ಶಿರಾಡಿ ಘಾಟ್ ಮತ್ತೆ ಹತ್ತು ದಿನ ಬಂದ್

7
ಬಾಯ್ತೆರೆದ ರಾಜ್ಯ ಹೆದ್ದಾರಿ: ಮನೆಗಳಿಗೆ ನೀರು

ಶಿರಾಡಿ ಘಾಟ್ ಮತ್ತೆ ಹತ್ತು ದಿನ ಬಂದ್

Published:
Updated:

ಹಾಸನ: ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಿರಂತರ ಭೂ ಕುಸಿತ ಉಂಟಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮಂಗಳೂರು-ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್ ಸಂಚಾರವನ್ನು ಮತ್ತೆ ಹತ್ತು ದಿನ ಬಂದ್ ಮಾಡಲಾಗಿದೆ.

ಈ ಕುರಿತು ಇಂದು ಆದೇಶ ಹೊರಡಿಸಿರುವ ಸಕಲೇಶಪುರ ಉಪ ವಿಭಾಗಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಆಗಸ್ಟ್ 15 ರಿಂದ 20ರ ವರೆಗೆ ಎಲ್ಲಾ ವಾಹನಗಳು, ಆಗಸ್ಟ್ 15 ರಿಂದ 25 ರ ವರೆಗೆ ಭಾರೀ ವಾಹನಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಶಿರಾಡಿ ಮಾರ್ಗದಲ್ಲಿ ಹಗಲು-ರಾತ್ರಿ ಎನ್ನದೇ ಭೂ ಕುಸಿತವಾಗುತ್ತಿರುವುದರಿಂದ ವಾಹನ ಸಂಚಾರ ಅಷ್ಟು ಸುರಕ್ಷಿತವಾಗಿಲ್ಲದ ಕಾರಣ ಕೆಲ ದಿನ ವಾಹನ ಸಂಚಾರ ನಿಷೇಧ ಮಾಡುವಂತೆ ಸಕಲೇಶಪುರ ಡಿವೈಎಸ್ಪಿ ಹಾಗೂ ಹೆದ್ದಾರಿ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ ಪತ್ರ ಬರೆದಿದ್ದರು. ಪತ್ರದ ಸಾಧಕ-ಬಾಧಕ ಪರಾಮರ್ಶಿಸಿ ಎಸಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ಇಬ್ಬರ ಸಾವು
ಮಂಗಳವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 75ರ ದೊಡ್ಡತಪ್ಲು ಬಳಿ ಹಳ್ಳಕ್ಕೆ ಉರುಳಿದ್ದ ಅನಿಲ ಟ್ಯಾಂಕರ್ ನಲ್ಲಿದ್ದ ಚಾಲಕ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಮೂಲದ ಸಂತೋಷ್ ಮತ್ತು ರಾಯಚೂರು ಜಿಲ್ಲೆ ಮಾನ್ವಿ ಮೂಲದ ಕ್ಲೀನರ್ ವೆಂಕಟೇಶ್ ಅಲ್ಲೇ ಮೃತಪಟ್ಟಿದ್ದಾರೆ. ಟ್ಯಾಂಕರ್ ಕುಸಿದಿದ್ದನ್ನು ನೋಡಲು ಹೋಗಿದ್ದ ಚಾಲಕ ಮಹದೇವಯ್ಯ ಎಂಬಾತ ವಾಹನ ಡಿಕ್ಕಿಯಿಂದ ಮೃತಪಟ್ಟಿದ್ದರು.

ಟ್ಯಾಂಕರ್‌ ಅನ್ನು ಇನ್ನೂ ಮೇಲೆತ್ತಲಾಗಿಲ್ಲ. ಆದರೆ ಅದರಲ್ಲಿದ್ದ ಅನಿಲ ಸಂಪೂರ್ಣ ಸೋರಿಕೆಯಾಗಿದೆ. ಶಿರಾಡಿಘಾಟ್ ಮಾರ್ಗದಲ್ಲಿ ನಿರಂತರವಾಗಿ ಗುಡ್ಡ ಕುಸಿಯುತ್ತಿದ್ದು, ಬುಧವಾರವೂ ಐದಾರು ಕಡೆ ಭೂ ಕುಸಿದಿದೆ.

ಕಾಂಕ್ರೀಟ್ ರಸ್ತೆಯಾಗಿ ನವೀಕರಣಗೊಂಡು ಸಂಚಾರಕ್ಕೆ ಮುಕ್ತವಾದ ಕೆಲವೇ ದಿನಗಳಲ್ಲಿ ಭೂ ಕುಸಿತದ ಭೀತಿಯಿಂದಾಗಿ ಶಿರಾಡಿ ಸಂಚಾರ ಅಕ್ಷರಶಃ ಭಯದ ಹಾದಿಯಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.

ರಸ್ತೆ ಬಿರುಕು, ಸಂಚಾರ ಕಡಿತ
ಮತ್ತೊಂದೆಡೆ ಹೆತ್ತೂರು ಹೋಬಳಿ ಪಟ್ಲ ಬಳಿ ಸಕಲೇಶಪುರ-ಸೋಮವಾರ ಪೇಟೆಗೆ ಸಂಪರ್ಕ ಕಲ್ಪಿಸುವ ಮಾಗೇರಿ ರಸ್ತೆ ನಾಲ್ಕೈದು ಕಡೆ ಬಿರುಕು ಬಿಟ್ಟಿದೆ. ಇದರಿಂದಾಗಿ ಈ ಮಾರ್ಗದ ಸಂಚಾರ ಸಂಪೂರ್ಣ ಕಡಿತವಾಗಿದೆ.

ಕೊಡಗಿನಲ್ಲಿ ಗಂಜಿ ಕೇಂದ್ರ
ಕೊಡಗಿನಲ್ಲೂ ಜೋರು ಮಳೆಯಾಗುತ್ತಿರುವುದರಿಂದ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು, ರಾಮನಾಥಪುರದಲ್ಲಿ ಕೆಲವು ಮನೆ ಹಾಗೂ ಶಾಲೆ ಆವರಣ ಜಲಾವೃತವಾಗಿವೆ. ನಿರಾಶ್ರಿತರ ನೆರವಿಗೆ ಧಾವಿಸಿರುವ ತಾಲ್ಲೂಕು ಆಡಳಿತ ರಾಮನಾಥಪುರದ ಸಮುದಾಯ ಭವನದಲ್ಲಿ ಗಂಜಿ ಕೇಂದ್ರ ತೆರೆದು, ಊಟ, ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.

ಭತ್ತ, ಅಡಿಕೆ, ಬಾಳೆ, ಶುಂಠಿ ಜಲಾವೃತಗೊಂಡು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ರಾಮೇಶ್ವರ ದೇವಾಲಯದ ಪಕ್ಕದಲ್ಲಿನ ತಗ್ಗುಪ್ರದೇಶದ 21 ಮನೆಗಳಿಗೆ ನೀರು ನುಗ್ಗಿದ್ದು, 3 ಮನೆಗಳು ಕುಸಿದಿವೆ.

ಬಸವಾಪಟ್ಟಣ, ಕೇರಳಾಪುರ ಗ್ರಾಮಗಳ 300 ಎಕರೆ ಕೃಷಿ ಭೂಮಿಯಲ್ಲಿ ನೀರು ನಿಂತಿದೆ. ಕೊಣನೂರಿನ ತೂಗುಸೇತುವೆ, ರಾಮನಾಥಪುರದ ರಾಮೇಶ್ವರ ದೇವಾಲಯ ಹಾಗೂ ಕಟ್ಟೇಪುರದ ಕೃಷ್ಣರಾಜ ಅಣೆಕಟ್ಟೆಯ ಬಳಿ ಜನರು ನೀರಿಗಿಳಿಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿದ ಶಾಸಕ ಎ.ಟಿ.ರಾಮಸ್ವಾಮಿ ಸೂಕ್ತ ಕ್ರಮಕ್ಕೆ ಸೂಚಿಸಿದರು. ತಹಶೀಲ್ದಾರ್ ನಂದೀಶ್, ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕೆಟ್ಟು ನಿಂತ ಲಾರಿ; ವಾಹನ ಸಂಚಾರಕ್ಕೆ ಅಡಚಣೆ
ಚಾರ್ಮಾಡಿ ಘಾಟಿ ಮಾರ್ಗದ ಅಣ್ಣಪ್ಪಸ್ವಾಮಿ ದೇಗುಲದ ಸನಿಹದಲ್ಲಿ ಲಾರಿಯೊಂದು ಕೆಟ್ಟು ನಿಂತಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಗುಡ್ಡ ಕುಸಿತದಿಂದಾಗಿ ಶಿರಾಡಿ ಘಾಟಿಯಲ್ಲಿ ಸಂಚಾರ ಬಂದ್‌ ಮಾಡಲಾಗಿದೆ. ಚಾರ್ಮಾಡಿ ಮಾರ್ಗದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಚಿಕ್ಕಮಗಳೂರು– ಧರ್ಮಸ್ಥಳ ಸಂಪರ್ಕದ ಈ ರಸ್ತೆಯಲ್ಲಿ ಲಾರಿ ಕೆಟ್ಟು ನಿಂತಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !