಭೆಯ ಸಮಿತಿ ಗಮನಾರ್ಹವಾದ ಕೆಲಸ ಮಾಡುತ್ತಾ ಬಂದಿದೆ. ಆ ಹೊಣೆಗಾರಿಕೆಯನ್ನು ನಾವು ಇನ್ನಷ್ಟು ಮುತುವರ್ಜಿಯಿಂದ ಮುಂದುವರಿಸಬೇಕಾಗಿದೆ. 250ನೇ ಅಧಿವೇಶನದ ಈ ಸಂದರ್ಭದಲ್ಲಿ, ‘ಜನರ ನಿರೀಕ್ಷೆಯ ಮಟ್ಟದಲ್ಲಿ ನಾವು ಕೆಲಸ ಮಾಡಿದ್ದೇವೆಯೇ ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು, ‘ಮೇಲ್ಮನೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕೇ ವಿನಾ ಅದಕ್ಕೆ ಅಡ್ಡಿಪಡಿಸುವ ಸದನವಾಗಬಾರದು’ ಎಂದರು.

‘ರಾಜ್ಯಸಭೆಯು ಎರಡನೇ ಮನೆಯಾಗಿರಬಹುದು. ಆದರೆ ಅದು ಕಡಿಮೆ ಮಹತ್ವದ್ದು ಎಂದು ಯಾರೂ ಭಾವಿಸಬಾರದು ಎಂದು ವಾಜಪೇಯಿ ಅವರು ಹೇಳಿದ್ದರು. ನಾನು ಅವರ ಭಾವನೆಗಳನ್ನು ಪ್ರತಿಧ್ವನಿಸಿದ್ದೇನೆ. ಚುನಾವಣಾ ರಾಜಕೀಯದಿಂದ ದೂರ ಇರುವವರಿಗೂ ದೇಶದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಈ ಸದನ ನೀಡುತ್ತಾ ಬಂದಿದೆ’ ಎಂದರು.

‘ಭಾರತದ ಒಕ್ಕೂಟ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಸದನ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗಿದೆ ಎಂದು ನಾನು ಹೇಳಬಲ್ಲೆ’ ಎಂದು ಮೋದಿ ನುಡಿದರು.

ರಾಜ್ಯಸಭೆಯಲ್ಲಿ ಎಲ್ಲವೂ ಸರಿಯಾಗಿಲ್ಲ. ಜನರ ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.

ಹೊಗಳಿಕೆಯ ಹೂಮಳೆ

ರಾಜ್ಯಸಭೆಯ 250ನೇ ಅಧಿವೇಶನದ ಸಂದರ್ಭದಲ್ಲಿ ಭಾಷಣ ಮಾಡುತ್ತಾ ಪ್ರಧಾನಿ ಮೋದಿ ಅವರು ಎನ್‌ಸಿಪಿ ಹಾಗೂ ಬಿಜೆಡಿ ಪಕ್ಷಗಳ ಹೆಸರು ಉಲ್ಲೇಖಿಸಿ ಹೊಗಳಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಭಾಷಣದ ಮಧ್ಯೆ ಈ ಎರಡು ಪಕ್ಷಗಳ ಹೆಸರನ್ನು ಉಲ್ಲೇಖಿಸಿದ ಮೋದಿ, ‘ಎನ್‌ಸಿಪಿ ಮತ್ತು ಬಿಜೆಡಿ ಸದಸ್ಯರು ಸಂಸದೀಯ ನಿಯಮಗಳಿಗೆ ಗರಿಷ್ಠ ಗೌರವ ನೀಡುತ್ತಾ ಬಂದಿರುವುದನ್ನು ಕಂಡಿದ್ದೇವೆ. ಆ ಪಕ್ಷದ ಸದಸ್ಯರು ಎಂದೂ ಸಭಾಪತಿಯ ಪೀಠದ ಮುಂದೆ ಬಂದು ಪ್ರತಿಭಟನೆ ಮಾಡಿಲ್ಲ. ಹಾಗಿದ್ದರೂ ತಮ್ಮ ವಾದವನ್ನು ಅವರು ಅತ್ಯಂತ ಪರಿಣಾಮಕಾರಿಯಾಗಿ ಮಂಡಿಸಿದ್ದಾರೆ. ಈ ಪಕ್ಷಗಳಿಂದ ಕಲಿಯಬೇಕಾದ್ದು ಸಾಕಷ್ಟಿದೆ’ ಎಂದರು.

ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವುದು ಬಿಜೆಪಿಗೆ ಕಗ್ಗಂಟಾಗಿರುವ ಸಂದರ್ಭದಲ್ಲೇ ಎನ್‌ಸಿಪಿ ಬಗ್ಗೆ ಮೋದಿ ಅವರ ಈ ಹೊಗಳಿಕೆಯ ಮಾತುಗಳು ರಾಜಕೀಯ ವಲಯದಲ್ಲಿ ಹಲವರ ಹುಬ್ಬೇರುವಂತೆ ಮಾಡಿವೆ.

ಹಿಂದೆ ಕೆಲವು ಪ್ರಮುಖ ಮಸೂದೆಗಳನ್ನು ಅಂಗೀಕರಿಸುವ ಸಂದರ್ಭ ಬಂದಾಗ, ಬಿಜೆಡಿಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಿತ್ತು ಎಂಬುದನ್ನು ಸ್ಮರಿಸಬಹುದಾಗಿದೆ.

ಮನಮೋಹನ್‌ ಸಿಂಗ್‌ ಹೇಳಿದ್ದು

* ಸರ್ಕಾರದ ಭಾವನಾತ್ಮಕ ಮತ್ತು ತರಾತುರಿಯ ನಿರ್ಧಾರಗಳನ್ನು ತಡೆಯಲು ರಾಜ್ಯಸಭೆಯು ಸದಾ ಜಾಗೃತವಾಗಿರುವುದು ಅಗತ್ಯ. ಬಹುಮತದ ಸರ್ಕಾರದ ನಿರ್ಧಾರಗಳನ್ನು ಅಳೆದು ತೂಗಿ, ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯಸಭೆಯ ಮೇಲಿದೆ.

* ರಾಜ್ಯಗಳ ಗಡಿ ನಿರ್ಧರಿಸುವುದು, ಅವುಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸುವುದು ಮುಂತಾದವು ದೀರ್ಘಾವಧಿಯ ಪರಿಣಾಮ ಉಂಟುಮಾಡುವ ತೀರ್ಮಾನಗಳು. ಇಂಥ ವಿಚಾರಗಳಲ್ಲಿ ರಾಜ್ಯಸಭೆಗೆ ಹೆಚ್ಚಿನ ಅಧಿಕಾರ ನೀಡಬೇಕು.

* 16ನೇ ಲೋಕಸಭೆಯಲ್ಲಿ ಮಂಡನೆಯಾದ ಶೇ 25ರಷ್ಟು ಮಸೂದೆಗಳನ್ನು ಮಾತ್ರ ರಾಜ್ಯಸಭೆಯ ಸಮಿತಿಯ ಪರಿಶೀಲನೆಗೆ ಕಳುಹಿಸಲಾಗಿತ್ತು. 15 ಮತ್ತು 14ನೇ ಲೋಕಸಭೆಗಳಲ್ಲಿ ಈ ಪ್ರಮಾಣ ಕ್ರಮವಾಗಿ ಶೇ 71 ಮತ್ತು ಶೇ 60ರಷ್ಟಿತ್ತು. ಮಸೂದೆಗಳು ಮಂಡನೆಯಾಗುವುದಕ್ಕೂ ಮೊದಲು ಪರಿಶೀಲನಾ ಸಮಿತಿಯಲ್ಲಿ ವಿಸ್ತೃತ ಚರ್ಚೆಗೆ ಒಳಗಾಗಬೇಕು

* ಸಂವಿಧಾನದ 110ನೇ ಕಲಮು, ಹಣಕಾಸು ಮಸೂದೆ ಮೂಲಕ ಲೋಕಸಭೆಗೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ. ಆದರೆ ಇದು ದುರ್ಬಳಕೆ ಆಗುತ್ತಿರುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ. ರಾಜ್ಯಸಭೆಯನ್ನು ಕಡೆಗಣಿಸಿ, ಹಣಕಾಸು ಮಸೂದೆಯ ರೂಪದಲ್ಲಿ ಅನೇಕ ಮಸೂದೆಗಳನ್ನು ಮಂಡಿಸಲಾಗುತ್ತಿದೆ.

 ನರೇಂದ್ರ ಮೋದಿ ಹೇಳಿದ್ದು

* ಅಳೆದು ತೂಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಮೇಲ್ಮನೆಯಂಥ ವ್ಯವಸ್ಥೆ ಇರುವುದು ಪ್ರಜಾಪ್ರಭುತ್ವದಲ್ಲಿ ಅತ್ಯಗತ್ಯ. ಆದರೆ ಅಳೆದು– ತೂಗಿ ನೋಡುವುದು ಮತ್ತು ಅಡಚಣೆ ಉಂಟುಮಾಡುವುದರ ನಡುವಿನ ವ್ಯತ್ಯಾಸವನ್ನು ಅರಿಯುವುದು ಮುಖ್ಯ

* ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿ ರಾಜ್ಯಸಭೆ ಕೆಲಸ ಮಾಡಬೇಕು. ಎನ್‌ಡಿಎಗೆ ಬಹುಮತ ಇಲ್ಲದ ಕಾರಣಕ್ಕೆ ಅನೇಕ ಸಂದರ್ಭದಲ್ಲಿ ಅತ್ಯಂತ ಪ್ರಮುಖ ವಿಚಾರಗಳು ಸ್ಥಗಿತಗೊಂಡಿದ್ದಿದೆ.

* ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದು ಮಾಡುವ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದಾಗ ರಾಜ್ಯಸಭೆಯು ಕಾರ್ಯನಿರ್ವಹಿಸಿದ್ದ ರೀತಿಯನ್ನು ಮರೆಯಲಾಗದು. ಇಡೀ ಸದನ ಒಕ್ಕೊರಲಿನಿಂದ ಸರ್ಕಾರವನ್ನು ಬೆಂಬಲಿಸಿತ್ತು

* ಡಾ. ಅಂಬೇಡ್ಕರ್‌ ಅವರು ಲೋಕಸಭೆಗೆ ಆಯ್ಕೆಯಾಗುವುದನ್ನು ತಡೆಯಲಾಗಿತ್ತು. ಆದರೆ ಅವರು ರಾಜ್ಯಸಭೆಗೆ ಆಯ್ಕೆಯಾಗಿ ದೇಶಕ್ಕೆ ಅತ್ಯಮೂಲ್ಯ ಕಾಣಿಕೆ ನೀಡಿದ್ದಾರೆ ಎಂಬುದನ್ನು ಮರೆಯಲು ಹೇಗೆ ಸಾಧ್ಯ?

ಪ್ರತಿಕ್ರಿಯಿಸಿ (+)