ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನಿಹದಲ್ಲಿದೆ 6 ರಾಜ್ಯ ವಿಧಾನಸಭೆ ಚುನಾವಣೆ: ಸಂಘಟನೆ ಸುಧಾರಣೆಗೆ ಕಾಂಗ್ರೆಸ್ ಯತ್ನ

Last Updated 28 ಜೂನ್ 2019, 6:01 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ,ರಾಹುಲ್ ಗಾಂಧಿ ರಾಜೀನಾಮೆಯ ನಂತರ ಕಳಾಹೀನವಾಗಿದ್ದ ಕಾಂಗ್ರೆಸ್ ಪಾಳಯದಲ್ಲಿ ಇದೀಗ ಮತ್ತೆ ಚಟುವಟಿಕೆಗಳು ಗರಿಗೆದರಿವೆ. ಇದೇ ವರ್ಷ ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರಗಳಲ್ಲಿ ಮತ್ತು ಮುಂದಿನ ವರ್ಷ ಬಿಹಾರ, ದೆಹಲಿ ಮತ್ತು ಪುದುಚೇರಿಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಪಕ್ಷಕ್ಕೆ ಹೊಸ ಜೀವ ಕೊಡುವ ಪ್ರಯತ್ನಗಳು ಸದ್ದಿಲ್ಲದೆ ಆರಂಭವಾಗಿವೆ. ಶೀಘ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳ ನಾಯಕರು ರಾಹುಲ್ ಗಾಂಧಿಯನ್ನು ಭೇಟಿಯಾಗಿ ರಣತಂತ್ರದ ಚರ್ಚೆಗೆ ಚಾಲನೆ ನೀಡಿದ್ದಾರೆ.

ವಿವೇಕ್ ಟಂಕಾ ರಾಜೀನಾಮೆ

ರಾಜ್ಯಸಭಾ ಸದಸ್ಯರೂ ಆಗಿರುವಕಾಂಗ್ರೆಸ್ ಪಕ್ಷದ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷ ಮತ್ತು ಪ್ರಭಾವಿ ನಾಯಕವಿವೇಕ್ ಟಂಕಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ‘ನಾವೆಲ್ಲರೂ ನಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕು. ರಾಹುಲ್‌ ಗಾಂಧಿಗೆ ಅವರಿಷ್ಟದ ತಂಡ ಕಟ್ಟಿಕೊಟ್ಟಲು ಅವಕಾಶ ನೀಡಬೇಕು’ ಎಂದು ಟ್ವೀಟ್ ಮಾಡಿದ್ದಾರೆ.

‘ಪಕ್ಷದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿ, ಒಂದು ಹೋರಾಟದ ಶಕ್ತಿಯನ್ನಾಗಿ ರೂಪಿಸಿ. ನಿಮಗೆ ಬದ್ಧತೆ ಮತ್ತು ಶಕ್ತಿಯಿದೆ. ದೇಶದ ಜನರು ಒಪ್ಪುವ, ಪ್ರಭಾವಶಾಲಿಯಾದ ಅತ್ಯುತ್ತಮ ತಂಡವನ್ನು ರೂಪಿಸಿ. ನಿಮ್ಮೊಡನೆ ಸದಾ ನಾನಿರುತ್ತೇನೆ’ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಈ ಬೆಳವಣಿಗೆಯು ಮತ್ತಷ್ಟು ಹಿರಿಯ ನಾಯಕರ ರಾಜೀನಾಮೆಗೆ ಮತ್ತು ಪಕ್ಷದ ಪುನರ್‌ ಸಂಘಟನೆಗೆ ಚಾಲನೆ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ಹೊಣೆ ಹೊರದ ನಾಯಕರು: ರಾಹುಲ್ ಅಸಮಾಧಾನ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಪೆ ಸಾಧನೆ ನಂತರ ಪಕ್ಷದಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿರುವ ರಾಹುಲ್‌ ಗಾಂಧಿ ಅವರಿಗೆ ಕೆಲ ರಾಜ್ಯಗಳ ಕಾಂಗ್ರೆಸ್ ನಾಯಕರ ಬಗ್ಗೆ ತೀವ್ರ ಅಸಮಾಧಾನವಿದೆ. ಸೋಲಿನ ಹೊಣೆ ಹೊರಲು ನಿರಾಕರಿಸುತ್ತಿರುವ ನಾಯಕರ ಬಗ್ಗೆ ಅವರು ಖಾಸಗಿಯಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ.

ಸುಮಾರು 17 ರಾಜ್ಯಗಳಲ್ಲಿ ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲಲಿಲ್ಲ. ಅನೇಕ ರಾಜ್ಯಗಳಲ್ಲಿ ಕೇವಲ ಒಂದು ಅಥವಾ ಎರಡು ಸ್ಥಾನ ಗಳಿಸಿ ಕಳಪೆ ಸಾಧನೆ ಮಾಡಿದೆ.

ಶೀಘ್ರದಲ್ಲಿಯೇ ವಿಧಾನಸಭೆ ಚುನಾವಣೆ ಎದುರಿಸಲಿರುವಹರ್ಯಾಣ ರಾಜ್ಯ ಘಟಕದ ಸದಸ್ಯರು ತಮ್ಮ ಸಿದ್ಧತೆಯ ಬಗ್ಗೆ ಮಾತನಾಡಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್ ನೇತೃತ್ವದಲ್ಲಿ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದರು. ಈ ಸಂದರ್ಭ ಅವರು ರಾಹುಲ್ ಗಾಂಧಿಗೆ ‘ರಾಜೀನಾಮೆ ನಿರ್ಧಾರ ಮರುಪರಿಶೀಲಿಸಿ’ ಎಂದು ಮನವಿ ಮಾಡಿದ್ದರು.

ಈ ವೇಳೆ ಕೆಲ ರಾಜ್ಯಗಳು ಮತ್ತು ನಾಯಕರಹೆಸರು ಹೇಳಿದ ರಾಹುಲ್, ‘ಸೋಲಿನ ಹೊಣೆಯನ್ನು ಯಾರಾದರೂ ಹೊರಲೇಬೇಕು. ಅವರು ರಾಜೀನಾಮೆ ನೀಡಲು ಮುಂದಾಗುತ್ತಿಲ್ಲ. ಈ ಸಂದರ್ಭ ನಾನು ಇನ್ನೇನು ಮಾಡಲು ಸಾಧ್ಯಎಂದು ಪ್ರಶ್ನಿಸಿದರು’ ಎಂದು ಮೂಲಗಳನ್ನು ಉಲ್ಲೇಖಿಸಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ರಾಹುಲ್ ಗಾಂಧಿ ಅವರ ಅಸಮಾಧಾನ ಮತ್ತು ಟಂಕಾ ಅವರ ಟ್ವೀಟ್ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT