ಜಾರಕಿಹೊಳಿ ಸಹೋದರರ ಅತೃಪ್ತಿಗೆ ತೇಪೆ?

7
ಸಿದ್ದರಾಮಯ್ಯ ವಾಪಸ್‌; ಕಾಂಗ್ರೆಸ್‌ನಲ್ಲಿ ಮತ್ತೊಂದು ಸುತ್ತಿನ ಚಟುವಟಿಕೆ

ಜಾರಕಿಹೊಳಿ ಸಹೋದರರ ಅತೃಪ್ತಿಗೆ ತೇಪೆ?

Published:
Updated:

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿರುವ ಜಾರಕಿಹೊಳಿ ಸಹೋದರರ ಅತೃಪ್ತಿ, ಆಪರೇಷನ್ ಕಮಲ ವದಂತಿಗಳಿಗೆ ಭಾನುವಾರ ತೆರೆ ಬೀಳಲಿದೆಯೇ ಎಂಬ ಕುತೂಹಲ ಕಾಂಗ್ರೆಸ್‌ನಲ್ಲಿ ಮನೆ ಮಾಡಿದೆ.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಯುರೋಪ್‌ ಪ್ರವಾಸಕ್ಕೆ ತೆರಳುತ್ತಿದ್ದಂತೆ ಬಣ ರಾಜಕೀಯ ಚಟುವಟಿಕೆ ಬಿರುಸುಗೊಂಡಿತ್ತು. ವಾಪಸು ಬಂದಿರುವ ಅವರ ಮಧ್ಯ ಪ್ರವೇಶದಿಂದ ಗೊಂದಲಕ್ಕೆ ತೆರೆ ಬೀಳಲಿದೆಯೇ ಎಂಬ ಪ್ರಶ್ನೆ ಕಾಂಗ್ರೆಸ್‌ನಲ್ಲಿ ಮೂಡಿದೆ.

ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ನಗರಕ್ಕೆ ಬಂದಿದ್ದಾರೆ. ಜಾರಕಿಹೊಳಿ ಸಹೋದರರ ಅಸಮಾಧಾನ, ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಸಿದ್ದರಾಮಯ್ಯ ಮತ್ತಿತರ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ.

ಪಕ್ಷದ ನಾಯಕರ ವಿರುದ್ಧ ತಿರುಗಿಬಿದ್ದಿರುವ ಜಾರಕಿಹೊಳಿ ಸಹೋದರರ ಅತೃಪ್ತಿ ತಣಿಸಲು ಕಾಂಗ್ರೆಸ್‌ನ ರಾಜ್ಯ ನಾಯಕರು ಯತ್ನಿಸಿದರೂ ಅದಿನ್ನೂ ಸಂಪೂರ್ಣ ತಣ್ಣಗಾಗಿಲ್ಲ. ಸಿದ್ದರಾಮಯ್ಯ ಜೊತೆ ಚರ್ಚಿಸಿದ ಬಳಿಕ ಮುಂದಿನ ನಡೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಜಾರಕಿಹೊಳಿ ಸಹೋದರರು ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ– ಜಾರಕಿಹೊಳಿ ಸಹೋದರರ ಮುಖಾಮುಖಿ ಕುತೂಹಲ ಮೂಡಿಸಿದೆ.

ಇದೇ 25ರ ಒಳಗೆ ಸಚಿವ ಸಂಪುಟ ವಿಸ್ತರಣೆ ಬಹುತೇಕ ಖಚಿತ. ಸಚಿವಾಕಾಂಕ್ಷಿಗಳು ಸಿದ್ದರಾಮಯ್ಯ ಮೂಲಕ ಲಾಬಿ ನಡೆಸಲು ಮುಂದಾಗಿದ್ದಾರೆ. ಕಾಂಗ್ರೆಸ್‌ ಪಾಲಿಗೆ ಹಂಚಿಕೆಯಾಗಿ ಖಾಲಿ ಇರುವ ಆರು ಸಚಿವ ಸ್ಥಾನಗಳನ್ನು ಯಾರಿಗೆ ನೀಡಬೇಕೆಂಬ ಬಗ್ಗೆ ಪ್ರಾಥಮಿಕ ಸುತ್ತಿನ ಚರ್ಚೆಯ ಬಳಿಕ, ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಿರಿಯ ನಾಯಕರು ಸಂಭವನೀಯ ಸಚಿವರ ಪಟ್ಟಿಯ ಜೊತೆಗೆ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.

ಅಕ್ಕ– ಪಕ್ಕ ಕುಳಿತು ಸತೀಶ, ಲಕ್ಷ್ಮಿ ಚರ್ಚೆ: ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಕಾರಣಕ್ಕೆ ಪರಸ್ಪರ ವೈಮನಸ್ಸು ಹೊಂದಿದ್ದ ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳಕರ, ಕೆಎಲ್‌ಎಸ್‌ ಸಮಾರಂಭದಲ್ಲಿ ಅಕ್ಕ– ಪಕ್ಕ ಕುಳಿತು ಗಮನ ಸೆಳೆದರು.

ಕಾರ್ಯಕ್ರಮ ಆರಂಭವಾಗುವ ಮೊದಲೇ ಸಭಾಂಗಣಕ್ಕೆ ಬಂದಿದ್ದ ಸತೀಶ, ಅತಿ ಗಣ್ಯರ ಗ್ಯಾಲರಿಯಲ್ಲಿ ಆಸೀನರಾಗಿದ್ದರು. ನಂತರ ಬಂದ ಲಕ್ಷ್ಮಿ ಅವರನ್ನು ನಗುಮೊಗದಿಂದ ಸ್ವಾಗತಿಸಿದರು. ಸತೀಶ ಪಕ್ಕದಲ್ಲಿ ಖಾಲಿಯಿದ್ದ ಆಸನದಲ್ಲಿ ಲಕ್ಷ್ಮಿ ಆಸೀನರಾದರು. ಕೆಲಹೊತ್ತು ಪರಸ್ಪರ ಮಾತನಾಡಿದರು.

ತಿಂಗಳಾಂತ್ಯ ಸಂಪುಟ ವಿಸ್ತರಣೆ: ವೇಣುಗೋಪಾಲ್‌

‘ಈ ತಿಂಗಳ ಅಂತ್ಯದಲ್ಲಿ ಸಂಪುಟ ವಿಸ್ತರಣೆ ಖಚಿತ’ ಎಂದು ವೇಣುಗೋಪಾಲ್‌ ಹೇಳಿದರು.

‘ನಮ್ಮ ಶಾಸಕರಿಗೆ ಬಿಜೆಪಿ ನಾಯಕರು ಕರೆ ಮಾಡಿ ಆಮಿಷಗಳನ್ನು ಒಡ್ಡಿದ್ದಾರೆ. ಇದು ಬಿಜೆಪಿ ನಾಯಕರ ಷಡ್ಯಂತ್ರ’ ಎಂದು ದೂರಿದರು.

‘ನೂರು ದಿನ ಪೂರೈಸಿರುವ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ. ಸರ್ಕಾರ ನಿರಾಯಾಸವಾಗಿ ಐದು ವರ್ಷ ಪೂರೈಸಲಿದೆ. ನಮ್ಮ ಶಾಸಕರ ಮೇಲೆ ನಂಬಿಕೆಯಿದೆ. ಯಾವುದೇ ಶಾಸಕರು ಬಿಜೆಪಿಗೆ ಹೋಗುವುದಿಲ್ಲ’ ಎಂದರು.

ಸಚಿವ ರಮೇಶ ಚಕ್ಕರ್‌, ಲಕ್ಷ್ಮಿ ಹಾಜರ್‌

ಬೆಳಗಾವಿ: ಇಲ್ಲಿ ಇಡೀ ದಿನ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಅಂತರ ಕಾಯ್ದುಕೊಂಡ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಅವರೆಲ್ಲ ಕಾರ್ಯಕ್ರಮಗಳಿಗೂ ಗೈರಾದರು. ತನ್ಮೂಲಕ ಸರ್ಕಾರದ ಬಗ್ಗೆ ತಮಗಿರುವ ಅಸಮಾಧಾನವನ್ನೂ ಹೊರಹಾಕಿದರು.

ಆದರೆ, ರಮೇಶ ಅವರ ವಿರೋಧಿ ಬಣದಲ್ಲಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮುಖ್ಯಮಂತ್ರಿ ಜತೆಯೇ ಇದ್ದರು.

ಸಾಂಬಾ ವಿಮಾನಕ್ಕೆ ಬಂದಿಳಿದ ಮುಖ್ಯಮಂತ್ರಿಯನ್ನು ಆತ್ಮೀಯವಾಗಿ ಸಚಿವ ರಮೇಶ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ರಮೇಶ ಅವರ ಗಲ್ಲ ಸವರಿ ನಗೆ ಬೀರಿದರು. ಆದರೆ, ಬಳಿಕ ರಮೇಶ ತಮ್ಮ ಖಾಸಗಿ ವಾಹನದಲ್ಲಿ ಹೋದವರು ಮತ್ತೆ ಕಾಣಿಸಿಕೊಳ್ಳಲಿಲ್ಲ.

ಕನ್ನಡ ಭವನ ಉದ್ಘಾಟನೆ, ಜನತಾ ದರ್ಶನದ ವೇಳೆಯಲ್ಲೂ ಅವರು ಹಾಜರಿರಲಿಲ್ಲ.

ಬರಹ ಇಷ್ಟವಾಯಿತೆ?

 • 7

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !