ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ

ಸಿಬ್ಬಂದಿ ನೇಮಕಾತಿ ರದ್ದಾಗುವ ಭೀತಿ
Last Updated 3 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ದಿನವೇ (ಮಾರ್ಚ್ 27) ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ‌ನೇಮಕಾತಿ ಪ್ರಕ್ರಿಯೆ ನಡೆದಿದೆ.

ಒಂಬತ್ತು ಜನ ಬೋಧಕ ಹಾಗೂ ಆರು ಜನ ಬೋಧಕೇತರ ಸಿಬ್ಬಂದಿ ನೇಮಕಾತಿ ಸಂಬಂಧ, ವಿಶ್ವವಿದ್ಯಾಲಯವು 2017ರ ಸೆಪ್ಟೆಂಬರ್‌ 27ರಂದು ಅಧಿಸೂಚನೆ ಹೊರಡಿಸಿತ್ತು. ಮಾರ್ಚ್‌ 25ರಂದು ಪರೀಕ್ಷೆ ನಡೆಸಿ, ಮರುದಿನ ಸಂದರ್ಶನ ಪ್ರಕ್ರಿಯೆ ಮುಗಿಸಲಾಗಿದೆ. 27ರಂದು ಬೆಳಿಗ್ಗೆ 11ಕ್ಕೆ ವಿ.ವಿ. ಸಿಂಡಿಕೇಟ್‌ ತುರ್ತು ಸಭೆ ಕರೆದು ಒಪ್ಪಿಗೆ ಪಡೆಯಲಾಗಿದೆ. ನಂತರ ಅದೇ ದಿನ ಎಲ್ಲ 15 ಜನರಿಗೂ ನೇಮಕಾತಿ ಆದೇಶ ಪತ್ರ ನೀಡಲಾಗಿದೆ. ಎಲ್ಲರೂ ಮಾರ್ಚ್‌ 28ರಂದು ಕೆಲಸಕ್ಕೂ ಹಾಜರಾಗಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾದ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಅದೇ ಸಮಯದಲ್ಲಿ ಸಿಂಡಿಕೇಟ್‌ ಸಭೆ ನಡೆಸಿ, ಗಡಿಬಿಡಿಯಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿರುವುದಕ್ಕೆ ಪರೀಕ್ಷೆಗೆ ಹಾಜರಾಗಿದ್ದ ಕೆಲವು ಅಭ್ಯರ್ಥಿಗಳು ಅನುಮಾನ ವ್ಯಕ್ತಪಡಿಸಿದ್ದು, ಈ ಸಂಬಂಧ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ಅವರಿಗೆ ದೂರು ಕೊಟ್ಟಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಯನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ನೇಮಕ ಪ್ರಕ್ರಿಯೆ ಕುರಿತು ದೂರು ಬಂದಿರುವುದು ನಿಜ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಎಷ್ಟು ಗಂಟೆಗೆ ನೇಮಕಾತಿ ಆದೇಶ ಪತ್ರ ಕೊಡಲಾಗಿದೆ ಎಂದು ಮಾಹಿತಿ ಕಲೆ ಹಾಕಲು ಉಪವಿಭಾಗಾಧಿಕಾರಿ ಗಾರ್ಗಿ ಜೈನ್‌ ಅವರಿಗೆ ಸೂಚಿಸಿದ್ದೇನೆ. ಅವರು ಕೊಡುವ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಗಾರ್ಗಿ ಜೈನ್‌ ಅವರು ಮಂಗಳವಾರ ಮಧ್ಯಾಹ್ನ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ನೇಮಕ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ಕಲೆ ಹಾಕಿದ್ದಾರೆ. ಈ ವಿಷಯವನ್ನು ಕುಲಸಚಿವ ಡಿ. ಪಾಂಡುರಂಗಬಾಬು ಅವರು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

ಪಾಂಡುರಂಗಬಾಬು ಅವರು ವಿ.ವಿ. ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

‘2017ರ ಸೆಪ್ಟೆಂಬರ್‌ನಲ್ಲೇ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಪೂರ್ವ ನಿಗದಿಯಂತೆ ಪರೀಕ್ಷೆ, ಸಂದರ್ಶನ ಪ್ರಕ್ರಿಯೆ ನಡೆದಿದೆ. ನಿಯಮದಂತೆ ಹತ್ತು ದಿನಗಳ ಮೊದಲೇ ಸಿಂಡಿಕೇಟ್‌ ಸಭೆಯ ಕುರಿತು ಎಲ್ಲ ಸದಸ್ಯರಿಗೂ ಪತ್ರ ಮುಖೇನ ತಿಳಿಸಲಾಗಿತ್ತು. ಆರು ತಿಂಗಳಿಂದ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಹೀಗಿರುವಾಗ ನೀತಿ ಸಂಹಿತೆ ಉಲ್ಲಂಘನೆಯ ಪ್ರಶ್ನೆಯೇ ಎದುರಾಗುವುದಿಲ್ಲ’ ಎಂದು ತಿಳಿಸಿದ್ದಾರೆ.
**
ಮಾರ್ಚ್‌ 27ರಂದು ಬೆಳಿಗ್ಗೆ 11ಕ್ಕೆ ನೀತಿ ಸಂಹಿತೆ ಜಾರಿಗೆ ಬಂದಿದೆ. ಅಷ್ಟರೊಳಗೆ ನೇಮಕಾತಿ ಆದೇಶ ಪತ್ರ ಕೊಟ್ಟಿದ್ದರೆ ಅದು ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲ.
–ರಾಮಪ್ರಸಾದ್‌ ಮನೋಹರ್‌, ಜಿಲ್ಲಾಧಿಕಾರಿ
**
ಸಿಂಡಿಕೇಟ್‌ ಸಭೆಯಲ್ಲಿ ಒಪ್ಪಿಗೆ ಪಡೆದ ನಂತರ ವಿವರವನ್ನು ವೆಬ್‌ಸೈಟ್‌ಗೆ ಹಾಕಿದ್ದೆವು. ನೀತಿ ಸಂಹಿತೆ ಜಾರಿಯಾದದ್ದು ಮಧ್ಯಾಹ್ನ 12ಕ್ಕೆ ಗೊತ್ತಾಗಿತ್ತು.
– ಡಿ. ಪಾಂಡುರಂಗಬಾಬು, ಕುಲಸಚಿವ ಹಂಪಿ ಕನ್ನಡ ವಿ.ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT