ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪಿಎಂ ಮೇಲೆ ಮುಗಿಬಿದ್ದ ಕಾಂಗ್ರೆಸ್‌, ಬಿಜೆಪಿ

Last Updated 2 ಜನವರಿ 2019, 20:16 IST
ಅಕ್ಷರ ಗಾತ್ರ

ತಿರುವನಂತಪುರ: ಶಬರಿಮಲೆ ದೇವಾಲಯಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿದ ಬೆನ್ನಿಗೇ ಕೇರಳದ ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ವಿರುದ್ಧ ವಿರೋಧ ಪಕ್ಷ ಕಾಂಗ್ರೆಸ್‌ ಮತ್ತು ಬಿಜೆಪಿ ಮುಗಿಬಿದ್ದಿವೆ.

ಮಹಿಳೆಯರು ದೇಗುಲದ ಒಳಗೆ ಹೋಗಿದ್ದರಿಂದ ಅಯ್ಯಪ್ಪ ಭಕ್ತರ ಭಾವನೆಗಳಿಗೆ ಘಾಸಿಯಾಗಿದೆ. ಮಹಿಳೆಯರಿಗೆ ಸಾಂಪ್ರದಾಯಿಕವಾಗಿ ನಿಷೇಧ ಇರುವ ದೇವಾಲಯಕ್ಕೆ ಮಹಿಳೆಯರನ್ನು ಕರೆದೊಯ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅಹಂ ಪ್ರದರ್ಶಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ರಮೇಶ್‌ ಚೆನ್ನಿತಲ ಹೇಳಿದ್ದಾರೆ.ಕೇರಳ ಸರ್ಕಾರವು ಅಯ್ಯಪ್ಪನ ಆಕ್ರೋಶಕ್ಕೆ ತುತ್ತಾಗಲಿದೆ ಎಂದು ಅಲ್ಲಿನ ಬಿಜೆಪಿ ಘಟಕದ ಅಧ್ಯಕ್ಷ ಪಿ.ಎಸ್‌. ಶ್ರೀಧರನ್‌ ಪಿಳ್ಳೆ ಹೇಳಿದ್ದಾರೆ. ಭಕ್ತರ ನಂಬಿಕೆಗಳಿಗೆ ಸರ್ಕಾರ ದ್ರೋಹ ಎಸಗಿದೆ ಎಂದೂ ಅವರು ಆರೋಪಿಸಿದ್ದಾರೆ.

‘ಮಹಿಳಾ ಗೋಡೆ ರಚನೆಯಾದ ಮರುದಿನವೇ ಮಹಿಳೆಯರನ್ನು ದೇಗುಲಕ್ಕೆ ಕರೆದೊಯ್ದವರು ಯಾರು? ಕಳೆದ ಡಿಸೆಂಬರ್‌ 24ರಂದು ದೇಗುಲ ಪ್ರವೇಶಿಸಲು ಯತ್ನಿಸಿದ ಬಳಿಕ ಅವರಿಬ್ಬರು ತಲೆಮರೆಸಿಕೊಂಡಿದ್ದರು. ಅವರು ಪೊಲೀಸ್‌ ರಕ್ಷಣೆಯಲ್ಲಿದ್ದರು ಎಂಬುದು ಸ್ಪಷ್ಟ. ಮುಖ್ಯಮಂತ್ರಿ ನಿರ್ದೇಶನದಂತೆ ಪೊಲೀಸರು ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಯ ಹಟಮಾರಿತನದ ಪರಿಣಾಮ ಇದು’ ಎಂದು ಚೆನ್ನಿತಲ ಹರಿಹಾಯ್ದರು.

ಶುದ್ಧೀಕರಣಕ್ಕೆ ದೇಗುಲವನ್ನು ಮುಚ್ಚಿದ್ದು ಶೇಕಡ ನೂರರಷ್ಟು ಸರಿ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ರಾಜ್ಯದಾದ್ಯಂತ ಆಂದೋಲನ ಆರಂಭಿಸಲಿದೆ ಎಂದು ತಿಳಿಸಿದರು.

ಅಯ್ಯಪ್ಪ ಭಕ್ತರು ಕೇರಳದಾದ್ಯಂತ ಎರಡು ದಿನ ಕೈಗೊಳ್ಳಲಿರುವ ‘ನಾಮಜಪ’ ಪ್ರತಿಭಟನೆಗೆ ಬೆಂಬಲ ನೀಡಲಾಗುವುದು ಎಂದು ಬಿಜೆಪಿ ಮುಖಂಡ ಎಂ.ಟಿ. ರಮೇಶ್‌ ಹೇಳಿದ್ದಾರೆ. ‘ಸಿಪಿಎಂನ ಕಾರ್ಯಸೂಚಿ ಈಗ ಸ್ಪಷ್ಟವಾಗಿದೆ. ಸಂಪ್ರದಾಯ ಮುರಿದ ಕಾರಣಕ್ಕಾಗಿಇದೇ ಮೊದಲ ಬಾರಿಗೆ ದೇಗುಲದ ಬಾಗಿಲು ಮುಚ್ಚಲಾಗಿದೆ. ಇದಕ್ಕೆ ಮುಖ್ಯಮಂತ್ರಿಯೇ ಹೊಣೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು‘ನಾಮಜಪ’ ಪ್ರತಿಭಟನೆಯ ನೇತೃತ್ವ ವಹಿಸಿರುವ ಶಬರಿಮಲೆ ಕರ್ಮ ಸಮಿತಿಯು ಆಗ್ರಹಿಸಿದೆ.

ವಿಧಾನಸಭೆ ಆವರಣ ರಣಾಂಗಣ

ಕೇರಳ ವಿಧಾನಸಭೆ ಕಾರ್ಯಾಲಯದ ಹೊರಭಾಗ ಬುಧವಾರ ಸುಮಾರು ಐದು ತಾಸು ಕಾಲ ಅಕ್ಷರಶಃ ಯುದ್ಧಭೂಮಿಯಾಗಿ ಪರಿವರ್ತನೆಯಾಗಿತ್ತು. ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಕಲ್ಲುತೂರಾಟ ಮಾಡಿ ಭಯದ ವಾತಾವರಣ ಸೃಷ್ಟಿಸಿದರು. ಉದ್ರಿಕ್ತ ಗುಂಪುಗಳನ್ನು ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಶೆಲ್‌ ಸಿಡಿಸಿದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪ್ರತಿಕೃತಿಗೆ ಮಲಪ್ಪುರಂನಲ್ಲಿ ಬೆಂಕಿ ಹಚ್ಚಲಾಯಿತು. ವಿಧಾನಸಭಾ ಕಾರ್ಯಾಲಯದಲ್ಲಿರುವ ಮುಖ್ಯಮಂತ್ರಿ ಕಚೇರಿಗೆ ನುಗ್ಗಲು ಯತ್ನಿಸಿದ ಬಿಜೆಪಿ ಮಹಿಳಾ ಮೋರ್ಚಾದ ನಾಲ್ವರು ಕಾರ್ಯಕರ್ತೆಯನ್ನು ಪೊಲೀಸರು ಬಂಧಿಸಿದ್ದಾರೆ. ವಿವಿಧ ಸ್ಥಳಗಳಲ್ಲಿ ಸಿಪಿಎಂ ಕಚೇರಿಗಳನ್ನು ಧ್ವಂಸ ಮಾಡಲಾಗಿದೆ. ದೇವಸ್ಥಾನಗಳ ಜತೆಯಲ್ಲಿ ಇರುವ ಮುಜರಾಯಿ ಇಲಾಖೆಯ ಕಚೇರಿಗಳಿಗೆ ಪ್ರತಿಭಟನಕಾರರು ಬೀಗ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂದ್‌ಗೆ ಆಕ್ರೋಶ

ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಹಲವು ಬಾರಿ ಬಂದ್‌ ನಡೆದಿದೆ. ಇದರಿಂದ ವರ್ತಕರು ಬೇಸತ್ತಿದ್ದಾರೆ. ಹಾಗಾಗಿ ಗುರುವಾರ ನೀಡಲಾದ ಬಂದ್‌ ಕರೆಯನ್ನು ಧಿಕ್ಕರಿಸಲು ಕೆಲವು ವ್ಯಾಪಾರ ಮತ್ತು ವರ್ತಕ ಸಂಘಟನೆಗಳು ನಿರ್ಧರಿಸಿವೆ.

***

ನಮ್ಮ ಚಳವಳಿಗೆ ದೊರೆತ ಬಹುದೊಡ್ಡ ಜಯ ಇದು. ಸಮಾನತೆಯ ಗೆಲುವು. ಮಹಿಳೆಯರಿಗೆ ಹೊಸ ವರ್ಷದ ಶುಭಾರಂಭ

-ತೃಪ್ತಿ ದೇಸಾಯಿ,ಭೂಮಾತಾ ಬ್ರಿಗೇಡ್‌ನ ನಾಯಕಿ

ಮಹಿಳೆಯರು ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ಇರಬೇಕು. ಈ ಪ್ರವೇಶ ರಹಸ್ಯವಾಗಿ ಅಲ್ಲ, ಬಹಿರಂಗವಾಗಿಯೇ ನಡೆಯಬೇಕು. ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕು

-ಎಸ್‌. ಸುಧಾಕರ ರೆಡ್ಡಿ,ಸಿಪಿಐ ಪ್ರಧಾನ ಕಾರ್ಯದರ್ಶಿ

ನಾವು ಬೆಟ್ಟ ಹತ್ತುವಾಗ ಯಾವುದೇ ಪ್ರತಿಭಟನೆ ಎದುರಾಗಲಿಲ್ಲ. ಭಕ್ತರಷ್ಟೇ ಬೆಟ್ಟದ ಹಾದಿಯಲ್ಲಿ ಇದ್ದರು. ಅವರು ನಮ್ಮನ್ನು ತಡೆಯಲಿಲ್ಲ. ಬೆಟ್ಟದ ತಳದಿಂದ ಪೊಲೀಸರು ರಕ್ಷಣೆ ಒದಗಿಸಿದರು

-ಬಿಂದು,ದೇಗುಲ ಪ್ರವೇಶಿಸಿದ ಮಹಿಳೆ

ಪ್ರತಿ ಮಹಿಳೆಗೂ ಅವರ ಇಷ್ಟದ ರೀತಿಯಲ್ಲಿ ಪೂಜಿಸುವ ಹಕ್ಕು ಇದೆ. ಈ ಇಬ್ಬರು ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಿಸಲು ಬಯಸಿದ್ದರು. ಅವರಿಗೆ ಭದ್ರತೆ ಒದಗಿಸುವ ಮೂಲಕ ಅದು ಸಾಧ್ಯವಾಗುವಂತೆ ಮಾಡಲಾಗಿದೆ

-ಬೃಂದಾ ಕಾರಟ್‌,ಸಿಪಿಎಂ ನಾಯಕಿ

ಶಬರಿಮಲೆಯಲ್ಲಿ ಮಾಡಿದ ತಪ್ಪಿಗೆಕಮ್ಯುನಿಸ್ಟ್‌ ಪಕ್ಷದ ಮುಖಂಡರು, ಅವರ ಮುಂದಿನ ಪೀಳಿಗೆಗಳು, ಕೇರಳ ಸರ್ಕಾರ ಯಾರೂ ಅಯ್ಯಪ್ಪ ಸ್ವಾಮಿಯ ಕೋಪದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ

-ಶ್ರೀಧರನ್‌ ಪಿಳ್ಳೆ,ಕೇರಳ ಬಿಜೆಪಿ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT