ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ ಪ್ರವೇಶ: ನಿಲಕ್ಕಲ್‌ನಲ್ಲಿ ಪ್ರತಿಭಟನಾಕಾರರನ್ನು ಚದುರಿಸಿದ ಪೊಲೀಸರು

Last Updated 17 ಅಕ್ಟೋಬರ್ 2018, 5:26 IST
ಅಕ್ಷರ ಗಾತ್ರ

ತಿರುವನಂತಪುರ:ಎಲ್ಲ ವಯಸ್ಸಿನ ಮಹಿಳೆಯರಿಗೆ ದೇವಾಲಯ ಪ್ರವೇಶಿಸುವ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟವಾದ ಬಳಿಕ ಇದೇ ಮೊದಲ ಬಾರಿಗೆ ಇಂದು ಸಂಜೆ ಐದು ಗಂಟೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತಿಂಗಳ ಪೂಜೆಗಾಗಿ ತೆರೆಯಲಿದೆ. ದೇವಾಲಯ ಪ್ರವೇಶಿಸುವ ಪ್ರಮುಖ ಮಾರ್ಗವಾಗಿರುವ ನಿಲಕ್ಕಲ್‌ನಲ್ಲಿ ಬುಧವಾರ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಋತುಮತಿ ವಯಸ್ಸಿನ ಹುಡುಗಿಯರು ಮತ್ತು ಮಹಿಳೆಯರನ್ನು ಶಬರಿಮಲೆ ಪ್ರವೇಶಿಸದಂತೆ ತಡೆಯುತ್ತಿದ್ದ ಭಕ್ತಾದಿಗಳನ್ನು ಪೊಲೀಸರು ಸ್ಥಳದಿಂದ ಚದುರಿಸಿದ್ದಾರೆ. ಶಬರಿಮಲೆಯಿಂದ 20 ಕಿ.ಮೀ. ದೂರದಲ್ಲಿರುವ ನಿಲಕ್ಕಲ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಪ್ರತಿಭಟನೆ ನಡೆಸುತ್ತಿದ್ದ ಶಬರಿಮಲೆ ಆಚಾರ ಸಂರಕ್ಷಣಾ ಸಮಿತಿ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಶಿಬಿರಗಳನ್ನು ತೆಗೆದು ಹಾಕಿದ್ದಾರೆ.ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಭಕ್ತರ ಗುಂಪು ಶಿಬಿರಗಳಲ್ಲಿ ಕುಳಿತು ಅಯ್ಯಪ್ಪ ಮಂತ್ರ ಜಪಿಸುತ್ತ ಪ್ರತಿರೋಧ ವ್ಯಕ್ತ ಪಡಿಸುತ್ತಿದ್ದರು.

ಬುಧವಾರ ಇದೇ ರಸ್ತೆಯಲ್ಲಿ ದೇವಾಲಯಕ್ಕೆ ತೆರಳುವಬಸ್‌ವೊಂದನ್ನು ಅಡ್ಡಪಡಿಸಿದ ಪ್ರತಿಭಟನಾಕಾರರು ಪೊಲೀಸರು ಮಧ್ಯ ಪ್ರವೇಶಿಸುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾರೆ. ದೇವಾಲಯ ಪ್ರವೇಶಿಸದಂತೆ ಜನರಿಗೆ ಅಡ್ಡಿಪಡಿಸಲು ಬಿಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ನಿಲಕ್ಕಲ್‌ ಪ್ರದೇಶವನ್ನು ಪೊಲೀಸರು ಪೂರ್ಣ ಹತೋಟಿಗೆ ತೆಗೆದುಕೊಂಡಿದ್ದು, ಮಹಿಳೆಯರ ಪ್ರವೇಶಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿದ್ದ ಹಲವು ಪ್ರತಿಭಟನಾಕಾರರನ್ನು ತಡೆದಿದ್ದಾರೆ.ಮಹಿಳಾ ಪೊಲೀಸರು ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ.

ಪಂಪಾ ನದಿಯ ಕಡೆಗೆ ತೆರಳುತ್ತಿದ್ದ ವಾಹನಗಳನ್ನು ನಿಲ್ಲಿಸಿ ಪ್ರತಿಭಟನಾಕಾರರು ಮಹಿಳೆಯರನ್ನು ಕೆಳಗಿಳಿಸುತ್ತಿರುವುದು ವರದಿಯಾದ ಬೆನ್ನಲೇ ಪೊಲೀಸರು ಕಠಿಣ ಕ್ರಮವಹಿಸಿದ್ದಾರೆ. ತಮಿಳುನಾಡು ಮೂಲದ 45 ಮತ್ತು 40 ವರ್ಷ ವಯಸ್ಸಿನ ದಂಪತಿಗಳು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪಂಪಾ ನದಿಯತ್ತ ಹೋಗುವ ಮಾರ್ಗದಲ್ಲಿ ಸೋಮವಾರ ರಾತ್ರಿ ಅವರನ್ನು ಬಸ್‌ನಿಂದ ಕೆಳಗಿಳಿಸಿ ಆತಂಕ ಸೃಷ್ಟಿಸಿದ್ದರು. ಮಾಧ್ಯಮದವರೂ ಸ್ಥಳದಿಂದ ತೆರಳುವಂತೆ ಶಬರಿಮಲೆ ಆಚಾರ ಸಂರಕ್ಷಣಾ ಸಮಿತಿಯ ಕಾರ್ಯಕರ್ತರು ತಾಕೀತು ಮಾಡಿದ್ದರು.

ದೇಶದ ವಿವಿಧ ಭಾಗಗಳಿಂದ ಭಕ್ತಾದಿಗಳು ನಿಲಕ್ಕಲ್‌ ಪ್ರವೇಶಿಸುತ್ತಿದ್ದಾರೆ. ಇನ್ನೂ ಕೆಲವು ಭಕ್ತಾದಿಗಳು ಪಂಪಾ ಶಿಬಿರದಲ್ಲಿ ಶಾಂತಿಯುತ ಪ್ರತಿಭಟನೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT