ಏರ್‌ ಶೋ ಸ್ಥಳಾಂತರಕ್ಕೆ ಸಿದ್ದರಾಮಯ್ಯ, ಪರಮೇಶ್ವರ್‌ ಅಸಮಾಧಾನ

7

ಏರ್‌ ಶೋ ಸ್ಥಳಾಂತರಕ್ಕೆ ಸಿದ್ದರಾಮಯ್ಯ, ಪರಮೇಶ್ವರ್‌ ಅಸಮಾಧಾನ

Published:
Updated:

ಬೆಂಗಳೂರು: ನಗರದಲ್ಲಿ ನಡೆಯುವ ಏರ್‌ ಶೋ ಅನ್ನು ಲಖನೌಗೆ ಸ್ಥಳಾಂತರ ಮಾಡುವ ಯತ್ನದಲ್ಲಿ ರಕ್ಷಣ ಸಚಿವೆ ನಿರ್ಮಾಲಾ ಸೀತಾರಾಮನ್‌ ಅವರು ಇದ್ದಾರೆ ಎಂದು ಮಾಧ್ಯಮಗಳು ಮಾಡಿರುವ ವರದಿಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್‌ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ಷೇಪ ವ್ಯಕ್ತಪಡಿದ್ದಾರೆ. 

ರಾಜ್ಯದ ಜನರಿಗೆ ಮಾಡಿದ ಅವಮಾನ: ಡಿಸಿಎಂ
ಇಲ್ಲಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತರಾಮನ್‌ ಅವರು ಏರ್‌ ಶೋ ಅನ್ನು ಉತ್ತರಪ್ರದೇಶಕ್ಕೆ ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಂಡಿರುವುದು ನಿಜವೇ ಆದಲ್ಲಿ, ಅದು ರಾಜ್ಯದ ಜನರಿಗೆ ಅವರು ಮಾಡುವ ಅವಮಾನ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಪ್ರತಿಕ್ರಿಯಿಸಿದ್ದಾರೆ.

22 ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಏರ್‌ ಶೋ ನಡೆಯುತ್ತಿದೆ. ಈಗಲೂ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ನಾವು ಬದ್ಧರಿದ್ದೇವೆ. ಆದರೆ, ಯಾವ ಕಾರಣಕ್ಕಾಗಿ ಸ್ಥಳಾಂತರ ಮಾಡಲು ಯೋಚಿಸುತ್ತಿದ್ದಾರೆ ಎಂಬ ಬಗ್ಗೆ ಸರ್ಕಾರದೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ. ತೀರ್ಮಾನ ಅಂತಿಮವಾಗಿದ್ದರೆ, ರಾಜಕಾರಣ ದುರುದ್ದೇಶದಿಂದಲೇ ಹೀಗೆ ಮಾಡಿದ್ದಾರೆ ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಸ್ಥಳಾಂತರ ಕರ್ನಾಟಕಕ್ಕೆ ಮಾಡುವ ಗಾಯ: ಸಿದ್ದರಾಮಯ್ಯ
ಏರ್‌ ಶೋ ಅನ್ನು ಅಗತ್ಯ ಮೂಲ ಸೌಕರ್ಯ ಹೊಂದಿರುವ ನಮ್ಮ ಬೆಂಗಳೂರಿನಿಂದ ಸ್ಥಳಾಂತರಿಸುವುದಾಗಿ ವರದಿಗಳು ಬಂದಿವೆ. ಇದು ಬಿಜೆಪಿಯು ಈಚೆಗೆ ಹಲವು ರಕ್ಷಣಾ ಯೋಜನೆಗಳನ್ನು ಇಲ್ಲಿಂದ ಬೇರೆಡೆಗೆ ವರ್ಗಾಯಿಸುವ ಮೂಲಕ ಮಾಡಿರುವ ಗಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಎಚ್‌ಎಎಲ್‌ನಿಂದ ರಫೆಲ್‌ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಿದ್ದು ಕರ್ನಾಟಕದ ಜನರ ಮನದಲ್ಲಿ ಇನ್ನೂ ಹಸಿರಾಗಿದೆ ಎಂದು ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿದ್ದಾರೆ.  

ಕರ್ನಾಟಕದಿಂದ ರಾಜ್ಯಸಭೆಗೆ ಚುನಾಯಿತರಾದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮೊದಲು ಈ ನೆಲದ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ನಾವು ಒತ್ತಾಯಿಸುತ್ತೇವೆ. ಆದರೆ, ನಿರ್ಲಕ್ಷ್ಯತೋರುವುದು ರಾಜ್ಯಕ್ಕೆ ಮಾಡುವ ದ್ರೋಹ ಎಂದು ಅವರು ಹೇಳಿದ್ದಾರೆ.

ಏರ್‌ ಶೋ 1996ರಲ್ಲಿ ಮೊದಲಬಾರಿಗೆ ಬೆಂಗಳೂರಿನಲ್ಲಿ ನಡೆಯಿತು. ದೇಶದಲ್ಲಿ ನಡೆಯುವ ಅಪರೂಪದ ಶೋ ಇದಾಗಿದೆ. ಆರಂಭದಿಂದಲೂ ಬೆಂಗಳೂರಿನಲ್ಲಿ ನಡೆಯುತ್ತಿದೆ. ಆದರೆ, ಅಕ್ಟೋಬರ್‌ ಅಥವಾ ನವೆಂಬರ್‌ಗೆ ಲಖನೌನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ.  

ಅಲಿಘಡ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯಕ್ಕೆ ಏರ್ ಶೋ ಅನ್ನು ಸ್ಥಳಾಂತರಿಸಬೇಕು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಬಳಿ ಮನವಿ ಮಾಡಿದ್ದರು.

ರಾಜ್ಯಕ್ಕಾಗುವ ಅನ್ಯಾಯ ತಡೆಯಲು ಎಲ್ಲರೂ ಯತ್ನಿಸಿ
ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಏರ್‌ ಶೋ ಅನ್ನು ಲಖನೌಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ಸರಿಯಲ್ಲ. 1996ರಿಂದಲೇ ಬೆಂಗಳೂರಿನಲ್ಲಿ ಏರ್‌ ಶೋ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರಿಗೆ ಹೆಗ್ಗಳಿಕೆ ಬರಲು ಇದೂ ಒಂದು ಕಾರಣ. 

ಜೊತೆಗೆ, ಏರ್‌ಶೋ ಅನ್ನೇ ನಂಬಿ ಎಷ್ಟೋ ಕಂಪನಿಗಳು ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆ ಮಾಡಿವೆ. ಅವುಗಳಿಗೆ ಹೊಡೆತ ಬೀಳುತ್ತದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾದವರು. ರಾಜ್ಯದಿಂದ ಆಯ್ಕೆಯಾದ ಪ್ರತಿನಿಧಿಯಿಂದಲೇ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿರುವುದು ವಿಪರ್ಯಾಸ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಿಂದಲೂ ಕೇಳಿಬಂದಿವೆ.

ರಾಜ್ಯದ ಸಂಸದರು, ಸಚಿವರಾಗಿರುವವರು ಎಲ್ಲರೂ ಸೇರಿ ಈ ಪ್ರದರ್ಶನ ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡದಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂಬ ಒತ್ತಾಯಗಳೂ ಬಂದಿವೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 2

  Sad
 • 0

  Frustrated
 • 2

  Angry

Comments:

0 comments

Write the first review for this !