ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿನಿಮಾದವರು ಮಂಗಳ ಗ್ರಹದಿಂದ ಬಂದವರಲ್ಲ’

‘ಕೊಳಗೇರಿಗಳಿಗೆ ಹೋಗಿ ರಫೇಲ್ ಬಗ್ಗೆ ಮಾತನಾಡುವುದಿಲ್ಲ’
Last Updated 20 ಏಪ್ರಿಲ್ 2019, 19:19 IST
ಅಕ್ಷರ ಗಾತ್ರ

ಜನರಿಗೆ ಹೇಗಾದರೂ ನೆರವಾಗಬೇಕು ಎಂಬ ಹಂಬಲದಿಂದ ರಾಜಕೀಯಕ್ಕೆ ಬಂದೆ ಎನ್ನುತ್ತಾರೆ ರಾಜಕಾರಣಿಯಾಗಿ ಬದಲಾಗಿರುವ ರಂಗೀಲಾ ಬೆಡಗಿ ಊರ್ಮಿಳಾ ಮಾತೋಂಡ್ಕರ್. ಇವರು ಮುಂಬೈ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ತಾರಾ ಜನಪ್ರಿಯತೆಯು ಮತಗಳಾಗಿ ಪರಿವರ್ತನೆಯಾಗುತ್ತೆಯೇ ಎಂಬುದು ಪ್ರಶ್ನೆ. ‘ಪ್ರಜಾವಾಣಿ’ಯ ಮೃತ್ಯುಂಜಯ ಬೋಸ್ ಅವರಿಗೆ ಊರ್ಮಿಳಾ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ

* ರಾಜಕೀಯದ ಈ ದಿನಗಳು ಹೇಗನ್ನಿಸುತ್ತಿವೆ?
ಸಿನಿಮಾದಲ್ಲಿ ವೇಳಾಪಟ್ಟಿ ಇರುತ್ತದೆ. ರಾಜಕೀಯದಲ್ಲಿ ಇಲ್ಲ. ಸಿನಿಮಾದಲ್ಲಿ ಸ್ಕ್ರಿಪ್ಟ್ ಇದ್ದರೆ, ರಾಜಕೀಯದಲ್ಲಿ ಅದಿಲ್ಲ. ಸಿನಿಮಾಕ್ಕೆ ನೀಡಿದಂತೆ ರಾಜಕೀಯಕ್ಕೂ ಶೇಕಡಾ 100ರಷ್ಟು ನ್ಯಾಯ ನೀಡುತ್ತೇನೆ.

* ಸಿನಿಮಾದಿಂದ ರಾಜಕೀಯಕ್ಕೆ ಹೊರಳಿಕೊಂಡಾಗ ಸಮಯ ಕಡಿಮೆಯಿತ್ತು. ಕಷ್ಟ ಎನಿಸಲಿಲ್ಲವೇ?
ಹಾಗೇನಿಲ್ಲ, ನಾನು ಒಳ್ಳೆಯ ವಿದ್ಯಾರ್ಥಿನಿ. ರಾಜಕೀಯ ವಿಷಯಗಳು ನನಗೆ ಗೊತ್ತು. ಭಾರತೀಯ ಇತಿಹಾಸ, ಸಂಸ್ಕೃತಿ, ಸಾಮಾಜಿಕ ಸ್ಥಿತಿಗತಿಗಳ ಅರಿವು ನನಗಿದೆ. ಜನರೊಂದಿಗೆ ಬೆರೆಯುವುದು ತಿಳಿದಿದೆ. ಸಿನಿಮಾದವರು ಮಂಗಳಗ್ರಹದಿಂದ ಬಂದವರೇನೂ ಅಲ್ಲವಲ್ಲ! ಈ ಅಂತರವನ್ನು ನಾನು ತುಂಬಿದ್ದೇನೆ.

* ಬೆದರಿಕೆ ಇದೆ ಎಂದು ನೀವು ಹೇಳಿದ್ದೀರಿ...
ಬೊರಿವಿಲಿಯಲ್ಲಿ ಇತ್ತೀಚೆಗೆ ನಡೆದ ಘಟನೆ ಭಯಾನಕವಾಗಿತ್ತು. ಆ ಬಳಿಕ ನನಗೆ ಭಯ ಶುರುವಾಯಿತು.ದಾಭೋಲ್ಕರ್, ಪಾನ್ಸರೆ, ಗೌರಿ ಲಂಕೇಶ್ ರೀತಿ ನನ್ನನ್ನೂ ಗುರಿ ಮಾಡಲಾಗಿದೆಯೇ ಎಂಬ ಭೀತಿ ಕಾಡಿತ್ತು. ಏನೇ ಇದ್ದರೂ ನನ್ನ ಕೆಲಸ ಮುಂದುವರಿಸುತ್ತೇನೆ. ದಾಳಿ ಎಂಬುದಕ್ಕೆ ಈಗ ನಾನಾ ಅರ್ಥಗಳಿವೆ. ಅದು ಕೇವಲ ದೈಹಿಕ ಹಲ್ಲೆಯಷ್ಟೇ ಆಗಿ ಉಳಿದಿಲ್ಲ. ಟ್ರೋಲ್ ಮಾಡುವುದೂ ದಾಳಿಯೇ. ವೈಯಕ್ತಿಕ ದಾಳಿಗಳು ಕೊಳಕಿನಿಂದ ಕೂಡಿರುತ್ತವೆ.

* ನೀವು ಯಾವ ವಿಷಯಗಳತ್ತ ಗಮನ ಹರಿಸುತ್ತೀರಿ?
ನನ್ನ ಕ್ಷೇತ್ರ ಭಾರತದ ವಾಣಿಜ್ಯ ರಾಜಧಾನಿ. ನೀರಿನ ಸಮಸ್ಯೆ ಇಲ್ಲಿದೆ. ಇದು ಸ್ಮಾರ್ಟ್ ಸಿಟಿಯಾಗಿದ್ದರೂ ಸಾಕಷ್ಟು ಅಭಿವೃದ್ಧಿ ಅಗತ್ಯವಿದೆ. ಕೊಳೆಗೇರಿಗಳಿಗೆ ಹೋಗಿ ರಫೇಲ್ ಬಗ್ಗೆ ಮಾತನಾಡುವುದಿಲ್ಲ. ಸ್ಥಳೀಯರಿಗೆ ಹತ್ತಿರವಾಗುವ ವಿಷಯಗಳನ್ನು ಹೇಳುತ್ತೇನೆ. ನಾನು ಪ್ರತಿನಿಧಿಸುವ ಜನರ ಅಗತ್ಯಗಳೇನು ಎಂಬುದರ ಕುರಿತೇ ಮಾತನಾಡುತ್ತೇನೆ.

* ಸೇನೆಯ ಶೌರ್ಯ, ಯೋಧರ ತ್ಯಾಗವನ್ನು ಬಿಜೆಪಿಯು ಪ್ರಚಾರಕ್ಕೆ ಬಳಸಿಕೊಂಡಿದೆಯಲ್ಲಾ?
ಇದು ದುರದೃಷ್ಟಕರ. ಸೇನೆಯು ಪ್ರಚಾರದ ಸರಕಲ್ಲ. ಬಿಜೆಪಿಯ ಜಾತೀಯತೆ, ಕೋಮುವಾದ ಕೆಲಸ ಮಾಡುವುದಿಲ್ಲ. ಮತ ಪಡೆಯಲೆಂದೇ ಅವರು ಸೇನೆಯನ್ನು ಪ್ರಚಾರಕ್ಕೆ ಎಳೆದು ತಂದಿದ್ದಾರೆ.

* ಚಿತ್ರ ತಾರೆಯರೇಕೆ ದಿಢೀರ್ ಎಂದು ರಾಜಕೀಯಕ್ಕೆ ಸೇರುತ್ತಾರೆ?
ನನ್ನ ವಿಚಾರದಲ್ಲಿ ಇದು ಸುಳ್ಳು. ನಾನು ಇಲ್ಲಿಗೆ ಹಾಗೆ ಬಂದವಳಲ್ಲ. ಕೆಲಸ ಮಾಡುವ ಉದ್ದೇಶದಿಂದ ರಾಹುಲ್ ಗಾಂಧಿ ನಾಯಕತ್ವದ ಕಾಂಗ್ರೆಸ್ ಪಕ್ಷವನ್ನು ಸೇರಿದ್ದೇನೆ. ಅಧಿಕಾರದಲ್ಲಿ ಇಲ್ಲದ ಪಕ್ಷವನ್ನು ನಾನು ಆಯ್ಕೆ ಮಾಡಿಕೊಂಡೆ. ತಾರಾ ವರ್ಚಸ್ಸು ಬದಿಗಿಟ್ಟು ಬಂದಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT