‘ಕೈ’ ನಾಯಕರಲ್ಲಿ ‘ಬಣ ರಾಜಕೀಯ’

7
ಬಳ್ಳಾರಿ ಅಭ್ಯರ್ಥಿ ಆಯ್ಕೆ; ಕಾಂಗ್ರೆಸ್‌ನಲ್ಲಿ ಮೂಡದ ಒಮ್ಮತ

‘ಕೈ’ ನಾಯಕರಲ್ಲಿ ‘ಬಣ ರಾಜಕೀಯ’

Published:
Updated:

ಬೆಂಗಳೂರು: ಬಳ್ಳಾರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಗಾಗಿ ಸಚಿವ ಡಿ.ಕೆ. ಶಿವಕುಮಾರ್‌ ಮನೆಯಲ್ಲಿ ಬುಧವಾರ ನಡೆದ ಸಭೆಗೆ ಜಿಲ್ಲೆಯ ಶಾಸಕರು ಗೈರಾಗಿರುವುದು ಚರ್ಚೆಗೆ ಕಾರಣವಾಗಿದೆ.

ಅಭ್ಯರ್ಥಿ ವಿಚಾರದಲ್ಲಿ ‘ಕೈ’ ಶಾಸಕರಲ್ಲಿ ಎರಡು ಬಣ ಸೃಷ್ಟಿಯಾಗಿದೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ, ತಮ್ಮ ಸಹೋದರ ವೆಂಕಟೇಶ್‌ ಪ್ರಸಾದ್‌ ಅವರನ್ನು ಕಣಕ್ಕಿಳಿಸಲು ಬಯಸಿದ್ದಾರೆ. ಆದರೆ, ಸಂಡೂರು ಶಾಸಕ ಈ. ತುಕಾರಾಂ, ಪರಮೇಶ್ವರ ನಾಯ್ಕ, ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಹಿಳೆಯೊಬ್ಬರನ್ನು ಕಣಕ್ಕೆ ಇಳಿಸಲು ಒಲವು ತೋರಿದ್ದಾರೆ.

‘ಉಸ್ತುವಾರಿ’ ಸಚಿವ ಸ್ಥಾನದ ವಿಷಯದಲ್ಲಿ ಬಣಗಳಾಗಿ ಒಡೆದಿದ್ದ ಕಾಂಗ್ರೆಸ್ ಶಾಸಕರ ಗುಂಪು, ಇದೀಗ ಮತ್ತೆ ಇಬ್ಬಣವಾಗಿರುವುದು ರಾಜ್ಯ ನಾಯಕರ ಚಿಂತೆಗೆ ಕಾರಣವಾಗಿದೆ.

ವೆಂಕಟೇಶ್‌ ಅವರಿಗೆ ಟಿಕೆಟ್ ನೀಡಿದರೆ, ಸಚಿವ ಸ್ಥಾನಕ್ಕೆ ಹಕ್ಕೊತ್ತಾಯ ಮಂಡಿಸಲು ನಾಗೇಂದ್ರ ಅವರಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಗಣಿ ಅಕ್ರಮದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ನಾಗೇಂದ್ರ ಅವರ ಸಹೋದರನಿಗೆ ನೀಡುವ ಬದಲು ಕಳಂಕ ಇಲ್ಲದವರಿಗೆ ನೀಡಬೇಕು ಎಂಬ ಬೇಡಿಕೆಯನ್ನು ತುಕಾರಾಂ, ಪರಮೇಶ್ವರ ನಾಯ್ಕ ಗುಂಪು ಮಂಡಿಸಿದೆ.

ಬಿಜೆಪಿಯಿಂದ ಶ್ರೀರಾಮುಲು ಸೋದರಿ ಜೆ. ಶಾಂತಾ ಅವರಿಗೆ ಟಿಕೆಟ್ ನೀಡಿರುವುದರಿಂದ, ಕಾಂಗ್ರೆಸ್‌ನಿಂದಲೂ ಮಹಿಳಾ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು ಎಂಬ ಬೇಡಿಕೆಯನ್ನು ನಾಗೇಂದ್ರ ವಿರೋಧಿ ಗುಂ‍ಪು ಮುಂದಿಟ್ಟಿದೆ. 20 ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿರುವ, ರಾಜ್ಯಶಾಸ್ತ್ರ ಪದವೀಧರೆ ಹಾಗೂ ಕೂಡ್ಲಿಗಿಯಲ್ಲಿ ಶಾಲೆ ನಡೆಸುತ್ತಿರುವ ಜಿ. ನಾಗಮಣಿ ಅವರನ್ನು ಕಣಕ್ಕಿಳಿಸಬೇಕು ಎಂದು ಈ ಬಣ ಬೇಡಿಕೆ ಮಂಡಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ರಾಜ್ಯ ನಾಯಕರ ಸಭೆಯಲ್ಲಿ ಒಮ್ಮತ ಮೂಡದ ಕಾರಣ, ಜಿಲ್ಲಾ ಉಸ್ತುವಾರಿ ಡಿ.ಕೆ. ಶಿವಕುಮಾರ್‌ ಹೆಗಲಿಗೆ ವಹಿಸಲಾಗಿತ್ತು. ಶಿವಕುಮಾರ್‌ ಮನೆಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಗೆ ನಾಗೇಂದ್ರ, ತುಕಾರಾಂ ಮಾತ್ರ ಹಾಜರಾದರು. ಕಂಪ್ಲಿ ಶಾಸಕ ಗಣೇಶ್, ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್, ಹೊಸಪೇಟೆ ಶಾಸಕ ಆನಂದ್ ಸಿಂಗ್, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಗೈರಾದರು. ಹೀಗಾಗಿ, ಗುರುವಾರ ಮತ್ತೊಂದು ಸುತ್ತಿನ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಶಾಸಕ ನಾಗೇಂದ್ರ ಮಾತನಾಡಿ, ‘ಈ ಚುನಾವಣೆಯನ್ನು ನಾವು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇವೆ. ಯಾರಿಗೆ ಟಿಕೆಟ್‌ ನೀಡಿದರೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ’ ಎಂದರು.

ಶಿವಮೊಗ್ಗಕ್ಕೆ ಅಭ್ಯರ್ಥಿ ಕೊರತೆ?: ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್‌ ನಾಯಕರು ಹರಸಾಹಸ ಪಡುತ್ತಿದ್ದಾರೆ. ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲೆಯ ನಾಯಕರಾದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್‌. ಸುಂದರೇಶ್, ಬೇಳೂರು ಗೋಪಾಲಕೃಷ್ಣ ಜೊತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬುಧವಾರ ಪ್ರತ್ಯೇಕವಾಗಿ ಚರ್ಚೆ ನಡೆಸಿದರು.

ಅನಾರೋಗ್ಯದ ಕಾರಣ ನೀಡಿ, ಸ್ಪರ್ಧಿಸಲು ಕಾಗೋಡು ಹಿಂದೇಟು ಹಾಕಿದ್ದಾರೆ. ‘ಚುನಾವಣೆಗೆ ಹಣ ಹೊಂದಿಸಲು ನನ್ನಿಂದ ಸಾಧ್ಯವಿಲ್ಲ. ಹಾಗಾಗಿ ನಾನು ಸ್ಪರ್ಧಿಸುವುದಿಲ್ಲ’ ಎಂದು ಕಿಮ್ಮನೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಆದರೆ, ಟಿಕೆಟ್‌ ಸಿಕ್ಕಿದರೆ ಹಣ ವೆಚ್ಚ ಮಾಡಲು ಸಿದ್ಧರಾಗಿರುವ ಸುಂದರೇಶ್, ಸಾರ್ವತ್ರಿಕ ಚುನಾವಣೆಯಲ್ಲೂ ತಮಗೇ ಟಿಕೆಟ್ ನೀಡಬೇಕೆಂಬ ಷರತ್ತು ಹಾಕಿದ್ದಾರೆ. ಆದರೆ, ಯಾವುದೇ ಭರವಸೆ ನೀಡಲು ದಿನೇಶ್ ಗುಂಡೂರಾವ್ ಮುಂದಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !