ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಿಂದ ಸಚಿವ ಡಿ.ಕೆ. ಶಿವಕುಮಾರ್‌ಗೆ ಜಾಮೀನು

7
ದೆಹಲಿಯಲ್ಲಿ ಸಿಕ್ಕ ₹ 8.60 ಕೋಟಿ ಹಣದ ಪ್ರಕರಣ

ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಿಂದ ಸಚಿವ ಡಿ.ಕೆ. ಶಿವಕುಮಾರ್‌ಗೆ ಜಾಮೀನು

Published:
Updated:

ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದೆಹಲಿಯಲ್ಲಿ ವಶಪಡಿಸಿಕೊಂಡಿರುವ ₹ 8.60 ಕೋಟಿ ಲೆಕ್ಕ ಸಿಗದ ಹಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹಾಗೂ  ಅವರ ಮೂವರು ಆಪ್ತರಿಗೆ ಇಲ್ಲಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಶನಿವಾರ ಜಾಮೀನು ನೀಡಿತು.

ಶಿವಕುಮಾರ್‌, ಶರ್ಮಾ ಟ್ರಾನ್ಸ್‌ಪೋರ್ಟ್‌ನ ಸುನಿಲ್‌ ಕುಮಾರ್‌ ಶರ್ಮಾ, ದೆಹಲಿ ಕರ್ನಾಟಕ ಭವನದ ನೌಕರ ಆಂಜನೇಯ, ಅಲ್ಲಿನ ಸುಖದೇವ್‌ ವಿಹಾರದ ನಿವಾಸಿ ರಾಜೇಂದ್ರ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಮನವಿ ಮಾಡಿದ ಬಳಿಕ ಜಾಮೀನು ನೀಡಲಾಯಿತು. ಇದೇ ಪ್ರಕರಣದಲ್ಲಿ ಕೋರ್ಟ್‌ ಈ ಮೊದಲು ಮಧ್ಯಂತರ ಜಾಮೀನು ನೀಡಿತ್ತು.

ನಾಲ್ವರೂ ತಲಾ ₹25 ಸಾವಿರ ನಗದು ಹಾಗೂ ₹1 ಲಕ್ಷದ ಬಾಂಡ್ ಅನ್ನು ಭದ್ರತೆಯಾಗಿ ನೀಡಿದರು. ‘ಈಗಾಗಲೇ ಮೂರು ಪ್ರಕರಣಗಳಲ್ಲಿ ಜಾಮೀನು ದೊರೆತಿದೆ. ಎಲ್ಲರೂ ಜವಾಬ್ದಾರಿಯುತ ಸ್ಥಾನಗಳಲ್ಲಿದ್ದು, ತನಿಖೆಗೆ ಸಹಕಾರ ನೀಡುತ್ತಿದ್ದಾರೆ. ಅಲ್ಲದೆ, ಹಣ ತಮ್ಮದೆಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು’ ಎಂದು ಡಿಕೆಶಿ ವಕೀಲರು ಮನವಿ ಮಾಡಿದರು,

ಜಾಮೀನು ಅರ್ಜಿ ಈ ತಿಂಗಳ 20ರಂದು ವಿಚಾರಣೆಗೆ ಬರುವುದಿತ್ತು. ಆದರೆ, 20 ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಅದರಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ. ಆನಂತರ ಪ್ರವಾಸ ಕಾರ್ಯಕ್ರಮವಿದೆ. ಇದರಿಂದಾಗಿ ಮುಂಚಿತವಾಗಿಯೇ ವಿಚಾರಣೆ ನಡೆಸುವಂತೆ ಸಚಿವರು ನ್ಯಾಯಾಲಯಕ್ಕೆ ಮನವಿ ಮಾಡಿ‌ದ್ದರಿಂದ, ಇಂದೇ ವಿಚಾರಣೆ ನಡೆಯಿತು. 

ಪ್ರಕರಣದಲ್ಲಿ ಹೆಸರಿಸಲಾಗಿರುವ ಶಿವಕುಮಾರ್‌ ಆಪ್ತ ಸಚಿನ್‌ ನಾರಾಯಣ್‌ ಅವರ ವಿಚಾರಣೆಗೆ ಹೈಕೋರ್ಟ್‌ ಈಗಾಗಲೇ ತಡೆಯಾಜ್ಞೆ ನೀಡಿದೆ. ‘ಈ ಮೊಕದ್ದಮೆ ದಾಖಲಿಸುವ ಮೊದಲು ಸಕ್ಷಮ ಪ್ರಾಧಿಕಾರದ ಒಪ್ಪಿಗೆ ಪಡೆದಿಲ್ಲ. ಐ.ಟಿ ಕಾಯಿದೆ 279ರಂತೆ ಇಲಾಖೆ ಆಯುಕ್ತರ ಅನುಮತಿ ಪಡೆಯಬೇಕು. ಆದರೆ, ಪ್ರಧಾನ ನಿರ್ದೇಶಕರ ಒಪ್ಪಿಗೆ ಪಡೆಯಲಾಗಿದೆ. ಈ ಕಾರಣಕ್ಕೆ ಸಚಿನ್‌ ವಿಚಾರಣೆಗೆ ಹೈಕೋರ್ಟ್‌ ತಾತ್ಕಾಲಿಕ ತಡೆ ಸಿಕ್ಕಿದೆ’ ಎಂದು ಮೂಲಗಳು ತಿಳಿಸಿವೆ.

ಆರ್ಥಿಕ ಅಪರಾಧಗಳ ವಿಚಾರಣಾ ನ್ಯಾಯಾಲಯಕ್ಕೆ ಐ.ಟಿ ಅಧಿಕಾರಿಗಳು ಸಲ್ಲಿಸಿರುವ 33 ಪುಟಗಳ ದೂರಿನಲ್ಲಿ, ‘ಶಿವಕುಮಾರ್‌, ಸಚಿನ್‌ ನಾರಾಯಣ್‌, ಸುನಿಲ್‌ ಕುಮಾರ್‌ ಶರ್ಮಾ, ಆಂಜನೇಯ ಹಾಗೂ ರಾಜೇಂದ್ರ ಅವರು ದೆಹಲಿ ಆರ್‌.ಕೆ. ಪುರಂನ ಮನೆ ಹಾಗೂ ಸಫ್ದರ್‌ಜಂಗ್‌ ಎನ್‌ಕ್ಲೇವ್‌ನ ಫ್ಲ್ಯಾಟ್‌ಗಳಲ್ಲಿ ಸಿಕ್ಕಿರುವ ₹8.60ಕೋಟಿ ಹಣದ ಮೂಲ ಕುರಿತು ವಿಭಿನ್ನ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಈ ಹಣ ಸಚಿವರಿಗೆ ಸೇರಿದ್ದು ಎಂದು ಆಂಜನೇಯ ಹೇಳಿದ್ದಾರೆ. ಇದು ತಮ್ಮ ಹಣ ಎಂದು ಶರ್ಮಾ ತಿಳಿಸಿದ್ದಾರೆ. ಇದರಲ್ಲಿ ಭಾಗಶಃ ಹಣ ಕೃಷಿಯಿಂದ ಬಂದ ಆದಾಯ ಎಂದು ಶಿವಕುಮಾರ್‌ ವಿವರಿಸಿದ್ದಾರೆ. ಆದರೆ, ಹಣದ ಮೂಲವನ್ನು ಖಚಿತವಾಗಿ ಯಾರೂ ಬಹಿರಂಗಪಡಿಸಿಲ್ಲ’ ಎಂದು ಐ.ಟಿ ಅಧಿಕಾರಿಗಳು ದೂರಿನಲ್ಲಿ ತಿಳಿಸಿದ್ದಾರೆ.

ಗುಜರಾತ್‌ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ ವೇಳೆ ಅಲ್ಲಿನ ಕಾಂಗ್ರೆಸ್‌ ಶಾಸಕರನ್ನು ಕರೆತಂದು ಶಿವಕುಮಾರ್‌ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಇಟ್ಟಿದ್ದರು. ಅದೇ ಸಂದರ್ಭದಲ್ಲಿ ಅವರ ಸದಾಶಿವ ನಗರದ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು. ಆನಂತರ ದೆಹಲಿಯ ಮನೆಗಳಲ್ಲೂ ಅಧಿಕಾರಿಗಳು ಶೋಧ ನಡೆಸಿದ್ದರು.

ಐ.ಟಿ. ಸಚಿವರ ವಿರುದ್ಧ ನಾಲ್ಕು ಪ್ರಕರಣಗಳನ್ನು ದಾಖಲಿಸಿದ್ದು, ಮೂರರಲ್ಲಿ  ಈಗಾಗಲೇ ಜಾಮೀನು ಸಿಕ್ಕಿದೆ. ಸಚಿವರು ಮತ್ತು ಅವರ ಆಪ್ತರ ಪರವಾಗಿ ವಕೀಲರಾದ ಬಿ.ವಿ. ಆಚಾರ್ಯ, ಶೇಷಾಚಲ, ನಂಜುಂಡರೆಡ್ಡಿ, ಸಂದೀಪ್‌ ಪಾಟೀಲ್‌, ಶ್ಯಾಂಸುಂದರ್‌ ಹಾಗೂ ವಾದಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !