ಶನಿವಾರ, ಡಿಸೆಂಬರ್ 14, 2019
24 °C

ಚಳಿಗಾಲದ ಅಧಿವೇಶನ: ಬಿಸಿಯೇರಿಸಿದ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲೋಕಸಭೆಯ ಚಳಿಗಾಲದ ಅಧಿವೇಶನದ ಮೊದಲ ದಿನವೇ ವಿರೋಧಪಕ್ಷಗಳು ವಿವಿಧ ವಿಷಯಗಳನ್ನೆತ್ತಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿವೆ.

ಜಮ್ಮು–ಕಾಶ್ಮೀರ ವಿಶೇಷಾಧಿಕಾರ ರದ್ದತಿಯಿಂದ ಆರಂಭಿಸಿ, ಅತಿವೃಷ್ಟಿಯಿಂದ ಬೆಳೆಹಾನಿ ಅನುಭವಿಸಿದ ರೈತರ ಸ್ಥಿತಿಗತಿಯವರೆಗೆ ಹಲವು ವಿಚಾರಗಳಲ್ಲಿ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧಪಕ್ಷಗಳು ಶ್ರಮಿಸಿವೆ. ವಿಶೇಷವಾಗಿ ಜಮ್ಮು–ಕಾಶ್ಮೀರದ ಮುಖಂಡ ಫಾರೂಕ್‌ ಅಬ್ದುಲ್ಲಾ ಅವರ ಅನುಪಸ್ಥಿತಿಯ ಬಗ್ಗೆ ವಿರೋಧಪಕ್ಷಗಳು ದೊಡ್ಡದಾಗಿ ಧ್ವನಿ ಎತ್ತಿದವು. ‘ಅಬ್ದುಲ್ಲಾ ಅವರನ್ನು ಸರ್ಕಾರ ಅಕ್ರಮವಾಗಿ ಬಂಧನದಲ್ಲಿಟ್ಟಿದೆ’ ಎಂದು ಆರೋಪಿಸಿದವು.

‘ಫಾರೂಕ್‌ ಅವರ ಬಂಧನವಾಗಿ 108 ದಿನಗಳಾಗಿವೆ. ಅವರನ್ನು ಸಂಸತ್ತಿಗೆ ಕರೆತರಬೇಕು. ಅಧಿವೇಶನದಲ್ಲಿ ಪಾಲ್ಗೊಳ್ಳುವುದು ಅವರ ಸಂವಿಧಾನಬದ್ಧ ಹಕ್ಕು’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಅಧಿರ್‌ ರಂಜನ್‌ ಚೌಧರಿ ವಾದಿಸಿದರು.

ಐರೋಪ್ಯ ಒಕ್ಕೂಟದ ಪ್ರತಿನಿಧಿಗಳಿಗೆ ಜಮ್ಮು–ಕಾಶ್ಮೀರ ಪ್ರವಾಸಕ್ಕೆ ಅನುಮತಿ ನೀಡಿದ್ದ ಕ್ರಮವನ್ನು ವಿರೋಧಿಸಿದ ಅವರು, ‘ನಮ್ಮ ಸಂಸದರಿಗೆ ಈ ಅವಕಾಶ ನೀಡಲು ನಿರಾಕರಿಸಿದ ಸರ್ಕಾರ, ಐರೋಪ್ಯ ಒಕ್ಕೂಟದ ‘ಬಾಡಿಗೆ ಏಜೆಂಟ’ರಿಗೆ ಅವಕಾಶ ನೀಡಿದೆ’ ಎಂದು ಟೀಕಿಸಿದರು.

ಅಬ್ದುಲ್ಲಾ ಅವರನ್ನು ಸದನಕ್ಕೆ ಕರೆತರುವ ನಿಟ್ಟಿನಲ್ಲಿ ಸ್ಪೀಕರ್‌ ಕ್ರಮ ಕೈಗೊಳ್ಳಬೇಕು ಎಂದು ವಾದಿಸಿದ ಡಿಎಂಕೆ ಮುಖಂಡ ಟಿ.ಆರ್‌. ಬಾಲು, ‘ನೀವು ಸದನದ ಪಾಲಕರು. ನೀವು ಮಧ್ಯಪ್ರವೇಶ ಮಾಡಲೇಬೇಕು’ ಎಂದು ಒತ್ತಾಯಿಸಿದರು.

‘ಅಬ್ದುಲ್ಲಾ ಅವರು ಆಗಸ್ಟ್‌ 5ರಿಂದಲೇ ಬಂಧನದಲ್ಲಿದ್ದರು. ಆದರೆ, ‘ಅವರ ಆರೋಗ್ಯ ಚೆನ್ನಾಗಿಲ್ಲ’ ಎಂದು ಗೃಹಸಚಿವ ಅಮಿತ್‌ ಶಾ ಸದನದ ಹಾದಿ ತಪ್ಪಿಸಿದ್ದರು’ ಎಂದು ವಿರೋಧ ಪಕ್ಷದ ಕೆಲವರು ಆರೋಪಿಸಿದರು. ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ ಸ್ಪೀಕರ್‌ ಓಂ ಬಿರ್ಲಾ, ‘ಅಂದು ಶಾ ನೀಡಿದ್ದ ಹೇಳಿಕೆ ಸರಿಯಾಗಿತ್ತು. ಅದಾಗಿ ಕೆಲವು ದಿನಗಳ ಬಳಿಕ ಅಬ್ದುಲ್ಲಾ ಅವರನ್ನು ಬಂಧಿಸಲಾಗಿತ್ತು’ ಎಂದರು.

ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಹಸನೈನ್‌ ಮಸೂದಿ ಅವರೂ ಅಬ್ದುಲ್ಲಾ ಅವರ ಬಿಡುಗಡೆಗಾಗಿ ಒತ್ತಾಯಿಸಿದರು.

ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಹಾಗೂ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ನೀಡಿದ್ದ ಎಸ್‌ಪಿಜಿ ಭದ್ರತೆಯನ್ನು ರದ್ದುಪಡಿಸಿದ ವಿಚಾರವೂ ಚರ್ಚೆಗೆ ಬಂತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು