ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಬಿಎಸ್‌ಎನ್‌ಎಲ್‌ ಸೇವೆ: ಮರಗೋಡು ಗ್ರಾಮಸ್ಥರಿಂದ ಭಿಕ್ಷೆ

ಸಂಗ್ರಹವಾದ ₹ 2,800ರಲ್ಲಿ ಡೀಸೆಲ್‌ ಖರೀದಿಸಿ ಬಿಎಸ್‌ಎನ್‌ಎಲ್‌ಗೆ ನೀಡಿದ ಗ್ರಾಮಸ್ಥರು
Last Updated 14 ಜೂನ್ 2019, 14:46 IST
ಅಕ್ಷರ ಗಾತ್ರ

ಮಡಿಕೇರಿ: ಬಿಎಸ್‌ಎನ್‌ಎಲ್‌ ಸೇವೆ ಕೈಕೊಟ್ಟಿದ್ದು ತಾಲ್ಲೂಕಿನ ಮರಗೋಡು ಗ್ರಾಮಸ್ಥರು ಅದಕ್ಕೆ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ.

‘ಬಿಎನ್‌ಎನ್‌ಎಲ್‌ಗಾಗಿ ಭಿಕ್ಷೆ...’ ಎಂಬ ಅಭಿಯಾನದ ಅಡಿ ಶುಕ್ರವಾರ ಮರಗೋಡು ಗ್ರಾಮದಲ್ಲಿ ಗ್ರಾಮಸ್ಥಏ ಭಿಕ್ಷೆಯೆತ್ತಿ ಆ ಹಣದಿಂದ ಡೀಸೆಲ್‌ ಖರೀದಿಸಿ ನೀಡಿದ್ದಾರೆ.

ಗ್ರಾಮ ಪಂಚಾಯಿತಿ ಕಟ್ಟಡದಲ್ಲಿರುವ ಬಿಎಸ್ಎನ್ಎಲ್ ಕೇಂದ್ರವು ವಿದ್ಯುತ್ ಕೈಕೊಟ್ಟಾಗಲೆಲ್ಲ ತನ್ನ ಸೇವೆ ಸ್ಥಗಿತಗೊಳಿಸುತ್ತಿದೆ. ಪರ್ಯಾಯ ವ್ಯವಸ್ಥೆಯಾಗಿ ಜನರೇಟರ್ ಇದ್ದರೂ ಇದಕ್ಕೆ ಡೀಸೆಲ್ ಪೂರೈಸಲು ಹಣವಿಲ್ಲ. ಇದೇ ಟವರ್‌ನಲ್ಲಿ ಏರ್‌ಟೆಲ್‌ ನೆಟ್‌ವರ್ಕ್‌ ಸಹ ಅಳವಡಿಸಲಾಗಿದೆ. ವಿದ್ಯುತ್ ವ್ಯತ್ಯಯದ ವೇಳೆ ಅದಕ್ಕೂ ಕೂಡ ಸಮಸ್ಯೆ ಆಗುತ್ತಿದೆ.

ಮರಗೋಡು ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್ ಕೈಕೊಟ್ಟಿದ್ದು ಬಿಎಸ್ಎನ್ಎಲ್ ಸೇವೆ ಸ್ತಬ್ಧವಾಗಿದೆ. ಆಕ್ರೋಶಗೊಂಡಿರುವ ಗ್ರಾಮಸ್ಥರು, ವಾಹನ ಚಾಲಕ ಮತ್ತು ಅಂಗಡಿ ಮಾಲೀಕರಿಂದ ಭಿಕ್ಷೆ ಎತ್ತಿದ್ದಾರೆ. ಮರಗೋಡು ವಿಎಸ್ಎಸ್ಎನ್ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ಸಿಬ್ಬಂದಿ ಕೂಡ ಕೈಲಾದಷ್ಟು ಹಣ ನೀಡಿದ್ದಾರೆ. ₹ 2,800 ಸಂಗ್ರಹವಾಗಿದೆ. ಅದರಲ್ಲಿ 35 ಲೀಟರ್ ಡೀಸೆಲ್ ಖರೀದಿಸಿದ ಗ್ರಾಮಸ್ಥರು ಬಿಎಸ್ಎನ್ಎಲ್ ಕೇಂದ್ರಕ್ಕೆ ನೀಡಿದ್ದಾರೆ.

ಆಟೊ ಚಾಲಕರ ಸಂಘದ ಅಧ್ಯಕ್ಷ ತಮ್ಮುಣಿ ಮಾತನಾಡಿ, ‘ಮರಗೋಡಿನಲ್ಲಿ 30 ಆಟ ರಿಕ್ಷಾಗಳಿದ್ದು ತುರ್ತು ಸಂದರ್ಭದಲ್ಲಿ ಗ್ರಾಹಕರು ಕರೆ ಮಾಡಿದರೂ ಸಂಪರ್ಕ ಸಿಗುತ್ತಿಲ್ಲ’ ಎಂದು ಅಸಮಾಧಾನವ್ಯಕ್ತಪಡಿಸಿದರು.

ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಬಡುವಂಡ್ರ ಲಕ್ಷ್ಮಿಪತಿ, ‘ನಮ್ಮಿಂದ ದುಬಾರಿ ಹಣ ಪಡೆಯುವ ಬಿಎಸ್ಎನ್ಎಲ್ ಅದೇ ಮಟ್ಟದ ಸೇವೆ ನೀಡುವಲ್ಲಿ ವಿಫಲವಾಗುತ್ತಿದೆ’ ಎಂದು ದೂರಿದರು.

ಮಾಜಿ ಸೈನಿಕ ಚಂದ್ರ, ‘ಮಳೆಗಾಲ ಆರಂಭವಾಗಿದ್ದುಹಲವು ವಿಪತ್ತುಗಳು ಸಂಭವಿಸುವ ಸಂಭವವಿದೆ. ಆದರೆ ಮರಗೋಡಿನಂತಹ ಗ್ರಾಮೀಣ ಪ್ರದೇಶದಲ್ಲಿ ಹಿಂದಿನಿಂದಲೂ ಬಿಎಸ್ಎನ್ಎಲ್ ಬಳಕೆದಾರರೇ ಹೆಚ್ಚಾಗಿದ್ದು ಇದೀಗ ಅಗತ್ಯ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

ಮರಗೋಡು ವಿಎಸ್ಎಸ್ಎನ್ ಬ್ಯಾಂಕ್ಅಧ್ಯಕ್ಷ ಬಾಳೆಕಜೆ ಯೋಗೇಂದ್ರ, ವೈಷ್ಣವಿ ಫುಟ್‌ಬಾಲ್‌ ಕ್ಲಬ್‌ನ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕಾಫಿ ಬೆಳಗಾರ ಮಂಡೇಪಂಡ ಗಣಪತಿ,ಕಲಾವಿದ ಐಮಂಡ ರೂಪೇಶ್ ನಾಣಯ್ಯ, ಸ್ಪೋರ್ಟ್ಸ್‌ ಆಂಡ್ ರಿಕ್ರಿಯೇಷನ್ ಕ್ಲಬ್ ಕಾರ್ಯದರ್ಶಿ ಕೋಚನ ಅನೂಪ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT