ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’, ‘ಕಮಲ’ ಅಭ್ಯರ್ಥಿಗಳು ಅದಲು– ಬದಲು!

ಇಬ್ಬರಿಗೂ ಮಾಡು ಇಲ್ಲವೇ ಮಡಿ ಸ್ಥಿತಿ; ಗೊಂದಲದಲ್ಲಿ ಮತದಾರರು
Last Updated 3 ಏಪ್ರಿಲ್ 2018, 12:16 IST
ಅಕ್ಷರ ಗಾತ್ರ

ಕಲಬುರ್ಗಿ: ಆರು ಬಾರಿ ಶಾಸಕನಾದರೂ ಸಚಿವ ಸ್ಥಾನ ನೀಡಿಲ್ಲ ಎಂಬ ಮುನಿಸಿನಿಂದ ಮಾಲೀಕಯ್ಯ ಗುತ್ತೇದಾರ ಅವರು ‘ಕೈ’ ಬಿಟ್ಟು ‘ಕಮಲ’ ಹಿಡಿಯಲು ಮುಂದಾಗುತ್ತಿದ್ದಂತೆಯೇ, ಅವರ ಸಾಂಪ್ರದಾಯಿಕ ಎದುರಾಳಿ ಎಂ.ವೈ.ಪಾಟೀಲ ಅವರು ‘ಕಮಲ’ ಬಿಟ್ಟು ‘ಕೈ’ ಹಿಡಿದಿದ್ದಾರೆ. ಹೀಗಾಗಿ ಈ ಚುನಾವಣೆ ಇಬ್ಬರಿಗೂ ‘ಮಾಡು ಇಲ್ಲವೇ ಮಡಿ’ ಎಂಬಂತಾಗಿದೆ. ಆದರೆ, ಮತದಾರರು ತಮ್ಮ ನಾಯಕರ ’ಅದಲು– ಬದಲು‘ ಆಟದಿಂದ ಗೊಂದಲಕ್ಕೆ ಒಳಗಾಗಿದ್ದಾರೆ. ‘ಅಫಜಲಪುರದಲ್ಲಿ ಪಕ್ಷ ಇಲ್ಲ, ಏನಿದ್ದರೂ ವ್ಯಕ್ತಿ. ಮಾಲೀಕಯ್ಯನೇ ಚಿಹ್ನೆ’ ಎಂದು ಹೇಳಿದ್ದ ಮಾಲೀಕಯ್ಯ, ಸಂಸದ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ‘ಕಾಂಗ್ರೆಸ್ ಬಗ್ಗು ಬಡಿಯಲು ಬಿಜೆಪಿ ಸೇರಿದ್ದೇನೆ’ ಎಂದೂ ಗುಡುಗಿದ್ದರು.

ಬಿಜೆಪಿ ಟಿಕೆಟ್ ನಂಬಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಎಂ.ವೈ.ಪಾಟೀಲ ಅವರು ಮಾಲೀಕಯ್ಯ ಸೇರ್ಪಡೆಯಿಂದ ತೀವ್ರವಾಗಿ ಅಸಮಾಧಾನಗೊಂಡರು. ತಕ್ಷಣ ಕಾರ್ಯಕರ್ತರ ಸಭೆ ಕರೆದು ಸಮಾಲೋಚನೆ ನಡೆಸಿದರು. ‘ಮಾಲೀಕಯ್ಯ ಜತೆ ಹೊಂದಾಣಿಕೆ ಸಾಧ್ಯವಿಲ್ಲ. ಮುಖಂಡರು, ಕಾರ್ಯಕರ್ತರು ಹೊಂದಾಣಿಕೆಗೆ ಸೂಚಿಸಿದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ’ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಇದೀಗ ಇಬ್ಬರೂ ತಾವು ವಿರೋಧಿಸುತ್ತಿದ್ದ ಪಕ್ಷಗಳಿಂದಲೇ ಕಣಕ್ಕೆ ಇಳಿಯಲು ಅಖಾಡ ಸಜ್ಜು ಮಾಡಿಕೊಳ್ಳುತ್ತಿದ್ದಾರೆ.

‘ಅಫಜಲಪುರದಲ್ಲಿ ಪಕ್ಷ ಮುಖ್ಯ ಅಲ್ಲ, ವ್ಯಕ್ತಿ ಮುಖ್ಯ. ಮಾಲೀಕಯ್ಯ ಗುತ್ತೇದಾರ ಮತ್ತು ಎಂ.ವೈ.ಪಾಟೀಲ ಪ್ರಬಲ ಎದುರಾಳಿಗಳು. ಮೂರನೇ ವ್ಯಕ್ತಿ ಪ್ರವೇಶಕ್ಕೆ ಅವಕಾಶವೇ ಇಲ್ಲ. ಇಬ್ಬರೂ ವೈಯಕ್ತಿಕವಾಗಿ ತಮ್ಮದೇಯಾದಂತಹ ವೋಟ್ ಬ್ಯಾಂಕ್ ಹೊಂದಿದ್ದಾರೆ. ಹೀಗಾಗಿ ಅವರಿಬ್ಬರ ಬೆಂಬಲಿಗರು ಅವರ ಹಿಂದೆಯೇ ಇರುತ್ತಾರೆ. ಆದಾಗ್ಯೂ ಮಾಲೀಕಯ್ಯ ಎಂಬ ಕಾರಣಕ್ಕೆ ಶೇ 10ರಷ್ಟು ದಲಿತ ಮತಗಳು ಬಿಜೆಪಿ ಪಾಲಾಗಬಹುದು’ ಎಂದು ಕಾಂಗ್ರೆಸ್‌ ಪಕ್ಷದ ಮೂಲಗಳು ಹೇಳುತ್ತವೆ.‘ಲಂಬಾಣಿ ಮತ್ತು ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ.

ನಿರ್ಣಾಯಕ ಯಾರು?

ಅಫಜಲಪುರ ಮತಕ್ಷೇತ್ರದಲ್ಲಿ ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತ ಮತಗಳೇ ನಿರ್ಣಾಯಕವಾಗಿವೆ. ಕೋಲಿ ಅಂದಾಜು 35ಸಾವಿರ, ದಲಿತ 28ಸಾವಿರ, ಕುರುಬ ಮತ್ತು ಮುಸ್ಲಿಂ ತಲಾ 25ಸಾವಿರ ಮತದಾರರಿದ್ದರೆ, ಪಂಚಮಸಾಲಿ ಮತ್ತು ಆದಿ–ದೀಕ್ಷ ಕ್ರಮವಾಗಿ 22ಸಾವಿರ ಹಾಗೂ 14ಸಾವಿರ ಮತದಾರರು ಇದ್ದಾರೆ. ಇವರನ್ನು ಹೊರತುಪಡಿಸಿದರೆ ಗಾಣಿಗ 12ಸಾವಿರ, ಮರಾಠ 8ಸಾವಿರ ಮತ್ತು ಲಂಬಾಣಿ ಅಂದಾಜು 12ಸಾವಿರ ಮತದಾರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT