‘ದಲಿತ’ ಪದಕ್ಕೆ ಹೆಚ್ಚಿದ ಒಲವು

7
ಕೇಂದ್ರ ನಿರ್ಧಾರದ ವಿರುದ್ಧ ‘ಸುಪ್ರಿಂ’ ಮೊರೆ: ಅಠವಲೆ

‘ದಲಿತ’ ಪದಕ್ಕೆ ಹೆಚ್ಚಿದ ಒಲವು

Published:
Updated:

ನವದೆಹಲಿ: ಪರಿಶಿಷ್ಟ ಜಾತಿಗೆ ‘ದಲಿತ’ ಪದ ಬಳಸದಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ್ದ ಸಲಹಾ ಸ್ವರೂಪದ ಸೂಚನೆ ವಿರುದ್ಧ ಕೇಂದ್ರ ಸಚಿವ ಹಾಗೂ ಆರ್‌ಪಿಐ(ಎ) ಪಕ್ಷದ ಮುಖಂಡ ರಾಮದಾಸ್‌ ಆಠವಲೆ ಧ್ವನಿ 
ಎತ್ತಿದ್ದಾರೆ.

ಬಾಂಬೆ ಹೈಕೋರ್ಟ್ ಸೂಚನೆ ಮೇರೆಗೆ ‘ದಲಿತ’ ಪದ ಬಳಸದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಇತ್ತೀಚೆಗೆ ಮಾಧ್ಯಮಗಳಿಗೆ ಸೂಚಿಸಿತ್ತು.

ಸರ್ಕಾರದ ಈ ನಿರ್ಧಾರಕ್ಕೆ ತಮ್ಮ ಸಮ್ಮತಿ ಇಲ್ಲ. ಬಾಂಬೆ ಹೈಕೋರ್ಟ್‌ನ ಈ ಆದೇಶದ ವಿರುದ್ಧ ಆರ್‌ಪಿಐ(ಎ) ಸುಪ್ರೀಂ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದೆ ಎಂದು ಅಠವಲೆ ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ದಲಿತ’ ಪದ ಅವಮಾನದ ಸಂಕೇತವಲ್ಲ. ನಕಾರಾತ್ಮಕ ಭಾವನೆಗಳನ್ನೂ ಬಿಂಬಿಸುವುದಿಲ್ಲ. ಅದು ದಲಿತ ಸಮುದಾಯದ ರಾಜಕೀಯ ಮತ್ತು ಸಾಮುದಾಯಿಕ ಅಸ್ಮಿತೆಯ ಪ್ರತೀಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಈ ಸಲಹಾ ರೂಪದ ಸೂಚನೆಯು ದಲಿತ ಸಮುದಾಯದ ಸಾಮಾಜಿಕ ಸ್ತರ ಮತ್ತು ಅಂತಸ್ತನ್ನು ಬದಲಿಸಲಾರದು’ ಎಂದು ಬಿಜೆಪಿ ಸಂಸದ ಉದಿತ್‌ ರಾಜ್‌ ಪ್ರತಿಕ್ರಿಯಿಸಿದ್ದಾರೆ.

‘ದಲಿತ ಪದ ನಮ್ಮ ನರನಾಡಿಗಳಲ್ಲಿ ಬೆರೆತಿದೆ. ಇದು ನಮ್ಮ ಜೀವನ, ನಮ್ಮ ಉಸಿರು, ನಮ್ಮ ಸಾಹಿತ್ಯ ಮತ್ತು ನಮ್ಮ ಅಸ್ತಿತ್ವದ ಹೆಗ್ಗುರುತಾಗಿದೆ’ ಎಂದು ಅವರು ಹೇಳಿದ್ದಾರೆ.

‘ದಲಿತ ಎನ್ನುವ ಪದದಲ್ಲಿ ಒಂದು ತೂಕವಿದೆ. ತಳ ಸಮುದಾಯಗಳನ್ನು  ಒಗ್ಗೂಡಿಸಿದ ಆ ಪದದೊಂದಿಗೆ ಇಡೀ ಸಮುದಾಯವು ಭಾವನಾತ್ಮಕ ನಂಟು ಬೆಸೆದುಕೊಂಡಿದೆ. ದಶಕಗಳ ಹೋರಾಟದ ನಂತರ ದಲಿತರು ಗಳಿಸಿದ ರಾಜಕೀಯ ಮತ್ತು ಸಾಮಾಜಿಕ ಅಸ್ತಿತ್ವದಲ್ಲಿ ಆ ಪದದ ಪ್ರಮುಖ ಪಾತ್ರವಿದೆ’ ಎಂದು ದಲಿತ ಹೋರಾಟಗಾರ ಮತ್ತು ಗುಜರಾತ್‌ ಶಾಸಕ ಜಿಗ್ನೇಶ್ ಮೆವಾನಿ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !