ಬಸ್‌ ‍ಪ್ರಯಾಣವೂ ದುಬಾರಿ

7
ನಾಲ್ಕು ನಿಗಮಗಳಲ್ಲಿ ಮುಂದಿನ ವಾರದಿಂದ ಶೇ 15ರಷ್ಟು ಏರಿಕೆ ಸಾಧ್ಯತೆ

ಬಸ್‌ ‍ಪ್ರಯಾಣವೂ ದುಬಾರಿ

Published:
Updated:
Deccan Herald

ಬೆಂಗಳೂರು: ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಏರುತ್ತಿರುವ ಬೆನ್ನಲ್ಲೇ, ಸರ್ಕಾರಿ ಬಸ್‌ ಪ್ರಯಾಣ ದರ ಹೆಚ್ಚಳದ ಬಿಸಿಯೂ ಪ್ರಯಾಣಿಕರಿಗೆ ತಟ್ಟಲಿದೆ. ನಾಲ್ಕು ಸಾರಿಗೆ ನಿಗಮಗಳಲ್ಲಿ ಮುಂದಿನ ವಾರದಿಂದಲೇ ಪ್ರಯಾಣದರ ಶೇ 15ರಷ್ಟು ಏರಿಕೆಯಾಗುವುದು ಬಹುತೇಕ ಖಚಿತವಾಗಿದೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಂಗಳವಾರ ಮಾತನಾಡಿದ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಮುಖ್ಯಮಂತ್ರಿ ಜತೆಗೆ ಸಮಾಲೋಚಿಸಿದ ಬಳಿಕ ಏರಿಕೆ ಪ್ರಮಾಣ ನಿರ್ಧರಿಸಲಾಗುತ್ತದೆ ಎಂದರು.

‘ಶೇ 18ರಷ್ಟು ಪ್ರಯಾಣ ದರ ಹೆಚ್ಚಿಸುವಂತೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಮತ್ತು ಈಶಾನ್ಯ ಸಾರಿಗೆ ನಿಗಮಗಳು ಮೂರು ತಿಂಗಳ ಹಿಂದೆಯೇ ಪ್ರಸ್ತಾವ ಸಲ್ಲಿಸಿದ್ದವು. ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಇಷ್ಟು ದಿನ ಪ್ರಸ್ತಾವ ತಡೆ ಹಿಡಿದಿದ್ದೆ. ಪ್ರತಿದಿನ ಇಂಧನ ದರ ಹೆಚ್ಚುತ್ತಿದೆ. ಮೂರು ತಿಂಗಳಲ್ಲಿ ನಿಗಮಗಳು ₹ 186 ಕೋಟಿ ನಷ್ಟ ಅನುಭವಿಸಿವೆ. ಹೀಗಾಗಿ, ದರ ಏರಿಕೆ ಅನಿವಾರ್ಯ. ಜನರಿಗೆ ಹೊರೆಯಾಗದ ರೀತಿಯಲ್ಲಿ ಏರಿಕೆ ಮಾಡಲಾಗುತ್ತದೆ’ ಎಂದು ಅವರು ತಿಳಿಸಿದರು.

‘2014 ರಲ್ಲಿ ಶೇ 7.96 ರಷ್ಟು ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ನಾಲ್ಕೂ ನಿಗಮಗಳು ನಷ್ಟದಲ್ಲಿಯೇ ನಡೆಯುತ್ತಿವೆ. ಕಾರ್ಯಾಚರಣೆಯ ಒಟ್ಟು ವೆಚ್ಚದಲ್ಲಿ ಶೇ 40ರಷ್ಟು ಇಂಧನಕ್ಕೆ ವ್ಯಯವಾದರೆ, ಸಿಬ್ಬಂದಿ ವೇತನ ಹೆಚ್ಚಳದಿಂದಲೂ ನಿಗಮಗಳಿಗೆ ಹೊರೆಯಾಗಿವೆ. ಶೇ 15ರಷ್ಟು ಏರಿಕೆ ಮಾಡಿದರೆ, ಈ ಹೊರೆಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಹಬ್ಬದ ವೇಳೆ ಹೆಚ್ಚುವರಿ ಬಸ್‌: ‘ಹಬ್ಬದ ವೇಳೆ ಖಾಸಗಿ ಬಸ್‌ಗಳು ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಕಡಿವಾಣ ಹಾಕಲು ಹಬ್ಬದ ವೇಳೆ ಇನ್ನಷ್ಟು ಹೆಚ್ಚುವರಿ ಬಸ್‌ಗಳನ್ನು ಓಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಈ ಹಿಂದೆ ಹಬ್ಬದ ವೇಳೆಯಲ್ಲಿ ಸಾಮಾನ್ಯ ಬಸ್‌ಗಳನ್ನು ಹೆಚ್ಚುವರಿಯಾಗಿ ಓಡಿಸುತ್ತಿದ್ದೆವು. ಈ ಸಲ ಹವಾನಿಯಂತ್ರಿತ ಬಸ್‌ಗಳನ್ನು ಹಾಕುವಂತೆ ಸೂಚಿಸಿದ್ದೇನೆ. ನಮಗೆ ನಷ್ಟವಾದರೂ ಪರವಾಗಿಲ್ಲ. ಜನರಿಗೆ ತೊಂದರೆಯಾಗಬಾರದು. ಪ್ರಯಾಣಿಕರ ಸಂಖ್ಯೆ ಕಡಿಮೆಯಾದರೆ ಖಾಸಗಿಯವರು ಸಹ ಪ‍್ರಯಾಣ ದರ ಕಡಿಮೆ ಮಾಡುತ್ತಾರೆ’ ಎಂದರು.

ಅನವಶ್ಯಕ ಬಸ್‌ಗಳ ಕಡಿತ: ‘10 ನಿಮಿಷಕ್ಕೊಂದು ಬಸ್‌ಗಳು ಸಂಚಾರ ಮಾಡುತ್ತಿವೆ. ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಬೇರೆ ಜಿಲ್ಲೆಗಳಿಗೆ ತೆರಳುವ ಬಸ್‌ಗಳಲ್ಲೂ ಸಹ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುತ್ತದೆ. ಕೆಲವು ಬಸ್‌ಗಳಲ್ಲಿ ನಾಲ್ಕೈದು ಪ್ರಯಾಣಿಕರು ಇರುತ್ತಾರೆ. ಬಸ್‌ಗಳ ಅನವಶ್ಯಕ ಸಂಚಾರ ಕಡಿಮೆ ಮಾಡಲು ಪ್ರಸ್ತಾವ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

ಮುಂದಿನ ವರ್ಷದಿಂದ ಉಚಿತ ಬಸ್‌ ‍ಪಾಸ್‌

‘ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವ ಬಗ್ಗೆ ಸ್ವಲ್ಪ ಗೊಂದಲಗಳಿದ್ದವು. ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಬಸ್‌ ಪಾಸ್ ವಿತರಿಸಲು ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಪಿ–ಟಿಎಸ್‌ಪಿ ಯೋಜನೆಯ ಹಣ ನೀಡುವಂತೆ ಸಮಾಜ ಕಲ್ಯಾಣ ಸಚಿವ ‍ಪ್ರಿಯಾಂಕ್‌ ಖರ್ಗೆ ಜತೆಗೆ ಸಮಾಲೋಚನೆ ನಡೆಸಲಾಗಿದ್ದು, ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಯೋಜನೆಗೆ ಬೇಕಿರುವ ಶೇ 50ರಷ್ಟು ಮೊತ್ತವನ್ನು ಸಮಾಜ ಕಲ್ಯಾಣ ಇಲಾಖೆ ಭರಿಸಲಿದೆ. ಉಳಿದ ಮೊತ್ತವನ್ನು ಸಾರಿಗೆ ಇಲಾಖೆಯಿಂದ ನೀಡಲಾಗುತ್ತದೆ’ ಎಂದು ತಮ್ಮಣ್ಣ ತಿಳಿಸಿದರು.

‘ಮುಖ್ಯಮಂತ್ರಿ ಅವರ ಜತೆಗೆ ಈ ಸಂಬಂಧ ಸಮಾಲೋಚನೆ ನಡೆಸಲಾಗುತ್ತದೆ. ಮುಂದಿನ ವಾರ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ. ಬಹುತೇಕ ವಿದ್ಯಾರ್ಥಿಗಳು ಈಗಾಗಲೇ ಬಸ್ ‍ಪಾಸ್‌ ಪಡೆದಿದ್ದಾರೆ. ಪಾಸ್‌ ಪಡೆಯದಿದ್ದವರಿಗೆ ಲಾಭ ಸಿಗಲಿದೆ. ಉಳಿದವರಿಗೆ ಮುಂದಿನ ವರ್ಷದಿಂದ ಪಾಸ್‌ ವಿತರಿಸಲಾಗುತ್ತದೆ’ ಎಂದು ಅವರು ಸ್ಪಷ್ಟ‍ಪಡಿಸಿದರು.

***

ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಹಾಗೂ ಮೋಟಾರು ವಾಹನ ನಿರೀಕ್ಷಕರನ್ನು ಇಲಾಖೆಯಿಂದ ನೇರ ನೇಮಕ ಮಾಡಿಕೊಳ್ಳಲಾಗುತ್ತದೆ</p>
-ಡಿ.ಸಿ.ತಮ್ಮಣ್ಣ, ಸಾರಿಗೆ ಸಚಿವ

ಬರಹ ಇಷ್ಟವಾಯಿತೆ?

 • 6

  Happy
 • 4

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !