ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಉತ್ಸಾಹ ಇಮ್ಮಡಿ

Last Updated 19 ಮೇ 2019, 19:52 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಹೊರಬೀಳುತ್ತಿದ್ದಂತೆ ರಾಜ್ಯ ಬಿಜೆಪಿ ನಾಯಕರ ಉತ್ಸಾಹ ಇಮ್ಮಡಿಸಿದ್ದು, ಪಕ್ಷದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ.

‘ಇದೇ 23 (ಫಲಿತಾಂಶ)ರಂದು ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಕಾಂಗ್ರೆಸ್‌–ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟು ಬಿಜೆಪಿಯತ್ತ ಬರಲಿದ್ದಾರೆ’ ಎಂದು ಕಮಲ ಪಕ್ಷದ ನಾಯಕರು ಹೇಳುತ್ತಲೇ ಬಂದಿದ್ದಾರೆ.

ಕೊನೆಯ ಹಂತದ ಮತದಾನ ಮುಗಿದ ಬೆನ್ನಲ್ಲೇ 10ಕ್ಕೂ ಹೆಚ್ಚು ಸಂಸ್ಥೆಗಳು ನಡೆಸಿದ ಸಮೀಕ್ಷೆ ಭಾನುವಾರ ಸಂಜೆ ಪ್ರಕಟವಾಗಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ 15ರಿಂದ 23 ಸ್ಥಾನ ಬರಬಹುದು. ಮೈತ್ರಿಕೂಟಕ್ಕೆ 7ರಿಂದ 13 ಸ್ಥಾನ ಸಿಗಬಹುದೂ ಎಂದೂ ಸಮೀಕ್ಷೆ ತಿಳಿಸಿದೆ.

ಸಮೀಕ್ಷೆಯ ವಿವರ ಪ್ರಕಟವಾಗುತ್ತಿದ್ದಂತೆ ಬಿಜೆಪಿ ರಾಜ್ಯ ಘಟಕದ ಬಿ.ಎಸ್‌. ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಪಕ್ಷದ ಕೆಲವು ಮುಖಂಡರು ಚರ್ಚೆಯನ್ನೂ ನಡೆಸಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಯಡಿಯೂರಪ್ಪ, ‘ಸಮೀಕ್ಷೆ ನಿಜವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ಈಗಲೇ ನಾನು ಏನು ಹೇಳುವುದಿಲ್ಲ.23 ರ ನಂತರವಷ್ಟೇ ಗೊತ್ತಾಗಲಿದೆ. ಫಲಿತಾಂಶದ ಬಳಿಕ ಎದುರಾಳಿ ರಾಜಕೀಯ ಪಕ್ಷಗಳ ನಾಯಕರ ನಡೆ ನೋಡಿ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದರು.

‘ಕಾಂಗ್ರೆಸ್‌ ನಾಯಕರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಕಷ್ಟ ಎಂದು ಹೇಳಿಕೊಂಡಿದ್ದಾರೆ. ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತದೆ’ ಎಂದರು.

ಕಾಂಗ್ರೆಸ್‌ ನಾಯಕರ ಮೌನ: ಮತದಾನೋತ್ತರ ಸಮೀಕ್ಷೆ ಬಗ್ಗೆ ಕಾಂಗ್ರೆಸ್‌ ನಾಯಕರು ಮೌನ ವಹಿಸಿದ್ದಾರೆ.

ರಾಜಕೀಯ ವಿದ್ಯಮಾನಗಳ ಬಗ್ಗೆ ತಕ್ಷಣವೇ ಪ್ರತಿಕ್ರಿಯಿಸುತ್ತಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಟ್ವೀಟ್‌ ಮೂಲಕ ಪ್ರತಿಕ್ರಿಯಿಸುತ್ತಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಯಾವುದೇ ಹೇಳಿಕೆಗಳನ್ನೂ ನೀಡಿಲ್ಲ.

ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದ ಅವರು ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿ ರಾಜಧಾನಿಗೆ ವಾಪಸ್ ಬಂದಿದ್ದಾರೆ. ಈ ನಡುವೆ, ಸಮೀಕ್ಷೆಯ ಬಗ್ಗೆ ಜೆಡಿಎಸ್‌ ವರಿಷ್ಠರಾದ ಎಚ್‌.ಡಿ. ದೇವೇಗೌಡ ಅಥವಾ ಕುಮಾರಸ್ವಾಮಿ ಅವರು ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT