ಹಗಲಿನಲ್ಲಿ ಚಾಲಕರು, ರಾತ್ರಿ ಚಕ್ರಗಳ ಕಳ್ಳರು!

7
ಕಳವು ಪ್ರಕರಣ; ಮಲ್ಲೇಶ್ವರ ಪೊಲೀಸರಿಂದ ಮೂವರ ಬಂಧನ

ಹಗಲಿನಲ್ಲಿ ಚಾಲಕರು, ರಾತ್ರಿ ಚಕ್ರಗಳ ಕಳ್ಳರು!

Published:
Updated:
Deccan Herald

ಬೆಂಗಳೂರು: ನಗರದ ಪ್ರಮುಖ ರಸ್ತೆಗಳ ಅಕ್ಕ–ಪಕ್ಕದಲ್ಲಿ ನಿಲ್ಲಿಸುತ್ತಿದ್ದ ಕಾರುಗಳ ಚಕ್ರಗಳನ್ನು ಕಳವು ಮಾಡುತ್ತಿದ್ದ ಆರೋಪದಡಿ ಮೂವರು ಚಾಲಕರನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾಗಲಗುಂಟೆ ನಿವಾಸಿಗಳಾದ ಕೆ.ಸುನೀಲ್, ಪಿ.ಎಸ್.ಬಸವರಾಜ್ ಹಾಗೂ ಟಿ.ದಾಸರಹಳ್ಳಿಯ ಡಿ.ಎಸ್.ಸಂತೋಷ್ ಬಂಧಿತರು. ಅವರಿಂದ ₹3.81 ಲಕ್ಷ ಮೌಲ್ಯದ 33 ಚಕ್ರಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ₹7 ಲಕ್ಷ ಮೌಲ್ಯದ ಎರಡು ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ಆರೋಪಿಗಳು, ಓಲಾ ಹಾಗೂ ಉಬರ್ ಕಂಪನಿ ಕ್ಯಾಬ್‌ಗಳ ಚಾಲಕರು. ಬೆಳಿಗ್ಗೆ ಕ್ಯಾಬ್‌ ಓಡಿಸುತ್ತಿದ್ದ ಅವರು, ರಾತ್ರಿಯಾಗುತ್ತಿದ್ದಂತೆ ಚಕ್ರಗಳನ್ನು ಕಳವು ಮಾಡುತ್ತಿದ್ದರು. ಮಲ್ಲೇಶ್ವರ, ಜಯನಗರ, ವೈಯಾಲಿಕಾವಲ್, ಸುಬ್ರಮಣ್ಯ ನಗರ, ನಂದಿನಿ ಲೇಔಟ್‌, ಬಸವನಗುಡಿ, ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯ 14 ಕಡೆಗಳಲ್ಲಿ ಆರೋಪಿಗಳು ಕೃತ್ಯ ಎಸಗಿದ್ದು ತನಿಖೆಯಿಂದ ಗೊತ್ತಾಗಿದೆ’ ಎಂದರು.

‘ಮಲ್ಲೇಶ್ವರದ ನಿವಾಸಿ ಎಂ.ಉದಯ್‍ಕುಮಾರ್ ಹಾಗೂ ಅವರ ಸ್ನೇಹಿತರ ಕಾರಿನ ಚಕ್ರಗಳನ್ನು ಆರೋಪಿಗಳು ಕದ್ದೊಯ್ದಿದ್ದರು. ಅದಾದ ಬಳಿಕ ಚಕ್ರಗಳ ಕಳವು ಪ್ರಕರಣಗಳು ಹೆಚ್ಚಾಗಿದ್ದರಿಂದ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು’ ಎಂದು ಹೇಳಿದರು.

ಕಾರಿನ ಪಕ್ಕವೇ ನಿಂತು ಚಕ್ರ ಬಿಚ್ಚುತ್ತಿದ್ದರು: ‘ಆರೋಪಿಗಳು, ತಮ್ಮ ಕ್ಯಾಬ್‌ನಲ್ಲೇ ರಾತ್ರಿಯಿಡೀ ಸುತ್ತುತ್ತಿದ್ದರು. ಕಾರುಗಳ ಪಕ್ಕವೇ ಮರೆಯಲ್ಲಿ ತಮ್ಮ ಕ್ಯಾಬ್‌ ನಿಲ್ಲಿಸುತ್ತಿದ್ದರು. ನಂತರ, ಚಕ್ರಗಳನ್ನು ಬಿಚ್ಚಿಕೊಂಡು ಹೊರಟು ಹೋಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಸ್ನೇಹಿತರಿಗೆ ಮಾರಾಟ: ‘ಕದ್ದ ಚಕ್ರಗಳನ್ನು ಆರೋಪಿಗಳು, ತಮ್ಮ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದರು. ಅದರಿಂದ ಬಂದ ಹಣವನ್ನು ಹಂಚಿಕೊಂಡು, ಐಷಾರಾಮಿ ಜೀವನಕ್ಕೆ ಖರ್ಚು ಮಾಡುತ್ತಿದ್ದರು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !