ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಪದವೀಧರರ ಕ್ಷೇತ್ರ: ಬಿಜೆಪಿ–ಜೆಡಿಎಸ್‌ ನಡುವೆ ನೇರ ಸ್ಪರ್ಧೆ

22 ಅಭ್ಯರ್ಥಿಗಳು ಕಣದಲ್ಲಿ
Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ನ ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಕಮಲದ ಕೋಟೆಗೆ ಲಗ್ಗೆ ಹಾಕಲು ‘ತೆನೆ ಹೊತ್ತ ಮಹಿಳೆ’ ಶತ ಪ್ರಯತ್ನ ನಡೆಸಿದ್ದಾಳೆ.

ಕಳೆದ ಸಲ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಕಾಂಗ್ರೆಸ್‌ ಅದೃಷ್ಟಲಕ್ಷ್ಮಿ ಒಲಿಯುವ ನಿರೀಕ್ಷೆಯಲ್ಲಿದೆ. ವಿಧಾನಸೌಧದಲ್ಲಿ ದೋಸ್ತಿ ಮಾಡಿಕೊಂಡಿದ್ದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳು ಪಕ್ಕದಲ್ಲೇ ಕುಸ್ತಿಗೆ ಇಳಿದಿವೆ.

ಬಿಜೆಪಿಯಿಂದ ಅ.ದೇವೇಗೌಡ, ಜೆಡಿಎಸ್‌ನಿಂದ ಒಕ್ಕಲಿಗರ ಸಂಘದ ನಿರ್ದೇಶಕ ಅಚ್ಚೇಗೌಡ ಶಿವಣ್ಣ ಹಾಗೂ ಕಾಂಗ್ರೆಸ್‌ನಿಂದ ರಾಮೋಜಿ ಗೌಡ ಕಣಕ್ಕೆ ಇಳಿದಿದ್ದಾರೆ. ಪ್ರಮುಖ ಮೂರು ಪಕ್ಷಗಳು ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳಿಗೆ ಮಣೆ ಹಾಕಿವೆ. ಕಣದಲ್ಲಿ 22 ಹುರಿಯಾಳುಗಳಿದ್ದಾರೆ. ಬೆಂಗಳೂರು ನಗರ ಜಿಲ್ಲೆ, ರಾಮನಗರ, ಬೆಂಗಳೂರು ಗ್ರಾಮಾಂತರ, ಬಿಬಿಎಂಪಿ (ಕೇಂದ್ರ, ಉತ್ತರ, ದಕ್ಷಿಣ ವಲಯ) ಕ್ಷೇತ್ರ ವ್ಯಾಪ್ತಿಯಲ್ಲಿವೆ. ಇಲ್ಲಿ 36 ವಿಧಾನಸಭಾ ಕ್ಷೇತ್ರಗಳಿವೆ. 17ರಲ್ಲಿ ಕಾಂಗ್ರೆಸ್‌, 11ರಲ್ಲಿ ಬಿಜೆಪಿ ಹಾಗೂ 6ರಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಜಯನಗರ ಕ್ಷೇತ್ರಕ್ಕೆ ಜೂನ್‌ 11ಕ್ಕೆ ಮತದಾನ ನಡೆಯಲಿದೆ. ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ರಾಮಚಂದ್ರೇಗೌಡ ಕ್ಷೇತ್ರದಲ್ಲಿ ಐದು ಸಲ ಗೆದ್ದಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ 243 ಮತಗಳು. 2012ರಲ್ಲಿ ಏದುಸಿರು ಬಿಟ್ಟು ಗೆದ್ದ ಬಳಿಕ, ಇದೇ ಕೊನೆಯ ಚುನಾವಣೆ ಎಂದು ಪ್ರಕಟಿಸಿದರು. ಅವರ ಗೌರವಯುತ ನಿರ್ಗಮನದ ಬಳಿಕ ಹಲವು ಮುಖಂಡರು ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದರು. ಬೆಂಗಳೂರು ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಜಯಶಂಕರ್‌, ಪಕ್ಷದ ಸಹ ವಕ್ತಾರ ಎ.ಎಚ್. ಆನಂದ್ ಹೆಸರು ಮುಂಚೂಣಿಯಲ್ಲಿತ್ತು. ಬಳಿಕ, ರಾಮಚಂದ್ರೇಗೌಡರ ಪುತ್ರ ಸಪ್ತಗಿರಿಗೌಡ ಹಾಗೂ ವಕ್ತಾರ ಅಶ್ವತ್ಥನಾರಾಯಣ ಹೆಸರು ಸೇರಿತು.

ಹಿಂದಿನ ಎರಡು ಚುನಾವಣೆಗಳಲ್ಲಿ ರಾಮಚಂದ್ರೇಗೌಡರ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಅ.ದೇವೇಗೌಡ ಅವರಿಗೆ ಪಕ್ಷದ ಟಿಕೆಟ್‌ ನೀಡಬೇಕು ಎಂದು ಹಿರಿಯ ಶಾಸಕ ಆರ್‌. ಅಶೋಕ ಪಕ್ಷದ ಚುನಾವಣಾ ಸಮಿತಿ ಸಭೆಯಲ್ಲಿ ಬಲವಾಗಿ ನಿಂತರು. ಪಕ್ಷದ ಸದಸ್ಯರಿಗೇ ಟಿಕೆಟ್‌ ನೀಡಬೇಕು ಎಂದು ಡಿ.ವಿ.ಸದಾನಂದಗೌಡ, ಸಿ.ಟಿ. ರವಿ, ಅರವಿಂದ ಲಿಂಬಾವಳಿ, ಜಗದೀಶ ಶೆಟ್ಟರ್, ಕೆ.ಎಸ್‌. ಈಶ್ವರಪ್ಪ ಪಟ್ಟು ಹಿಡಿದರು. ಇದಾದ ಮರುದಿನವೇ ಅಶೋಕ್ ಹಾಗೂ ಪರಿಷತ್ತಿನ ಸದಸ್ಯ ವಿ. ಸೋಮಣ್ಣ ಅವರು ಅ. ದೇವೇಗೌಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಬಳಿಕ ಪಕ್ಷದ ಅಭ್ಯರ್ಥಿಯನ್ನಾಗಿ ಪ್ರಕಟಿಸಲಾಯಿತು. ಈ ನಡೆ ಹಲವರ ಅಸಮಾಧಾನಕ್ಕೆ ಕಾರಣವಾಯಿತು. ಒಳಬೇಗುದಿ ಈಗಲೂ ಮುಂದುವರಿದಿದೆ. ಅ.ದೇವೇಗೌಡ ಅವರು ಅನುಕಂಪದ ಅಲೆಯ ನಿರೀಕ್ಷೆಯಲ್ಲಿದ್ದಾರೆ. ಜತೆಗೆ, ‘ಕಮಲ’ದ ಗೂಡು ದಡ ಮುಟ್ಟಿಸುತ್ತದೆ ಎಂಬುದು ಅವರ ಯೋಚನೆ.

ಹಿಂದಿನ ಎರಡು ಚುನಾವಣೆಗಳಲ್ಲಿ ಜೆಡಿಎಸ್‌ ಕಿರು ಅಂತರದಿಂದ ಸೋತಿತ್ತು. ಅ.ದೇವೇಗೌಡ ಬಿಜೆಪಿ ಪಾಳಯಕ್ಕೆ ಜಿಗಿದ ಬೆನ್ನಲ್ಲೇ ಅಚ್ಚೇಗೌಡ ಶಿವಣ್ಣ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಪ್ರಕಟಿಸಿದರು. ಕಳೆದ ಆರು ತಿಂಗಳಿಂದ ಅವರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ‘ನಮ್ಮ ಪಕ್ಷವೇ ಅಧಿಕಾರದ ಚುಕ್ಕಾಣಿ ಹಿಡಿದಿದೆ. ನನ್ನನ್ನು ಗೆಲ್ಲಿಸಿದರೆ ಪದವೀಧರರ ಸಮಸ್ಯೆಗಳನ್ನು ಸುಲಭದಲ್ಲಿ ಬಗೆಹರಿಸಬಹುದು. ಬಿಜೆಪಿ ಸತತವಾಗಿ ಗೆದ್ದಿದ್ದರೂ ಪದವೀಧರರ ಸಮಸ್ಯೆ ಬಗೆಹರಿಸಲು ಹೆಚ್ಚೇನು ಪ್ರಯತ್ನ ಮಾಡಿಲ್ಲ’ ಎಂಬುದು ಅವರ ಆರೋಪ.

ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ದೋಸ್ತಿ ಮಾಡಿಕೊಂಡಿದ್ದರೂ ಇಲ್ಲಿ ಕುಸ್ತಿಗೆ ಇಳಿದಿವೆ. ಕಳೆದ ಚುನಾವಣೆಯಲ್ಲಿ ಸೋತಿದ್ದ ರಾಮೋಜಿ ಗೌಡ ಅವರು ಈ ಸಲವೂ ಪಕ್ಷದ ಅಭ್ಯರ್ಥಿ. ಇಲ್ಲಿ ಜೆಡಿಎಸ್‌–ಬಿಜೆಪಿ ನಡುವೆ ನೇರ ಪೈಪೋಟಿ ಇದ್ದರೂ ಕಾಂಗ್ರೆಸ್‌ ಅಭ್ಯರ್ಥಿ ಪಡೆಯುವ ಮತಗಳು ನಿರ್ಣಾಯಕ. ‘ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಹಾಗೂ ಹಲವು ಸಂಘಟನೆಗಳು ಬೆಂಬಲ ನೀಡಿದ್ದು, ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ’ ಎಂಬುದು ಅವರ ನುಡಿ.

ಕ್ಷೇತ್ರದಲ್ಲಿ 20 ಲಕ್ಷಕ್ಕೂ ಅಧಿಕ ಪದವೀಧರರು ಇದ್ದಾರೆ. ಆದರೆ, ಇಲ್ಲಿನ ಮತದಾರರು 65,354 ಮಾತ್ರ. 2012ರಲ್ಲಿ 1.10 ಲಕ್ಷ ಮತದಾರರು ಇದ್ದರು. ಈ ಸಲ ಮತದಾರರ ಸಂಖ್ಯೆ ಮತ್ತಷ್ಟು ಕಡಿಮೆಯಾಗಿದೆ.
*
ಕಣದಲ್ಲಿರುವ ಅಭ್ಯರ್ಥಿಗಳು

l  ಅಚ್ಚೇಗೌಡ ಶಿವಣ್ಣ-ಜೆಡಿಎಸ್‌
l  ಅ.ದೇವೇಗೌಡ-ಬಿಜೆಪಿ
l  ಪ್ರಕಾಶ್‌ ಕೆ-ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)
l  ರಾಮೋಜಿ ಗೌಡ-ಕಾಂಗ್ರೆಸ್‌
l  ವಿ.ಸುರೇಶ್‌ ಬಾಬು-ಭಾರತೀಯ ಜನತಾದಳ

ಪಕ್ಷೇತರ ಅಭ್ಯರ್ಥಿಗಳು 
l  ಅಜಯ್‌ ಎಂ.ಗೌಡ
l  ಸಿ.ಅಶ್ವತ್ಥನಾರಾಯಣ
l  ಅಂಕಯ್ಯ
l  ಬಿ.ಅಂಜನಾಮೂರ್ತಿ
l  ಕೆ.ಕುಮಾರಸ್ವಾಮಿ
l  ನೀರಜ್‌ ಕುಮಾರ್‌
l  ಎಂ.ಪ್ರಕಾಶ್‌
l  ಮೋಹನ್‌ ಟಿ.
l  ಕೆ.ರಾಮಕೃಷ್ಣ
l  ಡಾ.ಆರ್‌.ರಾಮಚಂದ್ರಪ್ಪ
l  ಎಂ.ವರದರಾಜು
l  ಆರ್‌.ಶ್ರೀಕಾಂತ್‌
l  ಡಾ.ಕೆ.‍ಪಿ.ಶ್ರೀನಾಥ್‌ 
l  ಕೆ.ಜಿ.ಶಂಕರ್‌
l  ಎಸ್‌.ಆರ್‌.ಸಿದ್ದಾರೆಡ್ಡಿ
l  ಡಾ.ಸುಬ್ರಹ್ಮಣ್ಯ ಸ್ವಾಮಿ
l  ಆರ್‌.ಸಂಪತ್‌
**
48,451
ಪುರುಷ ಮತದಾರರು

26,891
ಮಹಿಳಾ ಮತದಾರರು

12
ತೃತೀಯ ಲಿಂಗಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT