ಭಾನುವಾರ, ಫೆಬ್ರವರಿ 23, 2020
19 °C

ಕಾಶ್ಮೀರ ಸಹಜ ಸ್ಥಿತಿಗೆ ಮರಳಿದೆ: ಶಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜಮ್ಮು ಕಾಶ್ಮೀರ ಸಂಪೂರ್ಣ ಸಹಜ ಸ್ಥಿತಿಗೆ ಮರಳಿದ್ದು, ಸರ್ಕಾರಿ ಕಚೇರಿ ಹಾಗೂ ಶೈಕ್ಷಣಿಕ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಗೃಹಸಚಿವ ಅಮಿತ್ ಶಾ ಅವರು ರಾಜ್ಯಸಭೆಗೆ ಬುಧವಾರ ತಿಳಿಸಿದರು. ಸ್ಥಳೀಯಾಡಳಿತವು ಪರಿಸ್ಥಿತಿ ನೋಡಿಕೊಂಡು ಅಂತರ್ಜಾಲ ಸಂಪರ್ಕ ಕಲ್ಪಿಸಲಿದೆ ಎಂದರು. 

ಕಾಶ್ಮೀರದ ವಿಶೇಷಾಧಿಕಾರ ರದ್ದತಿ ಬಳಿಕ ಕಾಶ್ಮೀರದಲ್ಲಿ ಪೊಲೀಸರ ಗುಂಡೇಟಿನಿಂದ ಜನರು ಮೃತಪಟ್ಟ ಒಂದೂ ಪ್ರಕರಣ ವರದಿಯಾಗಿಲ್ಲ. ಕೆಲವು ಪ್ರದೇಶಗಳಲ್ಲಿ ಮಾತ್ರ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ಶಾ ಹೇಳಿದರು. 

ಪ್ರಶ್ನೋತ್ತರ ಅವಧಿಯಲ್ಲಿ ಸರಣಿ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ನ್ಯಾಯಾಲಯ, ಆರೋಗ್ಯ ಕೇಂದ್ರ, ಬ್ಯಾಂಕ್‌, ಮಾಧ್ಯಮ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿವೆ. ಉರ್ದು, ಇಂಗ್ಲಿಷ್ ಪತ್ರಿಕೆಗಳು ಮತ್ತು ಟಿ.ವಿ ಮಾಧ್ಯಮಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಪತ್ರಿಕೆಗಳ ಪ್ರಸರಣ ಸಂಖ್ಯೆ ಹೆಚ್ಚಳವಾಗಿದೆ’ ಎಂದರು. 

‘ಸ್ಥಳೀಯಾಡಳಿತದ ಶಿಫಾರಸು ಆಧರಿಸಿ, ಅಂತರ್ಜಾಲ ಸಂಪರ್ಕ ಕಲ್ಪಿಸುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಅಂತರ್ಜಾಲ ಸೇವೆ ಒದಗಿಸಲು ಕಾಲ ಪಕ್ವವಾಗಿದೆ ಎಂದು ಕಂಡಬಂದ ಕೂಡಲೇ ಸಂಪರ್ಕ ಮರುಸ್ಥಾಪಿಸಲಾಗುತ್ತದೆ. 

ಕಾಶ್ಮೀರ ಪರಿಸ್ಥಿತಿ: ಶಾ ವಿವರಣೆ

2018ರಲ್ಲಿ 802 ಕಲ್ಲುತೂರಾಟ ಪ್ರಕರಣ ದಾಖಲಾಗಿದ್ದವು, 2019ರಲ್ಲಿ ಈವರೆಗೆ 544 ಪ್ರಕರಣ ವರದಿಯಾಗಿವೆ. 20,114 ಶಾಲೆಗಳು ತೆರೆದಿದ್ದು, 50,537 ವಿದ್ಯಾರ್ಥಿಗಳ ಪೈಕಿ ಶೇ 99.48ರಷ್ಟು ಮಂದಿ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ.

ಯಾವುದೇ ಕುಗ್ರಾಮದಲ್ಲಿ ವೈದ್ಯಕೀಯ ಸೌಲಭ್ಯ ಇಲ್ಲ ಎಂಬ ಮಾಹಿತಿ ನೀಡಿದಲ್ಲಿ, 24 ಗಂಟೆಯೊಳಗೆ ಸೌಲಭ್ಯ ಕಲ್ಪಿಸುತ್ತೇನೆ. ಕಣಿವೆಯಲ್ಲಿ ಕಳೆದ 10 ವರ್ಷಗಳಲ್ಲಿ ಎಲ್‌ಪಿಜಿ, ಸೀಮೆಎಣ್ಣೆ ಮತ್ತು ಅಕ್ಕಿ ಮಾರಾಟ ಶೇ 16ರಷ್ಟು ಹೆಚ್ಚಳವಾಗಿದೆ

6 ಸಾವಿರ ಟನ್ ಸೇಬುಹಣ್ಣು ಖರೀದಿಸಲಾಗಿದೆ. ಈ ವರ್ಷ 22 ಲಕ್ಷ ಟನ್‌ ಇಳುವರಿ ನಿರೀಕ್ಷೆಯಿದ್ದು, ಮಾರಾಟಕ್ಕೆ ಸರ್ಕಾರ ನೆರವು ನೀಡಲಿದೆ

ತುರ್ತು ಪರಿಸ್ಥಿತಿ ಪ್ರಸ್ತಾಪ

ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಗೃಹಖಾತೆ ರಾಜ್ಯಸಚಿವ ಕಿಶನ್ ರೆಡ್ಡಿ, ‘ದೇಶದ ಹಿತಾಸಕ್ತಿಯಿಂದಾಗಿ ಕಾಶ್ಮೀರದಲ್ಲಿ ಕೆಲವು ಮುಖಂಡರನ್ನು ಬಂಧಿಸಲಾಗಿದೆ. ಆದರೆ ತುರ್ತು ಪರಿಸ್ಥಿತಿಯ ವೇಳೆ ಒಬ್ಬ ವ್ಯಕ್ತಿಯ ಕುರ್ಚಿಯನ್ನು ಉಳಿಸಲು 36 ಸಂಸದರನ್ನು ಬಂಧಿಸಲಾಗಿತ್ತು’ ಎಂದು ಹೇಳಿದ್ದಾರೆ. 

ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಸಮರ್ಥಿಸಿಕೊಂಡರು. 

ಆಗಸ್ಟ್ 4ರ ಬಳಿಕ ಕಾಶ್ಮೀರದಲ್ಲಿ ಮುಜಾಗ್ರತಾ ಕ್ರಮವಾಗಿ 5 ಸಾವಿರಕ್ಕೂ ಹೆಚ್ಚು ಪ್ರತ್ಯೇಕತಾವಾದಿಗಳು, ಕಲ್ಲು ತೂರಾಟ ಮಾಡುವವರು ಹಾಗೂ ಇತರರನ್ನು ಬಂಧಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿತು. 

ವ್ಯಾಪಾರಿಗಳಿಗೆ ಬೆದರಿಕೆ

* ಬೆದರಿಕೆ ಭಿತ್ತಿಪತ್ರ‍ದಿಂದ ಶ್ರೀನಗರದ ಕೆಲವು ಭಾಗ ಹಾಗೂ ಕಾಶ್ಮೀರದ ಕೆಲವು ಕಡೆಗಳಲ್ಲಿ ಬುಧವಾರ ಅಘೋಷಿತ ಬಂದ್‌ ವಾತಾವರಣ ಸೃಷ್ಟಿಯಾಗಿತ್ತು. ‘ಅಂಗಡಿಗಳ ಬಾಗಿಲು ತೆರೆದರೆ ಕೆಟ್ಟ ಪರಿಣಾಮ ಎದುರಿಸಲಿದ್ದೀರಿ’ ಎನ್ನುವ ಭಿತ್ತಿಪತ್ರಗಳು ಜನರಲ್ಲಿ ಭೀತಿ ಹುಟ್ಟಿಸಿದ್ದವು

* ಮೂರು ತಿಂಗಳಿನಿಂದ ಬಂಧನದಲ್ಲಿರುವ ಮುಖ್ಯವಾಹಿನಿಯ ರಾಜಕಾರಣಿಗಳನ್ನು ಇರಿಸಲಾಗಿರುವ ಹಾಸ್ಟೆಲ್‌ನಲ್ಲಿ ಮೂಲ ಸೌಕರ್ಯ ಇಲ್ಲ ಎಂದು ಅವರ ಕುಟುಂಬದವರು ಆರೋಪಿಸಿದ್ದಾರೆ. ಬಂಧಿತರನ್ನು ಹೋಟೆಲ್‌ನಿಂದ ಹಾಸ್ಟೆಲ್‌ಗೆ ಕಳೆದ ವಾರ ಸ್ಥಳಾಂತರಿಸಲಾಗಿತ್ತು

* ಯಶವಂತ್ ಸಿನ್ಹಾ ಅವರು ಸೇರಿದಂತೆ ಸಾರ್ವಜನಿಕರ ಗುಂಪೊಂದು ಕಣಿವೆಯ ವಸ್ತುಸ್ಥಿತಿ ಅರಿಯಲು ನ.22ರಿಂದ ನಾಲ್ಕು ದಿನ ಕಾಶ್ಮೀರ ಪ್ರವಾಸಕ್ಕೆ ನಿರ್ಧರಿಸಿದೆ

* ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವ ಭದ್ರತಾ ಪಡೆಗಳ ಆತ್ಮಸ್ಥೈರ್ಯ ಕುಂದಿಸುವ ಪೋಸ್ಟ್‌ ಹಂಚಿಕೊಂಡ ಆರೋಪದ ಮೇಲೆ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹುಮಾ ಪರ್ವೀನ್ ವಿರುದ್ಧ ಎಫ್‌ಐಆರ್ ದಾಖಲು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು