ಶನಿವಾರ, ಜೂನ್ 19, 2021
26 °C
ಇಸ್ರೊ ಅಭಿವೃದ್ಧಿಪಡಿಸಿರುವ ಭಾರತದ್ದೇ ಸ್ವತಂ ಪಥದರ್ಶಕ ವ್ಯವಸ್ಥೆ

ರೆಡ್‌ಮಿ ಫೋನ್‌ಗಳಲ್ಲಿ ಭಾರತದ ‘ನಾವಿಕ್’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಭಿವೃದ್ಧಿಪಡಿಸಿರುವ, ಭಾರತದ್ದೇ ಸ್ವಂತ ಪಥದರ್ಶಕ ವ್ಯವಸ್ಥೆ ‘ನಾವಿಕ್’ ಅನ್ನು ತನ್ನ ರೆಡ್‌ಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸುವುದಾಗಿ ಚೀನಾದ ಶಿಯೋಮಿ ಕಂಪನಿ ಹೇಳಿದೆ.

2020ರಲ್ಲಿ ಬಿಡುಗಡೆ ಮಾಡಲಿರುವ ಬಹುತೇಕ ಎಲ್ಲಾ ರೆಡ್‌ಮಿ ಸ್ಮಾರ್ಟ್‌ಫೋನ್‌ಗಳಲ್ಲಿ ‘ನಾವಿಕ್’ ವ್ಯವಸ್ಥೆ ಇರಲಿದೆ. ಇದಕ್ಕಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಿರುವ ಸ್ನ್ಯಾಪ್‌ಡ್ರ್ಯಾಗನ್ ಚಿಪ್‌ಗಳನ್ನು ಬಳಸಲಾಗುತ್ತದೆ ಎಂದು ಶಿಯೋಮಿ ಹೇಳಿದೆ.

‘ಭಾರತದಲ್ಲೇ ತಯಾರಿಸಿ ಅಭಿಯಾನಕ್ಕೆ ಶಿಯೋಮಿ ಬದ್ಧವಾಗಿದೆ. ಹೀಗಾಗಿ ಭಾರತದಲ್ಲೇ ಅಭಿವೃದ್ಧಿಪಡಿಸಿರುವ ಪಥದರ್ಶಕ ವ್ಯವಸ್ಥೆಯನ್ನು ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಲಾಗುತ್ತಿದೆ’ ಎಂದು ಶಿಯೋಮಿ ಹೇಳಿದೆ.

ವಿಶ್ವದ ಬಹುತೇಕ ರಾಷ್ಟ್ರಗಳು ಈಗ ಅಮೆರಿಕದ ‘ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ–ಜಿಪಿಎಸ್‌’ ಅನ್ನು ಬಳಸುತ್ತಿವೆ. ಭಾರತದಲ್ಲೂ ಜಿಪಿಎಸ್‌ ಬಳಕೆಯಲ್ಲಿದೆ. ರಷ್ಯಾ ತನ್ನದೇ ಆದ ‘ಗ್ಲೋನಾಸ್‌’, ಐರೋಪ್ಯ ದೇಶಗಳು ತಮ್ಮದೇ ಆದ ‘ಗೆಲಿಲಿಯೊ’ ಪಥದರ್ಶಕ ವ್ಯವಸ್ಥೆಯನ್ನು ಹೊಂದಿವೆ. ‘ನಾವಿಕ್’ ಬಳಕೆಗೆ ಬಂದರೆ, ತನ್ನದೇ ಪಥದರ್ಶಕ ವ್ಯವಸ್ಥೆ ಹೊಂದಿರುವ ದೇಶಗಳ ಪಟ್ಟಿಗೆ ಭಾರತವು ಸೇರಲಿದೆ.

ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ: ಇಸ್ರೊ ಅಭಿವೃದ್ಧಿಪಡಿಸುವ ಈ ವ್ಯವಸ್ಥೆಯ ಮೂಲ ಹೆಸರು ‘ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ. ಇದನ್ನು ‘ನ್ಯಾವಿಗೇಟ್ ವಿತ್‌ ಇಂಡಿಯನ್‌–ನಾವಿಕ್’ ಎಂದೂ ಕರೆಯಲಾಗುತ್ತದೆ.

ಈ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕಾಗಿ ಇಸ್ರೊ ಏಳು ಉಪಗ್ರಹಗಳನ್ನು ನಭಕ್ಕೆ ಏರಿಸಿದೆ. ಈ ಉಪಗ್ರಹಗಳನ್ನು ಆಧರಿಸಿ ನಾವಿಕ್ ಕಾರ್ಯನಿರ್ವಹಿಸಲಿದೆ. ಭಾರತ ಮತ್ತು ಭಾರತದ ಗಡಿಯಿಂದ 1,500 ಕಿ.ಮೀ. ವ್ಯಾಪ್ತಿಯಲ್ಲಿ ಇರುವ ರಾಷ್ಟ್ರಗಳೂ ಈ ವ್ಯವಸ್ಥೆಯ ಅನುಕೂಲ ಪಡೆಯಬಹುದು.

ಇಸ್ರೊ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನವನ್ನು ನಮ್ಮ ಫೋನ್‌ಗಳಲ್ಲಿ ಯಶಸ್ವಿಯಾಗಿ ಅಳವಡಿಸಿರುವುದಕ್ಕೆ ನಮಗೆ ಹೆಮ್ಮೆಯಿದೆ
-ಮನು ಜೈನ್, ವ್ಯವಸ್ಥಾಪಕ ನಿರ್ದೇಶಕ, ಶಿಯೋಮಿ ಇಂಡಿಯಾ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು