ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ರತ್ನ: ಆಯ್ಕೆಗೆ ಅಪಸ್ವರ

ಆರ್‌ಎಸ್‌ಎಸ್‌ ಸಿದ್ಧಾಂತ ಒಪ್ಪುವವರಿಗೆ ಮಾತ್ರ ಪ್ರಶಸ್ತಿ: ಟೀಕೆ
Last Updated 26 ಜನವರಿ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ಶುಕ್ರವಾರ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಭಾರತ ರತ್ನ ಮತ್ತು ಪದ್ಮ ಪುರಸ್ಕಾರ ಪ್ರಕಟಿಸಿದ ಬೆನ್ನಲ್ಲೇ ಅಪಸ್ವರಗಳು ಕೇಳಿ ಬಂದಿವೆ.

ನಾಗಪುರದ ಆರ್‌ಎಸ್‌ಎಸ್‌ ಪ್ರಧಾನ ಕಚೇರಿಯಲ್ಲಿ ವಿಜಯ ದಶಮಿಯಂದು ಭಾಷಣ ಮಾಡಿದ ಕಾರಣ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ಕೇಂದ್ರ ಸರ್ಕಾರ ‘ಭಾರತ ರತ್ನ’ ಪುರಸ್ಕಾರ ನೀಡಿ ಋಣ ತೀರಿಸಿದೆ ಎಂದು ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಅಲಿ ಟೀಕಿಸಿದ್ದಾರೆ.

ಮೋದಿ ಮತ್ತು ಮುಖರ್ಜಿ ಈ ಇಬ್ಬರಿಗೂ ಆಪ್ತರಾಗಿರುವ ಉದ್ಯಮಿಗಳು ಈ ಪ್ರಶಸ್ತಿಯಲ್ಲಿ ಪ್ರಭಾವ ಬೀರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಪ್ರಣವ್‌ ಮುಖರ್ಜಿ ಅವರಿಗಿಂತ ಬಿಜು ಪಟ್ನಾಯಕ್‌ ಮತ್ತು ಕಾನ್ಷಿರಾಂ ಅವರಂತಹ ರಾಜಕಾರಣಿಗಳು ಹೆಚ್ಚು ಅರ್ಹರಾಗಿದ್ದರು ಎಂದು ಅಲಿ ಅಭಿಪ್ರಾಯಪಟ್ಟಿದ್ದಾರೆ.

ಉದ್ಯಮಿಗಳ ಜತೆ ಒಡನಾಟ: ಉದ್ಯಮಿಗಳ ಜತೆ ಒಡನಾಟದಿಂದ ವಿವಾದಗಳಿಗೆ ಸಿಲುಕಿರುವ ಪ್ರಣವ್‌ ಮುಖರ್ಜಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿರುವುದು ನಿಜಕ್ಕೂ ಆಶ್ಚರ್ಯ ಮೂಡಿಸಿದೆ ಎಂದು ಆಮ್‌ ಆದ್ಮಿ ಪಕ್ಷ ಪ್ರತಿಕ್ರಿಯಿಸಿದೆ.

ಸುಭಾಷಚಂದ್ರ ಬೋಸ್‌, ಭಗತ್‌ ಸಿಂಗ್‌ ಮತ್ತು ರಾಮಮನೋಹರ ಲೋಹಿಯಾ ಅವರಂಥ ದಿಗ್ಗಜರಿಗೆ ಇನ್ನೂ ಭಾರತ ರತ್ನ ಗೌರವ ದೊರೆತಿಲ್ಲ. ಆದರೆ, ಆರ್‌ಎಸ್‌ಎಸ್‌ ಪ್ರಮುಖ ನಾನಾಜಿ ದೇಶಮುಖ್‌, ಬಿಜೆಪಿ ಅಭ್ಯರ್ಥಿಯಾಗಿದ್ದ ಗಾಯಕ ಭೂಪೆನ್‌ ಹಜಾರಿಕಾ ಮತ್ತು ಪ್ರಣವ್‌ ಮುಖರ್ಜಿ ಅವರಿಗೆ ಗೌರವ ದೊರೆತಿದೆ ಎಂದು ಆಮ್‌ ಆದ್ಮಿ ಸಂಸದ ಸಂಜಯ್‌ ಸಿಂಗ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಆರ್‌ಎಸ್‌ಎಸ್‌ ಕಚೇರಿಗೆ ಮುಖರ್ಜಿ ಅವರು ಭೇಟಿ ನೀಡಿದ್ದು ಒಳ್ಳೆಯ ಫಲವನ್ನೇ ನೀಡಿದೆ. ನಾಗಪುರ ಆರ್‌ಎಸ್‌ಎಸ್‌ ಪ್ರಧಾನ ಕಚೇರಿಗೆ ಭೇಟಿ ಮತ್ತು ದೇಶದ ಶ್ರೀಮಂತ ಉದ್ಯಮಿಗಳ ಒಡನಾಟ ಹೊಂದುವುದು ಭಾರತ ರತ್ನ ಪಡೆಯಲು ಸುಲಭದ ಮಾರ್ಗಗಳು’ ಎಂದು ದೆಹಲಿ ಮುಖ್ಯಮಂತ್ರಿಡ ಅರವಿಂದ್‌ ಕೇಜ್ರಿವಾಲ್‌ ಅವರ ಮಾಧ್ಯಮ ಸಲಹೆಗಾರ ನಾಗೇಂದರ್‌ ಶರ್ಮಾ ಟ್ವೀಟ್‌ ಮಾಡಿದ್ದಾರೆ.

ವಿವಾದಿತ ವಿಜ್ಞಾನಿಗೆ ಪುರಸ್ಕಾರ: ದಿಗ್ಭ್ರಮೆ

ತಿರುವನಂತಪುರ: ಬೇಹುಗಾರಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದ ಇಸ್ರೊದ ಮಾಜಿ ವಿಜ್ಞಾನಿ ನಂಬಿ ನಾರಾಯಣ ಅವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿರುವುದಕ್ಕೆ ಕೇರಳದ ನಿವೃತ್ತ ಡಿಜಿಪಿ ಟಿ.ಪಿ. ಸೇನ್‌ ಕುಮಾರ್‌ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ವಿದೇಶಗಳಿಗೆ ಇಸ್ರೊ ಕ್ರಯೋಜೆನಿಕ್‌ ರಹಸ್ಯಗಳನ್ನು ಮಾರಾಟ ಮಾಡಿದ ಮತ್ತು ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ನಂಬಿ ನಾರಾಯಣ ಮತ್ತು ಡಿ. ಶಶಿಕುಮಾರ್‌ ಅವರನ್ನು ಇಬ್ಬರು ಮಹಿಳೆಯರೊಂದಿಗೆ 1994ರಲ್ಲಿ ಬಂಧಿಸಲಾಗಿತ್ತು. ದೇಶದ್ರೋಹದಂತಹ ಗಂಭೀರ ಆರೋಪ ಹೊತ್ತ ವ್ಯಕ್ತಿಗೆ ಪದ್ಮಭೂಷಣ ಪ್ರಶಸ್ತಿ ನೀಡಿರುವುದು ‘ವಿಷದೊಂದಿಗೆ ಜೇನು ಬೆರಸಿದಂತೆ’ ಎಂದು ಸೇನ್‌ ಕುಮಾರ್‌ ಟೀಕಿಸಿದ್ದಾರೆ.

ಇಸ್ರೊ ಮತ್ತು ದೇಶದ ಬಾಹ್ಯಾಕಾಶ ಕ್ಷೇತ್ರಕ್ಕೆ ನಂಬಿ ನಾರಾಯಣ ಅವರ ಕೊಡುಗೆ ಏನೂ ಇಲ್ಲ. ಇಸ್ರೊ ಬೇಹುಗಾರಿಕೆ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ಏಕವ್ಯಕ್ತಿ ಆಯೋಗ ನೇಮಕ ಮಾಡಿದೆ. ಈ ಆಯೋಗ ಇನ್ನೂ ತನಿಖೆ ನಡೆಸುತ್ತಿದೆ. ಹೀಗಿರುವಾಗ ಇಂಥ ವಿವಾದಿತ ವ್ಯಕ್ತಿಗೆ ಸರ್ಕಾರ ಪ್ರಶಸ್ತಿ ನೀಡುವ ಅಗತ್ಯವೇನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

‘ಇದು ನನ್ನ ಮುಗ್ಧತೆಗೆ ಸಂದ ಗೌರವ. ನಾನು ಪ್ರಶಸ್ತಿಗಾಗಿ ಲಾಬಿ ಮಾಡಿರಲಿಲ್ಲ’ ಎಂದು ನಂಬಿ ನಾರಾಯಣ ಪ್ರತಿಕ್ರಿಯಿಸಿದ್ದಾರೆ.

‘ಪದ್ಮಶ್ರೀ’ ನಿರಾಕರಿಸಿದ ಪಟ್ನಾಯಕ್‌ ಸಹೋದರಿ

ಇಂಗ್ಲಿಷ್‌ ಲೇಖಕಿ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಸಹೋದರಿ ಗೀತಾ ಮೆಹ್ತಾ ಅವರು ಪದ್ಮಶ್ರೀ ಪುರಸ್ಕಾರವನ್ನು ನಿರಾಕರಿಸಿದ್ದಾರೆ.

‘ಪ್ರಶಸ್ತಿ ಪಡೆಯಲು ಸರಿಯಾದ ಸಮಯ ಇದಲ್ಲ’ ಎಂದು ಅವರು ಕಾರಣ ನೀಡಿದ್ದಾರೆ. ಇದರಿಂದ ಕೇಂದ್ರ ಸರ್ಕಾರ ಮುಜುಗರಕ್ಕೆ ಸಿಲುಕಿದೆ.

‘ಲೋಕಸಭೆ ಮತ್ತು ಒಡಿಶಾ ವಿಧಾನಸಭಾ ಚುನಾವಣೆ ಸಮೀಪ ಇರುವುದರಿಂದ ಪ್ರಶಸ್ತಿ ಸ್ವೀಕರಿಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇದು ನನಗೂ ಮತ್ತು ಸರ್ಕಾರಕ್ಕೂ ಮುಜುಗರ ತರಬಹುದು’ ಎಂದು ಅವರು ಹೇಳಿದ್ದಾರೆ.

ತಮ್ಮ ಹೆಸರನ್ನು ಪದ್ಮ ಪ್ರಶಸ್ತಿಗೆ ಪರಿಗಣಿಸಿರುವುದು ನಿಜಕ್ಕೂ ಗೌರವ ಮತ್ತು ಹೆಮ್ಮೆಯ ವಿಷಯ ಎಂದು ಅವರು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಲಂಡನ್‌ನಲ್ಲಿ ನೆಲೆಸಿರುವ ಗೀತಾ ಮೆಹ್ತಾ ಅವರು ಇಂಗ್ಲಿಷ್‌ನಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ.

‘ಸಂಘದ ಸಿದ್ಧಾಂತ ಒಪ್ಪಿದರೆ ಪ್ರಶಸ್ತಿ’

ಸಿದ್ಧಗಂಗಾ ಸ್ವಾಮೀಜಿಗೆ ಭಾರತ ರತ್ನ ನೀಡಬೇಕಿತ್ತು. ಆದರೆ, ಸಿದ್ಧಗಂಗಾ ಸ್ವಾಮೀಜಿ ನಿಲುವು ಮತ್ತು ಆರ್‌ಎಸ್‌ಎಸ್‌ ಸಿದ್ಧಾಂತಗಳು ಭಿನ್ನವಾಗಿದ್ದವು. ಇದರಿಂದ ಸರ್ಕಾರ ಅವರಿಗೆ ಭಾರತ ರತ್ನ ನೀಡಲಿಲ್ಲ ಎಂದು ಡ್ಯಾನಿಶ್‌ ಅಲಿ ಹೇಳಿದ್ದಾರೆ.

ಕೃಷಿತಜ್ಞ ಎಂ.ಎಸ್‌. ಸ್ವಾಮಿನಾಥನ್‌ ಅವರು ಪ್ರಣವ್‌ ಅವರಿಗಿಂತ ಹೆಚ್ಚು ಅರ್ಹರಾಗಿದ್ದರು ಎಂದು ರಾಮಚಂದ್ರ ಗುಹಾ ಅಭಿಪ್ರಾಯಪಟ್ಟಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಲಾಭಗಳಿಸಲು ಪ್ರಶಸ್ತಿ ನೀಡಲಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT