ಜೀತಪದ್ಧತಿ ಪ್ರಕರಣ: ‘ಹೆಂಡತಿ ಹೆರಿಗೆಗೂ ಆಸ್ಪತ್ರೆಗೆ ಕಳಿಸಲಿಲ್ಲ’

7
ಮುಖ್ಯಮಂತ್ರಿ ಜಿಲ್ಲೆಯಲ್ಲಿ ಮತ್ತೊಂದು ಜೀತಪದ್ಧತಿ ಪ್ರಕರಣ ಬೆಳಕಿಗೆ

ಜೀತಪದ್ಧತಿ ಪ್ರಕರಣ: ‘ಹೆಂಡತಿ ಹೆರಿಗೆಗೂ ಆಸ್ಪತ್ರೆಗೆ ಕಳಿಸಲಿಲ್ಲ’

Published:
Updated:
ಜೀತದಿಂದ ವಿಮುಕ್ತಿಗೊಳಿಸಲು ಬಂದ ಅಧಿಕಾರಿಗಳ ಕಾಲಿಗೆ ಬಿದ್ದ ಮಾದಪ್ಪ

ರಾಮನಗರ: ‘ನನ್ನ ಎಂಟು ಮತ್ತು ಒಂಬತ್ತನೇ ಮಕ್ಕಳು ಆ ಹೊಲದ ಪುಟ್ಟ ಗುಡಿಸಲಿನಲ್ಲೇ ಹುಟ್ಟಿದವು. ವೈದ್ಯರ ಉಪಚಾರ ದೂರದ ಮಾತು. ನಾನೇ ಕೈಯಾರೆ ನನ್ನ ಹೆಂಡತಿಗೆ ಹೆರಿಗೆ ಮಾಡಿಸಿದ್ದೇನೆ’

–ಹೀಗೆಂದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಡೆಂಕಣಿಕೋಟೆ ಪ್ರದೇಶದವರಾದ ಮಾದಪ್ಪ ತಾವೇ ಸೂಲಗಿತ್ತಿಯಾದ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಪಕ್ಕದಲ್ಲಿಯೇ ನಿಂತಿದ್ದ ಅವರ ಹೆಂಡತಿ ಕೆಂಚಮ್ಮಳ ಕಂಕುಳಲ್ಲಿ 10 ತಿಂಗಳ ಹಸುಗೂಸು ನಗುತಿತ್ತು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ದಶಕದಿಂದ ಪ್ರತಿನಿಧಿಸುತ್ತಿದ್ದ ರಾಮನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮರಳವಾಡಿ ಸಮೀಪದ ಹೊಲ ಹೊಂದರಲ್ಲಿ ಜೀತದಾಳುಗಳಾಗಿ ದುಡಿದು, ಅದರಿಂದ ಮುಕ್ತಿ ಪಡೆದ ಸಂತಸದಲ್ಲಿದ್ದ ಮಾದಪ್ಪ ಕಣ್ಣಲ್ಲಿ ನೀರು ತುಂಬಿಕೊಂಡರು. ಅಲ್ಲಿ ಕಳೆದ ನಾಲ್ಕು ವರ್ಷಗಳ ಕಾಲ ಬಿಡಿಗಾಸಿಗೆ ದುಡಿದದ್ದು ಹಾಗೂ ಯಾವುದೇ ಸೌಕರ್ಯ ಇಲ್ಲದೆ ಪಟ್ಟ ಪಾಡು ಹೇಳುತ್ತಾ ಹೋದರು.

‘ನಾಲ್ಕು ವರ್ಷದ ಹಿಂದೆ ಪರಿಚಿತರೊಬ್ಬರು ನಮ್ಮ ಕುಟುಂಬವನ್ನು ಕನಕಪುರ ತಾಲ್ಲೂಕಿನ ಮರಳವಾಡಿಗೆ ಕರೆತಂದರು. ವರ್ಷಕ್ಕೆ ₹65 ಸಾವಿರ ಕೂಲಿ ಕೊಡುವುದಾಗಿ ಭರವಸೆ ನೀಡಿದರು. ಆರಂಭದಲ್ಲಿ ₹20 ಸಾವಿರ ಕೊಟ್ಟದ್ದು ಬಿಟ್ಟರೆ, ಮಧ್ಯೆ ಮತ್ತೊಮ್ಮೆ ₹10 ಸಾವಿರ ಕೊಟ್ಟರು. ಆದರೆ, ಸಂಬಳ ಮಾತ್ರ ಕೊಡುತ್ತಿರಲಿಲ್ಲ’ ಎಂದರು.

‘ನಮಗೆ ಒಟ್ಟು 9 ಮಕ್ಕಳು. ಅವರಲ್ಲಿ ಇಬ್ಬರು ಸಣ್ಣವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಕೆಲಸ ಮಾಡಬೇಕಿತ್ತು. ಬೆಳಿಗ್ಗೆ 5ರಿಂದ ಸಂಜೆ 7ರವರೆಗೂ ನಾವು ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿದ್ದೇವು. ಮಕ್ಕಳು ಕುರಿ, ದನ ಮೇಯಿಸಬೇಕಿತ್ತು. ವಾಸಕ್ಕೆ ಪುಟ್ಟ ಗುಡಿಸಲು ಕೊಟ್ಟಿದ್ದರು. ಕತ್ತಲೆಯಲ್ಲಿ ಜೀವ ಭಯದಿಂದ ದಿನ ದೂಡುತ್ತಿದ್ದೆವು’ ಎಂದು ವಿವರಿಸಿದರು.

‘ತಿಂಗಳಿಗೆ ₹1–2ಸಾವಿರ ಕೊಡುತ್ತಿದ್ದರು. ಅದರಲ್ಲಿ ಮನೆಗೆ ಬೇಕಾದ ಸಾಮಗ್ರಿ ತರುತ್ತಿದ್ದೇವು. ಅದನ್ನು ಬಿಟ್ಟರೆ ಬೇರೆ ಹಣ ಕೊಡುತ್ತಿರಲಿಲ್ಲ. ಮನೆ ಮಂದಿಯೆಲ್ಲ ಕೆಲಸ ಮಾಡಿದರೂ ಸಂಬಳ ಎಂಬುದು ಇರಲಿಲ್ಲ. ನನ್ನ ತಾಯಿ ಸತ್ತ ಸಂದರ್ಭ ನಮ್ಮನ್ನು ಊರಿಗೆ ಹೋಗಲು ಬಿಡಲಿಲ್ಲ. ತುಂಬಾ ಕಾಡಿದ ಮೇಲೆ ನನ್ನೊಬ್ಬನನ್ನೇ ಹೋಗುವಂತೆ ಹೇಳಿದರು. ಆದರೆ, ಬಸ್‌ ಜಾರ್ಜ್‌ಗೂ ಹಣವನ್ನೂ ಕೊಡಲಿಲ್ಲ. ಕಡೆಗೆ ನಡೆದುಕೊಂಡೇ ಊರಿಗೆ ಹೋಗುವ ಹೊತ್ತಿಗೆ ನನ್ನ ತಾಯಿ ಶವವನ್ನು ಮಣ್ಣು ಮಾಡಿದ್ದರು’ಎಂದರು.

ಪ್ರಕರಣ ದಾಖಲು

ಜೀತಪದ್ಧತಿ ಅಡಿ ಕಾರ್ಮಿಕರನ್ನು ಕೆಲಸಕ್ಕೆ ಇರಿಸಿಕೊಂಡದ್ದು ಹಾಗೂ ಮಾನವ ಕಳ್ಳಸಾಗಣಿಕೆ ಆರೋಪದ ಮೇಲೆ ಜಮೀನಿನ ಮಾಲೀಕ, ಮರಳವಾಡಿ ಸಮೀಪದ ಉಯ್ಯಲಪ್ಪನಹಳ್ಳಿ ನಿವಾಸಿ ಪ್ಯಾರಸಾಬ್ ಎಂಬುವರ ವಿರುದ್ಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೀತಪದ್ಧತಿ ನಿರ್ಮೂಲನಾ ಕಾಯ್ದೆ ಹಾಗೂ ಬಾಲಕಾರ್ಮಿಕರ ವಿರೋಧಿ ಕಾಯ್ದೆಗಳ ವಿವಿಧ ಸೆಕ್ಷನ್‌ಗಳ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ.

ಮರಳವಾಡಿ ಉಪ ತಹಶೀಲ್ದಾರ್ ಮಹದೇವ್‌ ನೇತೃತ್ವದಲ್ಲಿ ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಪೊಲೀಸರು ಇಂಟರ್‌ನ್ಯಾಷನಲ್ ಜಸ್ಟೀಸ್‌ ಮಿಷನ್‌ ಸಂಘಟನೆ ಸಹಯೋಗದಲ್ಲಿ ಮಂಗಳವಾರ ಸಂಜೆ ದಾಳಿ ನಡೆಸಿ ಜಮೀನಿನಲ್ಲಿ ಒತ್ತೆ ಇರಿಸಿಕೊಂಡಿದ್ದ 9 ಮಕ್ಕಳು ಸೇರಿದಂತೆ ಒಟ್ಟು 11 ಮಂದಿಯನ್ನು ರಕ್ಷಣೆ ಮಾಡಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !