ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಿಂಗಾಯತ, ಒಳಮೀಸಲು ವಿವಾದದಿಂದ ದೂರವಾಗಿ’

Last Updated 13 ಜೂನ್ 2018, 19:41 IST
ಅಕ್ಷರ ಗಾತ್ರ

ನವದೆಹಲಿ: ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಶಿಫಾರಸಿನ ಕ್ರಮ ಮತ್ತು ಪರಿಶಿಷ್ಟ ಜಾತಿಗಳಿಗೆ ಒಳಮೀಸಲು ನೀಡಿಕೆಯ ವಿವಾದಗಳಿಂದ ರಾಜ್ಯದ ಸಮ್ಮಿಶ್ರ ಸರ್ಕಾರ ಹಾಗೂ ಕಾಂಗ್ರೆಸ್‌ ಪಕ್ಷ ದೂರ ಉಳಿಯಬೇಕು ಎಂದು ಸಂಸದ ಎಂ.ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು.

ಈ ಎರಡೂ ಕಾರಣಗಳಿಂದಾಗಿಯೇ ಕಾಂಗ್ರೆಸ್ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಸಾಕಷ್ಟು ಸ್ಥಾನಗಳನ್ನು ಕಳೆದುಕೊಂಡಿತು ಎಂದು ಅವರು ಬುಧವಾರ 'ಪ್ರಜಾವಾಣಿ'ಗೆ ತಿಳಿಸಿದರು.

'ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನ ಈ ವಿಷಯಗಳಿಂದ ದೂರವಿರುವುದಾಗಿ ಸಾರ್ವಜನಿಕವಾಗಿಸ್ಪಷ್ಟೀಕರಣ ನೀಡಬೇಕು.ಪ್ರತ್ಯೇಕ ಧರ್ಮದ ವಿಚಾರದಿಂದಾಗಿಯೇ ಕಾಂಗ್ರೆಸ್‌ 25 ರಿಂದ 30 ಸ್ಥಾನಗಳನ್ನು ಕಳೆದುಕೊಂಡಿತು.  ಬಿಜೆಪಿ ಈ ವಿಷಯವನ್ನು ಬಹಳ ಪರಿಣಾಮಕಾರಿಯಾಗಿ ಬಳಸಿಕೊಂಡಿತು. ಲಿಂಗಾಯತ-ವೀರಶೈವ ಧರ್ಮವನ್ನು ಕಾಂಗ್ರೆಸ್‌ ಒಡೆಯಿತಲ್ಲದೆ ಹಿಂದೂ ಸಮುದಾಯದಲ್ಲಿ ಒಡಕು ಮೂಡಿಸಿತು ಎಂದು ದೊಡ್ಡ ಪ್ರಚಾರ ನಡೆಸಿತು. ಇನ್ನು ಮುಂದೆ ಇಂತಹ ಅಪಪ್ರಚಾರ ನಡೆಸಿ ರಾಜಕೀಯ ಲಾಭ ಪಡೆಯುವ ಅವಕಾಶವನ್ನು ಬಿಜೆಪಿಗೆ ನಾವು ನೀಡಕೂಡದು' ಎಂದು ಅವರು ಒತ್ತಾಯಿಸಿದರು.

'ಎಲ್ಲ ಪರಿಶಿಷ್ಟ ಜಾತಿಗಳನ್ನೂ ಪಕ್ಷವು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಈ ಆಯೋಗದ ವರದಿಯ ಜಾರಿ ಯಾಕೆ ಕಷ್ಟ ಎಂಬುದನ್ನು ಎಡಗೈ ಒಳಪಂಗಡಕ್ಕೆ ಮನವರಿಕೆ ಮಾಡಿಕೊಡಬೇಕು. ಈ ವರದಿ ಕುರಿತ ಡೋಲಾಯಮಾನ ನಿಲುವಿನ ಕಾರಣ ಕಳೆದ ಚುನಾವಣೆಯಲ್ಲಿ ಎರಡೂ ಒಳಪಂಗಡಗಳ (ಎಡಗೈ- ಬಲಗೈ) ಮತಗಳನ್ನು ಕಾಂಗ್ರೆಸ್ ಕಳೆದುಕೊಂಡಿತು. ಜಾತಿ ಮತ್ತು ಧರ್ಮದ ವಿಚಾರಗಳಿಗೆ ಪಕ್ಷ ಕೈ ಹಾಕಲೇಕೂಡದು. ಈ ವಿಚಾರವನ್ನು ಆಯಾ ಜಾತಿ-ಧರ್ಮಗಳ ನಾಯಕರಿಗೆ ಬಿಟ್ಟುಬಿಡಬೇಕು. ಈ ಹಿಂದಿನಂತೆ ಪಕ್ಷವು ಎಲ್ಲ ಜಾತಿ ಧರ್ಮಗಳನ್ನು ಪ್ರತಿನಿಧಿಸಬೇಕು. ಸಣ್ಣಪುಟ್ಟ ಜಾತಿಗಳು- ಸಮುದಾಯಗಳು ಪಕ್ಷದಿಂದ ದೂರ ಸರಿಯುತ್ತಿವೆ. ಅವುಗಳ ನಾಯಕರಿಗೆ ಸ್ಥಾನಮಾನ ನೀಡಿ ವಿಶ್ವಾಸ ಗಳಿಸಿಕೊಳ್ಳುವ ಕೆಲಸ ಕೂಡಲೇ ಆಗಬೇಕಿದೆ' ಎಂದು ಮೊಯಿಲಿ ಹೇಳಿದರು.

ಮಾನ್ಯತೆಗೆ ಒತ್ತಾಯಿಸಿ ದೆಹಲಿ ಚಲೋ

ಬೀದರ್: ‘ಕೇಂದ್ರ ಸರ್ಕಾರವು ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಹಿಂದೇಟು ಹಾಕಿದರೆ ದೆಹಲಿ ಚಲೋ ಹೋರಾಟ ನಡೆಸಲಾಗುವುದು’ ಎಂದು ಜಿಲ್ಲಾ ಲಿಂಗಾಯತ ಸಮನ್ವಯ ಸಮಿತಿಯ ಸಂಚಾಲಕ ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಹೇಳಿದರು.

‘ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯ ಪ್ರಸ್ತಾವವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ವಾಪಸ್‌ ಕಳಿಸಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಲಿಂಗಾಯತ ಧರ್ಮದ ವೈಶಿಷ್ಟ್ಯವನ್ನು ಮನವರಿಕೆ ಮಾಡಲು ಶೀಘ್ರ 30 ಮಠಾಧೀಶರನ್ನು ಒಳಗೊಂಡ ನಿಯೋಗವನ್ನು ದೆಹಲಿಗೆ ಕರೆದೊಯ್ಯಲಾಗುವುದು’ ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT