ಗುರುವಾರ , ನವೆಂಬರ್ 21, 2019
22 °C
ಇದೇ 18ರಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭ

ಕಾರ್ಯತಂತ್ರ: ಇಂದು ಪ್ರತಿಪಕ್ಷಗಳ ಸಭೆ

Published:
Updated:

ನವದೆಹಲಿ: ಸಂಸತ್‌ನ ಮುಂಗಾರು ಅಧಿವೇಶನ ಜುಲೈ 18ರಿಂದ ಆರಂಭವಾಗಲಿದ್ದು, ವಿವಿಧ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾರ್ಯತಂತ್ರ ರೂಪಿಸಲು ವಿರೋಧ ಪಕ್ಷಗಳು ಮುಂದಾಗಿವೆ.

ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಂಬಂಧ ರೂಪಿಸಬೇಕಾದ ಕಾರ್ಯತಂತ್ರ ಕುರಿತಂತೆ ಚರ್ಚಿಸಲು ವಿರೋಧ ಪಕ್ಷಗಳು ಜುಲೈ 16ರಂದು ಸಭೆ ಸೇರಲಿವೆ. ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳ ಮುಖಂಡರು ಸಂಸತ್‌ನಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಅವರ ನಿವಾಸದಲ್ಲಿ ಸಭೆ ಸೇರಲಿದ್ದಾರೆ.

ರಾಜ್ಯಸಭೆಯ ಉಪಸಭಾಪತಿ ಪಿ.ಜೆ.ಕುರಿಯನ್‌ ಅವರ ಅಧಿಕಾರಾವಧಿ ಜುಲೈ 1ರಂದು ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಉಪಸಭಾಪತಿ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸುವುದು ಸೋಮವಾರದ (ಜುಲೈ 16) ಸಭೆಯ ಕಾರ್ಯಸೂಚಿಯ ಪ್ರಮುಖ ಅಂಶವಾಗಿದೆ.

ಉಪಸಭಾಪತಿ ಸ್ಥಾನಕ್ಕೆ ಇತರ ಪಕ್ಷಗಳು ಸೂಚಿಸುವ ಅಭ್ಯರ್ಥಿಗೆ ಕಾಂಗ್ರೆಸ್‌ ಸಮ್ಮತಿ ಸೂಚಿಸುವ ಸಾಧ್ಯತೆಯೇ ಹೆಚ್ಚು. ಹಲವಾರು ಮುಖಂಡರ ಹೆಸರುಗಳು ಪ್ರಸ್ತಾಪಗೊಂಡಿವೆಯಾದರೂ, ತೃಣಮೂಲ ಕಾಂಗ್ರೆಸ್‌ ಮುಖಂಡ ಸುಖೇಂದು ಶೇಖರ್‌ ರಾಯ್‌ ಅವರ ಹೆಸರೇ ಮುಂಚೂಣಿಯಲ್ಲಿದೆ. ಇನ್ನೊಂದು ಮೂಲದ ಪ್ರಕಾರ, ಈ ಸ್ಥಾನಕ್ಕೆ ಎನ್‌ಸಿಪಿ ತನ್ನ ಅಭ್ಯರ್ಥಿಯನ್ನು ಸೂಚಿಸುವ ಸಾಧ್ಯತೆಯೂ ಇದೆ.

‘ಬ್ಯಾಂಕ್‌ಗಳಲ್ಲಿ ವಂಚನೆ ಪ್ರಕರಣಗಳ ಹೆಚ್ಚಳ, ಮಹಿಳೆಯರ ಸುರಕ್ಷತೆ, ರಾಷ್ಟ್ರೀಯ ಭದ್ರತೆಗೆ ಧಕ್ಕೆಯಂತಹ ಜ್ವಲಂತ ವಿದ್ಯಮಾನಗಳ ಬಗ್ಗೆ ಕೇಂದ್ರ ಸರ್ಕಾರದಿಂದ ವಿರೋಧ ಪಕ್ಷಗಳು ಈ ಅಧಿವೇಶನದಲ್ಲಿ ಸಮರ್ಪಕ ಉತ್ತರ ಬಯಸುತ್ತವೆ’ ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಉಪ ಸಭಾನಾಯಕ ಆನಂದ್‌ ಶರ್ಮಾ ತಿಳಿಸಿದ್ದಾರೆ.

ಅವಿಶ್ವಾಸ ಮಂಡನೆ: ಬೆಂಬಲ ಕೋರಿದ ಚಂದ್ರಬಾಬು ನಾಯ್ಡು

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯ ಕತ್ತಿ ಝಳಪಿಸಲು ಸಜ್ಜಾಗಿರುವ ಟಿಡಿಪಿ ಮುಖಂಡ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು, ಈ ಸಂಬಂಧ ಕಾಂಗ್ರೆಸ್‌ ಮತ್ತು ಬಿಜೆಪಿಯೇತರ ಪಕ್ಷಗಳ ಮೊರೆ ಹೋಗಿದ್ದಾರೆ.

ಆಂಧ್ರಪ್ರದೇಶಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡಲು ಎನ್‌ಡಿಎ ಸರ್ಕಾರ ನಿರಾಕರಿಸಿದ್ದೇ  ಅವಿಶ್ವಾಸ ಮಂಡನೆಗೆ ಕಾರಣ. ಪಕ್ಷ ಮಂಡಿಸುವ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಸೂಚಿಸುವಂತೆ ಕೋರಿ ಬರೆದಿರುವ ಪತ್ರದೊಂದಿಗೆ ಟಿಡಿಪಿ ಹಿರಿಯ ಮುಖಂಡರು ಈಗಾಗಲೇ ವಿವಿಧ ಪಕ್ಷಗಳ ನಾಯಕರನ್ನು ಭೇಟಿಯಾಗಿದ್ದಾರೆ. 

ಪ್ರತಿಕ್ರಿಯಿಸಿ (+)